ವಿಜಯಪುರ ಜಿಲ್ಲೆಯ ಬಗ್ಗೆ ನಿಮಗೆಷ್ಟು ಗೊತ್ತು? ಜಿಲ್ಲೆಯ ಅವಲೋಕನ ಇಲ್ಲಿದೆ

| Updated By: sandhya thejappa

Updated on: Feb 23, 2022 | 10:39 AM

ವಿಜಯಪುರ ಜಿಲ್ಲೆ ಒಟ್ಟು 13 ತಾಲೂಕುಗಳನ್ನು ಹೊಂದಿರುವ ಜಿಲ್ಲೆಯಾಗಿದೆ. ವಿಜಯಪುರ, ತಿಕೋಟಾ, ಬಬಲೇಶ್ವರ, ಕೊಲ್ಹಾರ, ನಿಡಗುಂದಿ, ಬಸವನಬಾಗೇವಾಡಿ, ದೇವರಹಿಪ್ಪರಗಿ, ಮುದ್ದೇಬಿಹಾಳ, ತಾಳಿಕೋಟೆ, ಸಿಂದಗಿ, ಆಲಮೇಲ, ಇಂಡಿ, ಚಡಚಣ ಹೀಗೆ ಒಟ್ಟು 13 ತಾಲೂಕುಗಳು ಇರುವ ಜಿಲ್ಲೆ.

ವಿಜಯಪುರ ಜಿಲ್ಲೆಯ ಬಗ್ಗೆ ನಿಮಗೆಷ್ಟು ಗೊತ್ತು? ಜಿಲ್ಲೆಯ ಅವಲೋಕನ ಇಲ್ಲಿದೆ
ಗೋಲಗುಮ್ಮಟ (ಸಾಂದರ್ಭಿಕ ಚಿತ್ರ)
Follow us on

ವಿಜಯಪುರ: ಐತಿಹಾಸಿಕ ನಗರಿ, ವಿಶ್ವಗುರು ಬಸವಣ್ಣನವರ ಜನ್ಮಭೂಮಿ, ಭಾಸ್ಕರಾಚಾರ್ಯರು, ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿಯ ನೆಲ ವಿಜಯಪುರ (Vijayapur) ಜಿಲ್ಲೆಗೆ ತನ್ನದೇಯಾದ ಐತಿಹ್ಯವಿದೆ. ವಿಜಯಪುರದ ಪುರಾತನ ಹೆಸರು ಬಿಜ್ಜನಹಳ್ಳಿ. 10-11ನೇ ಶತಮಾನಗಳಲ್ಲಿ ಕಲ್ಯಾಣಿ ಚಾಲುಕ್ಯರಿಂದ ಬಿಜ್ಜನಹಳ್ಳಿ ಸ್ಥಾಪಿತವಾಯಿತು. 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ, ಮಹಾಮಾನವತಾವಾದಿ ವಿಶ್ವಗುರು ಬಸವಣ್ಣನವರ ಜನ್ಮಸ್ಥಳ ಇದಾಗಿದೆ. ನಂತರ ಕ್ರಮವಾಗಿ ದೆಹಲಿಯ ಖಿಲ್ಜಿ ಸುಲ್ತಾನರು, ಬಹಮನಿ ಸುಲ್ತಾನರು, ಮೊಘಲ್ ಸಾಮ್ರಾಟರು, ಹೈದರಾಬಾದಿನ ನಿಜಾಮರು ಇಲ್ಲಿ ಆಳ್ವಿಕೆಗೆ ಒಳಪಟ್ಟಿತ್ತು. ಬಳಿಕ ಮರಾಠ ಪೇಶ್ವೆಗಳ ಅಳ್ವಿಕೆಗೆ ಒಳಪಟ್ಟಿತ್ತು. ಸ್ವಾತಂತ್ರ್ಯ ನಂತರ 1956 ರಲ್ಲಿ ಆಗಿನ ಮೈಸೂರು (Mysuru) ರಾಜ್ಯಕ್ಕೆ ಸೇರಿ ಇದೀಗಾ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಒಂದಾಗಿದೆ.

ವಿಜಯಪುರ ಜಿಲ್ಲೆ ಒಟ್ಟು 13 ತಾಲೂಕುಗಳನ್ನು ಹೊಂದಿರುವ ಜಿಲ್ಲೆಯಾಗಿದೆ. ವಿಜಯಪುರ, ತಿಕೋಟಾ, ಬಬಲೇಶ್ವರ, ಕೊಲ್ಹಾರ, ನಿಡಗುಂದಿ, ಬಸವನಬಾಗೇವಾಡಿ, ದೇವರಹಿಪ್ಪರಗಿ, ಮುದ್ದೇಬಿಹಾಳ, ತಾಳಿಕೋಟೆ, ಸಿಂದಗಿ, ಆಲಮೇಲ, ಇಂಡಿ, ಚಡಚಣ ಹೀಗೆ ಒಟ್ಟು 13 ತಾಲೂಕುಗಳು ಇರುವ ಜಿಲ್ಲೆ. ವಿಜಯಪುರ ಜಿಲ್ಲೆಯು ಕಲಬುರಗಿ, ರಾಯಚೂರು, ಬಾಗಲಕೋಟೆ, ಬೆಳಗಾವಿ ಜಿಲ್ಲೆ, ಮಹಾರಾಷ್ಟ್ರದ ಸಾಂಗಲಿ ಮತ್ತು ಸೊಲ್ಲಾಪುರ ಜಿಲ್ಲೆಗಳು ಗಡಿಯನ್ನು ಹಂಚಿಕೊಂಡಿದೆ. ಇನ್ನು ಜಿಲ್ಲೆಯಲ್ಲಿ 2011 ರ ಜನಗಣತಿ ಪ್ರಕಾರ 21 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿದೆ. 11 ಲಕ್ಷಕ್ಕೂ ಹೆಚ್ಚು ಪುರುಷರು ಮತ್ತು 10 ಲಕ್ಷಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಜಿಲ್ಲೆಯಲ್ಲಿ ಆಧಿಕ ಜನರು ಗ್ರಾಮೀಣ ಭಾಗದಲ್ಲಿ ವಾಸವಿದ್ದಾರೆ. ಕೃಷಿಯನ್ನೇ ಪ್ರಮುಖ ಕಾಯಕವನ್ನಾಗಿಸಿಕೊಂಡಿದ್ದಾರೆ. ವಿವಿಧತೆಗಳಲ್ಲಿ ಏಕತೆ ಎನ್ನುವಂತೆ ಜಿಲ್ಲೆಯಲ್ಲಿ ಎಲ್ಲಾ ಸಮುದಾಯದ ಜನರು ಕಾಣಸಿಗುತ್ತಾರೆ. ಜಿಲ್ಲೆಯನ್ನು ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ಜಿಲ್ಲೆ ಎಂದು ಕರೆಯಲಾಗುತ್ತದೆ.

ಶೈಕ್ಷಣಿಕವಾಗಿ ವಿಜಯಪುರ ಜಿಲ್ಲೆ ಇನ್ನೂ ಅಭಿವೃದ್ಧಿಯಾಗಬೇಕು. ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ಬಿಎಲ್ಡಿಈ (ಡೀಮ್ಡ್ ವಿಶ್ವವಿದ್ಯಾಲಯ) ವಿಶ್ವವಿದ್ಯಾಲಯ, ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಸ್ನಾತಕೋತ್ತರ ಪದವಿ ನಿಡುವ ಕೇಂದ್ರಗಳಾಗಿವೆ. ಇದರಾಚೆ ಸೈನಿಕ ಶಾಲೆ, ಕೇಂದ್ರೀಯ ಮಹಾವಿದ್ಯಾಲಯ, ತಾಂತ್ರಿಕ ಮಹಾವಿದ್ಯಾಲಯಗಳು, ಪಾಲಿಟೆಕ್ನಿಕ್ ಮಹಾವಿದ್ಯಾಲಯಗಳು, ಆರ್ಯುವೇದ ಮಹಾವಿದ್ಯಾಲಯಗಳು, ಹೋಮಿಯೋಪಥಿ ಮಹಾವಿದ್ಯಾಲಯಗಳು, ಅಲ್ ಅಮೀನ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ, ಬಿಎಲ್ಡಿಈ ಬಿ ಎಂ ಪಾಟೀಲ್ ಮೆಡಿಕಲ್ ಕಾಲೇಜ್ ಹಾಗೂ ಹಾಸ್ಪಿಟಲ್, ಕೃಷಿ ಮಹಾವಿದ್ಯಾಲಯಗಳಿವೆ.

