ಬೆಂಗಳೂರು ಮೆಟ್ರೋ ಹಳದಿ ಮಾರ್ಗ: ಮೂರು ಹೆಚ್ಚುವರಿ ಹೊಸ ಬೋಗಿಗಳ ರವಾನೆ
ಬಹು ನಿರೀಕ್ಷಿತ ಹಳದಿ ಮಾರ್ಗವನ್ನು ಚಾಲನೆಗೊಳಿಸುವತ್ತ ಬಿಎಂಆರ್‌ಸಿಎಲ್ ಮತ್ತೊಂದು ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲಿ ಮಂಗಳವಾರ ಕೋಲ್ಕತ್ತಾದಿಂದ 3 ಹೊಸ ಬೋಗಿಗಳು ರವಾನೆಯಾಗಿವೆ. ಮೇ 2 ರೊಳಗೆ ಇನ್ನೂ 3 ಮತ್ತು ಮೇ 10-15ರೊಳಗೆ ಅಂತಿಮ ಬೋಗಿಗಳು ಆಗಮಿಸುವ ನಿರೀಕ್ಷೆಯಿದೆ ಎಂದು ತಿಳಿಸಿದೆ.

ಬೆಂಗಳೂರು, ಮೇ 01: ಯಲ್ಲೋ ಲೈನ್ ಮೆಟ್ರೋಗಾಗಿ (Namma Metro) ಸಿಲಿಕಾನ್ ಸಿಟಿ ಜನರು ಕಾಯುತ್ತಿದ್ದಾರೆ. ಹೀಗಿರುವಾಗಲೇ ಬಿಎಂಆರ್‌ಸಿಎಲ್ (BMRCL) ಗುಡ್ ನ್ಯೂಸ್ ಒಂದನ್ನು ನೀಡಿದೆ. ಅದೇನೆಂದರೆ ಟಿಟಾಗಢನಿಂದ 3 ಹೊಸ ಮೆಟ್ರೋ ಬೋಗಿಗಳು ರವಾನೆಯಾಗಿವೆ. ಮೇ 2 ರೊಳಗೆ ಇನ್ನೂ 3 ಬೋಗಿಗಳು ಮತ್ತು ಮೇ 10-15 ರ ನಡುವೆ ಅಂತಿಮ ಕೋಚ್‌ಗಳು ಕರ್ನಾಟಕಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ತಿಳಿಸಿದೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಬಿಎಂಆರ್‌ಸಿಎಲ್, ಬಹು ನಿರೀಕ್ಷಿತ ಹಳದಿ ಮಾರ್ಗವನ್ನು ಚಾಲನೆಗೊಳಿಸುವತ್ತ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಮೂರನೇ 6- ಕೋಚ್ ರೈಲಿನ ಮೂರು ಕೋಚ್‌ಗಳನ್ನು ಯಶಸ್ವಿಯಾಗಿ ಟಿಟಾಗಢ ಫ್ಯಾಕ್ಟರಿಯಿಂದ ಏಪ್ರಿಲ್ 29ರಂದು ಬೆಂಗಳೂರಿಗೆ ರವಾನಿಸಲಾಗಿದ್ದು, ಉಳಿದ ಮೂರು ಕೋಚ್‌ಗಳನ್ನು 2025ರ ಮೇ 2 ರಂದು ರವಾನಿಸಲಾಗುವುದು ಎಂದು ಹೇಳಿದೆ.
