AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

John Merwin Fritz: ಪುರಾತತ್ವ ಸಂಶೋಧಕ ಜಾನ್ ಫ್ರಿಟ್ಜ್ ಅಸ್ಥಿ ತುಂಗಭದ್ರೆಯಲ್ಲಿ ವಿಸರ್ಜನೆ

ಜಾನ್ ಮೆರ್ವಿನ್ ಫ್ರಿಟ್ಜ್ ಅವರು ಇತ್ತೀಚೆಗೆ ನಿಧನ ಹೊಂದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ್ದ ಪುರಾತತ್ತ್ವ ಶಾಸ್ತ್ರದ ಸಂಶೋಧಕರಾಗಿದ್ದ ಇವರು ವಿಜಯನಗರದ ಸಂಶೋಧನೆಗೆ ಗಮನಾರ್ಹ ಕೊಡುಗೆ ನೀಡಿದ್ದರು. ಇವರ ಇಚ್ಛೆಯಂತೆ ಲಂಡನ್‌ನಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಿ ಚಿತಾಭಸ್ಮವನ್ನು ತುಂಗಭದ್ರಾ ನೀರಿನಲ್ಲಿ ವಿಸರ್ಜಿಸಲಾಯಿತು.

John Merwin Fritz: ಪುರಾತತ್ವ ಸಂಶೋಧಕ ಜಾನ್ ಫ್ರಿಟ್ಜ್ ಅಸ್ಥಿ ತುಂಗಭದ್ರೆಯಲ್ಲಿ ವಿಸರ್ಜನೆ
ಜಾನ್ ಮೆರ್ವಿನ್ ಫ್ರಿಟ್ಜ್ (ಎಡ ಚಿತ್ರ) ಮತ್ತು ತುಂಗಾಭದ್ರಾ ನದಿಯಲ್ಲಿ ಅಸ್ಥಿ ವಿಸರ್ಜಿಸುತ್ತಿರುವುದು (ಬಲ ಚಿತ್ರ)
Rakesh Nayak Manchi
|

Updated on:Mar 10, 2023 | 3:31 PM

Share

ಹಂಪಿ: ಇತ್ತೀಚೆಗೆ ಲಂಡನ್‌ನಲ್ಲಿ ನಿಧನರಾದ ಪುರಾತತ್ವ ಸಂಶೋಧಕ ಮತ್ತು ಮಾನವಶಾಸ್ತ್ರಜ್ಞ ಜಾನ್ ಮೆರ್ವಿನ್ ಫ್ರಿಟ್ಜ್ (83) (John Merwin Fritz) ಅವರ ಚಿತಾಭಸ್ಮವನ್ನು ಅವರ ಇಚ್ಛೆಯಂತೆ ಭಾನುವಾರ ಹಂಪಿಯಲ್ಲಿನ ತುಂಗಭದ್ರಾ ನದಿಯಲ್ಲಿ (Tungabhadra River Hampi) ವಿಸರ್ಜನೆ ಮಾಡಲಾಯಿತು. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಜಾನ್ ಫ್ರಿಟ್ಜ್ ಅವರು ಜನವರಿ 23ರಂದು ಲಂಡನ್​ನಲ್ಲಿ ನಿಧನ ಹೊಂದಿದ್ದರು. ಅವರ ಇಚ್ಛೆಯಂತೆ ಲಂಡನ್‌ನಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಿ ಚಿತಾಭಸ್ಮವನ್ನು ತುಂಗಭದ್ರಾ ನೀರಿನಲ್ಲಿ ವಿಸರ್ಜಿಸಲಾಯಿತು. ಜಾನ್ ಫ್ರಿಟ್ಜ್ ಮಗಳಾದ ಆ್ಯಲಿಸ್‌ ಚಂದ್ರ, ಮೊಮ್ಮಗ ವಿಲಿಯಂ ಅವರು ಅಮೆರಿಕದ ಸಿಯಾಟೆಲ್‌ನಿಂದ ಹಂಪಿಗೆ ಬಂದು ಹಿಂದೂ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಭಾನುವಾರದಂದು ತುಂಗಭದ್ರಾ ನದಿಯಲ್ಲಿ ಅಸ್ಥಿ ವಿಸರ್ಜಿಸಿದರು.

ಡಿಸೆಂಬರ್ 29, 1939 ರಂದು ಯುನೈಟೆಡ್ ಸ್ಟೇಟ್ಸ್‌ನ ಕ್ಯಾಲಿಫೋರ್ನಿಯಾದ ಗ್ಲೆಂಡೇಲ್‌ನಲ್ಲಿ ಜನಿಸಿದ ಫ್ರಿಟ್ಜ್ ಲಂಡನ್‌ನಲ್ಲಿ ನೆಲೆಸಿದ್ದರು. ಏಪ್ರಿಲ್ 1981 ರಲ್ಲಿ ಫ್ರಿಟ್ಜ್ ಹಂಪಿಯ ಸಂಶೋಧನೆಗಾಗಿ ಆಗಮಿಸಿದ್ದರು. ತಮ್ಮ ಜೀವನದ ಬಹುಪಾಲು ಭಾಗವನ್ನು ಇಲ್ಲಿನ ಅದ್ಭುತ ಸ್ಮಾರಕಗಳೊಂದಿಗೆ ಕಳೆದ ಅವರು ಹಿಂದೂ ಸಂಪ್ರದಾಯಗಳಿಂದ ಪ್ರಭಾವಿತರಾಗಿದ್ದರು. ಅದರಂತೆ ನಿರಂತರವಾಗಿ ಹಂಪಿಗೆ ಭೇಟಿ ನೀಡುತ್ತಿದ್ದ ಜಾನ್ ಫ್ರಿಟ್ಜ್, ಆಳವಾದ ಅಧ್ಯಯನ ನಡೆಸಿ ಪುಸ್ತಕಗಳನ್ನು ಬಿಡುಗಡೆ ಮಾಡಿದ್ದರು. ಅಷ್ಟು ಮಾತ್ರವಲ್ಲದೆ, ಜಾನ್ ಮತ್ತು ಜಾರ್ಜ್ ಮೈಕೆಲ್ ಹಂಪಿಯಲ್ಲಿ ಶಿಬಿರವನ್ನು ನಡೆಸಿದ್ದರು. “ವಿಜಯನಗರ: ಆರ್ಕಿಯಾಲಾಜಿಕಲ್ ಎಕ್ಸ್‌ಪ್ಲೋರೇಶನ್, 1990-2000” ಎಂಬ ಎರಡು ಸಂಪುಟಗಳನ್ನು ಸಂಪಾದಿಸಿ ಪ್ರಕಟಿಸಿದ್ದರು.