201 ಗ್ರಾಮ ಪಂಚಾಯತಿಗಳು
ವಿಜಯಪುರ ಜಿಲ್ಲೆಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳು, ಒಂದು ಲೋಕಸಭಾ ಕ್ಷೇತ್ರ, ಎರಡು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಪರಿಷತ್ ಸ್ಥಾನಗಳು, ಬೆಳಗಾವಿ ಬಾಗಲಕೋಟೆ ವಿಜಯಪುರ ವ್ಯಾಪ್ತಿಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರಗಳ ಒಟ್ಟು ಎರಡು ಪರಿಷತ್ ಸ್ಥಾನಗಳನ್ನು ಹೊಂದಿದೆ. ನಗರ ಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜಗೇರಿದೆ. ವಿಜಯಪುರ ಮಹಾನಗರ ಪಾಲಿಕೆ ನಗರದ ವ್ಯಾಪ್ತಿ ಕೆಲಸ ಕಾರ್ಯಗಳನ್ನು ಮಾಡುತ್ತದೆ. ಇನ್ನು ಇಂಡಿ ಪುರಸಭೆ, ಮುದ್ದೇಬಿಹಾಳ ಪುರಸಭೆ, ಸಿಂದಗಿ ಪುರಸಭೆ, ಬಸವನಬಾಗೇವಾಡಿ ಪುರಸಭೆ, ತಾಳಿಕೋಟಿ ಪುರಸಭೆಗಳು ಅಸ್ತಿತ್ವದಲ್ಲಿವೆ. ಇವುಗಳ ಜೊತೆಗೆ ಬಬಲೇಶ್ವರ ಪಟ್ಟಣ ಪಂಚಾಯಿತಿ, ತಿಕೋಟಾ ಪಟ್ಟಣ ಪಂಚಾಯಿತಿ, ಕೊಲ್ಹಾರ ಪಟ್ಟಣ ಪಂಚಾಯಿತಿ, ನಿಡಗುಂದಿ ಪಟ್ಟಣ ಪಂಚಾಯಿತಿ, ದೇವರಹಿಪ್ಪರಗಿ ಪಟ್ಟಣ ಪಂಚಾಯಿತಿ, ಚಡಚಣ ಪಟ್ಟಣ ಪಂಚಾಯಿತಿ, ಆಲಮೇಲ ಪಟ್ಟಣ ಪಂಚಾಯಿತಿ, ನಾಲತವಾಡ ಪಟ್ಟಣ ಪಂಚಾಯಿತಿ, ಮನಗೂಳಿ ಪಟ್ಟಣ ಪಂಚಾಯಿತಿಗಳಿವೆ. ಜಿಲ್ಲೆಯಲ್ಲಿ ಒಟ್ಟು 201 ಗ್ರಾಮ ಪಂಚಾಯತಿಗಳು ಕಾರ್ಯ ನಿರ್ವಹಿಸುತ್ತಿವೆ.

ಕೃಷಿ ಪ್ರಧಾನ ಜಿಲ್ಲೆಯಾಗಿದೆ. ಮಳೆಯಾಶ್ರಿತ ಹಾಗೂ ನೀರಾವರಿ ಮೂಲಕ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತದೆ. ದ್ರಾಕ್ಷಿ, ದಾಳಿಂಬೆ, ನಿಂಬೆ, ಬಾಳೆ, ಪೇರಲೆ, ಸೀತಾಫಲ, ಬಾರೆ ಹಣ್ಣುಗಳು ಸೇರಿದಂತೆ ಇತರೆ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತದೆ. ದ್ರಾಕ್ಷಿಯಿಂದ ವೈನ್ ತಯಾರಿಕಾ ಘಟಕಗಳು ಇವೆ. ಅದರಂತೆ ಕೃಷಿಯಲ್ಲಿ ಜೋಳ, ಗೋದಿ, ಕಡಲೆ, ತೊಗರಿ, ಉದ್ದು, ಹೆಸರು, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯಲಾಗುತ್ತದೆ. ವಿಜಯಪುರ ಜಿಲ್ಲೆಯಲ್ಲಿ 15 ಕ್ಕೂ ಹೆಚ್ಚು ಕೃಷಿ ಉತ್ಪನ್ನ ಮಾರುಕಟ್ಟೆಗಳಿವೆ. ಕಬ್ಬು ಸಹ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 9 ಸಕ್ಕರೆ ಕಾರ್ಖಾನೆಗಳು ಕಾರ್ಯವಹಿಸುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಇದರ ಜೊತೆಗೆ ಹೈನೋದ್ಯಮವೂ ಉತ್ತಮವಾಗಿದ್ದು, ವಿಜಯಪುರ ಬಾಗಲಕೋಟೆ ಹಾಲು ಮಹಾಮಂಡಳಿ ವಿಜಯಪುರ ನಗರದ ಹೊರ ಭಾಗದಲ್ಲಿದೆ. ವಿವಿಧ ಏತನೀರಾವರಿ ಯೋಜನೆಗಳು ಬಹುತೇಕ ಪೂರ್ಣವಾಗಿದ್ದು, ಪೂರ್ಣ ಪ್ರಮಾಣದಲ್ಲಿ ನೀರಾವರಿಯಾದರೆ ವಿಜಯಪುರ ಜಿಲ್ಲೆಯ ಚಿತ್ರಣ ಬದಲಾಗಲಿದೆ.

