ಬಳ್ಳಾರಿ ಪ್ರಕರಣ ಮಾಸುವ ಮುನ್ನವೇ ಪಕ್ಕದ ವಿಜಯನಗರದಲ್ಲೂ ಬಾಣಂತಿ ಸಾವು

| Updated By: ವಿವೇಕ ಬಿರಾದಾರ

Updated on: Dec 29, 2024 | 10:06 AM

ವಿಜಯನಗರ ಜಿಲ್ಲೆಯ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಿಸೇರಿಯನ್ ನಂತರ ಬಾಣಂತಿಯೊಬ್ಬಳು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ. ಐಶ್ವರ್ಯ ಎಂಬ 20 ವರ್ಷದ ಬಾಣಂತಿ ಹೆರಿಗೆಯಾದ ಐದು ದಿನಗಳ ಬಳಿಕ ವಾಂತಿ-ಭೇದಿಯಿಂದ ಮೃತಪಟ್ಟಿದ್ದಾರೆ. ಪೋಷಕರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.

ಬಳ್ಳಾರಿ ಪ್ರಕರಣ ಮಾಸುವ ಮುನ್ನವೇ ಪಕ್ಕದ ವಿಜಯನಗರದಲ್ಲೂ ಬಾಣಂತಿ ಸಾವು
ಮೃತ ಬಾಣಂತಿ ಐಶ್ವರ್ಯ​
Follow us on

ವಿಜಯನಗರ, ಡಿಸೆಂಬರ್​ 29: ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ (BIMS) ಬಾಣಂತಿಯರ ಸರಣಿ ಸಾವಿನ ಪ್ರಕರಣ ಮಾಸುವ ಮುನ್ನವೇ, ವಿಜಯನಗರ (Vijayanagar) ಜಿಲ್ಲೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವಾಗಿದೆ ಎಂಬ ಆರೋಪ ಕೇಳಿಬಂದಿದೆ. ಸಿಸೇರಿಯನ್ ಮೂಲಕ ಹೆರಿಗೆಯಾಗಿ ಐದು ದಿನಗಳ ಬಳಿಕ ಬಾಣಂತಿ ಸಾವಾಗಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಅಂತ ಮೃತಳ ಪೋಷಕರು ಆಸ್ಪತ್ರೆ ಮುಂದೆ ಕಣ್ಣೀರು ಹಾಕಿದ್ದಾರೆ.

ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಕಳಪೆ IV ದ್ರಾವಣದಿಂದ ಕಳೆದ ಒಂದು ತಿಂಗಳ ಅವಧಿಯಲ್ಲಿ ಐವರ ಬಾಣಂತಿಯರ ಸರಣಿ ಸಾವಾಗಿತ್ತು. ಈ ಪ್ರಕರಣ ಮಾಸುವ ಮುನ್ನವೇ ವಿಜಯನಗರ ಜಿಲ್ಲೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬಾಣಂತಿ ಸಾವಾಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ನಾಗಲಾಪೂರ ಗ್ರಾಮದ ಐಶ್ವರ್ಯ (20) ಮೃತ ದುರ್ದೈವಿ.

ಗರ್ಭಿಣಿ ಐಶ್ವರ್ಯ ಡಿಸೆಂಬರ್ 19 ರಂದು ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಡಿಸೆಂಬರ್ 20 ರಂದು ಐಶ್ವರ್ಯಯವರಿಗೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿತ್ತು. ಮುದ್ದಾದ ಹೆಣ್ಣು ಮಗು ಜನನವಾಗಿದೆ. ಮನೆಗೆ ಮಹಾಲಕ್ಷ್ಮಿ ಬಂದ್ಲು ಅಂತ ಇಡೀ ಕುಟುಂಬ ಸಂತಸದಲ್ಲಿ ಇತ್ತು. ಆರಂಭದಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯ ಚೆನ್ನಾಗಿಯೇ ಇತ್ತು. ಹೆರಿಗೆಯಾಗಿ ಮೂರು ದಿನಗಳ ಬಳಿಕ, ಡಿಸೆಂಬರ್ 23 ರಂದು ಅದೇನಾಯಿತೋ ಏನೋ ಗೊತ್ತಿಲ್ಲ ಬೆಳಗ್ಗೆ ತಿಂಡಿ ಮಾಡಿದ ಬಳಿಕ ಬಾಣಂತಿ ಐಶ್ವರ್ಯಳಿಗೆ ಇದ್ದಕ್ಕಿದ್ದಂತೆ ವಾಂತಿ ಭೇದಿ ಶುರುವಾಗಿದೆ.

