ಉತ್ತಮ ಫಸಲು ಬಂದರೂ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ; ಕೋಲಾರದಲ್ಲಿ ಆಲೂಗಡ್ಡೆ ಬೆಳೆದ ರೈತ ಕಂಗಾಲು
ಜಲಂಧರ್ ಸೇರಿದಂತೆ ಉತ್ತರ ಭಾರತದ ರಾಜ್ಯದಿಂದ ಬಿತ್ತನೆ ಆಲೂಗೆಡ್ಡೆ ತರಿಸಿ ಇಲ್ಲಿನ ರೈತರು ಬೆಳೆ ಮಾಡುತ್ತಾರೆ. ಬರದ ನಡುವೆ ಕಷ್ಟ ಪಟ್ಟು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದಿದ್ದ ಆಲೂಗಡ್ಡೆ ಬೆಳೆಗಾರರು ಒಳ್ಳೆಯ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ಕೊರೊನಾದಿಂದಾಗಿ ಯಾವುದೇ ಬೆಳೆಗಳಿಗೆ ಬೆಲೆ ಇಲ್ಲದೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತ್ತಾಗಿದೆ.
ಕೋಲಾರ: ಒಂದು ಕಡೆ ಕೊರೊನಾ ಮತ್ತೊಂದು ಕಡೆ ಬರಗಾಲವನ್ನು ಎದುರಿಸಿ ನಿಂತ ರೈತರು ಸಾಲ ಮಾಡಿ ಬೆಳೆ ಬೆಳೆದಿದ್ದರು. ಇನ್ನೇನು ಭರ್ಜರಿ ಫಸಲು ಬಂದಿದೆ. ಇರುವ ಸಾಲವನ್ನೆಲ್ಲಾ ತೀರಿಸಿ ನೆಮ್ಮದಿಯಾಗಿರಬಹುದು ಎಂದುಕೊಂಡಿದ್ದ ರೈತರಿಗೆ ದೊಡ್ಡಮಟ್ಟದಲ್ಲಿ ಆಘಾತವಾಗಿದೆ. ಕೋಲಾರ ಜಿಲ್ಲೆಯಲ್ಲಿ ಬೆಳೆ ಇದ್ದರೆ ಬೆಲೆ ಇರಲ್ಲ, ಬೆಲೆ ಇದ್ದರೆ ಬೆಳೆ ಇರಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಹಾಸನ ಬಿಟ್ಟರೆ ಕೋಲಾರ ಜಿಲ್ಲೆಯಲ್ಲಿ ಸಾವಿರಾರು ಎಕರೆಯಲ್ಲಿ ಆಲೂಗಡ್ಡೆ ಬೆಳೆಯಲಾಗುತ್ತದೆ.
ಜಲಂಧರ್ ಸೇರಿದಂತೆ ಉತ್ತರ ಭಾರತದ ರಾಜ್ಯದಿಂದ ಬಿತ್ತನೆ ಆಲೂಗೆಡ್ಡೆ ತರಿಸಿ ಇಲ್ಲಿನ ರೈತರು ಬೆಳೆ ಮಾಡುತ್ತಾರೆ. ಬರದ ನಡುವೆ ಕಷ್ಟಪಟ್ಟು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದಿದ್ದ ಆಲೂಗಡ್ಡೆ ಬೆಳೆಗಾರರು ಒಳ್ಳೆಯ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ಕೊರೊನಾದಿಂದಾಗಿ ಯಾವುದೇ ಬೆಳೆಗಳಿಗೆ ಬೆಲೆ ಇಲ್ಲದೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ನೀರಿಲ್ಲದ ಊರಿನಲ್ಲಿ ಬೆವರು ಹರಿಸಿ ಬೆಳೆ ತೆಗೆದ ರೈತರು ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದ ಹಿನ್ನೆಲೆ ಕುಸಿದು ಬಿದ್ದಿದ್ದಾರೆ.
ಸುಮಾರು 6000 ಹೆಕ್ಟೇರ್ಗೂ ಹೆಚ್ಚಿನ ಪ್ರದೇಶದಲ್ಲಿ ಆಲೂಗೆಡ್ಡೆ ಬೆಳೆದಿದ್ದೇವೆ ಈ ಬಾರಿ ಸ್ವಲ್ಪ ಮಳೆಯಾದ ಹಿನ್ನೆಲೆ ಬೆಳೆಯು ಉತ್ತಮವಾಗಿ ಬಂದಿತ್ತು, ಅದರಂತೆ ಆಲೂಗಡ್ಡೆಯೂ ಕೂಡ ದಪ್ಪದಾಗಿತ್ತು ಲಾಭದ ನಿರೀಕ್ಷೆ ಇತ್ತು. ಆದರೆ ಬೆಲೆ ಕುಸಿತದಿಂದ ನಷ್ಟವಾಗಿದೆ ಎಂದು ರೈತ ನಾರಾಯಣಗೌಡ ಹೇಳಿದ್ದಾರೆ.
