ವಿಜಯಪುರ: ಭೀಮಾತೀರ(Bhimatira) ಎಂದರೇ ಸಾಕು ಎಲ್ಲರ ಕಣ್ಮುಂದೆ ಬರುವುದೇ ರಕ್ತಸಿಕ್ತ ಚರಿತ್ರೆಗಳ ಪುಟಗಳು. ಅಂತಹ ಭೀಮಾತೀರ ಇದೀಗ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಿದೆ. ಐದು ದಶಕಗಳ ಕಾಲ ಹಂತಕರು ಎಂದು ಹಣೆ ಪಟ್ಟಿ ಕಟ್ಟಿಕೊಂಡಿದ್ದ ಎರಡು ಬಣಗಳ ಮೊದಲ ಸಲ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಶಾಂತಿಯ ಮಂತ್ರ ಜಪಿಸಿದವು. ಸಾವಿರಾರು ಜನರು, ಪೊಲೀಸ್ ಅಧಿಕಾರಿಗಳು, ಸ್ವಾಮಿಜೀಗಳು ನಡುವೆ ಭೀಮಾತೀರದ ರಕ್ತಸಿಕ್ತ ಅಧ್ಯಾಯಕ್ಕೆ ಕಾರಣವಾದ ಎರಡು ಕುಟುಂಬಗಳು, ನಾವೂ ಇನ್ಮುಂದೆ ಎಲ್ಲವನ್ನೂ ಪರಸ್ಪರ ದ್ವೇಷ ಬಿಡುತ್ತೇವೆ ಎಂದು ಪ್ರಮಾಣ ಮಾಡಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದರು.
ಭೀಮಾತೀರದಲ್ಲಿ ರಕ್ತಸಿಕ್ತ ಅಧ್ಯಾಯದಲ್ಲಿ ಗುಂಡಿನ ದಾಳಿ, ಭೀಕರ ಹತ್ಯೆ, ಅಕ್ರಮ ಗನ್ ಮಾರಾಟ ಕೇಳಿದ್ದೇವೆ. ಆದರೆ ಇಂದು ಅದೇ ಭೀಮಾತೀರದಲ್ಲಿ ಶಾಂತಿ ಮಂತ್ರ ಜಪಿಸುವ ಕೆಲಸ ನಡೆಯಿತು. ಹಂತಕರ ಕುಟುಂಬ ಎಂದು ಹಣೆ ಪಟ್ಟಿಕೊಂಡಿದ್ದ ಎರಡು ಕುಟುಂಬಗಳು ಐದು ದಶಗಳ ಬಳಿಕ ಒಂದೇ ವೇದಿಕೆ ಮುಖಾಮುಖಿಯಾದರು. ಉಮರಾಣಿ ಗ್ರಾಮದ ಮಲ್ಲಿಕಾರ್ಜುನ ಚಡಚಣ ಹಾಗೂ ಮಹಾದೇವ ಬೈರಗೊಂಡ ಕುಟುಂಬ ಶಾಂತಿ ಮಂತ್ರ ಜಪಿಸುವ ಮೂಲಕ ಪರಸ್ಪರ ಸಮರಕ್ಕೆ ಅಂತ್ಯ ಹಾಡಿದರು.
ಕಳೆದ ಐದು ದಶಕಗಳಲ್ಲಿ ಈ ಎರಡು ಕುಟುಂಬಗಳ ಕಲಹದಿಂದಾಗಿ ಭೀಮಾತೀರದಲ್ಲಿ ಹತ್ತಾರು ಹೆಣಗಳು ಉರುಳಿವೆ. ಇದನ್ನು ತಡೆಗಟ್ಟಬೇಕು ಎಂದು ಶಪಥ ಮಾಡಿದ್ದ ಎಡಿಜಿಪಿ ಅಲೋಕ್ ಕುಮಾರ್(ADGP alok kumar), ಎರಡು ಕುಟುಂಬದ ಸದಸ್ಯರನ್ನು ಕರೆದು ಸಂಧಾನ ಮಾಡುವಲ್ಲಿ ಯಶಸ್ವಿಯಾದರು. ಈ ಹಿಂದೆ ಎರಡು ಸಲ ಎರಡೂ ತಂಡಕ್ಕೂ ಎಚ್ಚರಿಕೆ ನೀಡಿದ್ದರು. ಎರಡೂ ಕುಟುಂಬಗಳನ್ನು ಮುಖಾಮುಖಿ ಮಾಡುವ ಮೂಲಕ ಸಂಧಾನ ಮಾಡಿಸಿದ್ದರು. ಜನರ ಮುಂದೆ ಗ್ರಾಮ ದೇವರ ಮೇಲೆ ಪ್ರಮಾಣ ಮಾಡಿಸಿ ಮುಂದಿನ ದಿನಗಳಲ್ಲಿ ಯಾವುದೇ ಕೃತ್ಯಗಳಿಗೆ ಕೈ ಹಾಕುವುದಿಲ್ಲ ಎಂದು ಆಣೆ ಮಾಡಿಸಿದರು.