ಇದನ್ನೂ ಓದಿ: ನಿವೃತ್ತ ಲೆಫ್ಟಿನೆಂಟ್ ಜನರಲ್ ಎಸ್.ಸಿ. ಸರದೇಶಪಾಂಡೆ ನಿಧನ, ಅವರ ಇಚ್ಛೆಯಂತೆ ದೇಹ ದಾನ

ಜಾನ್ ಅವರು ದೇವಸ್ಥಾನಕ್ಕೆ ನಿತ್ಯ ಭೇಟಿ ನೀಡುತ್ತಿದ್ದರು ಮತ್ತು ಅವರು ಭೇಟಿ ನೀಡಿದಾಗಲೆಲ್ಲಾ ಹಂಪಿಯಲ್ಲಿರುವ ಸ್ಮಾರಕಗಳ ಬಗ್ಗೆ ಹೊಸ ಸಿದ್ಧಾಂತಗಳನ್ನು ಮಂಡಿಸುತ್ತಿದ್ದರು ಎಂದು ವಿರೂಪಾಕ್ಷ ದೇವಸ್ಥಾನದ ಅರ್ಚಕರು ಹೇಳಿದ್ದಾರೆ. ಹಂಪಿ ಸಮೀಪದ ಆನೆಗುಂದಿಯಲ್ಲಿ ನೆಲೆಸಿರುವ ವಿಜಯನಗರ ಸಾಮ್ರಾಜ್ಯದ ವಂಶದವರಾದ ಕೃಷ್ಣದೇವರಾಯ ಅವರು ಜಾನ್ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡರು, ಜಾನ್ ಮತ್ತು ಅವರ ಸ್ನೇಹಿತರು ಹಂಪಿಗೆ ಭೇಟಿ ನೀಡಿದಾಗಲೆಲ್ಲ ನನ್ನ ತಂದೆಯನ್ನು ಭೇಟಿಯಾಗುತ್ತಿದ್ದರು ಎಂದರು.

ಜಾನ್ ಫ್ರಿಟ್ಜ್ ಅವರು 1980 ರ ದಶಕದ ಉತ್ತರಾರ್ಧದಲ್ಲಿ ಕಮಲ್ ಮಹಲ್ ಬಳಿ ಟೆಂಟ್ ಹಾಕುತ್ತಿದ್ದರು ಮತ್ತು ಹಂಪಿಯ ಸೌಂದರ್ಯವನ್ನು ಕಾಪಾಡುವ ಬಗ್ಗೆ ನನ್ನ ತಂದೆಯೊಂದಿಗೆ ಸುದೀರ್ಘ ಚರ್ಚೆ ನಡೆಸುತ್ತಿದ್ದರು. ಅವರ ಸಾವು ದೊಡ್ಡ ನಷ್ಟವಾಗಿದೆ ಎಂದು ವಿಜಯನಗರ ಸಾಮ್ರಾಜ್ಯದ ವಂಶದವರಾದ ಕೃಷ್ಣದೇವರಾಯ ಹೇಳಿದ್ದಾರೆ. ಹಂಪಿಯಲ್ಲಿ ಅವರ ಕೃತಿಗಳನ್ನು ಒಂದೇ ಸೂರಿನಡಿ ಸಂರಕ್ಷಿಸುವ ಕುರಿತು ನಾವು ಚರ್ಚೆ ನಡೆಸಿದ್ದೇವೆ. ಈ ಬಗ್ಗೆ ಸರ್ಕಾರದೊಂದಿಗೆ ಹಂಚಿಕೊಂಡಿದ್ದೇನೆ ಮತ್ತು ಜಾನ್ ಅವರ ಕೃತಿಗಳ ಪ್ರತಿಗಳನ್ನು ನಮಗೆ ನೀಡಬೇಕೆಂದು ಮನವಿ ಮಾಡಿದ್ದೇನೆ. ಈಗ ಅವರ ಕೃತಿಗಳು ಬ್ರಿಟಿಷ್ ಲೈಬ್ರರಿಯಲ್ಲಿವೆ. ಹಂಪಿಯ ಎಲ್ಲಾ ಕಾಮಗಾರಿಗಳನ್ನು ಒಂದೇ ಸೂರಿನಡಿ ತರುವ ಯೋಜನೆ ರೂಪುಗೊಂಡ ನಂತರ ಅವರ ಕೃತಿಗಳ ನಕಲು ಪ್ರತಿಗಳನ್ನು ತರಲು ನಾವು ಆಶಿಸುತ್ತೇವೆ ಎಂದು ಅವರು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:23 pm, Fri, 10 March 23