ಹೊಸ ವರ್ಷಕ್ಕೆ ಜನರ ಹೊಳೆ: ಮೆಟ್ರೋ ಖಜಾನೆಗೆ ಕಳೆ, ಬರೋಬ್ಬರಿ 2 ಕೋಟಿ ರೂ ಆದಾಯ
ಬೆಂಗಳೂರು ಮೆಟ್ರೋ ರೈಲು ನಿಗಮವು ಹೊಸ ವರ್ಷದ ಆಚರಣೆಗಾಗಿ ಮೆಟ್ರೋ ಸೇವೆಯನ್ನು ತಡರಾತ್ರಿಯವರೆಗೆ ವಿಸ್ತರಿಸಿತು. ಇದರಿಂದ 2 ಕೋಟಿ 75 ಲಕ್ಷ ರೂಪಾಯಿ ಆದಾಯ ಗಳಿಸಿದೆ. ಪಿಂಕ್ ಮತ್ತು ಗ್ರೀನ್ ಲೈನ್‌ಗಳಲ್ಲಿ ಲಕ್ಷಾಂತರ ಜನರು ಪ್ರಯಾಣಿಸಿದ್ದಾರೆ. ಎಂ.ಜಿ. ರಸ್ತೆಯಲ್ಲಿನ ಜನಸಂದಣಿಯನ್ನು ನಿರ್ವಹಿಸಲು ವಿಶೇಷ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿತ್ತು.
ಬೆಂಗಳೂರು, ಜನವರಿ 01: 2024ಕ್ಕೆ ಗುಡ್‌ಬೈ ಹೇಳಿ, ಹೊಸವರ್ಷವನ್ನು (New Year) ಗ್ರ್ಯಾಂಡ್ ಆಗಿ ಬರಮಾಡಿಕೊಳ್ಳಲಾಗಿದೆ. ಎಂಜಿ ರೋಡ್, ಚರ್ಚ್ ಸ್ಟ್ರೀಟ್ ಸೇರಿದಂತೆ ನಗರದ ವಿವಿಧೆಡೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಹಿನ್ನೆಲೆ ನಮ್ಮ ಮೆಟ್ರೋ ರೈಲು ಸೇವೆಯನ್ನು ತಡರಾತ್ರಿ ಎರಡು ಗಂಟೆವರೆಗೂ ವಿಸ್ತರಿಸಲಾಗಿತ್ತು. ಪರಿಣಾಮ ನಿನ್ನೆ ಒಂದೇ ದಿನ ನಮ್ಮ ಮೆಟ್ರೋಗೆ 2 ಕೋಟಿ 7 ಲಕ್ಷದ 52 ಸಾವಿರ ರೂ. ಆದಾಯವಾಗಿದೆ.
ಹೊಸ ವರ್ಷ ಹಿನ್ನೆಲೆಯಲ್ಲಿ ನಿನ್ನೆ ಬೆಳಗ್ಗೆ 5ರಿಂದ ಮಧ್ಯರಾತ್ರಿ 2.45ರವರೆಗೆ ಮೆಟ್ರೋ ರೈಲುಗಳು ಸಂಚಾರ ಮಾಡಿವೆ. ನಿನ್ನೆ ಒಂದೇ ದಿನ ಪಿಂಕ್ ಲೈನ್ನಲ್ಲಿ ಒಟ್ಟು 4,00,583, ಗ್ರೀನ್ ಲೈನ್ನಲ್ಲಿ 2,90,530, ಪಿಂಕ್ ಮತ್ತು ಗ್ರೀನ್ ಮಾರ್ಗದಿಂದ ಒಟ್ಟು 8,59,467, ಪೇಪರ್ ಟಿಕೆಟ್ ಮೂಲಕ ಮೆಟ್ರೋಟದಲ್ಲಿ 5,423 ಮತ್ತು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ 1,62,931 ಜನರು ಪ್ರಯಾಣ ಮಾಡಿದ್ದಾರೆ. ಆ ಮೂಲಕ ನಮ್ಮ ಮೆಟ್ರೋಗೆ 2 ಕೋಟಿ 7 ಲಕ್ಷದ 52 ಸಾವಿರ ರೂ. ಆದಾಯ ಹರಿದುಬಂದಿದೆ.
