ಕ್ರೈಂ ಸಿಟಿಯಾಗುತ್ತಿರುವ ವಿಜಯಪುರದಲ್ಲಿ ಕೆಲಸ ಮಾಡಲು ಈಗ ಆಧಿಕಾರಿಗಳೂ ಭಯ ಪಡುವಂತಾಗಿದೆ! ಯಾಕೆ? ಏನಾಯ್ತು?
ಗಲಾಟೆಯಾಗಿರುವುದು ನಿಜ. ಆದರೆ, ನಮ್ಮ ಮಗಾ ಸಮರ್ಥ ಹಾಗೂ ಆತನ ಸ್ನೇಹಿತರು ನಮ್ಮ ಪಕ್ಷದ ಹೆಸರಾಗಲಿ ಶಾಸಕ ದೇವಾನಂದ ಚೌವ್ಹಾಣ್ ಹೆಸರನ್ನು ಬಳಕೆ ಮಾಡಿಕೊಂಡಿಲ್ಲಾ ಎಂದು ಹೇಳಿರುವುದಾಗಿ ಪ್ರಕರಣ ಪ್ರಮುಖ ಆರೋಪಿಯ ತಾಯಿ ಹಾಗೂ ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಸ್ನೇಹಾ ಶೆಟ್ಟಿ ಹೇಳಿದ್ದಾರೆ.
ಅಪರಾಧ ಲೋಕದಲ್ಲಿ ತನ್ನದೇ ಖದರ್ ಸೃಷ್ಟಿಸಿಕೊಂಡಿರುವ ವಿಜಯಪುರ ಜಿಲ್ಲೆಯಲ್ಲಿ ಕೆಲಸ ಮಾಡಲು ಸರ್ಕಾರಿ ಆಧಿಕಾರಿಗಳೂ ಸಹ ಭಯಪಡುವಂತಾಗಿದೆ. ರಾಜಕಾರಣಿಗಳ ಹೆಸರು, ರಾಜಕೀಯ ಪಕ್ಷವೊಂದರ ಹೆಸರು ಬಳಕೆ ಮಾಡಿಕೊಂಡು ಸರ್ಕಾರಿ ಆಧಿಕಾರಿಗಳ ಮೇಲೆಯೇ ಹಲ್ಲೆ ಮಾಡುವಂತಹ ಘಟನೆಗಳು ನಡೆಯುತ್ತಿವೆ. ಸರ್ಕಾರಿ ಕೆಲಸ ಮಾಡುವ ನಮಗೆ ರಕ್ಷಣೆಯೇ ಇಲ್ವಾ ಎಂದು ಆಧಿಕಾರಿಗಳು ಸಹ ಕೇಳುವಂತಾಗಿದೆ. ಹಾಗಾದ್ರೆ ಆಧಿಕಾರಿಗಳಿಗೇ ಸೂಕ್ತ ರಕ್ಷಣೆ ಇಲ್ಲವೆಂದರೆ ಇನ್ನು ಜನ ಸಾಮಾನ್ಯರ ಪಾಡೇನು ಎಂಬ ಪ್ರಶ್ನೆ ವಿಜಯಪುರ ನಗರದಲ್ಲಿ ಎದ್ದಿದೆ. ನಿನ್ನೆ ವಿಜಯಪುರ ಮಹಾನಗರ ಪಾಲಿಕೆಯ ಆಯುಕ್ತ ಹಾಗೂ ಇತರೆ ಇಬ್ಬರು ಆಧಿಕಾರಿಗಳ ಮೇಲೆ ನಡೆದ ಹಲ್ಲೆಯೇ ಈ ಚರ್ಚೆಗೆ ಕಾರಣವಾಗಿದೆ. ಡಿಟೇಲ್ಸ್ ಇಲ್ಲಿದೆ.
ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಪುತ್ರನಿಂದ ಪಾಲಿಕೆ ಆಯುಕ್ತರ ಮೇಲೆ ಹಲ್ಲೆ ಆರೋಪ ಕೇಳಿ ಬಂದಿದೆ. ರಸ್ತೆ ಪರಿಶೀಲನೆ ನಡೆಸೋ ವೇಳೆ ನಮ್ಮ ಮೇಲೆ ಐದಾರು ಯುವಕರು ಹಲ್ಲೆ ಮಾಡಿದ್ದಾರೆ ಎಂಬುದು ಆಯುಕ್ತರ ಹೇಳಿಕೆ. ರಾಜಕೀಯ ಕಾರಣದಿಂದ ಹಲ್ಲೆ ನಡೆದಿದೆ ಎಂಬ ಗುಸುಗುಸು ಚರ್ಚೆಗೆ ಕಾರಣವಾಗಿದೆ. ವಿಜಯಪುರ ಮಹಾನಗರ ಪಾಲಿಕೆಯ ಆಯುಕ್ತ ವಿಜಯ್ ಮೆಕ್ಕಳಕಿ ಹಾಗೂ ಆಧಿಕಾರಿಗಳಾದ ಶಿವಾನಂದ ಪೂಜಾರಿ, ಅಶೋಕ ಸಜ್ಜನ ಮೇಲೆ ಐದಾರು ಯುವಕರಿಂದ ನಿನ್ನೆ ಹಲ್ಲೆ ನಡೆದಿದೆ.
ಇದೇ ಮುಂಬರುವ ಡಿಸೆಂಬರ್ 25 ರಂದು ಸಿಎಂ ಬಸವರಾಜ ಬೊಮ್ಮಾಯಿ ವಿಜಯಪುರ ಜಿಲ್ಲಾ ಪ್ರವಾಸ ಕೈಗೊಳ್ಳೋ ಸಾಧ್ಯತೆ ಇದೆ. ಈ ಕಾರಣದಿಂದ ಕೆಲ ರಸ್ತೆಗಳ ಪರಿಶೀಲನೆಗೆ ಖಾಸಗಿ ಕಾರಿನಲ್ಲಿ ಪಾಲಿಕೆಯ ಆಯುಕ್ತ ವಿಜಯ್ ಮೆಕ್ಕಳಕಿ ಸೊಲ್ಲಾಪುರ ಹಾಗೂ ಅಥಣಿ ರಸ್ತೆಗಳನ್ನು ಸಂಪರ್ಕಿಸೋ ರಿಂಗ್ ರೋಡ್ ಗೆ ಹೋಗಿದ್ದಾರೆ. ರಿಂಗ್ ರೋಡ್ ನಲ್ಲಿ ಕೆಎ 04 ಎಂಆರ್ 3143 ನಂಬರಿನ ಕಾರನ್ನು ನಿಲ್ಲಿಸಿ ರಸ್ತೆಯಲ್ಲಿನ ತಗ್ಗು ಗುಂಡಿಗಳನ್ನು ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ನಂಬರ್ ಪ್ಲೇಟ್ ಇಲ್ಲದ ಬುಲೆಟ್ ಬೈಕ್ ನಲ್ಲಿ ಸಮರ್ಥ ಸಿಂದಗಿ ಆಗಮಿಸಿದ್ದಾನೆ. ಆತನ ಹಿಂದೆಯೇ ನಂಬರ್ ಪ್ಲೇಟ್ ಇಲ್ಲದ ಪೋರ್ಡ್ ಕಾರಿನಲ್ಲಿ ನಾಲ್ವರು ಯುವಕರು ಆಗಮಿಸಿದ್ದಾರೆ.
ಸಮರ್ಥ ಸಿಂದಗಿ ಬೈಕ್ ಆಯುಕ್ತರ ಖಾಸಗಿ ಕಾರಿಗೆ ಟಚ್ ಆಗಿದೆ. ಇದನ್ನು ಪ್ರಶ್ನೆ ಮಾಡಿದ ಆಯಕ್ತ ವಿಜಯ್ ಮೆಕ್ಕಳಕಿ ಮೇಲೆ ಸಮರ್ಥ ಹಿಂದೆ ಮುಂದೆ ನೋಡದೇ ಹಲ್ಲೆ ಮಾಡಿದ್ದಾನಂತೆ. ಕಾರಿನಲ್ಲಿದ್ದ ಆತನ ಸ್ನೇಹಿತರಿಗೆ ತಾನು ಮಹಾನಗರ ಪಾಲಿಕೆ ಆಯುಕ್ತನಿದ್ದೇನೆ ಎಂದು ಹೇಳಿದರೂ ವಿಜಯ್ ಮೆಕ್ಕಳಕಿ ಹಾಗೂ ಇತರ ನಾಲ್ಕೈದು ಯುವಕರು, ಆಯುಕ್ತ ಮೆಕ್ಕಳಕಿ ಹಾಗೂ ಇತರೆ ಇಬ್ಬರು ಆಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದಾರೆ.