ನೀರಿಗೆ ತಾತ್ವಾರ ತಪ್ಪಿಲ್ಲ
ಮೂರು ನದಿಗಳ ಬೀಡು ಎಂಬ ಖ್ಯಾತಿಗೆ ಪಾತ್ರವಾದರೂ ಬೇಸಿಗೆಯಲ್ಲಿ ಕುಡಿಯುವ ನೀರಿಗೂ ತಾತ್ವಾರ ಮಾತ್ರ ಇನ್ನೂ ತಪ್ಪಿಲ್ಲ. ಕೃಷ್ಣೆ, ಭೀಮೆ ಹಾಗೂ ಡೋಣಿ ನದಿಗಳು ಜೀವ ನದಿಗಳಾಗಿವೆ. ಕೃಷ್ಣಾನದಿಗೆ ಅಡ್ಡಲಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ ನಿರ್ಮಾಣ ಮಾಡಲಾಗಿದೆ. 1964 ರಲ್ಲಿ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಆಲಮಟ್ಟಿ ಡ್ಯಾಂ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು. ಆದರೆ ಡ್ಯಾಂ ನಿರ್ಮಾಣ ವಿಳಂಬವಾಗಿ ಕೊನೆಗೆ 2010 ರಲ್ಲಿ ಡ್ಯಾಂನಲ್ಲಿ ನೀರು ನಿಲ್ಲಿಸುವ ಮೂಲಕ ಲೋಕಾರ್ಪಣೆ ಮಾಡಲಾಯಿತು. 21 ಆಗಸ್ಟ್ 2006 ರಲ್ಲಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಡ್ಯಾಂನ್ನು ಲೋಕಾರ್ಪನೆ ಮಾಡಿದ್ದಾರೆ. ಸದ್ಯ 519.60 ಮೀಟರ್ ಸಾಮರ್ಥ್ಯದ ಡ್ಯಾಂ 524.25 ಮೀಟರ್ಗೆ ಎತ್ತರವಾಗಬೇಕಿದ್ದು, ಕೆಲ ನ್ಯಾಯ ಪ್ರಕರಣಗಳ ಕಾರಣ ಎತ್ತರಿಸುವ ಕಾಮಗಾರಿ ಆರಂಭವಾಗಿಲ್ಲ. ಡ್ಯಾಂ ಎತ್ತರವಾದರೆ ವಿಜಯಪುರ ಜಿಲ್ಲೆಯಷ್ಟೇ ಅಲ್ಲಾ ಸುತ್ತಮುತ್ತ, ಜಿಲ್ಲೆಗಳ ರೈತರ ಬಾಳು ಬಂಗಾರವಾಗುತ್ತದೆ. ದಕ್ಷಿಣ ಭಾರತದಲ್ಲಿ ಅತಿ ಉದ್ದವಾದ ಸೇತುವೆಯನ್ನು ಕೃಷ್ಣಾ ನದಿಗೆ ಜಿಲ್ಲೆಯ ಕೊಲ್ಹಾರ ಗ್ರಾಮದ ಬಳಿ ಅಡ್ಡಲಾಗಿ ನಿರ್ಮಿಸಲಾಗಿದೆ. ಇನ್ನು ಡೋಣಿ ಹಾಗೂ ಭೀಮಾ ನದಿಗಳಿಂದ ಯಾವುದೇ ನೀರಾವರಿ ಯೋಜನೆಗೆ ಅನುಕೂಲವಾಗಿಲ್ಲ. ನೆರೆಯ ಮಹಾರಾಷ್ಟ್ರದಲ್ಲಿ ಬಾರೀ ಪ್ರಮಾಣದಲ್ಲಿ ಮಳೆಯಾದರೆ ಇಲ್ಲಿ ಪ್ರವಾಹವನ್ನು ಮೂರು ನದಿಗಳು ಉಂಟು ಮಾಡುತ್ತವೆ.