ಇದನ್ನೂ ಓದಿ: ಗುಡ್ ನ್ಯೂಸ್: ಹೊಸ ವರ್ಷದ ಸಂಭ್ರಮಾಚರಣೆಗೆ ನಮ್ಮ ಮೆಟ್ರೋ ಸೇವೆ ಅವಧಿ ವಿಸ್ತರಣೆ
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (ಬಿಎಂಆರ್‌ಸಿಎಲ್) 2025ರ ಹೊಸ ವರ್ಷದ ಮುನ್ನಾದಿನದಂದು ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ವಿಸ್ತರಣೆ ಮಾಡಿತ್ತು. ಕೊನೆಯ ರೈಲು ಜನವರಿ 1, 2025 ರಂದು ಮುಂಜಾನೆ 02:00 ಗಂಟೆಗೆ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ, ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ (ಮೆಜೆಸ್ಟಿಕ್)ನಿಂದ ಕೊನೆಯ ರೈಲು ಎಲ್ಲಾ ನಾಲ್ಕು ದಿಕ್ಕುಗಳಿಗೆ ಮುಂಜಾನೆ 2:40 ಗಂಟೆಗೆ ಹೊರಡುತ್ತದೆ ಎಂದು ತಿಳಿಸಿತ್ತು.
ಎಂ.ಜಿ ರಸ್ತೆಯಲ್ಲಿ ಜನಸಂದಣಿ ಹಿನ್ನೆಲೆ ಡಿಸೆಂಬರ್ 31, 2024 ರಂದು ರಾತ್ರಿ 11:00 ಗಂಟೆಯಿಂದ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಬಂದ್ ಮಾಡಲಾಗಿತ್ತು. ಪ್ರಯಾಣಿಕರ ಬಳಕೆಗಾಗಿ ಹತ್ತಿರದ ನಿಲ್ದಾಣಗಳಾದ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್‌ನಲ್ಲಿ ರೈಲುಗಳು ಸ್ಟಾಪ್ ಮಾಡಲಾಗಿತ್ತು.
ಇದನ್ನೂ ಓದಿ: New Year 2025: ಕುಡಿದು ಮೆಟ್ಟಿಲು ಇಳಿಯಲಾಗದವಳನ್ನು ಬಾಯ್ಫ್ರೆಂಡ್ ಎತ್ತಿಕೊಂಡು ಹೋಗಿ ಆಸರೆಯಾದ!
ಇನ್ನು ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಿಂದ ಯಾವುದೇ ನಿಲ್ದಾಣಕ್ಕೆ ರಾತ್ರಿ 11:00 ಗಂಟೆಯ ನಂತರ ಪ್ರಯಾಣಿಸುವ ಪ್ರಯಾಣಿಕರು 50 ಬೆಲೆಯ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಅನ್ನು ನೀಡಲಾಗಿತ್ತು. ಈ ಕಾಗದದ ಟಿಕೆಟ್ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ 31ನೇ ಡಿಸೆಂಬರ್ 2024ರ ಬೆಳಗ್ಗೆ 8:00 ರಿಂದ ಮುಂಗಡವಾಗಿ ಖರೀದಿಸಬಹುದಾಗಿತ್ತು. ಸಾಮಾನ್ಯ QR ಕೋಡ್ ಟಿಕೆಟ್ಗಳು ಮತ್ತು ಕಾರ್ಡ್‌ಗಳು ಈ ನಿಲ್ದಾಣಗಳಿಂದ ಪ್ರಯಾಣಿಸಲು ಸಹ ಮಾನ್ಯ ಮಾಡಲಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:08 pm, Wed, 1 January 25