ಬಾಗಲಕೋಟೆ ಅಭ್ಯರ್ಥಿಗೆ ಬೆಂಬಲ ಘೋಷಿಸಿದ ಯತ್ನಾಳ್: ದಾವಣಗೆರೆ ಬಿಜೆಪಿ ಅಭ್ಯರ್ಥಿ ಬಗ್ಗೆ ಹೊಸ ಬಾಂಬ್

ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದೆ. ಈ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​​ ಪ್ರತಿಕ್ರಿಯೆ ನೀಡಿದ್ದು, ವೀರಣ್ಣ ಚರಂತಿಮಠಗೆ ನಾನು ಬೆಂಬಲ ನೀಡುತ್ತೇನೆ ಎಂದಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕೊನೆ ಕ್ಷಣದಲ್ಲಿ ಟಿಕೆಟ್​ ಬದಲಾವಣೆ ಆದರೂ ಆಶ್ಚರ್ಯವಿಲ್ಲ ಎಂದು ಬಾಂಬ್​​ ಸಿಡಿಸಿದ್ದಾರೆ.

ಬಾಗಲಕೋಟೆ ಅಭ್ಯರ್ಥಿಗೆ ಬೆಂಬಲ ಘೋಷಿಸಿದ ಯತ್ನಾಳ್: ದಾವಣಗೆರೆ ಬಿಜೆಪಿ ಅಭ್ಯರ್ಥಿ ಬಗ್ಗೆ ಹೊಸ ಬಾಂಬ್
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
Image Credit source: tv9 kannada
Edited By:

Updated on: Mar 19, 2026 | 3:36 PM

ವಿಜಯಪುರ, ಮಾರ್ಚ್​​ 19: ದಾವಣಗೆರೆ ಹಾಗೂ ಬಾಗಲಕೋಟೆ ಉಪ ಚುನಾವಣೆಗೆ ಈಗಾಗಲೇ ಮುಹೂರ್ತ ಫಿಕ್ಸ್ ಆಗಿದೆ. ಎರಡು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನ ಘೋಷಣೆ ಮಾಡಲಾಗಿದೆ. ಬಾಗಕೋಟೆಗೆ ವೀರಣ್ಣ ಚರಂತಿಮಠ ಹಾಗೂ ದಾವಣಗೆರೆಗೆ ಶ್ರೀನಿವಾಸ ಹೆಸರು ಫೈನಲ್ ಆಗಿದೆ. ಈ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (basanagouda patil yatnal)​​ ಮಾತನಾಡಿದ್ದು, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠಗೆ ನಾನು ಬೆಂಬಲ ನೀಡುತ್ತೇನೆ ಎಂದಿದ್ದಾರೆ. ಜೊತೆಗೆ ದಾವಣಗೆರೆಯಲ್ಲಿ ಕೊನೆಕ್ಷಣದಲ್ಲಿ ಏನಾದರೂ ಆಗಬಹುದು, ಶಾಮನೂರು ಕುಟುಂಬಕ್ಕೆ ‌ಬಿಜೆಪಿ ಟಿಕೆಟ್ ಕೊಟ್ಟರು ಅಚ್ಚರಿಯಿಲ್ಲ ಎಂದು ಹೊಸ ಬಾಂಬ್​​ ಸಿಡಿಸಿದ್ದಾರೆ.