ಈ ವೇಳೆ ನಾನು ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸ್ನೇಹಾ ಶೆಟ್ಟಿ ಮಗನಿದ್ದೇನೆ. ನಮ್ಮ ಎಂಎಲ್ಎ ದೇವಾನಂದ ಚೌವ್ಹಾಣ್ ಇದ್ದಾನೆ. ನನಗೆ ಯಾರೂ ಏನೂ ಮಾಡಿಕೊಳ್ಳಲಾಗಲ್ಲಾ ಎಂದು ಸಮರ್ಥ ಆವಾಜ್ ಹಾಕಿದ್ದಾನಂತೆ. ಕೂಡಲೇ ಆಯುಕ್ತ ವಿಜಯ್ ಮೆಕ್ಕಳಕಿ ಪೊಲೀಸರಿಗೆ ಕರೆ ಮಾಡಿ ಕರೆಸಿದಾಗ ಪೊಲೀಸರಿಗೂ ಬೆದರಿಕೆ ಹಾಕಿದ್ದಾನಂತೆ ಭೂಪ!
ಘಟನೆ ಕುರಿತು ಪಾಲಿಕೆಯ ಆಯುಕ್ತರು ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ತಮ್ಮ ಮೇಲೆ ಹಲ್ಲೆ ಮಾಡಿರುವ ಸಮರ್ಥ ಸಿಂದಗಿ, ಸುರೇಶ ಉರ್ಫ್ ಸೂರಿ ಹಾಗೂ ಮತ್ತಿಬ್ಬರ ಮೇಲೆ ಕೊಲೆ ಯತ್ನ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದಾರೆ. ಘಟನನೆಯ ವೇಳೆ ಪ್ರಮುಖ ಆರೋಪಿ ಶಾಸಕ ದೇವಾನಂದ ಹೆಸರನ್ನು ಉದ್ದೇಶಪೂರ್ವಕವಾಗಿ ತೆಗೆದುಕೊಂಡಿರಬೇಕು ಎಂದು ಹಲ್ಲೆಗೊಳಗಾದ ವಿಜಯ್ ಮೆಕ್ಕಳಕಿ ಹೇಳಿದ್ದಾರೆ. ವಿಜಯ್ ಮೆಕ್ಕಳಕಿ ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆಗೊಳಗಾದ ಇಬ್ಬರು ಆಧಿಕಾರಿಗಳಾದ ಶಿವಾನಂದ ಪೂಜಾರಿ, ಅಶೋಕ ಸಜ್ಜನ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಮಹಾನಗರ ಪಾಲಿಕೆ ಆಯುಕ್ತ ವಿಜಯ್ ಮೆಕ್ಕಳಕಿ ಹಾಗೂ ಆಧಿಕಾರಿಗಳಾದ ಅಶೋಕ ಸಜ್ಜನ ಮತ್ತು ಶಿವಾನಂದ ಪೂಜಾರಿ ಮೇಲೆ ಹಲ್ಲೆಯನ್ನು ಖಂಡಿಸಿ ಮಹಾನಗರ ಪಾಲಿಕೆಯ ಆಧಿಕಾರಿಗಳು, ಸಿಬ್ಬಂದಿಗಳು, ಪೌರ ಕಾರ್ಮಿಕರು, ಸರ್ಕಾರಿ ಸೌಕರರ ಸಂಘದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಹಾಯ್ದು ಜಿಲ್ಲಾಧಿಕಾರಿಗಳ ಕಚೇರಿವರೆಗೂ ಸಾಗಿತು. ಮಹಾನಗರ ಪಾಲಿಕೆಯ ಆಯುಕ್ತ ವಿಜಯ್ ಮೆಕ್ಕಳಕಿ ಹಾಗೂ ಇತರೆ ಆಧಿಕಾರಿಗಳ ಮೇಲೆ ಹಲ್ಲೆ ಮಾಡಿದವರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯ ಮಾಡಿದರು. ಹಲ್ಲೆ ಮಾಡಿದವರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದ್ಧಾರೆ. ಮೂರು ದಿನಗಳಲ್ಲಿ ಆರೋಪಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ ಎಲ್ಲಾ ಸರ್ಕಾರಿ ಕಚೇರಿಗಳನ್ನು ಬಂದ್ ಮಾಡಿ ಜಿಲ್ಲಾಧಿಕಾರಿಗಳ ಕಚೇರಿ ಎದುರಿಗೆ ಅನಿರ್ಧಿಷ್ಟ ಮುಷ್ಕರನ್ನು ನಡೆಸುತ್ತೇವೆಂದು ಎಚ್ಚರಿಕೆ ನೀಡಿದ್ಧಾರೆ.
