ವಿಜಯನಗರ, (ಆಗಸ್ಟ್ 11): ನಾಲ್ಕು ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಾಭದ್ರ ಜಲಾಶಯದ ಕ್ರಸ್ಟ್ ಗೇಟ್ 19 ಕಟ್ ಆಗಿ ನೀರಿನಲ್ಲಿ ಕಳಚಿ ಹೋಗಿದೆ. ಇದರಿಂದ ಆತಂಕ ಮನೆ ಮಾಡಿದ್ದು, ಸಚಿವರು, ಶಾಸರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಹ ವಿಮಾನ ಹೇರಿ ತುಂಗಾಭದ್ರ ಡ್ಯಾಂ ಬಳಿ ಆಗಮಿಸಿದ್ದು, ಗೇಟ್ ಕುಸಿದಿರುವುದನ್ನು ಪರಿಶೀಲನೆ ಮಾಡಿದರು. ಇನ್ನು ಇದೇ ವೇಳೆ ಮಾತನಾಡಿರುವ ಡಿಕೆ ಶಿವಕುಮಾರ್, ನದಿ ಪಾತ್ರದ ಜನರು ಆತಂಕವಾಗುವುದು ಬೇಡ. ಇನ್ನು ಬೆಳೆ ಬೆಳೆದ ರೈತರು ಸಹ ಯಾವುದೇ ಗಾಬರಿಯಾಗುವುದು ಬೇಡ ಎಂದು ಅಭಯ ನೀಡಿದ್ದಾರೆ. ಅಲ್ಲದೇ ಬಂದೇ ಬೆಳೆಯ ಸುಳಿವು ನೀಡಿದ್ದಾರೆ.
ನದಿಪಾತ್ರದ ಜನರು ಆತಂಕಕ್ಕೊಳಗಾಗಬಾರದು. ಜನರ ಸುರಕ್ಷಿತ ಗಾಗಿ ಈಗಾಗಲೇ ಕಳೆದ ರಾತ್ರಿಯಿಂದ ಮಾಹಿತಿ ನೀಡಲಾಗಿದೆ. ಜನರ ಸುರಕ್ಷಿತೆಗಾಗಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಳೆದ ರಾತ್ರಿ ಹತ್ತು ಗೇಟ್ ಗಳಿಂದ ನೀರನ್ನು ಹೊರಬಿಡಲಾಗುತ್ತಿತ್ತು. ಆದ್ರೆ 19 ನೇ ಗೇಟ್ ನ ಚೈನ್ ಕಟ್ಟಾಗಿದೆ. ಗೇಟ್ ಹಾಕಬೇಕಾಗಿದ್ದರಿಂದ ನೀರನ್ನು ಹೊರಬಿಡಲಾಗುತ್ತಿದೆ. ರೈತರ ಒಂದು ಬೆಳೆಗಾದರೂ ನೀರು ನೀಡಲು ಕ್ರಮ ಕೈಗೊಳ್ಳುತ್ತೇವೆ. ರೈತರು ಗಾಬರಿ ಪಡುವುದು ಬೇಡ. ಮೂರು ಸರ್ಕಾರ ಗಳು ರೈತರಿಗೆ ಯಾವ ರೀತಿ ನ್ಯಾಯ ದೊರಕಿಸಿಕೊಡಬೇಕೋ ಅದನ್ನು ನೀಡುತ್ತೇವೆ. ರೈತರು