ವೀರಣ್ಣ ಚರಂತಿಮಠಗೆ ಬೆಂಬಲಿಸುವೆ ಎಂದ ಯತ್ನಾಳ್

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಚರಂತಿಮಠಗೆ ಬೆಂಬಲಿಸುವೆ. ಚರಂತಿಮಠ ಹಾಗೂ ನಮ್ಮದು ಹಳೆಯ ಸಂಬಂಧ. ನನ್ನ ಕಷ್ಟ ಕಾಲದಲ್ಲಿ ಸಹಾಯ ಮಾಡಿದ್ದಾರೆ. ಅವರಿಗೆ ಈ ಹಿಂದೆ ಬಿಜೆಪಿ ಟಿಕೆಟ್ ಕೊಡಿಸಿದ್ದೇ ನಾನು. ಆಗ ವೀರಣ್ಣ ಚರಂತಿಮಠಗೆ ಟಿಕೆಟ್ ಕೊಡುವ ಮನಸ್ಸು ಯಡಿಯೂರಪ್ಪಗೆ ಇರಲಿಲ್ಲ. ಅನಂತಕುಮಾರ ನಾನು ಹಾಗೂ ಇತರರು ಸೇರಿ ಚರಂತಿಮಠ ಅವರಿಗೆ ಟಿಕೆಟ್ ಕೊಡಿಸಿದ್ದೇವು. ಆಗ ಜಗದೀಶ್ ಶೆಟ್ಟರ್ ಎಲೆಕ್ಷನ್ ಕಮೀಟಿ ಚೇರ್ಮನ್ ಆಗಿದ್ದರು. ಶೆಟ್ಟರ್ ಜೊತೆಗೆ ಜಗಳ ಮಾಡಿ ಚರಂತಿಮಠಗೆ ಟಿಕೆಟ್ ಕೊಡಿಸಿದ್ದೇವೆ ಎಂದಿದ್ದಾರೆ.

ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ಯತ್ನಾಳ್​ ವಾಗ್ದಾಳಿ

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಯಡಿಯೂರಪ್ಪ ವಾಗ್ದಾಳಿ ಮಾಡಿದ ಯತ್ನಾಳ್​​, ಬಿಜೆಪಿ ಮಹಾನ್ ನಾಯಕರು ಎಲ್ಲೆಲ್ಲಿ ಹೊಂದಾಣಿಕೆ ಇದೆ ಎಂದು ನೋಡಬೇಕು. ಅಪ್ಪ-ಮಕ್ಕಳು ಯಾರನ್ನು ಕೊಲ್ಲಬೇಕೆಂದುಕೊಳ್ಳುತ್ತಾರೋ ನೋಡಬೇಕು. ಅವರದ್ದು ಶಾಮನೂರು ಜೊತೆ ಹೊಂದಾಣಿಕೆಯಿದೆ, ಹಾಗಾಗಿ ಬಿಜೆಪಿ ಪರ ಕೆಲಸ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ಇನ್ನು ಶಾಮನೂರು ಕುಟುಂಬಕ್ಕೆ ಕಾಂಗ್ರೆಸ್ ಟಿಕೆಟ್ ಸಿಗುತ್ತೋ ಇಲ್ವೋ ಅದೂ ಸಹ ಗೊತ್ತಿಲ್ಲ. ಶಾಮನೂರು, ಯಡಿಯೂರಪ್ಪ ಕುಟುಂಬಗಳು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಒಂದು ವೇಳೆ ದಾವಣಗೆರೆಯಲ್ಲಿ ಕಾಂಗ್ರೆಸ್ ಟಿಕೆಟ್ ಮುಸ್ಲಿಂಮರಿಗೆ ಕೊಟ್ಟರೆ, ಶಾಮನೂರು ಮಲ್ಲಿಕಾರ್ಜುನ ಮಗನಿಗೆ ಬಿಜೆಪಿ ಟಿಕೆಟ್ ಕೊಟ್ಟರೂ ಆಶ್ಚರ್ಯವಿಲ್ಲ. ನೂರಕ್ಕೆ ನೂರರಷ್ಟು ಮಾಹಿತಿ ನನಗಿದೆ ಎಂದು ಯತ್ನಾಳ್​ ಬಾಂಬ್ ಸಿಡಿಸಿದ್ದಾರೆ.

ಸೋಶಿಯಲ್ ಮೀಡಿಯಾ ಪೋಸ್ಟ್​​ಗೆ 50 ಲಕ್ಷ ರೂ ಖರ್ಚು

ಯತ್ನಾಳ್​ ಬಿಜೆಪಿಗೆ ಏಕೆ ಬೇಕೆಂದು ಕೆಲವರು ಪೋಸ್ಟ್ ಮಾಡುತ್ತಾರೆ. ಇದೆಲ್ಲಾ ಕೆಲಸವನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನಕಲಿ ಫೇಸ್ ಬುಕ್ ಮೂಲಕ ಮಾಡಿಸುತ್ತಾನೆ. ಬಿ.ಎಲ್ ಸಂತೋಷ್​, ಪ್ರಲ್ಹಾದ್​ ಜೋಶಿ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಹಾಕಿಸುತ್ತಾನೆ. ಇದಕ್ಕಾಗಿ ಪ್ರತಿ ತಿಂಗಳು 50 ಲಕ್ಷ ರೂ ಖರ್ಚು ಮಾಡುತ್ತಾನೆಂದು ವಾಗ್ದಾಳಿ ಮಾಡಿದರು. ತಾಯಿಗೆ ದ್ರೋಹ ಬಗೆಯಲ್ಲಾ ಎಂದು ನಿಮ್ಮಪ್ಪ ಭಾಷಣ ಮಾಡುತ್ತಿದ್ದ. ಅದನ್ನೇ ನೋಡಿ ಕನ್ನಡಿ ಮುಂದೆ ನಿಂತು ಭಾಷಣ ಕಲಿತಿದ್ದೀಯಾ, ನಿನಗೆ ಹಣ ತಿನ್ನೋದು ಮಾತ್ರ ಗೊತ್ತಿದೆ ಎಂದು ವಿಜಯೇಂದ್ರ ವಿರುದ್ದ ಕಿಡಿಕಾರಿದರು. ಈಗ ಉಪ ಚುನಾವಣೆಯಲ್ಲಿ ನೀನು ಬಾಗಲಕೋಟೆ, ದಾವಣಗೆರಯಲ್ಲಿ ಸರಿಯಾಗಿ ಕೆಲಸ ಮಾಡಬೇಕು. ಇಲ್ಲವಾದರೆ ಶಾಮನೂರು ಜೊತೆ ಹೋಗಬೇಕಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಉಪಚುನಾವಣೆ ಪ್ರಚಾರಕ್ಕೆ ಉಚ್ಛಾಟಿತ ಶಾಸಕ? ಬಾಗಲಕೋಟೆ ಬಿಜೆಪಿ ಅಭ್ಯರ್ಥಿಯ ಸ್ಫೋಟಕ ಹೇಳಿಕೆ

ಕುಮಾರಸ್ವಾಮಿಯನ್ನು ಸೋಲಿಸಲು ಪ್ರಯತ್ನ ಮಾಡಿದರು, ಸೋಮಣ್ಣರನ್ನು ಸೋಲಿಸಲು ಪ್ರಯತ್ನ ಮಾಡಿದ್ದರು. ಕೊಪ್ಪಳದಲ್ಲಿ ಡೀಲಿಂಗ್, ಶಿಖಾರಿಪುರದಲ್ಲಿ ಡೀಲಿಂಗ್, ಕಲಬುರಗಿಯಲ್ಲೂ ಸೋಲಲು ಹೊಂದಾಣಿಕೆ ಮಾಡಿಕೊಂಡರು. ರಾಯಚೂರು, ಬಳ್ಳಾರಿ, ಕೊಪ್ಫಳದಲ್ಲೂ ಹೊಂದಾಣಿಕೆ ಮಾಡಿದರು. ಇದೆಲ್ಲಾ ಮುಂದೆ ನಡೆಯಲ್ಲ. ಯಡಿಯೂರಪ್ಪ ಇದ್ದರೆ ಲಿಂಗಾಯತ ಇರುತ್ತಾರೆ, ಇಲ್ಲದಿದ್ದರೆ ಇಡಿ ಕರ್ನಾಟಕ ಬಿಜೆಪಿ ಮುಳುಗುತ್ತದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿಗಳು ಹೇಳುವುದನ್ನು ನಂಬಿ ಪಿಎಂ
ಮೋದಿ, ಅಮೀತ್ ಶಾ, ಬಿಜೆಪಿ ಹೈಕಮಾಂಡ್ ಕಣ್ಣು ಮುಚ್ಚಬಾರದು ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:32 pm, Thu, 19 March 26

Follow Us