ಕೆಲವೇ ತಿಂಗಳಲ್ಲಿ ಲೋಹದ ಹಕ್ಕಿಗಳ ಹಾರಾಟ
ಜಿಲ್ಲೆಯಲ್ಲಿ ಜಲ, ಸೋಲಾರ, ಪವನ, ಕಲ್ಲಿದ್ದಲು ಮೂಲಕ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಆಲಮಟ್ಟಿ ಡ್ಯಾಂನಿಂದ ಹೊರ ಹರಿವಿನಿಂದ ಜಲ ವಿದ್ಯುತ್, ಕೂಡಗಿ ಉಷ್ಣ ವಿದ್ಯುತ್ ಸ್ಥಾವರದಿಂದ ಕಲ್ಲಿದ್ದಲು ಮೂಲಕ ವಿದ್ಯುತ್ ತಯಾರಿಕೆ, ಜಿಲ್ಲೆಯ ಹಲವಾರು ಭಾಗಗಳಲ್ಲಿ ವಿಂಡ್ ಪವರ್ ಹಾಗೂ ಸೋಲಾರ್ ಪವರ್ ಉತ್ಪಾದನೆ ಮಾಡಲಾಗುತ್ತಿದೆ. ಈ ಮೂಲಕ ಎಲ್ಲಾ ಮಾದರಿಯಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಜಿಲ್ಲೆಗಳ ಸಾಲಲ್ಲಿ ವಿಜಯಪುರ ಜಿಲ್ಲೆಯೂ ನಿಲ್ಲುವ ಗೌರವ ಪಡೆದುಕೊಂಡಿದೆ. ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ಸಾರಿಗೆ, ರೈಲು ಸಾರಿಗೆ ಅನುಕೂಲವಿದೆ. ಸದ್ಯ ನಗರದ ಹೊರ ಭಾಗದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದ್ದು, ಕೆಲವೇ ತಿಂಗಳಲ್ಲಿ ಲೋಹದ ಹಕ್ಕಿಗಳ ಹಾರಾಟ ನಡೆಯಲಿದೆ.

ಜಿಲ್ಲೆ ಏಕತೆಗೆ ಸಾಕ್ಷಿಯಾಗಿದೆ. ಬಸವಾದಿ ಶರಣ, ಸೂಫಿ ಸಂತರ, ಸ್ವಾಮೀಜಿಗಳ ನೆಲೆಯಾಗಿದೆ. ಇನ್ನು ಸ್ಮಾರಕಗಳ ಬೀಡಾಗಿರುವ ಜಿಲ್ಲೆ ಪ್ರವಾಸೋದ್ಯಮದಲ್ಲಿ ಗುರುತಿಸಿಕೊಂಡಿದ್ದರೂ ನಿರೀಕ್ಷಿತವಾದ ಪ್ರವಾಸೋದ್ಯಮ ಇಲ್ಲಿ ಬೆಳೆದಿಲ್ಲ. ವಿಶ್ವವಿಖ್ಯಾತ ಗೋಲಗುಮ್ಮಟ, ಬಾರಾಕಮಾನ್, ಇಬ್ರಾಹಿಂ ರೋಜಾ, ಗಗನ್ ಮಹಲ್, ಆನಂದ ಮಹಲ್, ಆಸರ್ ಮಹಲ್, ಉಪ್ಪಲಿ ಬುರ್ಜ್, ಬೇಸಿಗೆ ಅರಮನೆ, ಬಸವ ಸ್ಮಾರಕ, ಮಹಾನಂದಿಶ್ವರ ದೇವಸ್ಥಾನ, ಇಂಗಳೇಶ್ವರ ಸ್ಮಾರಕ, ವಚನ ಶಿಲಾ ಮಂಟಪ, ