ವಿಜಯಪುರ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ರಾಜ್ಯದಲ್ಲಿ ನಡೆಸಲು ಉದ್ದೇಶಿಸಿದ್ದ ಸತ್ಯಾಗ್ರಹವನ್ನು ಕೈಬಿಡಲಾಗಿದೆ. ಅದರ ಬದಲಿಗೆ ಗ್ರಾಮ ಪಂಚಾಯಿತಿ ಮಟ್ಟದಿಂದ ಹೋರಾಟ ಸಂಘಟಿಸಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೀಸಲಾತಿ ಕಲ್ಪಿಸಲು ಅಕ್ಟೋಬರ್ 1ರವರೆಗೆ ಸರ್ಕಾರಕ್ಕೆ ಗಡುವು ನೀಡಿದ್ದು ನಿಜ. ಅಂದೇ ಮುಖ್ಯಮಂತ್ರಿ ಬೊಮ್ಮಾಯಿ ನಮ್ಮನ್ನು ಕರೆದು ಮಾತಾಡಿದ್ದರು ಎಂದು ಹೇಳಿದರು. ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವರದಿ ಸಲ್ಲಿಕೆಯಾದ ಮೂರು ತಿಂಗಳ ಒಳಗೆ ಮೀಸಲಾತಿ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದರು. ಸತ್ಯಾಗ್ರಹ ಮಾಡಬೇಡಿ, ಹೋರಾಟ ಮಾಡಿ ಎಂದು ಹೇಳಿದ್ದರು. ಹೀಗಾಗಿ ಗ್ರಾಮ ಪಂಚಾಯಿತಿ ಮಟ್ಟದಿಂದ ನಮ್ಮ ಹೋರಾಟ ನಡೆಯುತ್ತಿದೆ ಎಂದು ತಿಳಿಸಿದರು.
ಪಂಚಮಸಾಲಿ ಸಮುದಾಯಕ್ಕೆ ಸಾಧ್ಯವಾದಷ್ಟೂ ಬೇಗ ಮೀಸಲಾತಿ ಘೋಷಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ. ಮುಂದಿನ ದಿನಗಳಲ್ಲಿ ಸಮಾಜದ ಕಾರ್ಯಕಾರಿಣಿ ಸಭೆ ನಡೆಸಲಾಗುತ್ತದೆ. ವಿಜಯಪುರ, ಬೆಳಗಾವಿ ಅಥವಾ ಬಾಗಲಕೋಟೆಯಲ್ಲಿ ಸಭೆ ನಡೆಸಲಾಗುವುದು ಎಂದು ವಿಜಯಪುರದಲ್ಲಿ ಬಸವ ಜಯಮೃತ್ಯುಂಜಯ ಶ್ರೀ ಹೇಳಿದರು.
ಮೀಸಲಾತಿಗೆ ವಿರೋಧ
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಬೇಡಿಕೆ ಬಗ್ಗೆ ಈಚೆಗೆ ನಡೆದ ಅತಿ ಹಿಂದುಳಿದ ವರ್ಗಗಳಿಗೆ ಸೇರಿದ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗೆ ವಿರೋಧ ಕೇಳಿಬಂದಿದೆ. ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದಲ್ಲಿ ಇಂದು (ಅಕ್ಟೋಬರ್ 26) ನಡೆದ ಸಭೆಯಲ್ಲಿ ವಿರೋಧ ಅಭಿಪ್ರಾಯ ಕೇಳಿಬಂದಿದೆ. ಙರಿಷತ್ನ ಮಾಜಿ ಸದಸ್ಯ ಎಂ.ಸಿ. ವೇಣುಗೋಪಾಲ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ದ್ವಾರಕನಾಥ್ ಸೇರಿದಂತೆ ಇತರರು ಸಭೆಯಲ್ಲಿ ಭಾಗಿ ಆಗಿದ್ದರು. ಈ ಸಭೆಯಲ್ಲಿ ಪಂಚಮಸಾಲಿ ಸಮುದಾಯದ ಮೀಸಲಾತಿ ವಿಚಾರಕ್ಕೆ ವಿರೋಧ ವ್ಯಕ್ತವಾಗಿದೆ. ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಅಡಿಯಲ್ಲಿ ಮೀಸಲಾತಿ ನೀಡದಂತೆ ಆಗ್ರಹ ಕೇಳಿಬಂದಿದೆ. ಸುಭಾಷ್ ಆಡಿ ನೇತೃತ್ವದ ಉನ್ನತ ಮಟ್ಟದ ಸಮಿತಿ ರಚನೆ ಅವೈಜ್ಞಾನಿಕ ಎಂಬ ನಿಲುವನ್ನು ಸಭೆ ವ್ಯಕ್ತಪಡಿಸಿದೆ. ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಒಳಪಡಿಸುವುದನ್ನು ವಿರೋಧಿಸಲು ತೀರ್ಮಾನ ಮಾಡಲಾಗಿದೆ.
ಇದನ್ನೂ ಓದಿ: ಪಂಚಮಸಾಲಿ 3ನೇ ಪೀಠ ರಚನೆಗಾಗಿ ಜಮಖಂಡಿಯಲ್ಲಿ ಟ್ರಸ್ಟ್ ನೋಂದಣಿ
ಇದನ್ನೂ ಓದಿ: ಹಾಸನದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಧಿಕ್ಕಾರ; ಸಭೆ ಮೊಟಕುಗೊಳಿಸಿ ತೆರಳಿದ ಸ್ವಾಮೀಜಿ