ಬಿಎಂಆರ್‌ಸಿಎಲ್ ಟ್ವೀಟ್
ಟಿಟಾಗಢನಿಂದ 3 ಹೊಸ ಮೆಟ್ರೋ ಕಾರುಗಳು ರವಾನೆಯಾಗಿವೆ, ಮೇ 2 ರೊಳಗೆ ಇನ್ನೂ 3 ಕಾರುಗಳು, ಮತ್ತು ಮೇ 10-15 ರ ನಡುವೆ ಅಂತಿಮ ಕೋಚ್‌ಗಳು ಆಗಮಿಸುವ ನಿರೀಕ್ಷೆಯಿದೆ. ಹೆಚ್ಚಿನ ವಿವರಗಳಿಗಾಗಿ ಮಾಧ್ಯಮ ಪ್ರಕಟಣೆಯನ್ನು ಪರಿಶೀಲಿಸಿ. #BMRCL pic.twitter.com/hq5qiHEcNI
— ನಮ್ಮ ಮೆಟ್ರೋ (@OfficialBMRCL) April 30, 2025
ಈ ಕೋಚ್‌ಗಳು 2025ರ ಮೇ 10ರಿಂದ ಮೇ 15ರೊಳಗೆ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆಯಿದೆ. ಮೂರನೇ ರೈಲಿನ ಕಾರ್ಯಾರಂಭದೊಂದಿಗೆ, ಬಿಎಂಆರ್‌ಸಿಎಲ್ ಹಳದಿ ಮಾರ್ಗವನ್ನು ಸಾಧ್ಯವಾದಷ್ಟು ಅತೀ ಶೀಘ್ರದಲ್ಲಿ ಸೇವೆಗೆ ತರಲು ತೀವ್ರ ಪ್ರಯತ್ನಗಳು ನಡೆಯುತ್ತಿವೆ. ಇದು ನಗರ ಸಂಚಾರ ವ್ಯವಸ್ಥೆಯನ್ನು ಸುಧಾರಿಸಲಿದೆ ಮತ್ತು ಪ್ರಯಾಣಿಕರಿಗೆ ಉತ್ತಮ ಸಂಪರ್ಕವನ್ನು ಒದಗಿಸಲಿದೆ ಎಂದಿದೆ.
ಇದನ್ನೂ ಓದಿ: ಇದೇ ತಿಂಗಳು ಬೆಂಗಳೂರಿಗೆ ಬರಲಿದೆ ನಮ್ಮ ಮೆಟ್ರೋ ಹಳದಿ ಮಾರ್ಗದ ಮೊದಲ ರೈಲು: ತೇಜಸ್ವಿ ಸೂರ್ಯ
ಈ ಮೆಟ್ರೋ ಕೋಚ್‌ಗಳ ಆಗಮನವು ಜಾಗತಿಕ ಮಟ್ಟದ ಮೂಲಸೌಕರ್ಯ ಒದಗಿಸಲು ಬಿಎಂಆರ್‌ಸಿಎಲ್ ನಿಂದ ನೀಡಲಾಗುತ್ತಿರುವ ಬದ್ಧತೆಯ ಪ್ರತೀಕವಾಗಿದ್ದು, ಬೆಂಗಳೂರಿನ ಮೆಟ್ರೋ ಜಾಲವನ್ನು ವಿಸ್ತರಿಸಿ ನಿರಂತರವಾಗಿ ಹೆಚ್ಚುತ್ತಿರುವ ಸಾರಿಗೆ ಅಗತ್ಯಗಳನ್ನು ಪೂರೈಸುವತ್ತ ಇದು ಪ್ರಮುಖ ಹೆಜ್ಜೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಜೂನ್ ಅಥವಾ ಜುಲೈ ಒಳಗೆ ಹಳದಿ ಮಾರ್ಗ ಸಂಚಾರ ಮುಕ್ತ!
ಜೂನ್ ಮೊದಲ ವಾರಕ್ಕೆ ಮತ್ತೊಂದು ರೈಲು ಸಿಗಲಿದೆ. ಅಲ್ಲಿಗೆ ಒಟ್ಟು 4 ರೈಲು ಈ ಮಾರ್ಗಕ್ಕೆ ಸಿಗಲಿದೆ. ಈ ರೈಲುಗಳ ಸಂಪೂರ್ಣ ಮಾರ್ಗ ಪರಿಶೀಲನೆ ಮಾಡಿ, ಜೂನ್ ಕೊನೆಯ ಅಥವಾ ಜುಲೈ ಮೊದಲ ವಾರದಲ್ಲಿ, ಈ ನಾಲ್ಕು ರೈಲ್ವೆ ಮಾರ್ಗ ಓಪನ್ ಮಾಡುವುದು ಬಹುತೇಕ ಖಚಿತವಾಗಿದೆ. ಪ್ರತಿ 30 ನಿಮಿಷಕ್ಕೊಂದು ರೈಲಿನಂತೆ, ಸಂಚಾರ ಮಾಡುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ ಒಟ್ಟು ನಿಲ್ದಾಣಗಳ ಪೈಕಿ ಮೂರು ಅಥವಾ ಐದು ನಿಲ್ದಾಣಕ್ಕೊಂದು ಸ್ಟಾಪ್ನಂತೆ ಜನಸಂಖ್ಯೆಗೆ ಅಣುಗುಣವಾಗಿ ಕಾರ್ಯಚರಣೆ ಮಾಡಲು ಪ್ಲ್ಯಾನ್ ಕೂಡ ಮಾಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:55 am, Thu, 1 May 25