ಆತಂಕಕ್ಕೊಳಗಾಗಬಾರದು. ಬಹಳಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು. ಈ ಸಂಪತ್ತನ್ನು ಕಾಪಾಡೋ ಕೆಲಸ ಮಾಡುತ್ತೇವೆ. ಸಮಾನಾಂತರ ಜಲಾಶಯ ನಿರ್ಮಾಣದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ತುಂಗಭದ್ರಾ ಡ್ಯಾಂ ಗೇಟ್ ಕಟ್ಗೆ ಸ್ಫೋಟಕ ಕಾರಣ ಕೊಟ್ಟ ಎಚ್ಡಿಕೆ, ಜತೆಗೊಂದು ಸಲಹೆ
ಕರ್ನಾಟಕ, ತೆಲಂಗಾಣ, ಆಂಧ್ರ ರಾಜ್ಯದ ರೈತರ ಜೀವನಾಧಾರವಾಗಿದ್ದು, 12 ಲಕ್ಷ ಎಕರೆ ಜಮೀನಿಗೆ ನೀರು ಒದಗಿಸುವ ಉದ್ದೇಶದಿಂದ ಡ್ಯಾಂ ನಿರ್ಮಿಸಲಾಗಿದೆ. ನಿನ್ನೆ ರಾತ್ರಿವರೆಗೆ 10 ಕ್ರಸ್ಟ್ ಗೇಟ್‌ಗಳ ಮೂಲಕ ನೀರು ಬಿಡುಗಡೆ ಮಾಡಲಾಗಿದೆ. 19ನೇ ಗೇಟ್ ಚೈನ್ ತುಂಡಾಗಿ ಮುರಿದುಬಿದ್ದಿದೆ. ಸುರಕ್ಷತೆ ದೃಷ್ಟಿಯಿಂದ 98 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ತುಂಗಭದ್ರಾ ಡ್ಯಾಮ್ಗೆ ಪ್ರಸ್ತುತ 28,056 ಕ್ಯೂಸೆಕ್ ಒಳಹರಿವು ಇದೆ. ಮುರಿದುಬಿದ್ದಿರುವ ಗೇಟ್ ದುರಸ್ತಿ ಮಾಡಲು ನೀರಿನ ಪ್ರಮಾಣ ಇಳಿಕೆ ಮಾಡಬೇಕಿದೆ. ಈ ಮೂಲಕ 19ನೇ ಗೇಟ್ ಮೇಲೆ ಒತ್ತಡ ಕಡಿಮೆ ಮಾಡಲು ಹೆಚ್ಚಿನ ನೀರು ರಿಲೀಸ್ ಮಾಡಲಾಗಿದೆ. ಅಲ್ಲದೇ ಉಳಿದ ಗೇಟ್‌ಗಳ ಮೂಲಕ ಹೆಚ್ಚುವರಿ ನೀರು ನದಿಗೆ ಬಿಡುಗಡೆ ಮಾಡಲಾಗುತ್ತಿದ್ದು, ಗೇಟ್ ದುರಸ್ತಿ, ರೈತರ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ. ಹೀಗಾಗಿ ಯಾರು ಆತಂಕಕ್ಕೊಳಗಾಬೇಡಿ ಎಂದು ಧೈರ್ಯ ಹೇಳಿದರು.
