AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

6 ಕೋಟಿ ರೂ. ಖರ್ಚಾದರೂ ಮುಗಿಯದ ಅಕ್ಕ ಮಹಾದೇವಿ ಮಹಿಳಾ ವಿವಿ ಮ್ಯೂಸಿಯಂ: ಉದ್ಘಾಟನೆ ಯಾವಾಗ ಎಂದ ವಿದ್ಯಾರ್ಥಿನಿಯರು

ಶೈಕ್ಷಣಿಕ ಚಟುವಟಿಕೆಗಳ ಸಹಿತ ಇತರೆ ಪಠ್ಯೇತರ ಚಟುವಟಿಕೆಗಳನ್ನು ಮಾಡುವಲ್ಲಿ ಮಹಿಳಾ ವಿವಿ ಹೆಸರು ಮುಂಚೂಣಿಯಲ್ಲಿದೆ. ಆದರೆ ಕಳೆದ 7 ವರ್ಷಗಳ ಹಿಂದೆ 6 ಕೋಟಿ ರೂಪಾಯಿ ವೆಚ್ಚದಲ್ಲಿ ವಸ್ತು ಸಂಗ್ರಹಾಲಯವನ್ನು ನಿರ್ಮಾಣ ಮಾಡಲಾಗಿದ್ದು, ಇಂದಿಗೂ ಅದರ ಉದ್ಘಾಟನೆ ಮಾಡಿಲ್ಲ. ಇದು ವಿದ್ಯಾರ್ಥಿನಿಯರಿಗೆ ನಿರಾಸೆ ಮೂಡಿಸಿದೆ.

6 ಕೋಟಿ ರೂ. ಖರ್ಚಾದರೂ ಮುಗಿಯದ ಅಕ್ಕ ಮಹಾದೇವಿ ಮಹಿಳಾ ವಿವಿ ಮ್ಯೂಸಿಯಂ: ಉದ್ಘಾಟನೆ ಯಾವಾಗ ಎಂದ ವಿದ್ಯಾರ್ಥಿನಿಯರು
ವಸ್ತು ಸಂಗ್ರಹಾಲಯ
ಅಶೋಕ ಯಡಳ್ಳಿ, ವಿಜಯಪುರ
| Updated By: ಗಂಗಾಧರ​ ಬ. ಸಾಬೋಜಿ|

Updated on: Jul 23, 2023 | 8:44 PM

Share

ವಿಜಯಪುರ, ಜುಲೈ 23: ಮಹಿಳಾ ಶೈಕ್ಷಣಿಕ ಸಬಲೀಕರಣ ಆಶಯದೊಂದಿಗೆ ಡಾ ನಂಜುಡಪ್ಪ ವರದಿ ಶಿಫಾರಸ್ಸಿನ ಮೇರೆಗೆ ವಿಜಯಪುರದಲ್ಲಿ ಮಹಿಳಾ ವಿಶ್ವವಿದ್ಯಾನಿಲಯ (Akkamahadevi Women’s University) ಸ್ಥಾಪಿಸಲಾಗಿದೆ. ಮಹಿಳೆಯರು ಉತ್ತಮ ಶಿಕ್ಷಣ ಕಲಿತು ಸ್ವಾವಲಂಬಿಗಳಾಗಬೇಕು. ತಮ್ಮ ಕಾಲ ಮೇಲೆ ತಾವು ನಿಲ್ಲುವಂತಾಗಬೇಕು. ಶೈಕ್ಷಣಿಕವಾಗಿ ಸಾಧನೆ ಮಾಡಬೇಕೆಂಬ ಉದ್ದೇಶವನ್ನು ಹೊಂದಿದೆ. 2003 ರಲ್ಲಿ ಸ್ಥಾಪನೆಯಾದ ಮಹಿಳಾ ವಿವಿಯಲ್ಲಿ ಸಾವಿರಾರು ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದಾರೆ. ಸದ್ಯ ವಿವಿಯಲ್ಲಿ ಕೋಟಿ ಕೋಟಿ ಹಣ ಖರ್ಚು ಮಾಡಿ ನಿರ್ಮಾಣ ಮಾಡಿರುವ ವಸ್ತು ಸಂಗ್ರಹಾಲಯ ಮಾತ್ರ ಉದ್ಘಾಟನೆಯಾಗಿಲ್ಲ.

