ಅನ್ನಭಾಗ್ಯ ಅಕ್ಕಿ ಮಹಾರಾಷ್ಟ್ರಕ್ಕೆ ಅಕ್ರಮ ಸಾಗಾಟ: ವಿಜಯಪುರದಲ್ಲಿ 40 ಟನ್ ಅಕ್ಕಿ ಜಪ್ತಿ

ಅಕ್ರಮವಾಗಿ ಮೂಟೆಗಟ್ಟಲೆ ರೇಷನ್ ಅಕ್ಕಿ‌ ಸಂಗ್ರಹಿಸಿಟ್ಟಿರುವುದು ಮಂಗಳೂರಿನಲ್ಲಿ‌ ಬೆಳಕಿಗೆ ಬಂದಿದ್ದು, ಅನ್ನ ಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಮಿಲ್​ಗಳಲ್ಲಿ ಪಾಲಿಶ್ ಮಾಡಿಸಿ ಬೇರೆ ಬ್ರ್ಯಾಂಡ್​​ಗಳ ಹೆಸರಿನಲ್ಲಿ ಮಾರಾಟ ಮಾಡುವ ಶಂಕೆ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೇ ಇದೀಗ ಬಾಗಲಕೋಟೆ, ಕೊಪ್ಪಳ, ದಾವಣಗೆರೆ, ಶಿವಮೊಗ್ಗದ ಸಾಗರ ಭಾಗಗಳಿಂದ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಮಹಾರಾಷ್ಟ್ರಕ್ಕೆ ಸಾಗಾಟ ಮಾಡುತ್ತಿರುವ ಶಂಕೆ ವ್ಯಕ್ತವಾಗಿದೆ.

ಅನ್ನಭಾಗ್ಯ ಅಕ್ಕಿ ಮಹಾರಾಷ್ಟ್ರಕ್ಕೆ ಅಕ್ರಮ ಸಾಗಾಟ: ವಿಜಯಪುರದಲ್ಲಿ 40 ಟನ್ ಅಕ್ಕಿ ಜಪ್ತಿ
ಅನ್ನಭಾಗ್ಯ ಅಕ್ಕಿ ಜಪ್ತಿ
Updated By: Ganapathi Sharma

Updated on: May 01, 2025 | 10:19 AM

ವಿಜಯಪುರ, ಮೇ 1: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಅನ್ನಭಾಗ್ಯ (Anna Bhagya) ಯೋಜನೆಯೂ ಒಂದು. ಬಡತನ ರೇಖೆಗಿಂತ ಕೆಳಗಿರುವವರಿಗೆ ಹಾಗೂ ಬಡವರಿಗೆ ಸರ್ಕಾರ ತಲಾ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ಆದರೆ ಈ ಅನ್ನಭಾಗ್ಯ ಅಕ್ಕಿ ಬಡವರ ಬದಲಾಗಿ ಉಳ್ಳವರ ಪಾಲಾಗಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಮಹಾರಾಷ್ಟ್ರಕ್ಕೆ (Maharashtra) ಸಾಗಾಟ ಮಾಡುತ್ತಿರುವುದು ವಿಜಯಪುರದಲ್ಲಿ ಪತ್ತೆಯಾಗಿದೆ. ವಿಜಯಪುರ ನಗರದ ಹೊರ ಭಾಗದ ಎನ್​ಎಚ್ 50 ರಲ್ಲಿ ಆಹಾರ ಮತ್ತು ನಾಗರೀಕ ಇಲಾಖೆ ಆಧಿಕಾರಿಗಳು ದಾಳಿ ನಡೆಸಿ ಸುಮಾರು 40 ಟನ್ ಅನ್ನಭಾಗ್ಯ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ.

ನೆರೆಯ ಬಾಗಲಕೋಟೆ ಜಿಲ್ಲೆಯಿಂದ ವಿಜಯಪುರ ಮೂಲಕ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿಯನ್ನು ಸಾಗಾಟ ಮಾಡಲಾಗುತ್ತಿತ್ತು. 600 ಕ್ಕೂ ಅಧಿಕ ಪ್ಲಾಸ್ಟಿಕ್ ಮೂಟೆಗಳಲ್ಲಿ ಸಂಗ್ರಹಿಸಿ, ಲೋಡ್ ಮಾಡಿ ತಮಿಳುನಾಡು ರಾಜ್ಯದ ನೋಂದಣಿಯ ಲಾರಿಯಲ್ಲಿ ಮಹಾರಾಷ್ಟ್ರಕ್ಕೆ ಸಾಗಾಟ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಹಾರ ಮತ್ತು ನಾಗರೀಕ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ

ಅನ್ನಭಾಗ್ಯ ಅಕ್ಕಿಯ ಅಕ್ರಮ ಸಾಗಾಟದ ವೇಳೆ ಆಹಾರ ಮತ್ತು ನಾಗರೀಕ ಇಲಾಖೆಯ ಮ್ಯಾನೇಜರ್ ಅಮರೇಶ ತಾಂಡೂರ ಹಾಗೂ ಆಹಾರ ನಿರೀಕ್ಷಕ ವಿಜಯಕುಮಾರ ಗುಮಶೆಟ್ಟಿ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದ್ದಾರೆ. ಲಾರಿ ತಡೆಯುತ್ತಲೇ ಚಾಲಕ ಹಾಗೂ ಕ್ಲೀನರ್ ಲಾರಿ ಬಿಟ್ಟು ಓಡಿ ಹೋಗಿದ್ದಾರೆ. ಬಾಗಲಕೋಟೆ, ಕೊಪ್ಪಳ, ದಾವಣಗೆರೆ, ಶಿವಮೊಗ್ಗದ ಸಾಗರ ಭಾಗದಲ್ಲಿ ಅನ್ನಭಾಗ್ಯ ಅಕ್ಕಿ ಸಂಗ್ರಹಿಸಲಾಗಿದೆ ಎಂಬ ಸಂಶಯ ಆಧಿಕಾರಿಗಳಲ್ಲಿ ಮೂಡಿದೆ.

ಇದನ್ನೂ ಓದಿ
ಕರ್ನಾಟಕ ಕರವಾಳಿಯಲ್ಲಿ ಭಾರಿ ಕಟ್ಟೆಚ್ಚರ: ಪ್ರವಾಸಿ ತಾಣಗಳ ಮೇಲೆ ನಿಗಾ
ಬೆಂಗಳೂರು ಮೆಟ್ರೋ ಹಳದಿ ಮಾರ್ಗ: ಮೂರು ಹೆಚ್ಚುವರಿ ಹೊಸ ಬೋಗಿಗಳ ರವಾನೆ
ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಏರಿಕೆ ಖಚಿತ, ಮೇ 13ಕ್ಕೆ ಆದೇಶ ಸಾಧ್ಯತೆ
ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆ ಇಂದು ಮಳೆ

ಅನ್ನಭಾಗ್ಯ ಅಕ್ಕಿ ಎಂಬುದು ದೃಢ

ಲಾರಿಯಲ್ಲಿದ್ದ ಅಕ್ಕಿಯನ್ನು ಪರಿಶೀಲನೆ ನಡೆಸಿ ಅದು ಅನ್ನಭಾಗ್ಯ ಅಕ್ಕಿ ಎಂಬುದನ್ನು ಆಧಿಕಾರಿಗಳು ಖಚಿತ ಪಡಿಸಿಕೊಂಡಿದ್ದಾರೆ. ಬಳಿಕ ಜಲನಗರ ಪೊಲೀಸರಿಗೆ ಕರೆ ಮಾಡಿ ಲಾರಿಯನ್ನು ಅವರ ವಶಕ್ಕೆ ನೀಡಿದ್ದಾರೆ. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಮ್ಯಾನೇಜರ್ ಅಮರೇಶ ತಾಂಡೂರ ನೇತೃತ್ವದಲ್ಲಿ ಜಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ: ಅನ್ಯಭಾಗ್ಯ ಅಕ್ಕಿ ಪಾಲಿಶ್ ಮಾಡಿ ಬೇರೆ ಬ್ರ್ಯಾಂಡ್​ಗಳ ಹೆಸರಿನಲ್ಲಿ ಮಾರಾಟ ಶಂಕೆ: ಮಂಗಳೂರಿನಲ್ಲಿ ಮೂಟೆಗಟ್ಟಲೆ ರೇಷನ್ ಅಕ್ಕಿ ಪತ್ತೆ

ಗ್ಯಾರಂಟಿ ಯೋಜನೆಯಡಿ ಸರ್ಕಾರ ಬಡವರಿಗೆ ನೀಡಬೇಕಿರುವ ಅನ್ನಭಾಗ್ಯ ಅಕ್ಕಿ ದುರುಪಯೋಗವಾಗುತ್ತಿದೆ. ಬಡವರಿಗೆ ಸಿಗಬೇಕಿದ್ದ ಅಕ್ಕಿಯನ್ನು ಕಾಳಸಂತೆ ಮೂಲಕ ಮಹಾರಾಷ್ಟ್ರಕ್ಕೆ ಸರಬರಾಜು ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅಲ್ಲದೆ, ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸರಬರಾಜು ಮಾಡುವವರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