ನಿನ್ನೆ ರಾತ್ರಿ 10.50 ಕ್ಕೆ ಗೇಟ್ ನಂಬರ್ 19 ಕಳಚಿ ಬಿದ್ದಿದೆ. ತಕ್ಷಣ ಟಿಬಿ ಬೋರ್ಡ್ ಅಧಿಕಾರಿಗಳು ಈ ಭಾಗದ ಜಿಲ್ಲಾಡಳಿತಗಳಿಗೆ ಮಾಹಿತಿ ರವಾನಿಸಿದ್ದಾರೆ. ಈಗ ನಾವು ರೈತರನ್ನ ಬದುಕಿಸಬೇಕು. ಟಿಬಿ ಡ್ಯಾಂ 105 ಟಿಎಂಸಿ ಸಾಮರ್ಥ್ಯ ಇದೆ, ಕೂಡಲೇ ನೀರನ್ನ ಬಿಡುಗಡೆ ಮಾಡಲು ತಿಳಿಸಲಾಗಿದೆ. ಒಟ್ಟು 98 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ, ಗೇಟ್ 19 ಒಂದರಲ್ಲೇ 38 ಕ್ಯೂಸೆಕ್ ಹೊಗ್ತಿದೆ. ಏನಾದ್ರು ಮಾಡಿ ಈಗ 43 ರಿಂದ 53 ಟಿಎಂಸಿಗೆ ಇಳಿಸಬೇಕಿದೆ. ಟೆಕ್ನಿಕಲ್ ಟೀಂ ಕೆಲಸ ಮಾಡುತ್ತಿದೆ. ಮುಖ್ಯ ಇಂಜಿನಿಯರ್ಗಳು ಸಹ ಇದ್ದಾರೆ. ಬೇರೆ ದುರಸ್ತಿ ಮಾದರಿಗಳನ್ನ ಪರಿಶೀಲಿಸಲಾಗಿದೆ, ತಮಿಳುನಾಡು, ಆಂಧ್ರದ ನುರಿತ ತಜ್ಞರು ಇದ್ದಾರೆ. ದುರಸ್ಥಿ ಕೆಲಸ ಪ್ರಾರಂಭವಾಗಿದೆ, ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು. ನಾಲ್ಕೈದು ದಿನದಲ್ಲಿ ಏನಾದ್ರು ಮಾಡಿ ದುರಸ್ಥಿ ಮಾಡಲು ಶತಪ್ರಯತ್ನ ಮಾಡಲಾಗುವುದು. ಸಿಎಂಗೆ ಮಾಹಿತಿ ಕೊಡಲಾಗಿದೆ, ಆಂಧ್ರ, ತೆಲಂಗಾಣಕ್ಕಿ ಮಾಹಿತಿ ಕೊಡಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಕಿತ್ತುಹೋದ ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್ ಗೇಟ್.. ಜಲಾಶಯ ಸಂಪೂರ್ಣ ಖಾಲಿ ಮಾಡ್ತಾರಾ?
ತಡರಾತ್ರಿಯಿಂದ ಇದುವರೆಗೂ ಜಲಾಶಯದಿಂದ 7 ಟಿಎಂಸಿ ನೀರು ತುಂಗಭದ್ರ ನದಿಗೆ ಹರಿದು ಹೋಗಿದೆ.
ಜಲಾಶಯದಿಂದ ಸದ್ಯ 1 ಲಕ್ಷ ಕ್ಯೂಸೆಕ್ ನೀರು ತುಂಗಭದ್ರ ನದಿಗೆ ಹರಿಬಿಡಲಾಗಿದೆ ಇನ್ನೂ 50 ಟಿಎಂಸಿಗೂ ಅಧಿಕ ನೀರು ಹೊರ ಬಿಡಬೇಕಿದೆ. ಇನ್ನು ಈ ಬಗ್ಗೆ ಡಿಕೆ ಶಿವಕುಮಾರ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು, ರಾತ್ರಿ ವೇಳೆ ಹೆಚ್ಚಿನ ಪ್ರಮಾಣದ ನೀರು ಹೊರಬಿಡಲು ಚರ್ಚೆ ಮಾಡಿ 2 ಲಕ್ಷ ಕ್ಯೂಸೆಕ್ ನಷ್ಟು ನೀರು ಹೊರ ಬಿಡುವ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ.
