ಚಿಕ್ಕಮಗಳೂರು, ಫೆ.4: ಹಣದ ವಿಚಾರವಾಗಿ ಹಲ್ಲೆ, ಕೊಲೆ ಪ್ರಕರಣಗಳು ನಡೆಯುತ್ತಲೇ ಇವೆ. ಇದೀಗ, ಕಾಫಿನಾಡು ಚಿಕ್ಕಮಗಳೂರಿನಲ್ಲಿ (Chikkamagaluru) ಅಮಾನವೀಯ ಕೃತ್ಯವೊಂದು ನಡೆದಿದೆ. ಐದು ಸಾವಿರ ರೂಪಾಯಿ ಸಾಲ ಪಡೆದು ವಾಪಸ್ ಕೊಟ್ಟಿಲ್ಲ ಎಂದು ಯುವಕನೊಬ್ಬನಿಗೆ ಯುವಕರ ತಂಡವೊಂದು ಮದ್ಯಪಾನ ಮಾಡುತ್ತಾ ಮನಬಂದಂತೆ ಥಳಿಸಿದ ಘಟನೆ ಕೊಪ್ಪ ತಾಲೂಕಿನ ಕರ್ಕೇಶ್ವರ ಗ್ರಾಮದಲ್ಲಿ ನಡೆದಿದೆ.
ಕೊಪ್ಪ ಸಮೀಪದ ಕರ್ಕೇಶ್ವರ ಗ್ರಾಮದ ಸತೀಶ್ ಎಂಬಾತ ಐದು ಸಾವಿರ ರೂಪಾಯಿ ಸಾಲ ಪಡೆದಿದ್ದನು. ಈ ಹಣವನ್ನು ವಾಪಸ್ ನೀಡದ ಹಿನ್ನೆಲೆ ಕೋಪಗೊಂಡ ಸಾಲ ನೀಡಿದ ಯುವಕ ತನ್ನ ಸಹಚರರೊಂದಿಗೆ ಸೇರಿಕೊಂಡು ಮನಸೋಇಚ್ಛೆ ಹಲ್ಲೆ ನಡೆಸಿದ್ದಾನೆ.
ಇದನ್ನೂ ಓದಿ: ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಂಗನ ಕಾಯಿಲೆಗೆ ಮೊದಲ ಬಲಿ; ಜನರಲ್ಲಿ ಹೆಚ್ಚಿದ ಆತಂಕ
ಕೊಪ್ಪ ತಾಲೂಕಿನ ಸೋಮ್ಲಪುರ ರಸ್ತೆಯ ಪ್ಲಾಂಟೇಶನ್ನಲ್ಲಿ ಮದ್ಯಪಾನ ಮಾಡುತ್ತಲೇ ಯುವಕರ ಗುಂಪು ಸತೀಶ್ನ ಕೈ ಕಾಲು ಕಟ್ಟಿ ಹಾಕಿ ಮರಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ. ಇದರ ವಿಡಿಯೋ ಕೂಡ ಮಾಡಿಕೊಂಡಿದ್ದಾರೆ. ಸದ್ಯ, ಹಲ್ಲೆ ಮಾಡಿ ಚಿತ್ರ ಹಿಂಸೆ ನೀಡಿರುವ ವಿಡಿಯೋ ವೈರಲ್ ಆಗುತ್ತಿದೆ.
ಹಲ್ಲೆಯಿಂದ ಸತೀಶ್ ಬೆನ್ನಿನಲ್ಲಿ ರಕ್ತದ ಕಲೆ, ಬಾಸುಂಡೆಗಳು ಎದ್ದಿವೆ. ಗಂಭೀರವಾಗಿ ಗಾಯಗೊಂಡ ಸತೀಶ್ನನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಹೇಶ್, ವಿಠಲ್, ಸಿರಿಲ್, ಸುನೀಲ್, ಮಂಜು, ಕಟ್ಟೆಹಕ್ಲು ಮಂಜು ವಿರುದ್ಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