ವಿಜಯನಗರ, ಆ.8: ಜಿಲ್ಲೆಯ ಹರಪನಹಳ್ಳಿ(Harapanahalli) ತಾಲೂಕಿನ ತೊಗರಿಕಟ್ಟೆ ಗ್ರಾಮ ಪಂಚಾಯತಿಯಲ್ಲಿ ಆರೋಗ್ಯದ ನೆಪ ಹೇಳಿ ಚುನಾವಣೆ ನಡೆಸದೆ ಅಧಿಕಾರಿಗಳು ಮುಂದೂಡಿದ್ದಾರೆ. ಹೌದು ಒಂದಲ್ಲ, ಎರಡು ಬಾರಿ ಚುನಾವಣೆ ಮಂದೂಡಿದ್ದು, ಸದಸ್ಯರನ್ನು ಆಕ್ರೋಶಗೊಳ್ಳುವಂತೆ ಮಾಡಿದೆ. ಆಗಸ್ಟ್ 2ರಂದು ನಡೆಯಬೇಕಿದ್ದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯನ್ನ, ನಿನ್ನೆ ನಡೆಸಲು ಮುಂದಾಗಿದ್ದರು. ಅದರಂತೆ ನಿನ್ನೆಯೂ ಸದಸ್ಯರು ಸಕಾಲಕ್ಕೆ ಹಾಜರಾದರೂ, ಆದರೂ ಕೂಡ ಸಿಬ್ಬಂದಿಗಳು ಚುನಾವಣೆ ನಡೆಸಲಿಲ್ಲ. ಈ ಹಿನ್ನಲೆ ಆಕ್ರೋಶಗೊಂಡ ಸದಸ್ಯರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಉದ್ದೇಶಪೂರ್ವಕವಾಗಿ ಚುನಾವಣೆ ನಡೆಸುತ್ತಿಲ್ಲ ಎಂದು ಆರೋಪಿಸಿ ಸತ್ಯಾಗ್ರಹ ನಡೆಸಿದ್ದಾರೆ. ಪರಿಣಾಮ ತೊಗರಿಕಟ್ಟೆ ಗ್ರಾಮ ಪಂಚಾಯಿತಿ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ದಬ್ಬೇಘಟ್ಟ ಗ್ರಾಮ ಪಂಚಾಯತಿಯಲ್ಲಿ ಜುಲೈ 23 ರಂದು ಗ್ರಾಮ ಪಂಚಾಯತಿ ಅಧ್ಯಕ್ಷ ಚುನಾವಣೆಯಲ್ಲಿ ಸೋತ ಹಿನ್ನಲೆ ಸದಸ್ಯೆಯೊಬ್ಬರು ಮತ್ತೋರ್ವ ಸದಸ್ಯ ಮಂಜುನಾಥ್ ಎಂಬುವವರ ಮೇಲೆ ಚಪ್ಪಲಿಯಿಂದ ಹೊಡೆದು, ಅವಾಚ್ಯ ಶಬ್ಧಗಳಿಂದ ನಿಂದಿಸಿ ಶರ್ಟ್ ಹರಿದ ಘಟನೆ ನಡೆದಿತ್ತು. ಅಧ್ಯಕ್ಷ ಸ್ಥಾನಕ್ಕೆ ಸೋತ ಹತಾಶೆಯಲ್ಲಿ ಸದಸ್ಯೆ ಸುಧಾ ಜಿ.ಎನ್. ಎಂಬುವವರು ‘ನನಗೆ ಮತ ಹಾಕಿಲ್ಲ, ಹಾಗಾಗಿ ನಾನು ಸೋತಿದ್ದೇನೆಂದು ಗ್ರಾಮ ಪಂಚಾಯತಿ ಕಚೇರಿ ಒಳಗೆ ನುಗ್ಗಿ ಹಲ್ಲೆ ಮಾಡಿದ್ದರು. ಬಳಿಕ ಸುಧಾ ವಿರುದ್ಧ ಸ್ಪರ್ಧಿಸಿದ್ದ ಛಾಯಮಣಿ ಎಂಬುವವರು ಅಧ್ಯಕ್ಷೆಯಾಗಿ ಗೆಲುವು ಕಂಡಿದ್ದರು. ಹಲ್ಲೆ ಮಾಡಿದ ನಂತರ ಸುಧಾ ತಲೆ ಮರೆಸಿಕೊಂಡಿದ್ದರು. ಆ ಕುರಿತು ಸುಧಾ ವಿರುದ್ಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜುಲೈ 19 ರಂದು ಇದೇ ರೀತಿ ಘಟನೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರ ಕ್ಷೇತ್ರವಾದ ಕೊರಟಗೆರೆ ತಾಲೂಕಿನ ಹುಲಿಕುಂಟೆ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ವೇಳೆ ಗ್ರಾ.ಪಂಚಾಯತಿ ಸದಸ್ಯ ಡಿ.ಎಲ್.ಮಲ್ಲಯ್ಯ ಮೇಲೆ ಕೊರಟಗೆರೆ ಪಿಡಬ್ಯುಡಿ ಪ್ರಥಮ ದರ್ಜೆ ಸಹಾಯಕನಾಗಿರುವ ಚಿಕ್ಕಣ್ಣ ಹಲ್ಲೆ ನಡೆಸಿದ್ದರು. ‘ನನ್ನ ಮತ ನನ್ನ ಹಕ್ಕು ಎಂದು ಹೇಳಿದ ವ್ಯಕ್ತಿಗೆ, ಸರ್ಕಾರಿ ಅಧಿಕಾರಿ ಮನ ಬಂದಂತೆ ಥಳಿಸಿ ದರ್ಪ ಮೆರೆದಿದ್ದರು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:19 pm, Tue, 8 August 23