ಪ್ರಸ್ತುತ ಜಲಾಶಯವು ಭರ್ತಿಯಾಗಿದ್ದು, 105.78 ಟಿಎಂಸಿಯಷ್ಟು (ಪೂರ್ಣ ಸಾಮರ್ಥ್ಯಕ್ಕೆ) ನೀರು ಸಂಗ್ರಹವಾಗಿತ್ತು. ಶನಿವಾರದ (ಆಗಸ್ಟ್ 10) ಒಳಹರಿವು 40,925 ಕ್ಯೂಸೆಕ್ ಇತ್ತು. ಜಲಾಶಯಕ್ಕೆ 28,133 ಕ್ಯೂಸೆಕ್ ನೀರು ಹರಿಬಿಡಲಾಗುತ್ತಿತ್ತು. ಆದ್ರೆ, ತಡರಾತ್ರಿಯಲ್ಲಿ 19 ನೇ ಗೇಟ್ ತುಂಡಾಗಿದ್ದರಿಂದ ಹೆಚ್ಚಿನ ನೀರು ಹರಿಬಿಡಲಾಗುತ್ತಿದೆ. ಮತ್ತೇನಾದರೂ ಅನಾಹುತವಾದೀತು ಎನ್ನುವ ಮುನ್ನೆಚ್ಚರಿಕೆಯಿಂದ ಅಧಿಕಾರಿಗಳು ಇತರ ಗೇಟ್‌ಗಳನ್ನು ತೆರೆದು ನೀರಿನ ಒತ್ತಡ ಕಡಿಮೆ ಮಾಡುವ ಪ್ರಯತ್ನಿಸಿದ್ದಾರೆ. ಪ್ರಸ್ತುತ ಜಲಾಶಯದ ಹೊರಹರಿವು 1 ಲಕ್ಷ ಕ್ಯೂಸೆಕ್ ದಾಟಿದೆ. ಇನ್ನು ಇದೀಗ ಉನ್ನತ ಮಟ್ಟದ ಸಭೆ ಬಳಿಕ ಇನ್ನಷ್ಟು ಹೊರಹರಿವು ಹೆಚ್ಚಿಸುವ ಸಾಧ್ಯತೆಗಳಿವೆ. ಹೀಗಾಗಿ ನದಿಪಾತ್ರದ ಹಳ್ಳಿಗಳಿಗೆ ಪ್ರವಾಹ ಭೀತಿ ಶುರುವಾಗಿದೆ. ಸುಮಾರು 2 ಲಕ್ಷ ಕ್ಯೂಸೆಕ್ನಷ್ಟು ನೀರು ಹೊರಬಿಡುವ ಸಾಧ್ಯತೆಗಳಿವೆ. ಇದರಿಂದ ನದಿ ಪಾತ್ರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಕಳೆದ ಬೇಸಿಗೆಗೆ ನೀರಿಲ್ಲದೇ ಒಂದೇ ಬೆಳೆ ಆಗಿತ್ತು. ಆದ್ರೆ ಈ ಬಾರಿ ಮುಂಗಾರು ಮಳೆ ಚುರುಕುಗೊಂಡಿದ್ದರಿಂದ ತುಂಗಾಭದ್ರ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಹೀಗಾಗಿ ಈ ಬಾರಿ ಎರಡು ಬೆಳೆ ಖಚಿತ ಎಂದು ರೈತರು ವಿಶ್ವಾಸದಲ್ಲಿದ್ದರು. ಆದ್ರೆ, ದುರದೃಷ್ಟವಶಾತ್ ಜಲಾಶಯದ ಗೇಟ್ ಕಟ್ ಆಗಿದ್ದರಿಂದ ಸುಮಾರು ಐವತ್ತರಿಂದ ಅರವತ್ತು ಟಿಎಂಸಿ ನೀರು ಖಾಲಿ ಮಾಡಬೇಕಿದೆ. ಹೀಗಾಗಿ ಜಲಾಶಯದ ಒಡಲು ಖಾಲಿಯಾಗಲಿದೆ. ಇನ್ನೊಂದಡೆ ಒಳಹರಿವು ಸಹ ಕಡಿಮೆ ಇದೆ. ಇದರಿಂದ ಜಲಾಶಯ ಮತ್ತೆ ಭರ್ತಿಯಾಗುವುದು ಅನುಮಾನವಾಗಿದೆ. ಹೀಗಾಗಿ ಈ ಬಾರಿಯೂ ಸಹ ಒಂದೇ ಬೆಳೆ ಎನ್ನುವ ಆತಂಕ ರೈತರಲ್ಲಿ ಮನೆ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:22 pm, Sun, 11 August 24