ಕೊನೆ ಆಸೆಯಂತೆ ಹಂಪಿಯ ತುಂಗಭದ್ರ ನದಿಯಲ್ಲಿ ಲಂಡನ್‌ನ ಖ್ಯಾತ ಪುರಾತತ್ವಶಾಸ್ತ್ರಜ್ಞನ ಅಸ್ಥಿ ವಿಸರ್ಜನೆ
ಜಾನ್ ಅವರ ಮೊಮ್ಮಗ ಸೇರಿದಂತೆ ಅವರ ಕುಟುಂಬ ಸದಸ್ಯರು ಹಂಪಿಗೆ ಭೇಟಿ ನೀಡಿ ಎಲ್ಲಾ ರೀತಿಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಚಿತಾಭಸ್ಮವನ್ನು ತುಂಗಭದ್ರಾ ನದಿಯಲ್ಲಿ ವಿಸರ್ಜಿಸಿದ್ದಾರೆ.
ವಿಜಯನಗರ: ಕಳೆದ ವಾರ ನಿಧನರಾದ ಲಂಡನ್‌ನ ಖ್ಯಾತ ಪುರಾತತ್ವಶಾಸ್ತ್ರಜ್ಞ ಜಾನ್ ಮೆರ್ವಿನ್ ಫ್ರಿಟ್ಜ್(John Fritz) ಅವರ ಅಸ್ಥಿಯನ್ನು ಅವರ ಕೊನೆಯ ಆಸೆಯಂತೆ ಐತಿಹಾಸಿಕ ಹಂಪಿಯ ತುಂಗಾಭದ್ರಾ ನದಿಯಲ್ಲಿ(Hampi Tungabhadra River) ವಿಸರ್ಜನೆ ಮಾಡಲಾಗಿದೆ. 87 ವರ್ಷದ ಫ್ರಿಟ್ಸ್ ಅವರು ವಿದೇಶದವರಾದರೂ ಅವರಿಗೆ ಹಂಪಿ ಎಂದರೆ ಎಲ್ಲಿಲ್ಲದ ಪ್ರಾಣ. ತಮ್ಮ ಜೀವನದ ಬಹುಪಾಲು ಭಾಗವನ್ನು ಅಲ್ಲಿನ ಅದ್ಭುತ ಸ್ಮಾರಕಗಳನ್ನು ನೋಡುತ್ತ ಆನಂದಿಸುತ್ತ ಕಳೆದಿದ್ದಾರೆ. ಅವರು ಹಿಂದೂ ಸಂಪ್ರದಾಯಗಳಿಂದ ಪ್ರಭಾವಿತರಾಗಿದ್ದರು ಮತ್ತು ಅವರ ಮರಣದ ನಂತರ ಅವರ ಚಿತಾಭಸ್ಮವನ್ನು ಹಂಪಿಯ ತುಂಗಭದ್ರಾ ನದಿಯಲ್ಲಿ ವಿಸರ್ಜಿಸುವ ಆಸೆ ಹೊಂದಿದ್ದರು. ಅವರ ಆಸೆಯಂತೆ ಹಿಂದೂ ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನಗಳನ್ನು ಮಾಡಿ ಚಿತಾಭಸ್ಮವನ್ನು ಹಂಪಿಯ ತುಂಗಭದ್ರಾ ನದಿಯಲ್ಲಿ ವಿಸರ್ಜಿಸಲಾಗಿದೆ.
ಜಾನ್ ಅವರ ಮೊಮ್ಮಗ ಸೇರಿದಂತೆ ಅವರ ಕುಟುಂಬ ಸದಸ್ಯರು ಹಂಪಿಗೆ ಭೇಟಿ ನೀಡಿ ಎಲ್ಲಾ ರೀತಿಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಚಿತಾಭಸ್ಮವನ್ನು ತುಂಗಭದ್ರಾ ನದಿಯಲ್ಲಿ ವಿಸರ್ಜಿಸಿದ್ದಾರೆ.
ಈ ಬಗ್ಗೆ ವಿರೂಪಾಕ್ಷ ದೇವಸ್ಥಾನದ ಅರ್ಚಕರು ಮಾತನಾಡಿ, ಜಾನ್ ಅವರು ದೇವಸ್ಥಾನಕ್ಕೆ ನಿತ್ಯ ಭೇಟಿ ನೀಡುತ್ತಿದ್ದರು ಮತ್ತು ಅವರು ಭೇಟಿ ನೀಡಿದಾಗಲೆಲ್ಲಾ ಹಂಪಿಯಲ್ಲಿರುವ ಸ್ಮಾರಕಗಳ ಬಗ್ಗೆ ಹೊಸ ಸಿದ್ಧಾಂತಗಳನ್ನು ಮಂಡಿಸುತ್ತಿದ್ದರು. ಜಾನ್ ಅವರ ಕುಟುಂಬ ಸದಸ್ಯರು ನಮ್ಮ ಬಳಿಗೆ ಬಂದು ಅವರ ಚಿತಾಭಸ್ಮವನ್ನು ಇಲ್ಲಿ ವಿಸರ್ಜಿಸಬೇಕು ಎಂಬ ಅವರ ಕೊನೆಯ ಆಸೆಯನ್ನು ಹೊಂದಿದ್ದರು ಎಂದು ವಿರೂಪಾಕ್ಷ ದೇವಸ್ಥಾನದ ಅರ್ಚಕರು ತಿಳಿಸಿದರು. ಇದರಂತೆ ಜಾನ್ ಅವರ ಅಂತ್ಯಕ್ರಿಯೆಯನ್ನು ಲಂಡನ್ನಲ್ಲಿ ಹಿಂದೂ ಸಂಪ್ರದಾಯದಂತೆ ನಡೆಸಲಾಗಿದ್ದು ಆಸ್ತಿಯನ್ನು ಇಲ್ಲಿಗೆ ತಂದು ಹಂಪಿಯ ಪುರಂದರ ಮಂಟಪದ ಬಳಿ ವಿಧಿವಿಧಾನಗಳನ್ನು ನೆರವೇರಿಸಿ ತುಂಗಭದ್ರಾ ನದಿಯಲ್ಲಿ ವಿಸರ್ಜಿಸಿದ್ದಾರೆ ಎಂದರು.
