ಸರ್ಕಾರ ಉಚಿತವಾಗಿ ನೀಡುವ ಅನ್ನಭಾಗ್ಯ ಅಕ್ಕಿಯಲ್ಲೂ ಗೋಲ್ಮಾಲ್​; ನ್ಯಾಯಬೆಲೆ ಅಂಗಡಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಗ್ರಾಮಸ್ಥರ ಮನವಿ

ಬಡವರಿಗೆ ಸರ್ಕಾರ ಉಚಿತವಾಗಿ ನ್ಯಾಯಬೆಲೆ ಅಂಗಡಿಗಳ ಮೂಲಕ ಅನ್ನಭಾಗ್ಯ ಯೋಜನೆಯಡಿ ಪ್ರತಿಯೊಬ್ಬ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ತಲಾ 5 ಕೆಜಿ ಅಕ್ಕಿ ನೀಡುತ್ತಿದೆ. ಆದರೆ, ಈ ನ್ಯಾಯಬೆಲೆ ಅಂಗಡಿ ಬಡವರಿಗೆ ನೀಡಿದ ಅಕ್ಕಿಯಲ್ಲೂ ಗೋಲ್ಮಾಲ್ ಮಾಡುವ ಮೂಲಕ ಹಸಿದವರ ಹೊಟ್ಟೆಯ ಮೇಲೆ ಹೊಡೆಯುತ್ತಿವೆ. 

ಸರ್ಕಾರ ಉಚಿತವಾಗಿ ನೀಡುವ ಅನ್ನಭಾಗ್ಯ ಅಕ್ಕಿಯಲ್ಲೂ ಗೋಲ್ಮಾಲ್​; ನ್ಯಾಯಬೆಲೆ ಅಂಗಡಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಗ್ರಾಮಸ್ಥರ ಮನವಿ
ಅನ್ನಭಾಗ್ಯ ಯೋಜನೆಯಡಿ ನೀಡುವ ಅಕ್ಕಿಯಲ್ಲಿ ಗೋಲ್ಮಾಲ್​
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 08, 2023 | 3:26 PM

ವಿಜಯಪುರ, ಅ.08: ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬ ಗಾದೆ ಮಾತು ನಮ್ಮಲ್ಲಿ ಪ್ರಚಲಿತದಲ್ಲಿದೆ. ಈ ಮಾತು ಇಲ್ಲಿರುವ ಒಂದು ಗ್ರಾಮದ ಜನರ ಪಾಲಿಗೆ ನಿಜವಾಗಿದೆ. ಹೌದು, ಸರ್ಕಾರವೇ ಬಿಪಿಎಲ್ ಕಾರ್ಡು(BPL Card)ದಾರರಿಗೆ ಉಚಿತವಾಗಿ ಪಡಿತರ ಅಕ್ಕಿ ಕೊಟ್ಟರೂ ಅದನ್ನು ಪಡೆಯಬೇಕಾದರೆ ಇಲ್ಲಿ ಹಣ ಕೊಡಬೇಕಾಗಿದೆ. ಪ್ರತಿ ಬಿಪಿಎಲ್ ಕಾರ್ಡಿನಲ್ಲಿರುವ ಪ್ರತಿಯೊಬ್ಬ ಸದಸ್ಯರಿಗೆ ತಲಾ ಹತ್ತು ರೂಪಾಯಿಯಂತೆ ವಿಜಯಪುರ(Vijayapura) ತಾಲೂಕಿನ ಹೆಗಡಿಹಾಳ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿರುವ ನ್ಯಾಯಬೆಲೆ ಅಂಗಡಿಯವರು ಹಣ ವಸೂಲಿ ಮಾಡುತ್ತಿದ್ದಾರೆ. ಅದು ಸಾಲದು ಎಂಬಂತೆ ಹಳೆಯದಾದ ಓಬಿರಾಯನ ಕಾಲದ ತೂಕದ ಯಂತ್ರ ಇಟ್ಟುಕೊಂಡು ಅದರಲ್ಲಿ ಪಡಿತರ ಹಂಚುತ್ತಿದ್ದು, ಪ್ರತಿ ಕಾರ್ಡಿಗೆ 2 ಕೆಜಿ ಅಕ್ಕಿಯನ್ನೂ ಕಡಿಮೆ ಕೊಡುತ್ತಿದ್ದಾರೆ.

ಇನ್ನು ಹೆಗಡಿಹಾಳ ಗ್ರಾಮದಲ್ಲಿ ಸುಮಾರು 500 ಬಿಪಿಎಲ್ ಹಾಗೂ 200 ಎಪಿಎಲ್ ಕಾರ್ಡುಗಳಿವೆ. ಪಡಿತರ ವಿತರಣೆಯ ನಿರ್ವಹಣೆಯನ್ನು ಇಲ್ಲಿನ ಪಿಕೆಪಿಎಸ್​ಗೆ ವಹಿಸಿದೆ. ಆದರೆ, ಸರ್ಕಾರದ ನಿಯಮಗಳನ್ವಯ ಕೆಲಸ ಮಾಡಬೇಕಾದ ಪಿಕೆಪಿಎಸ್ ನಲ್ಲಿ ಗೋಲಮಾಲ್ ನಡೆದಿದೆ. ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಸರ್ಕಾರ ಉಚಿತವಾಗಿ ಪಡಿತರ ವಿತರಣೆ ಮಾಡುತ್ತಿದ್ದರೂ ಸಹ, ಇಲ್ಲಿ ಮಾತ್ರ ಪ್ರತಿ ಕಾರ್ಡಿನಲ್ಲಿರುವ ಪ್ರತಿ ಸದಸ್ಯರ ಹೆಸರಿಗೆ 10 ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಅಲ್ಲದೆ ಪ್ರತಿಯೊಂದು ಬಿಪಿಎಲ್ ಕಾರ್ಡಿಗೆ 2 ಕೆಜಿ ಅಕ್ಕಿಯನ್ನು ಕಡಿಮೆ ಕೊಡಲಾಗುತ್ತಿದೆ. ಒಂದು ಕಾರ್ಡ್ ನಲ್ಲಿ ಇಬ್ಬರು ಫಲಾನುಭವಿಗಳು ಇದ್ದರೆ ಅವರಿಗೆ ತಲಾ 5 ಕೆಜಿಯಂತೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡಬೇಕಿದೆ. ಆದರೆ, ಇಲ್ಲಿ ಮಾತ್ರ 8 ಕೆಜಿ ಅಕ್ಕಿಯನ್ನು ಮಾತ್ರ ವಿತರಿಸಲಾಗುತ್ತಿದೆ. ಹೀಗೆ ಒಂದು ಕಾರ್ಡಿಗೆ 2 ಕೆಜಿ ಅಕ್ಕಿಯನ್ನು ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಕಾರ್ಯದರ್ಶಿ ಅಣ್ಣಪ್ಪ ಕೋಟ್ಯಾಳ್ , ಸೇಲ್ಸ್ ಮ್ಯಾನ್ ಮುತ್ತು ವಡ್ಡರ್ ಹಾಗೂ ಇತರೆ ಸಿಬ್ಬಂದಿಗಳು ಅಕ್ಕಿಗೆ ಕನ್ನ ಹಾಕಿದ್ದಾರೆ.

ಇದನ್ನೂ ಓದಿ:ಅನ್ನಭಾಗ್ಯ ಯೋಜನೆ ಅಕ್ಕಿ ಸಂಗ್ರಹಿಸಿದ್ದ ಖಾಸಗಿ ಗೋದಾಮಿನ ಮೇಲೆ ದಾಳಿ: ಅಪಾರ ಪ್ರಮಾಣದ ಅಕ್ಕಿ ವಶಕ್ಕೆ

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಆಧಿಕಾರಿಗಳಿಗೆ ಕ್ರಮಕ್ಕೆ ಆಗ್ರಹಿಸಿ ಮನವಿ