ಘಟನೆ ಕುರಿತು ಜಿಲ್ಲಾಧಿಕಾರಿ ಪಿ ಸುನೀಲಕುಮಾರ ಸಹ ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಘಟನೆ ಸರ್ಕಾರಿ ನೌಕರರಲ್ಲಿ ಆತಂಕ ಮೂಡಿಸಿದೆ. ಸಿಎಂ ಪ್ರವಾಸ ಇರೋ ಕಾರಣ ಹಾಗೂ ಇತರೆ ಪರಿಶೀಲನೆ ಕಾರ್ಯದ ಮಧ್ಯೆ ಆಯುಕ್ತರ ಮೇಲೆ ಹಲ್ಲೆಯಾಗಿದೆ. ಇದೊಂದು ಪೂರ್ವ ನಿಯೋಜಿತ ಹಲ್ಲೆಯಾಗಿದೆ ಎಂದು ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಘಟನೆಯ ಹಿಂದೆ ಯಾವ ಯಾವ ರಾಜಕೀಯ ವ್ಯಕ್ತಿಗಳ ಹೆಸರು ಬಂದಿದೆಯೋ ಆ ಕುರಿತು ಪೊಲೀಸರು ತನಿಖೆ ನಡೆಸಲಿದ್ದಾರೆ. ಹಲ್ಲೆ ಮಾಡಿದ ಪ್ರಮುಖ ಆರೋಪಿ ಸಮರ್ಥ ಸಿಂದಗಿ ನಾಗಠಾಣ ಶಾಸಕ ದೇವಾನಂದ ಚೌವ್ಹಾಣ್ ಹೆಸರು ಬಳಕೆ ಮಾಡಿದ್ದಾನೆ.
ಆ ನಿಟ್ಟಿನಲ್ಲಿಯೂ ಪೊಲೀಸರು ತನಿಖೆ ನಡೆಸಿ ಸತ್ಯಾಂಶ ಬಹಿರಂಗ ಮಾಡಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ. ಜೊತೆಗೆ ಸರ್ಕಾರಿ ಆಧಿಕಾರಿಗಳ ಬಗ್ಗೆ ಜನಪ್ರತಿನಿಧಿಗಳು ಕೆಟ್ಟ ಪದಗಳನ್ನು ಬಳಕೆ ಮಾಡಿ ಮಾತನಾಡುತ್ತಿದ್ದಾರೆ ಎಂಬ ದೂರು ನಮ್ಮ ಆಧಿಕಾರಿಗಳಿಂದ ಕೇಳಿ ಬಂದಿದೆ, ಇದು ಸರಿಯಲ್ಲಾ. ಆಧಿಕಾರಿಗಳದ್ದೇನಾದರೂ ತಪ್ಪು ಇದ್ದರೆ ಕ್ರಮ ಜರುಗಿಸಲು ನಾವು ಇದ್ದೇವೆ. ಆದರೆ ಆಧಿಕಾರಿಗಳಿಗೆ ಕೆಟ್ಟ ಪದ ಬಳಕೆ ಯಾಕೆ? ಆಧಿಕಾರಿಗಳ ಮೇಲೆ ಹಲ್ಲೆಯಾದರೆ ಜನ ಸಾಮಾನ್ಯರ ರಕ್ಷಣೆ ಹೇಗೆ ಎಂದು ಜನ ಕೇಳುವಂತಾಗುತ್ತಿದೆ.
