ವಿಜಯಪುರ, ಸೆಪ್ಟೆಂಬರ್ 16: ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣದ ಪ್ರವೀಣ ಬೊಕ್ಕೆ ಎಂಬುವರು ವಿಜಯಪುರದ (Vijapur) ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರವೀಣ ಬೊಕ್ಕೆ 2022ರ ಏಪ್ರಿಲ್ 15 ರಂದು ಬೀದರ್ ಜಿಲ್ಲೆ ಹುಮನಾಬಾದ್ ಪಟ್ಟಣದ ಪ್ರಿಯಾಂಕಾ ಬೋಯಿ ಎಂಬ ಯುವತಿಯನ್ನು ಮದುವೆಯಾಗಿದ್ದಾರೆ.
ಮದವೆ ಸಮಯದಲ್ಲಿ ಪ್ರಿಯಾಂಕಾ ಪೋಷಕರು ಪ್ರವೀಣ ಬೊಕ್ಕೆಗೆ ವರದಕ್ಷಿಣ ರೂಪದಲ್ಲಿ 10 ಲಕ್ಷ ಹಣ ಮತ್ತು 110 ಗ್ರಾಂ ಚಿನ್ನ ನೀಡಿದ್ದಾರೆ. ಯುವತಿಯ ಪೋಷಕರು ಮದುವೆಗೆ 25 ರಿಂದ 30 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಮದುವೆ ನಂತರ ಪ್ರವೀಣ ವಿಜಯಪುರ ನಗರದಲ್ಲಿ ಬಾಡಿಗೆ ಮನೆ ಮಾಡಿದ್ದರು. ದಂಪತಿ ಇದೇ ಮನೆಯಲ್ಲಿ ವಾಸವಾಗಿದ್ದರು. ದಂಪತಿಗೆ ಒಂದು ಹೆಣ್ಣು ಮಗುವಿದೆ.
ಮದುವೆಯಾದ ಕೆಲವು ತಿಂಗಳ ಬಳಿಕ ಪ್ರವೀಣ ಹಾಗೂ ಆತನ ಪೋಷಕರು ಹಣಕ್ಕಾಗಿ ಪ್ರಿಯಾಂಕಾಗೆ ಪೀಡಿಸುತ್ತಿದ್ದರಂತೆ. ಒಬ್ಬಳೇ ಮಗಳು ತವರಿನಿಂದ ಹಣ ತೆಗೆದುಕೊಂಡು ಬಾ ಎಂದು ಹಿಂಸೆ ನೀಡುತ್ತಿದ್ದರಂತೆ. ಇಂದಲ್ಲ, ನಾಳೆ ನನ್ನ ಸಂಸಾರ ಸರಿಯಾಗುತ್ತದೆ ಎಂದು ಪ್ರಿಯಾಂಕಾ ಸಹಿಸಿಕೊಂಡು ಹೋಗಿದ್ದಾಳೆ. ಆದರೆ, ಪ್ರವೀಣಗೆ ಅಕ್ರಮ ಸಂಬಂಧ ಇರುವುದು ಎರಡು ತಿಂಗಳ ಹಿಂದೆ ಪ್ರಿಯಾಂಕಾಗೆ ತಿಳಿದಿದೆ. ಈ ವಿಚಾರವಾಗಿ ದಂಪತಿ ನಡುವೆ ಜಗಳವಾಗಿದೆ.
ಜಗಳದ ಬಳಿಕ ಪ್ರಿಯಾಂಕಾಳನ್ನು ಪತಿ ಪ್ರವೀಣ ಮತ್ತು ಆತನ ಪೋಷಕರು ಮನೆಯಿಂದ ಆಚೆ ಹಾಕಿದ್ದಾರೆ. ನಂತರ, ಪ್ರಿಯಾಂಕಾ ತವರು ಮನೆ ಸೇರಿದ್ದಾಳೆ. ಮಗಳ ಜೀವನ ಕಂಡು ಪ್ರಿಯಾಂಕಾ ಪೋಷಕರು ಚಿಂತಾಕ್ರಾಂತರಾಗಿದ್ದಾರೆ. ಪ್ರವೀಣ ಮಗಳ ಜೀವನ ಹಾಳು ಮಾಡಿಬಿಟ್ಟನಲ್ಲ ಎಂದು ಮಮ್ಮಲ ಮರಗುತ್ತಿದ್ದಾರೆ.
ಇದನ್ನೂ ಓದಿ: ಹಲ್ಲು ನೋವೆಂದು ಆಸ್ಪತ್ರೆಗೆ ಬಂದ ಕಳ್ಳರು: ವೈದ್ಯೆಯೊಂದಿಗೆ ಮಾತನಾಡುತ್ತ ಚಿನ್ನದ ಸರ ಕದ್ದು ಪರಾರಿ
ಈ ಬಗ್ಗೆ ಪ್ರಿಯಾಂಕಾ ತವರು ಮನೆಯವರು ಅಳಿಯನ ಮನೆಗೆ ಹೋಗಿ ನ್ಯಾಯ ಕೇಳಿದ್ದಾರೆ. “ನಮ್ಮ ಮಗಳಿಗೆ ಮೋಸ ಮಾಡಬೇಡ” ಎಂದು ಪರಿ ಪರಿಯಾಗಿ ಕೇಳಿಕೊಂಡಿದ್ದಾರೆ. ಆದರೂ, ಪ್ರವೀಣ ಮನಸ್ಸು ಬದಲಾಗಿಲ್ಲ. ಕೊನೆಗೆ ದಾರಿ ಕಾಣದೆ ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ಹಾಗೂ ವಿಜಯಪುರ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರವೀಣ ಮೇಲೆ ಪ್ರಿಯಾಂಕಾ ದೂರು ದಾಖಲಿಸಿದ್ದಾರೆ.
ಅಳಿಯ ಪ್ರವೀಣ, ಆತನ ತಾಯಿ ಕಲಾವತಿ, ಮಾವ ಶಿವರಾಜ, ಮೈದುನ ಪ್ರಶಾಂತ, ನಾದಿನಿ ವಾಣಿಶ್ರೀ ಮತ್ತು ಈಕೆಯ ಪತಿ ಗಿರೀಶ ಕುಡಿಕೊಂಡು ನಮ್ಮ ಮಗಳಿಗೆ ಹಿಂಸೆ ನೀಡಿದ್ದಾರೆ. ನ್ಯಾಯಕ್ಕಾಗಿ ನಾವು ದೂರು ದಾಖಲು ಮಾಡಿದರೂ ಆತನನ್ನು ಸೇವೆಯಿಂದ ಅಮಾನತ್ತು ಮಾಡಿಲ್ಲ. ಪ್ರವೀಣ ವಿರುದ್ಧ ದೂರು ನೀಡಿ ಎರಡು ತಿಂಗಳು ಕಳೆದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆತನಿಗೆ ಇಲಾಖೆಯ ಆಧಿಕಾರಿಗಳು ಸಾಥ್ ನೀಡುತ್ತಿದ್ದಾರೆ. ಪೊಲೀಸರು ಸಹ ನಮ್ಮ ಮಗಳ ಪ್ರಕರಣದಲ್ಲಿ ಯಾವುದೇ ತನಿಖೆ ಮಾಡದೆ ಉದಾಸೀನ ಮಾಡಿದ್ದಾರೆ. ನಮಗೆ ನ್ಯಾಯಬೇಕೆಂದು ಪ್ರಿಯಾಂಕಾ ತಾಯಿ ಒತ್ತಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:23 pm, Mon, 16 September 24