ಇದು ಗ್ರಾಮದ ಜನರಿಗೆ ಮಾಡುತ್ತಿರೋ ಅನ್ಯಾಯವಾಗಿದೆ. ಇದನ್ನು ವಿರೋಧಿಸಿ ಹೆಗಡಿಹಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿರೋ ಭಾರತಿ ಬಿರಾದಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಅದನ್ನು ಕಾರ್ಯದರ್ಶಿ ಅಂಗೀಕಾರ ಮಾಡಿಲ್ಲಾ. ಸದ್ಯ ಇವರ ಮೇಲೆ ಕ್ರಮಕ್ಕೆ ಗ್ರಾಮದ ಜನರು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಆಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಇನ್ನು ಇಲ್ಲಿನ ಸಮಸ್ಯೆ ಕುರಿತು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಆಧಿಕಾರಿಗಳ ಗಮನಕ್ಕೆ ಬಂದ ತಕ್ಷಣ ಇಲಾಖೆಯ ಆಹಾರ ನಿರೀಕ್ಷಕರಾದ ವಿಜಯಕುಮಾರ ಗುಮಶೆಟ್ಟಿ ಹಾಗೂ ಆಹಾರ ಶಿರಸ್ತೆದಾರ ಪಿ ಎಸ್ ಚಿತ್ತಾಪೂರ ಹೆಗಡಿಹಾಳ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿಗೆ ಬೇಟಿ ನೀಡಿ ಪರಿಶೀಲನೆ ಮಾಡಿದರು. ಪಡಿತರ ಹಂಚದೇ ನ್ಯಾಯಬೆಲೆ ಅಂಗಡಿಗೆ ಬೀಗ ಹಾಕಲಾಗಿತ್ತು. ಪಿಕೆಪಿಎಸ್ ಕಾರ್ಯದರ್ಶಿ ಹಾಗೂ ಆಧ್ಯಕ್ಷ ನಾಪತ್ತೆಯಾಗಿದ್ದರು. ಬೀಗ ಹಾಕಿದ್ದ ನ್ಯಾಯಬೆಲೆ ಅಂಗಡಿ ಬೀಗ ತೆರೆದು ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಇದನ್ನೂ ಓದಿ:ದಾವಣಗೆರೆ: ಅನ್ನಭಾಗ್ಯ ಯೋಜನೆ ಬಗ್ಗೆ ಪ್ರಶ್ನಿಸಿದ ಬಿಜೆಪಿ ಶಾಸಕ ಬಿಪಿ ಹರೀಶ್​ರಿ​ಗೆ ಜನರ ತರಾಟೆ

ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ ಆಹಾರ ನಿರೀಕ್ಷಕ

ನ್ಯಾಯಬೆಲೆ ಅಂಗಡಿಯಲ್ಲಿ ಸರ್ಕಾರದ ನಿಯಮದ ಪ್ರಕಾರ ಯಾವುದೇ ವಿದ್ಯುತ್ ಚಾಲಿಕ ತೂಕದ ತಂತ್ರವಿರಲಿಲ್ಲ. ಸರಿಯಾದ ನಿರ್ವಹಣೆ ಮಾಡದೇ ಇರುವುದು ಕಂಡು ಬಂದಿತ್ತು. ಇನ್ನು ಕಾರ್ಡುದಾರರಿಂದ ಹಣ ವಸೂಲಿ ಮಾಡಿರುವ ರಸೀದಿ ಸಹ ಆಧಿಕಾರಿಗಳಿಗೆ ಸಿಕ್ಕಿವೆ. ಎಲ್ಲ ಮಾಹಿತಿಯನ್ನು ಪಡೆದುಕೊಂಡ ಆಧಿಕಾರಿಗಳು ಪಿಕೆಪಿಎಸ್ ಕಾರ್ಯದರ್ಶಿಗೆ ನೊಟೀಸ್ ನೀಡೋದಾಗಿ ಹೇಳಿದ್ದಾರೆ. ಈ ಕುರಿತು ವಿಚಾರಣೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿಯೂ ಭರವಸೆ ನೀಡಿದ್ದಾರೆ.

ಸದ್ಯ ಆಹಾರ ಮತ್ತು ನಾಗರೀಖ ಸರಬರಾಜು ಇಲಾಖೆಯ ಆಧಿಕಾರಿಗಳು ಇಲ್ಲಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಂಡು ಹೋಗಿದ್ಧಾರೆ. ಕೇವಲ ಮಾಹಿತಿ ಪಡೆದುಕೊಂಡು ಹೋಗುವುದಷ್ಟೇಯಲ್ಲಾ ಹೆಗಡಿಹಾಳ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗಳು ಬಡವರ ಅಕ್ಕಿಗೆ ಕನ್ನ ಹಾಕುವುದು ಹಣ ವಸೂಲಿ ಮಾಡುವುದಕ್ಕೆ ತಡೆ ಹಾಕಬೇಕು. ಇಲ್ಲಿಯವರೆಗೆ ತಪ್ಪು ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಪಡಿತರ ಹಂಚಲು ಬೇರೆಯವರಿಗೆ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಆಧಿಕಾರಿಗಳು ಯಾವ ಕ್ರಮ ತೆಗೆದುಕೊಳ್ಳುತ್ತಾರೋ ಕಾಯ್ದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