ಬೂದುಗುಂಬಳ ಕೆಜಿಗೆ ಕೇವಲ 2 ರೂಪಾಯಿ; ಕುಸಿದ ಬೆಲೆಗೆ ಬೇಸತ್ತು ಬೆಳೆ ನಾಶಕ್ಕೆ ಮುಂದಾದ ದಾವಣಗೆರೆ ರೈತ
ದಾವಣಗೆರೆ ಮಾರುಕಟ್ಟೆಯಲ್ಲಿ ಬೂದುಗುಂಬಳ ಒಂದು ಕೆ.ಜಿಗೆ 2 ರಿಂದ 3 ರೂಪಾಯಿ ಬೆಲೆ ಇದೆ. ಮಾರುಕಟ್ಟೆಗೆ ಒಯ್ದು ಮಾರಾಟ ಮಾಡಿದರೆ ಕೂಲಿ ಹಣವೂ ಸಿಗದಿರುವುದರಿಂದ ದಿಕ್ಕು ತೋಚದಂತಾಗಿದ್ದು, ಬೆಳೆಯನ್ನು ನಾಶಪಡಿಸಲು ರೈತ ಮುಂದಾಗಿದ್ದಾರೆ.
ದಾವಣಗೆರೆ: ಜಿಲ್ಲೆಯ ಗೋಪನಾಳ್ ಗ್ರಾಮದಲ್ಲಿ ಬೂದುಗುಂಬಳ ಬೆಳೆದ ರೈತರೊಬ್ಬರು ಉತ್ತಮ ಬೆಲೆ ಸಿಗದೇ ಇರುವುದರಿಂದ ಮಾರುಕಟ್ಟೆಗೆ ಒಯ್ಯದೇ ಬೆಳೆ ನಾಶಪಡಿಸಲು ಮುಂದಾಗಿದ್ದಾರೆ. ರೈತ ರವಿಶಂಕರ್ ಮೂರೂವರೆ ಎಕರೆ ಜಮೀನಿನಲ್ಲಿ ಬೂದುಗುಂಬಳ ಬೆಳೆದಿದ್ದಾರೆ. ಭರಪೂರ ಬೆಳೆಯೇನೋ ಬಂದಿದೆ. ದಾವಣಗೆರೆ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ 2ರಿಂದ 3 ರೂಪಾಯಿ ಬೆಲೆ ಇದೆ. ಮಾರುಕಟ್ಟೆಗೆ ಒಯ್ದು ಮಾರಾಟ ಮಾಡಿದರೆ ಕೂಲಿ ಹಣವೂ ಸಿಗದಿರುವುದರಿಂದ ದಿಕ್ಕು ತೋಚದಂತಾಗಿದ್ದು, ಈ ಕಾರ್ಯಕ್ಕೆ ಮುಂದಾಗಿದ್ದಾರೆ.
ಕೊರೊನಾ ಎರಡನೇ ಅಲೆ ಕಾರಣ ಮದುವೆ ಕಾರ್ಯಗಳಿಗೆ ನಿರ್ಬಂಧ ಹೇರಲಾಗಿದೆ. ಹಾಸ್ಟೆಲ್‌ಗಳೂ ಮುಚ್ಚಿವೆ. ಈ ಕಾರಣದಿಂದಾಗಿ ಬೇಡಿಕೆ ಇಲ್ಲದಂತಾಗಿದೆ. ಸದ್ಯ, ಏಳು ಟನ್ ಕುಂಬಳವನ್ನು ಕೊಯ್ಲು ಮಾಡಲಾಗಿದೆ. ಬೆಳೆಗೆ ರಸಗೊಬ್ಬರ, ಔಷಧ ಹಾಗೂ ಕೂಲಿಗಾಗಿ 60,000 ರೂಪಾಯಿ ಖರ್ಚಾಗಿದೆ. ಕೆಜಿಗೆ 3 ರೂಪಾಯಿಯಂತೆ ಏಳು ಟನ್ ಮಾರಾಟವಾದರೂ ಕೇವಲ 21 ಸಾವಿರ ರೂಪಾಯಿ ಸಿಗುತ್ತದೆ. ಕೊಯ್ಲು ಮಾಡಲು ಒಬ್ಬರಿಗೆ ದಿನಕ್ಕೆ 300 ರೂಪಾಯಿ ಕೂಲಿ ಇದ್ದು, 30,000 ರೂಪಾಯಿ ಕೂಲಿಗೆ ಖರ್ಚಾಗುತ್ತದೆ ಎಂದು ರೈತ ರವಿಶಂಕರ್ ಬೇಸರ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ದನೆಯ ಬೂದುಗುಂಬಳಕ್ಕೆ ಮಾತ್ರ ಬೇಡಿಕೆ ಇದೆ. ನಮ್ಮದು ದುಂಡನೆಯ ಬೂದುಗುಂಬಳ. ಅಲ್ಲಿಗೆ ಕೊಂಡೊಯ್ಯಲು ಸಾರಿಗೆ ವೆಚ್ಚ ಹೆಚ್ಚಾಗುತ್ತದೆ. ಮದುವೆಯ ಸೀಸನ್‌ನಲ್ಲಿ ಉತ್ತಮ ಬೆಲೆ ಸಿಗಬಹುದು ಎಂದುಕೊಂಡಿದ್ದೆ. ಆದರೆ ಕುಸಿದ ದರವು ನಿರಾಸೆ ಮೂಡಿಸಿದೆ ಎಂದು ರೈತ ರವಿಶಂಕರ್ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: ಟೊಮೆಟೊ ಬೆಳೆದು ಕೈ ಸುಟ್ಟುಕೊಂಡ ರೈತನಿಂದ ಪ್ರಧಾನಿ ಮೋದಿಗೆ ಪತ್ರ ಬರೆಯಲು ತಯಾರಿ
ಟೊಮ್ಯಾಟೊ ದರ ಒಮ್ಮೆಲೆ ಕುಸಿತ: ಬೆಳೆದ ಟೊಮ್ಯಾಟೊವನ್ನೆಲ್ಲಾ ರಸ್ತೆಗೆ ಸುರಿದು ರೈತರ ಆಕ್ರೋಶ
(Farmer from Davanagere decided to destroy the wax gourd crop due to a price drop )