ಇನ್ನು ಲಕ್ಷಾಂತರ ರೂಪಾಯಿ ಸಾಲಸೂಲ ಮಾಡಿ ರಸ ಗೊಬ್ಬರ, ಬಿತ್ತನೆ ಬೀಜವನ್ನ ಕೊಟ್ಟ ವರ್ತಕರು ರೈತರನ್ನು ಸುಲಿಗೆ ಮಾಡುತ್ತಿದ್ದಾರೆ. ಜಿಲ್ಲೆಯ ಪಾಲಿಗೆ ಈ ಬಾರಿ ನಿರೀಕ್ಷಿತ ಬೆಳೆಯಾಗಿದೆಯಾದರೂ ಬೆಲೆ ಮಾತ್ರ ಸಿಗುತ್ತಿಲ್ಲ. ಈ ಬಾರಿ ಕೆಜಿ ಆಲೂಗಡ್ಡೆ 10 ರೂಪಾಯಿಗೆ ಮಾರಾಟವಾಗುತ್ತಿದೆ. ಇನ್ನು ಮಾರುಕಟ್ಟೆಯಲ್ಲಿ ಒಂದು ಮೂಟೆ ಆಲೂಗಡ್ಡೆಗೆ ಕಳೆದ ಎರಡು ತಿಂಗಳ ಹಿಂದೆ ಎರಡುವರೆಯಿಂದ 3 ಸಾವಿರ ಬೆಲೆ ಇತ್ತು, ಆದರೆ ಫೆಬ್ರವರಿಯಿಂದ ಒಂದು ಮೂಟೆ ಆಲೂಗೆಡ್ಡೆಗೆ ಕೇವಲ 600 ರೂಪಾಯಿಯಿಂದ 800 ರೂಪಾಯಿಗೆ ಬಂದು ನಿಂತಿದೆ. ಹೀಗೆ ದಿಢೀರ್ ಬೆಲೆ ಕುಸಿತಕ್ಕೆ ಆಲೂಗೆಡ್ಡೆ ಬೆಳೆಗಾರರು ಕಂಗಾಲಾಗಿದ್ದಾರೆ.
ಎಕರೆ ಆಲೂಗೆಡ್ಡೆ ಬೆಳೆಯೋದಕ್ಕೆ ಸಾವಿರಗಳಲ್ಲಿ ಹಣ ಖರ್ಚು ಮಾಡಿ ಈಗ ಮಾರುಕಟ್ಟೆಯಲ್ಲಿ ನೂರು ಲೆಕ್ಕದಲ್ಲಿ ಹಣ ಪಡೆವ ಸ್ಥಿತಿ ಬಂದಿದ್ದು, ಸರ್ಕಾರ ರೈತರಿಗೆ ಬೆಂಬಲ ಬೆಲೆಯಾದರೂ ಘೋಷಣೆ ಮಾಡಬೇಕು ಎಂದು ರೈತ ಮುಖಂಡ ಮಂಜುನಾಥ್ ಹೇಳಿದ್ದಾರೆ.
ಒಟ್ಟಾರೆ ರೈತ ತಾನು ಬೆಳೆ ಬೆಳೆಯೋದಕ್ಕೆ ಎದುರು ಬರುವ ಎಲ್ಲಾ ಸಂಕಷ್ಟಗಳನ್ನು ಎದುರಿಸಿ ಬೆಳೆ ಬೆಳೆದು, ಕೊನೆಗೆ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗದೆ ಹೋದಾಗ, ನಷ್ಟವನ್ನು ಅನುಭವಿಸುತ್ತಿರುವುದು ಮಾತ್ರ ಬೇಸರದ ಸಂಗತಿ.
ಇದನ್ನೂ ಓದಿ:
ತೊಗರಿ ಇಳುವರಿ, ಬೆಲೆ ಕಡಿಮೆ: ತೊಗರಿ ಕಣಜ ಕಲಬುರಗಿಯಲ್ಲಿ ಬೆಳೆಗಾರರು ಕಂಗಾಲು
ಬೂದುಗುಂಬಳ ಕೆಜಿಗೆ ಕೇವಲ 2 ರೂಪಾಯಿ; ಕುಸಿದ ಬೆಲೆಗೆ ಬೇಸತ್ತು ಬೆಳೆ ನಾಶಕ್ಕೆ ಮುಂದಾದ ದಾವಣಗೆರೆ ರೈತ
(Potato growers did not get good price in Market facing heavy loss in Kolar)