ವಿಜಯಪುರ: ಚುನಾವಣೆಗೆ ಒಂದು ತಿಂಗಳು ಇರುವಾಗ ಮಾತ್ರ ರಾಜಕಾರಣ ಮಾಡೋಣ, ಉಳಿದಂತೆ ಜನರ ಕೆಲಸ ಮಾಡಿಕೊಡಲು ಗಮನ ಕೊಡೋಣ. ಯಾರಿಗೆ ಅಧಿಕಾರ ನೀಡಬೇಕೆಂದು ಜನರೇ ತೀರ್ಮಾನಿಸುತ್ತಾರೆ. ನಾವು ಏಕೆ ರಾಜಕಾರಣ ಮಾಡುತ್ತಿದ್ದೇವೆ ಎಂಬುದು ಜನರಿಗೆ ಅರ್ಥವಾಗುತ್ತದೆ. ಜನರ ಸಹನೆಯ ಕಟ್ಟೆಯೊಡೆಯುವ ಕಾಲ ಬಂದಿದೆ. ಇದು ಇಂಟರ್ನೆಟ್ ಯುಗ. ಮಾಹಿತಿ ಬೇಗ ಹರಡುತ್ತದೆ. ನಾವು ಜನರ ಕಷ್ಟಗಳಿಗೆ ಸ್ಪಂದಿಸಬೇಕು. ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ. ನಗರ ಪ್ರದೇಶಗಳಿಂದ ಗ್ರಾಮೀಣ ಭಾಗಕ್ಕೆ ಹೋದರೆ, ಅಲ್ಲಿನ ಪರಿಸ್ಥಿತಿ ಬಗ್ಗೆ ನೋವಾಗುತ್ತದೆ. ಇಲ್ಲಿನ ಸ್ಥಿತಿಗತಿಯ ಸುಧಾರಣೆ ಕಾರ್ಯ ನನ್ನಿಂದಲೇ ಪ್ರಾರಂಭವಾಗುತ್ತದೆ. ಇಂಥ ಕನಸು ಒಂದು ಬಾರಿ ಹಳಿಗೆ ಬಂದರೆ ವೇಗ ಪಡೆದುಕೊಳ್ಳುತ್ತದೆ ಎಂದು ಹೇಳಿದರು.
ನಗರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಮಾತನಾಡಿದ ಅವರು, ಬಹಳ ದಿನಗಳಿಂದ ನನೆಗುದಿಗೆ ಬಿದ್ದ ಯೋಜನೆಗಳು ಕಾರ್ಯಗತಗೊಳ್ಳಲಿವೆ. ಈ ಭಾಗದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗುತ್ತದೆ. ಭದ್ರಾ ಮೇಲ್ದಂಡೆ ಯೋಜನೆಯ 3ನೇ ಹಂತದ ಕಾಮಗಾರಿ ಆರಂಭಿಸಬೇಕಿದೆ. ಆಲಮಟ್ಟಿ ಅಣೆಕಟ್ಟೆ ಎತ್ತರಿಸುವ ಯೋಜನೆಗೂ ಶೀಘ್ರ ಚಾಲನೆ ನೀಡಲಾಗುವುದು. ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸುತ್ತೇವೆ. ದ್ರಾಕ್ಷಿ ಬೆಳೆಗಾರರ ಹಿತ ಕಾಪಾಡುತ್ತೇವೆ. ವೈನ್ಬೋರ್ಡ್ನಲ್ಲಿ ದ್ರಾಕ್ಷಿ ಬೆಳೆಗಾರರೂ ಸದಸ್ಯರಾಗಿರುವಂತೆ ನಿಯಮ ಜಾರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಶಂಕುಸ್ಥಾಪನೆ ಮಾಡಿದ ಕಾಮಗಾರಿಗಳನ್ನು ಒಂದು ವರ್ಷದಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದೆ. ವಿಜಯಪುರ ವಿಮಾನ ನಿಲ್ದಾಣದ ಕೆಲಸ ಆರಂಭವಾಗಿದೆ. ಏರ್ಬಸ್ ಹಾಗೂ ಕಾರ್ಗೋ ವಿಮಾನಗಳನ್ನೂ ಇಲ್ಲಿ ಇಳಿಸುವಂಥ ಸೌಲಭ್ಯ ರೂಪಿಸಲು ₹ 120 ಕೋಟಿ ಹಣವನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ದಿನದ 24 ಗಂಟೆ ಕಾಲ ನೀರು ಪೂರೈಕೆ ಕೆಲಸ ಮುಂದಿನ ಅರು ತಿಂಗಳಲ್ಲಿ ಮುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಿಂದೆ ನಮ್ಮ ತಂದೆ ಸಿಎಂ ಆಗಿದ್ದಾಗ ಕೃಷ್ಣಾ ನದಿಯಿಂದ ನೀರು ತರುವ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ಈಗ ನಾನು ಸಿಎಂ ಆದರೂ ನೀರು ಪೂರೈಕೆ ಯೋಜನೆ ಮುಗಿದಿಲ್ಲ. ಆರು ತಿಂಗಳ ಒಳಗೆ ಕುಡಿಯೋ ನೀರಿನ ಯೋಜನೆ ಕಾಮಗಾರಿ ಮುಗಿಯಬೇಕು. ಆರು ತಿಂಗಳ ನಂತರ ನಾನು ಮತ್ತೊಮ್ಮೆ ಇಲ್ಲಿಗೆ ಬಂದು ನಲ್ಲಿ ತಿರುಗಿಸಿ ನೋಡುತ್ತೇನೆ ಎಂದರು.
ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗೆ ಸ್ಕಾಲರ್ಶಿಪ್ ನೀಡಲು ಸರ್ಕಾರ ಕ್ರಮಕೈಗೊಂಡಿದೆ. ಮಾಧ್ಯಮಿಕ ಶಾಲೆ ವಿದ್ಯಾರ್ಥಿನಿಯರ ಹಾಜರಾತಿ ಕಡಿಮೆಯಾಗುತ್ತಿರುವ ಕಾರಣ ಉತ್ತೇಜಿಸಲು ಹೈಸ್ಕೂಲ್ ವಿದ್ಯಾರ್ಥಿನಿಯರಿಗೆ ಸ್ಕಾಲರ್ಶಿಪ್ ನೀಡಲು ಕ್ರಮಕೈಗೊಳ್ಳಲಾಗಿದೆ. ಅಕಾಲಿಕ ಮಳೆ, ಬದಲಾದ ವಾತಾವರಣದ ಕಾರಣ ಬೆಳೆಹಾನಿಗೂ ಸೂಕ್ತ ಪರಿಹಾರ ನೀಡುತ್ತೇವೆ. ಒಣ ಬೇಸಾಯ ಹಾಗೂ ನೀರಾವರಿ ಬೆಳೆಗಳಿಗೂ ಪರಿಹಾರ ನೀಡಲಾಗುತ್ತದೆ. ಈಗಾಗಲೇ ವಿವಿಧ ವಸತಿ ಯೋಜನೆಗಳಲ್ಲಿ ಐದು ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿದೆ. ಈ ಮನೆಗಳನ್ನು ನಮ್ಮ ಅಧಿಕಾರಾವಧಿಯಲ್ಲಿಯೇ ನಿರ್ಮಿಸಿಕೊಡುತ್ತೇವೆ. ನಾವೇ ಭೂಮಿಪೂಜೆ ಶಿಲಾನ್ಯಾಸ ಮಾಡಿ ನಾವೇ ಉದ್ಘಾಟನೆ ಮಾಡುತ್ತೇವೆ ಎಂದರು.
ಅಡಿಗಲ್ಲು ಒಬ್ಬರದ್ದು ಉದ್ಘಾಟನೆ ಮತ್ತೊಬ್ಬರದ್ದು ಎಂಬಂತಾಗಬಾರದು. ಉತ್ತರ ಕರ್ನಾಟಕ ಭಾಗದ ಸಿಎಂ ಆಗಿ ಈ ಭಾಗದ ಅಭಿವೃದ್ಧಿಗೆ ಶ್ರಮ ಹಾಕುವೆ. ವಿಶೇಷ ಅಧಿಕಾರಿಗಳ ನೇಮಿಸುವ ಜೊತೆಗೆ ವಿಶೇಷ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.