ವಿಜಯಪುರ ನಗರದ ಹೊರ ಭಾಗದಲ್ಲಿರುವ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯಕ್ಕೆ ಇದೀಗ 20ರ ಹರೆಯ. 2003 ರಲ್ಲಿ ಸ್ಥಾಪನೆಯಾದ ಮಹಿಳಾ ವಿವಿಗೆ 2017 ರಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಎಂದು ಮರುನಾಮಕರಣ ಮಾಡಲಾಗಿದೆ.

ಶೈಕ್ಷಣಿಕ ಚಟುವಟಿಕೆಗಳ ಸಹಿತ ಇತರೆ ಪಠ್ಯೇತರ ಚಟುವಟಿಕೆಗಳನ್ನು ಮಾಡುವಲ್ಲಿ ಮಹಿಳಾ ವಿವಿ ಹೆಸರು ಮುಂಚೂಣಿಯಲ್ಲಿದೆ. ಈ ದಿಸೆಯಲ್ಲಿ ರಾಜ್ಯದ ಇತರೆ ಜಿಲ್ಲೆಗಳ ಪದ್ದತಿ ಕಲೆ ಸಂಸ್ಕೃತಿ ಜಾನಪದ ಸೇರಿದಂತೆ ಇತರೆ ವಿಷಯಗಳು ಎಲ್ಲಾ ವಿಷಯಗಳು ತಿಳಿಯುವ ನಿಟ್ಟಿನಲ್ಲಿ ವಸ್ತು ಸಂಗ್ರಹಾಲಯ ನಿರ್ಮಾಣ ಮಾಡಲಾಗಿದೆ. ಕಳೆದ 7 ವರ್ಷಗಳ ಹಿಂದೆ ಅಂದಿನ ಕುಲಪತಿ ಮೀನಾ ಚಂದಾವಕರ ನೇತೃತ್ವದಲ್ಲಿ 6 ಕೋಟಿ ರೂಪಾಯಿ ವೆಚ್ಚದಲ್ಲಿ ವಸ್ತು ಸಂಗ್ರಹಾಲಯವನ್ನು ನಿರ್ಮಾಣ ಮಾಡಲಾಗಿದೆ.

ಇದನ್ನೂ ಓದಿ: Gruha Lakshmi: ಅರ್ಜಿ ಸಲ್ಲಿಸಲು ಹಣ ಪಡೆದ ಗ್ರಾಮ ಒನ್ ಸಿಬ್ಬಂದಿ ಲಾಗಿನ್ ಐಡಿ ರದ್ದು

ರಾಜ್ಯದ ಎಲ್ಲಾ ಜಿಲ್ಲೆಗಳ ವಿವಿಧ ಕಲೆ, ವಸ್ತುಗಳು, ವಿವಿಧ ಪರಿಕರಗಳು, ಉಡುಪುಗಳು, ಸಂಪ್ರದಾಯ ಬಿಂಬಿಸುವ ವಸ್ತುಗಳು, ಕೃಷಿ, ಗೃಹ ಬಳಕೆ ಸೇರಿದಂತೆ ಇತರೆ ತಹರೇವಾರಿ ವಸ್ತುಗಳನ್ನು ಮಹಿಳಾ ವಿವಿಯ ವಸ್ತು ಸಂಗ್ರಹಾಲಯದಲ್ಲಿರಿಸಲಾಗಿದೆ. ಇದು ಬಹು ವೈವಿಧ್ಯಮವನ್ನು ಎಲ್ಲಾ ವಿದ್ಯಾರ್ಥಿನಿಯರು ತಿಳಿದುಕೊಳ್ಳಲು ಸಹಕಾರಿ ಎಂದು ಸ್ಥಾಪನೆ ಮಾಡಲಾಗಿದೆ. ಆದರೆ 7 ವರ್ಷಗಳಾದರೂ ವಸ್ತು ಸಂಗ್ರಹಾಲಯ ಮಾತ್ರ ಉದ್ಘಾಟನೆಯಾಗಿಲ್ಲಾ. ಇದು ಇಲ್ಲಿನ ವಿದ್ಯಾರ್ಥಿನಿಯರಿಗೆ ನಿರಾಸೆ ತಂದಿದೆ.

