ಗುಡ್ಡ ಏರಲು ಹೋಗಿ ಅವಘಡ: ಎರಡು ದಿನಗಳಾದರೂ ಯಾರ ಕಣ್ಣಿಗೂ ಬೀಳದ ಫ್ರಾನ್ಸ್ ಪ್ರವಾಸಿಗ ಬದುಕುಳಿದಿದ್ದೇಗೆ ಗೊತ್ತಾ?

ಹಂಪಿಯ ಯುನೆಸ್ಕೋ ತಾಣದಲ್ಲಿ ಅಷ್ಟಭುಜ ಸ್ನಾನಘಟಕದ ಬಳಿ ಜಾರಿಬಿದ್ದು ಗಾಯಗೊಂಡಿದ್ದ 52 ವರ್ಷದ ಫ್ರೆಂಚ್ ಪ್ರವಾಸಿಗನನ್ನು ಎರಡು ದಿನಗಳ ಬಳಿಕ ರಕ್ಷಿಸಲಾಗಿದೆ. ರೈತರು ನೀಡಿದ ಮಾಹಿತಿ ಮೇರೆಗೆ ಸ್ಥಳೀಯ ಪೊಲೀಸರು ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳು ರಕ್ಷಣೆ ಕಾರ್ಯಾಚರಣೆ ನಡೆಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಂಪಿಯ ಅಪಾಯಕಾರಿ ಪ್ರದೇಶಗಳಲ್ಲಿ ಪ್ರವಾಸಿಗರು ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಪೊಲೀಸರು ಮನವಿ ಮಾಡಿದ್ದಾರೆ.

ಗುಡ್ಡ ಏರಲು ಹೋಗಿ ಅವಘಡ: ಎರಡು ದಿನಗಳಾದರೂ ಯಾರ ಕಣ್ಣಿಗೂ ಬೀಳದ ಫ್ರಾನ್ಸ್ ಪ್ರವಾಸಿಗ ಬದುಕುಳಿದಿದ್ದೇಗೆ ಗೊತ್ತಾ?
ಗುಡ್ಡ ಏರಲು ಹೋಗಿ ಜಾರಿ ಬಿದ್ದ ಫ್ರಾನ್ಸ್ ಪ್ರವಾಸಿಗ

Updated on: Dec 28, 2025 | 9:58 AM

ವಿಜಯನಗರ, ಡಿಸೆಂಬರ್ 28: ಫ್ರಾನ್ಸ್‌ನ 52 ವರ್ಷದ ಪ್ರವಾಸಿಗರೊಬ್ಬರು ಹಂಪಿಯ (Hampi) ಯುನೆಸ್ಕೋ ವಿಶ್ವ ಪಾರಂಪರಿಕ ತಾಣದಲ್ಲಿರುವ ಐತಿಹಾಸಿಕ ಅಷ್ಟಭುಜ ಸ್ನಾನಘಟಕದ ಸಮೀಪದಲ್ಲಿ ಜಾರಿಬಿದ್ದಿದ್ದು, ಸುಮಾರು ಎರಡು ದಿನಗಳ ಬಳಿಕ ರಕ್ಷಿಸಲಾಗಿದೆ. ಗಾಯಾಳುವನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರ ಆರೋಗ್ಯ ಸುಧಾರಿಸಿದೆ.

ತೆವಳುತ್ತಾ ಬಾಳೆ ತೋಟ ತಲುಪಿದ್ದ ಬ್ರೂನೋ

ಡಿಸೆಂಬರ್ 24ರ ಸಂಜೆ ಸುಮಾರು 6 ಗಂಟೆಗೆ ಫ್ರಾನ್ಸ್‌ನ ಬ್ರುನೋ ರೋಜರ್ ಎಂಬವರು ಸ್ಮಾರಕದ ಸಮೀಪದ ಗುಡ್ಡವನ್ನು ಏರಲು ಯತ್ನಿಸುತ್ತಿದ್ದ ವೇಳೆ ಕಲ್ಲುಗಳಿರುವ ಪ್ರದೇಶದಲ್ಲಿ ಜಾರಿ ಬಿದ್ದು ಕಾಲಿಗೆ ಗಂಭೀರ ಗಾಯ ಮಾಡಿಕೊಂಡಿದ್ದರು. ಸಂಜೆ ಸಮಯದಲ್ಲಿ ಆ ಪ್ರದೇಶದಲ್ಲಿ ಜನಸಂಚಾರ ಕಡಿಮೆ ಇರುವುದರಿಂದ ಯಾರ ಕಣ್ಣಿಗೂ ಬೀಳದ ಅವರು, ಎರಡು ದಿನಗಳು ಅಲ್ಲಿಯೇ ಸಿಲುಕಿದ್ದರು. ಆಹಾರ ನೀರು ಸಿಗದೆ, ಗಾಯದ ತೀವ್ರ ನೋವಿನ ನಡುವೆಯೂ ಬದುಕುಳಿಯಲು ಪ್ರಯತ್ನಿಸಿದ ಬ್ರುನೋ, ತೆವಳುತ್ತ ಬಾಳೆ ತೋಟದೊಳಗೆ ತಲುಪಿದರು. ಅವರನ್ನು ಗಮನಿಸಿದ ರೈತರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಒಂಟಿಯಾಗಿ ಪ್ರವಾಸಕ್ಕೆ ಬಂದಿದ್ದ ರೋಜರ್

ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯ ಪೊಲೀಸರು ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳು ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ರೋಜರ್ ಅವರು ಒಂಟಿಯಾಗಿ ಭಾರತಕ್ಕೆ ಬಂದಿದ್ದು, ಹಂಪಿ ಸಮೀಪದ ಕಡ್ಡಿರಾಂಪುರ ಗ್ರಾಮದಲ್ಲಿ ಹೋಮ್‌ಸ್ಟೇಯಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ.  ಘಟನೆ ವೇಳೆ ಅವರು ಒಬ್ಬರೇ ಅನ್ವೇಷಣೆಗೆ ತೆರಳಿದ್ದರು ಎನ್ನಲಾಗಿದೆ. ಹಂಪಿಯ ಕಲ್ಲುಮಯ ಹಾಗೂ ಏಕಾಂಗಿ ಪ್ರದೇಶಗಳಲ್ಲಿ, ವಿಶೇಷವಾಗಿ ಸಂಜೆ ಸಮಯದಲ್ಲಿ ಪ್ರವಾಸಿಗರು ಎಚ್ಚರಿಕೆ ವಹಿಸಿ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:10 am, Sun, 28 December 25