ಲಕ್ಷ್ಮೀ ಹೆಬ್ಬಾಳ್ಕರ್​ಗೆ ಆಹ್ವಾನ ಕೊಟ್ಟಿದ್ದು ರಾಮ ಮಂದಿರ ಉದ್ಘಾಟನೆಗಲ್ಲ, ಭೇಟಿಗಷ್ಟೇ: ವಿಹೆಚ್​ಪಿ ಸ್ಪಷ್ಟನೆ

| Updated By: Ganapathi Sharma

Updated on: Jan 05, 2024 | 9:28 AM

ಫೆಬ್ರವರಿಯಲ್ಲಿ ರಾಮ ಮಂದಿರಕ್ಕೆ ಭೇಟಿ ಕೊಡುವುದಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದಾರೆ. ಆದಷ್ಟು ಬೇಗ ರಾಮನ ದರ್ಶನ ಪಡೆಯುವಂತೆ ಮನವಿ ಮಾಡಿದ್ದೇವೆ ಎಂದು ವಿಹೆಚ್​ಪಿ ತಿಳಿಸಿದೆ.

ಲಕ್ಷ್ಮೀ ಹೆಬ್ಬಾಳ್ಕರ್​ಗೆ ಆಹ್ವಾನ ಕೊಟ್ಟಿದ್ದು ರಾಮ ಮಂದಿರ ಉದ್ಘಾಟನೆಗಲ್ಲ, ಭೇಟಿಗಷ್ಟೇ: ವಿಹೆಚ್​ಪಿ ಸ್ಪಷ್ಟನೆ
ಲಕ್ಷ್ಮೀ ಹೆಬ್ಬಾಳ್ಕರ್
Follow us on

ಬೆಳಗಾವಿ, ಜನವರಿ 5: ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೆ ಪ್ರತಿಪಕ್ಷಗಳ ನಾಯಕರಿಗೆ ಆಹ್ವಾನ ನೀಡುತ್ತಿಲ್ಲ ಎಂಬ ಟೀಕೆಗಳ ಮಧ್ಯೆಯೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರಿಗೆ ವಿಶ್ವ ಹಿಂದೂ ಪರಿಷತ್ (VHP) ಆಮಂತ್ರಣ ನೀಡಿರುವ ಬಗ್ಗೆ ಗುರುವಾರ ವರದಿಯಾಗಿತ್ತು. ಆದರೆ, ಈ ಆಮಂತ್ರಣ ರಾಮ ಮಂದಿರ ಉದ್ಘಾಟನೆಗಲ್ಲ, ರಾಮ ಮಂದಿರ ಭೇಟಿಗಷ್ಟೇ ಎಂದು ವಿಹೆಚ್​ಪಿ ಸ್ಪಷ್ಟಪಡಿಸಿದೆ. ರಾಮ ಮಂದಿರಕ್ಕೆ ಒಮ್ಮೆಯಾದರೂ ಭೇಟಿ ನೀಡಿ ಎಂದು ಆಹ್ವಾನ ನೀಡಲಾಗಿದೆ. ರಾಮ ಮಂದಿರಕ್ಕೆ ಭೇಟಿ ಕೊಡಿ ಅಂತಾ ಅಕ್ಷತಾ ಅಭಿಯಾನ ಆಮಂತ್ರಣ ನೀಡಿದ್ದೇವೆ ಎಂದು ವಿಹೆಚ್‌ಪಿ ಮುಖಂಡ ಪರಮೇಶ್ವರ್ ಹೆಗಡೆ ‘ಟಿವಿ9’ಗೆ ತಿಳಿಸಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್ ಅವರು ರಾಮ ಮಂದಿರಕ್ಕೆ 2 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು. ಹೀಗಾಗಿ ಅವರಿಗೆ ಆಹ್ವಾನ ನೀಡಿದ್ದೇವೆ. ಸಾಮಾನ್ಯರಿಂದ ಹಿಡಿದು ಎಲ್ಲರಿಗೂ ಪಕ್ಷಾತೀತವಾಗಿ ಆಹ್ವಾನ ನೀಡುತ್ತಿದ್ದೇವೆ. ಅದೇ ರೀತಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ನೀಡಿದ್ದೇವೆ. ರಾಮ ಮಂದಿರಕ್ಕೆ ಹೋಗಿ ಬನ್ನಿ ಎಂದು ಆಮಂತ್ರಣ ಕೊಟ್ಟಿದ್ದೇವೆ ಎಂದು ಅವರು ಹೇಳಿದ್ದಾರೆ.

ಫೆಬ್ರವರಿಯಲ್ಲಿ ರಾಮ ಮಂದಿರಕ್ಕೆ ಭೇಟಿ ಕೊಡುವುದಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದಾರೆ. ಆದಷ್ಟು ಬೇಗ ರಾಮನ ದರ್ಶನ ಪಡೆಯುವಂತೆ ಮನವಿ ಮಾಡಿದ್ದೇವೆ ಎಂದು ವಿಹೆಚ್​ಪಿ ತಿಳಿಸಿದೆ.

‘ಅಕ್ಷತಾ ಅಭಿಯಾನ’ದ ಅಂಗವಾಗಿ ಗುರುವಾರ ವಿಶ್ವ ಹಿಂದೂ ಪರಿಷತ್ ಪ್ರಮುಖರು ಹೆಬ್ಬಾಳ್ಕರ್ ಮನೆಗೆ ತೆರಳಿ ಆಹ್ವಾನ ನೀಡಿದ್ದರು. ರಾಮ ಮಂದಿರ ಉದ್ಘಾಟನೆ ಆಹ್ವಾನ ವಿಚಾರ ರಾಜಕೀಯ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿತ್ತು.

ಇದನ್ನೂ ಓದಿ: ಟೀಕೆಗಳ ನಡುವೆಯೇ ಲಕ್ಷ್ಮೀ ಹೆಬ್ಬಾಳ್ಕರ್​​ಗೆ ಆಮಂತ್ರಣ ನೀಡಿದ ವಿಹೆಚ್​ಪಿ

ರಾಮ ಮಂದಿರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿಲ್ಲ ಎಂಬ ವಿಚಾರವಾಗಿ ಕಾಂಗ್ರೆಸ್ ನಾಯಕರು ಟೀಕಾಪ್ರಹಾರ ನಡೆಸುತ್ತಿರುವ ಬೆನ್ನಲ್ಲೇ ಹೆಬ್ಬಾಳ್ಕರ್​​ಗೆ ಆಹ್ವಾನ ನೀಡಿರುವುದು ಕುತೂಹಲಕ್ಕೆ ಕಾರಣವಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