ಈ ಮ್ಯೂಸಿಯಂ ಇನ್ನು ಬಾಗಿಲು ತೆರೆಯದಂತಾಗಿದೆ. ಈ ಕುರಿತು ವಿವಿಯ ಕುಲಪತಿ ಪ್ರೋ ತುಳಸಿಮಾಲಾ ಅವರ ಗಮನಕ್ಕೆ ತಂದಾಗ ವಿವಿಯ ವಿದ್ಯಾರ್ಥಿನಿಯರಿಗೆ ಅನಕೂಲವಾಗಲು ವಸ್ತು ಸಂಗ್ರಹಾಲಯ ನಿರ್ಮಾಣ ಮಾಡಲಾಗಿದೆ. ವಿವಿಯ ಹಿಂದಿನ ಕುಲಪತಿಗಳ ನೇತೃತ್ವದಲ್ಲಿ ನಿರ್ಮಿಸಲಾಗಿದೆ. ಸದ್ಯ ಇದನ್ನು ಉದ್ಘಾಟನೆ ಮಾಡಬೇಕಿದೆ. ವಸ್ತು ಸಂಗ್ರಹಾಲಯದ ಕೆಲ ಕಾಮಗಾರಿಗಳು ಪೂರ್ಣವಾಗಿಲ್ಲಾ.

ಇದನ್ನೂ ಓದಿ: Karnataka Dam Water Level: ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಏರಿಕೆ; ಜು.22ರ ಕರ್ನಾಟಕದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಇಲ್ಲಿದೆ

ಕಾಮಗಾರಿ ಪೂರ್ಣಗೊಳ್ಳಬೇಕಾದರೆ, ಅಂದಾಜು ಮೂರ್ನಾಲ್ಕು ಕೋಟಿಯಷ್ಟು ಅನುದಾನ ಬೇಕಿದೆ. ಈ ಬಗ್ಗೆ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ ಅನುದಾನ ಸಿಕ್ಕಿಲ್ಲ. ಇನ್ನು ಏಳು ವರ್ಷಗಳ ಹಿಂದೆ ಮಹಿಳಾ ಮ್ಯೂಸಿಯಂ ನಿರ್ಮಾಣಕ್ಕೆ ಸರ್ಕಾರದಿಂದ ಅನುಮತಿ ಪಡೆದಿಲ್ಲ ಎನ್ನುವ ಕಾರಣಕ್ಕೆ ಅನುದಾನ ಸಿಕ್ಕಿಲ್ಲ ಎನ್ನಲಾಗುತ್ತಿದೆ. ಆದರೆ ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ ಪಡೆದು ಕಾಮಗಾರಿ ಕೈಗೊಳ್ಳಲಾಗಿರುತ್ತದೆ. ಮಹಿಳಾ ಮ್ಯೂಸಿಯಂ ನಿರ್ಮಾಣವಾದರೆ ರಾಜ್ಯದ ಎಲ್ಲಾ ಜಿಲ್ಲೆಗಳ ಕಲೆ ಸಂಸ್ಕೃತಿ ಒಂದೆ ಸೂರಿನಡಿ ವೀಕ್ಷಿಸಲು ವಿದ್ಯಾರ್ಥಿನೀಯರಿಗೆ ಅನುಕೂಲ ಆಗಲಿದೆ ಎಂದರು.

ವಸ್ತು ಸಂಗ್ರಹಾಲಯಕ್ಕೆ ಕೋಟಿ ಕೋಟಿ ಖರ್ಚು ಮಾಡುವ ಬದಲು ಅದನ್ನೇ ಶೈಕ್ಷಣಿಕ ಕೆಲಸ ಕಾರ್ಯಗಳಿಗೆ ವಿನಿಯೋಗಿಸಬೇಕಿತ್ತು ಎಂಬ ಮಾತುಗಳೂ ಸಹ ಕೇಳಿ ಬಂದಿವೆ. ಇಷ್ಟರ ಮಧ್ಯೆ ಈಗಾಗಲೇ 6 ಕೋಟಿ ರೂಪಾಯಿಗಳನ್ನು ವಸ್ತು ಸಂಗ್ರಹಾಲಯಕ್ಕೆ ಖರ್ಚು ಮಾಡಿದ್ದು ಇದು ಉದ್ಘಾಟನೆಯಾಗಿ ವಿದ್ಯಾರ್ಥಿನಿಯರಿಗೆ ಅನಕೂಲವಾಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಿ ಇನ್ನಷ್ಟು ಹಣವನ್ನು ನೀಡಿ ಮ್ಯೂಸಿಯಂ ಉದ್ಘಾಟನೆಯಾಗುವಂತೆ ಕ್ರಮ ತೆಗೆದುಕೊಳ್ಳಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.