ಇದನ್ನೂ ಓದಿ: ಹಂಪಿ ಸ್ಮಾರಕದ ಮೇಲೇರಿ ನೃತ್ಯ ಮಾಡಿ ವಿಡಿಯೋ ಅಪ್ಲೋಡ್ ಮಾಡಿದ್ದ ಆರೋಪಿ ಬಂಧನ
ಹಂಪಿ ಸಮೀಪದ ಆನೆಗುಂದಿಯಲ್ಲಿ ನೆಲೆಸಿರುವ ವಿಜಯನಗರ ಸಾಮ್ರಾಜ್ಯದ ವಂಶದವರಾದ ಕೃಷ್ಣದೇವರಾಯ ಅವರು ಜಾನ್ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡರು, ಜಾನ್ ಮತ್ತು ಅವರ ಸ್ನೇಹಿತರು ಹಂಪಿಗೆ ಭೇಟಿ ನೀಡಿದಾಗಲೆಲ್ಲ ನನ್ನ ತಂದೆಯನ್ನು ಭೇಟಿಯಾಗುತ್ತಿದ್ದರು ಎಂದರು.
ಹಂಪಿಯ ಸೌಂದರ್ಯವನ್ನು ಕಾಪಾಡಲು ಬಯಸಿದ್ದರು ಜಾನ್
ಜಾನ್ ಫ್ರಿಟ್ಜ್ ಅವರು 1980 ರ ದಶಕದ ಉತ್ತರಾರ್ಧದಲ್ಲಿ ಕಮಲ್ ಮಹಲ್ ಬಳಿ ಟೆಂಟ್ ಹಾಕುತ್ತಿದ್ದರು. ಹಂಪಿಯ ಸೌಂದರ್ಯವನ್ನು ಕಾಪಾಡುವ ಬಗ್ಗೆ ನನ್ನ ತಂದೆಯೊಂದಿಗೆ ಸುದೀರ್ಘ ಚರ್ಚೆ ನಡೆಸುತ್ತಿದ್ದರು. ಅವರ ಸಾವು ದೊಡ್ಡ ನಷ್ಟವಾಗಿದೆ ಎಂದು ಕೃಷ್ಣದೇವರಾಯ ಹೇಳಿದರು. 2019 ರಲ್ಲಿ ಜಾನ್ ಅವರು ನನ್ನನ್ನು ಭೇಟಿ ಮಾಡಿದರು ಎಂದು ಕೃಷ್ಣದೇವರಾಯ ತಿಳಿಸಿದರು.
ಹಂಪಿಯಲ್ಲಿ ಅವರ ಕೃತಿಗಳನ್ನು ಒಂದೇ ಸೂರಿನಡಿ ಸಂರಕ್ಷಿಸುವ ಕುರಿತು ನಾವು ಸುದೀರ್ಘ ಚರ್ಚೆ ನಡೆಸಿದ್ದೇವೆ. ವಾಸ್ತವವಾಗಿ, ನಾನು ಈ ಆಲೋಚನೆಯನ್ನು ಸರ್ಕಾರದೊಂದಿಗೆ ಹಂಚಿಕೊಂಡಿದ್ದೇನೆ ಮತ್ತು ಜಾನ್ ಅವರ ಕೃತಿಗಳ ಪ್ರತಿಗಳನ್ನು ನಮಗೆ ನೀಡಬೇಕೆಂದು ಒತ್ತಾಯಿಸಿದೆ. ಈಗ ಅವರ ಕೃತಿಗಳು ಬ್ರಿಟಿಷ್ ಲೈಬ್ರರಿಯಲ್ಲಿವೆ. ಹಂಪಿಯ ಎಲ್ಲಾ ಕಾಮಗಾರಿಗಳನ್ನು ಒಂದೇ ಸೂರಿನಡಿ ತರುವ ಯೋಜನೆ ರೂಪುಗೊಂಡ ನಂತರ ಅವರ ಕೃತಿಗಳ ನಕಲು ಪ್ರತಿಗಳನ್ನು ತರಲು ನಾವು ಆಶಿಸುತ್ತೇವೆ ಎಂದರು.
ಫ್ರಿಟ್ಜ್ ಅವರು 1981ರಿಂದ ನಿರಂತರವಾಗಿ ಹಂಪಿಗೆ ಭೇಟಿ ನೀಡುತ್ತಿದ್ದರು. ಹಂಪಿ ಬಗ್ಗೆ ಆಳವಾದ ಸಂಶೋಧನೆ ನಡೆಸಿ, ಅನೇಕ ಪುಸ್ತಕಗಳನ್ನು ಬರೆದಿದ್ದರು. ಇದರಲ್ಲಿ ಮೊನೊಗ್ರಾಫ್ ಸರಣಿ ಪ್ರಮುಖವಾದದ್ದಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:14 am, Sat, 11 March 23