ಈ ರೀತಿ ಹಲ್ಲೆ ಮಾಡುವವರ ಮೇಲೆ ಗೂಂಡಾ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಡಿಸಿ ಹೇಳಿದ್ದಾರೆ. ಇನ್ನು ಘಟನೆ ಕುರಿತು ಪೊಲೀಸರು ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ಧಾರೆ ಎಂದು ಎಸ್ಪಿ ಹೆಚ್ ಡಿ ಆನಂದಕುಮಾರ ಮಾಹಿತಿ ನೀಡಿದ್ದಾರೆ. ಆದರ್ಶ ನಗಬರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ತನಿಖೆ ನಡೆಸಿರೋ ನಮ್ಮ ಆಧಿಕಾರಿಗಳು ಈಗಾಗಲೇ ಸಮರ್ಥ ಸಿಂದಗಿಯನ್ನು ಬಂಧಿಸಿದ್ದಾರೆ. ಇನ್ನುಳಿದ ಹಲ್ಲೆಕೋರರನ್ನು ಶೀಘ್ರವೇ ಬಂಧಿಸಲಾಗುತ್ತದೆ. ಸರ್ಕಾರಿ ಅಧಿಕಾರಿಗಳ ಮೇಲಿನ ಹಲ್ಲೆಯಂಥ ಘಟನೆಗಳನ್ನು ಜಿಲ್ಲಾ ಪೊಲೀಸ್ ಸಹಿಸುವುದಿಲ್ಲ. ಇನ್ನುಳಿದಂತೆ ಘಟನೆ ಬಗ್ಗೆ ತನಿಖೆ ಮುಂದುವರೆದಿದೆ. ತನಿಖೆ ಬಳಿಕ ಇನ್ನಷ್ಟು ಮಾಹಿತಿ ಸಿಗಲಿದೆ ಎಂದಿದ್ದಾರೆ ಎಸ್ಪಿ ಹೆಚ್ ಡಿ ಆನಂದಕುಮಾರ.
ಆಯಕ್ತರು ಹಾಗೂ ಆಧಿಕಾರಿಗಳ ಮೇಲೆ ಹಲ್ಲೆ ಮಾಡಿದ ಪ್ರಮುಖ ಆರೋಪಿ ಸಮರ್ಥ ಸಿಂದಗಿ ತಾಯಿ ಸ್ನೇಹಾ ಶೆಟ್ಟಿ ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಆಧ್ಯಕ್ಷೆಯಾಗಿದ್ದು ಇದೊಂದು ರಾಜಕೀಯ ಕುತಂತ್ರವಾಗಿದೆ ಎಂದು ಆರೋಪಿಸಿದ್ದಾರೆ. ಇದರಲ್ಲಿ ಸುಖಾಸುಮ್ಮನೇ ಶಾಸಕ ದೇವಾನಂದ ಚೌವ್ಹಾಣ್ ಹೆಸರನ್ನು ಥಳಕು ಹಾಕಿದ್ದಾರೆ. ಆಡಳಿತ ಪಕ್ಷದ ಕೈವಾಡವಿದೆ.
ಗಲಾಟೆಯಾಗಿರುವುದು ನಿಜ. ಆದರೆ, ನಮ್ಮ ಮಗಾ ಸಮರ್ಥ ಹಾಗೂ ಆತನ ಸ್ನೇಹಿತರು ನಮ್ಮ ಪಕ್ಷದ ಹೆಸರಾಗಲಿ ಶಾಸಕ ದೇವಾನಂದ ಚೌವ್ಹಾಣ್ ಹೆಸರನ್ನು ಬಳಕೆ ಮಾಡಿಕೊಂಡಿಲ್ಲಾ ಎಂದು ಹೇಳಿರುವುದಾಗಿ ಪ್ರಕರಣ ಪ್ರಮುಖ ಆರೋಪಿಯ ತಾಯಿ ಹಾಗೂ ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಸ್ನೇಹಾ ಶೆಟ್ಟಿ ಹೇಳಿದ್ದಾರೆ. ಆದರೆ ಈ ಕುರಿತು ಯಾವುದೇ ಹೇಳಿಕೆ ನೀಡಲು ನಿರಾಕರಿಸಿದ್ದಾರೆ. ಸಂದರ್ಭ ಬಂದಾಗ ಹೇಳಿಕೆ ನೀಡುತ್ತೇನೆಂದಿದ್ದಾರೆ. ಹಲ್ಲೆ ನಡೆಸೋ ವೇಳೆ ಆರೋಪಿಗಳು ಶಾಸಕ ದೇವಾನಂದ ಚೌವ್ಹಾಣ್ ಹೆಸರು ಬಳಕೆ ಮಾಡಿದ್ದು, ಜೆಡಿಎಸ್ ಪಕ್ಷದ ಹೆಸರು ಹೇಳಿದ್ದರ ಸತ್ಯಾಸತ್ಯತೆ ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ. ಇದು ರಾಜಕೀಯ ಬಣ್ಣವನ್ನೂ ಪಡೆದುಕೊಂಡರೂ ಅಚ್ಚರಿ ಪಡಬೇಕಿಲ್ಲಾ.
-ಅಶೋಕ ಯಡಳ್ಳಿ, ಟಿವಿ9, ವಿಜಯಪುರ