ಕಳೆದ ಅರ್ಧ ದಶಕದಿಂದ ಭೀಮಾತೀರದ ಚಡಚಣ ಭಾಗದ ಬೈರಗೊಂಡ ಹಾಗೂ ಚಡಚಣ ಕುಟುಂಬಗಳ ನಡುವೆ ದ್ವೇಷವಿದೆ. ಇದೆ ದ್ವೇಷದಿಂದ ಎರಡು ಕುಟುಂಬಗಳು ಹತ್ತಾರು ಹೆಣಗಳು ಬಿದ್ದಿವೆ. ಎರಡು ಕುಟುಂಬಗಳು ಗ್ಯಾಂಗ್ ಕಟ್ಟಿಕೊಂಡು ಹೊಡೆದಾಡಿ ಇಡೀ ಭೀಮಾತೀರವನ್ನೆ ರಕ್ತಸಿಕ್ತ ಮಾಡಿದ ಅಪಖ್ಯಾತಿ ಪಡೆದಿದ್ದರು. ಇದನ್ನ ಹೋಗಲಾಡಿಸಬೇಕು, ಭೀಮಾತೀರದಲ್ಲಿ ಮತ್ತೆ ಶಾಂತಿ ಮರುಸ್ಥಾಪನೆಗಾಗಿ ಖಡಕ್ ಪೊಲೀಸ್ ಅಧಿಕಾರಿ ADGP ಅಲೋಕ್ ಕುಮಾರ್ ಇನ್ನಿಲ್ಲದ ಪ್ರಯತ್ನಿಸಿದ್ದರು. ಕಳೆದ ಕೆಲ ತಿಂಗಳ ಹಿಂದಷ್ಟೆ ಬೈರಗೊಂಡ ಕುಟುಂಬದ ಮಹಾದೇವ ಬೈರಗೊಂಡ ಆಂಡ್ ಗ್ಯಾಂಗ್ ಮತ್ತು ಚಡಚಣ ಕುಟುಂಬಸ್ಥರು ಸಂಬಂಧಿಕರನ್ನ ಚಡಚಣ ಠಾಣೆಗೆ ಕರೆಯಿಸಿ ದ್ವೇಷ ಬಿಡುವಂತೆ ವಾರ್ನ್ ಮಾಡಿದ್ದರು. ಆಗ ವಿಮಲಾಬಾಯಿ ನಾಪತ್ತೆಯಾಗಿದ್ದರಿಂದ ರಾಜಿ ಸಂಧಾನ ಯಶಸ್ವಿಯಾಗಿರಲಿಲ್ಲ. ಆದ್ರೆ, ಇದೀಗ ಭೀಮಾತೀರದ ವೈಷಮ್ಯಕ್ಕೆ ಅಲೋಕ್ ಕುಮಾರ್ ತೆರೆ ಎಳೆದಿದ್ದು ಚಡಚಣ-ಬೈರಗೊಂಡ ಗ್ಯಾಂಗ್‌ಗಳ ನಡುವೆ ಸಂಧಾನ ಯಶಸ್ವಿಯಾಗಿದೆ.
ಸಂಧಾನದ ಬಳಿಕ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್, ಕಾನೂನಿನ ಹೋರಾಟದಲ್ಲಿ ನಾವು ಭಾಗಿಯಾಗಲ್ಲ. ಆದರೆ ನಮ್ಮಿಂದ ಸಾಧ್ಯವಾಗುವ ಸಹಾಯವನ್ನು ನಾನು ಮಾಡುತ್ತೇವೆ. ಈ ಭಾಗದಲ್ಲಿ ಶಾಂತಿ ನೆಲೆಸಬೇಕು ಎಂಬುದು ನಮ್ಮ ಆಶಯ ಎಂದರು. ಇಷ್ಟರ ಹೊರತಾಗಿ ಬಾಲ ಬಿಚ್ವಿದರೆ ಸರ್ಕಾರ ನಮಗೆ ಪೂಜೆ ಮಾಡಲು ಆಯುಧ ನೀಡಿಲ್ಲ ಎಂದು ಖಡಕ್ ಎಚ್ಚರಿಕೆಯನ್ನೂ ಸಹ ನೀಡಿದರು.
ಇದಕ್ಕೂ ಮೊದಲು ಅಕ್ಷರಕ್ಕಾಗಿ ಆರಕ್ಷಕರು ಹಾಗೂ ಅಗ್ನಿಪಥ ವೀರರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದರು. ಶಾಲಾ ಮಕ್ಕಳಿಗೆ ಶಾಲಾ ಕಿಟ್ ವಿತರಣೆ ಮಾಡಿದರು. ನೂರಾರು ಜನರು ತಮ್ಮ ಸಮಸ್ಯೆಗಳ ಕುರಿತು ಎಡಿಜಿಪಿ ಗಮನಕ್ಕೆ ತಂದರು.
ಸದ್ಯ ಅಲೋಕಕುಮಾರ್ ಭೀಮಾತೀರದಲ್ಲಿ ಸಂಚಾರ ಮಾಡಿ ಸಂಧಾನ ಮಾಡಿ ಈ ಭಾಗದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಮುಂದಾಗಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಇದು ಸಾಧ್ಯವಾಗುತ್ತಾ ಎಂದು ಕಾದು ನೋಡಬೇಕು.
ಇನ್ನಷ್ಟು ವಿಜಯಪುರ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 5:11 pm, Thu, 16 February 23