ದೇವಸ್ಥಾನಕ್ಕೆ ಬೆಳ್ಳಿಗದೆ
ಕಾರ್ಯಕ್ರಮದಲ್ಲಿ ಉಡುಗೊರೆಯಾಗಿ ನೀಡಿದ್ದ ಬೆಳ್ಳಿ ಗದೆಯನ್ನು ಹನುಮಂತ ದೇವಸ್ಥಾನಕ್ಕೆ ನೀಡಲು ಮುಖ್ಯಮಂತ್ರಿ ಸೂಚಿಸಿದರು. ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ್ ಮುಖ್ಯಮಂತ್ರಿಗೆ ಬೆಳ್ಳಿಗದೆ ಕೊಟ್ಟಿದ್ದರು. ಗದೆಯನ್ನು ಅವರಿಗೇ ವಾಪಸ್ ಕೊಟ್ಟ ಮುಖ್ಯಮಂತ್ರಿ ದೇವಸ್ಥಾನಕ್ಕೆ ಅರ್ಪಿಸುವಂತೆ ಸೂಚಿಸಿದರು. ಜಿಲ್ಲೆಯ ಜನರು ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಈ ಜಿಲ್ಲೆಯ ಜನರು ತ್ಯಾಗ ಮಾಡಿದ್ದಾರೆ. ಅವರ ತ್ಯಾಗ ಹುಸಿಯಾಗಬಾರದು. ರಾಜಕೀಯ ಇಚ್ಛಾಶಕ್ತಿ ಕೊರತೆಯೂ ಸೇರಿದಂತೆ ಹಲವು ಕಾರಣಗಳಿಂದ ಇಲ್ಲಿನ ಜನರಿಗೆ ನೀರಾವರಿ ಸೌಲಭ್ಯ ಸಿಕ್ಕಿಲ್ಲ. ನಮ್ಮ ಒಗ್ಗಟ್ಟಿನ ಕೊರತೆಯು ಅಭಿವೃದ್ಧಿಗೆ ಕಂಟಕವಾಗಿದೆ. ನಮಗೆ ಜನರು 60 ತಿಂಗಳು ಅಧಿಕಾರ ನೀಡಿರುತ್ತಾರೆ. ಇದರಲ್ಲಿ 59 ತಿಂಗಳು ಅಭಿವೃದ್ಧಿ ಮಾಡೋಣ ಎಂದರು.
ಯಡಿಯೂರಪ್ಪಗೆ ಟಾಂಗ್ ಕೊಟ್ಟ ಯತ್ನಾಳ್
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಬಸನಗೌಡ ಯತ್ನಾಳ್, ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಲೇ ಜಿಲ್ಲಾಡಳಿತ ಕಚೇರಿ ನಿರ್ಮಾಣಕ್ಕೆ ಚಾಲನೆ ನೀಡಬೇಕಿತ್ತು. ಆದರೆ ಬೊಮ್ಮಾಯಿ ಅವರ ಅಮೃತಹಸ್ತದಿಂದ ಚಾಲನೆ ಸಿಕ್ಕಿದೆ. ದಾನೇ ದಾನೇಪೆ ಲಿಖ್ಖಾ ಹೈ ಖಾನೆವಾಲೆ ಕಾ ನಾಮ್ ಎಂದು ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಟಾಂಗ್ ಕೊಟ್ಟರು. ವಸತಿ ಸಚಿವರು ಸಹ ಜಿಲ್ಲೆಗೆ ಹೆಚ್ಚು ಮನೆಗಳನ್ನು ನೀಡಿದ್ದಾರೆ. ಅವರು ಈಗ ಐಸಿಯುನಿಂದ ಜನರಲ್ ವಾರ್ಡ್ಗೆ ಬಂದಂತೆ ಆಗಿದೆ ಎಂದರು.
ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವ ವೇಳೆ ಮಾಜಿ ಸಚಿವ ಎಂ.ಬಿ.ಪಾಟೀಲ್ ಕೈ ಹಿಡಿದು ಬೊಮ್ಮಾಯಿ ಅವರು ಜ್ಯೋತಿ ಬೆಳಗಿದರು. ಇದೇ ವೇಳೆ ಕಂದಾಯ ಇಲಾಖೆಯಿಂದ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ: ವಿಜಯಪುರ: ಕೃಷಿ ಚಟುವಟಿಕೆಗೆ ಮಹೀಂದ್ರಾ ಕೆಯುವಿ100 ಕಾರ್ ಬಳಸಿದ ರೈತ; ವಿಡಿಯೋ ನೋಡಿ
ಇದನ್ನೂ ಓದಿ: ಕ್ರೈಂ ಸಿಟಿಯಾಗುತ್ತಿರುವ ವಿಜಯಪುರದಲ್ಲಿ ಕೆಲಸ ಮಾಡಲು ಈಗ ಆಧಿಕಾರಿಗಳೂ ಭಯ ಪಡುವಂತಾಗಿದೆ