ಇದನ್ನೂ ಓದಿ: ಬಳ್ಳಾರಿ ಬಾಣಂತಿಯರ ಸಾವು: ಆರೋಗ್ಯ ಸಚಿವ ಗುಂಡೂರಾವ್​ ಬಿಚ್ಚಿಟ್ಟ ಸತ್ಯ ಏನು? ಇಲ್ಲಿದೆ ಓದಿ

ತಕ್ಷಣ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ರೆಫರ್ ಮಾಡಿದ್ದಾರೆ. ಬಳಿಕ, ಕುಟುಂಬಸ್ಥರು ಕೊಪ್ಪಳ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ದಾಖಲಿಸುತ್ತಿದ್ದಂತೆ ಐಶ್ವರ್ಯ ಮೃತಪಟ್ಟಿದ್ದಾಳೆ. ಐಶ್ವರ್ಯ ಸಾವಿಗೆ ವೈದ್ಯರು ಕಾರಣ. ವೈದ್ಯರ ನಿರ್ಲಕ್ಷ್ಯಕ್ಕೆ ಐಶ್ವರ್ಯ ಸಾವಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಈ ಬಗ್ಗೆ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ಡಾ. ಶಂಕರ್ ನಾಯ್ಕ ಮಾತನಾಡಿ, ಐಶ್ವರ್ಯ ಅವರು ಆಸ್ಪತ್ರೆಗೆ ದಾಖಲು ಆಗುವಾಗಲೇ HB (ಹಿಮೋಗ್ಲೋಬಿನ್) 11.9 ಇತ್ತು. ಬಳಿಕ ಡಿಸೆಂಬರ್​ 20 ರಂದು ಸಿಸೇರಿಯನ್ ಮೂಲಕ ಹೆರಿಗೆಯಾಗಿದೆ. ವಿಜಯನಗರ ಆಸ್ಪತ್ರೆಯಲ್ಲಿ ಐಶ್ವರ್ಯ ಅವರಿಗೆ ಏನು ತೊಂದರೆಯಾಗಿರಲಿಲ್ಲ. ವಾಂತಿ-ಭೇದಿ ಆಗಿದ್ದಕ್ಕೆ ನಾವು ಕೊಪ್ಪಳ ಸರ್ಕಾರಿ ಆಸ್ಪತ್ರೆಗೆ ಕಳಿಸಿದ್ವಿ. ಕೊಪ್ಪಳ ಆಸ್ಪತ್ರೆಯ ವೈದ್ಯರು ನೀಡಿದ ವರದಿ ಪ್ರಕಾರ, ಟೆಕ್ಕಿ ಕಾರ್ಡಿಯ ಸೇರಿದೆ. ವಾಂತಿ-ಭೇದಿಯಿಂದ ಮೆಟಾಬೋಲಿಕ್ ಆ್ಯಸಿಡೋಟಸ್ ಆಗಿ ಕಿಡ್ನಿ ವೈಫಲ್ಯದಿಂದ ಸಾವಾಗಿದೆ ಅಂತ ಉಲ್ಲೇಖವಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುತ್ತೇವೆ ಎಂದು ಹೇಳಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:05 am, Sun, 29 December 24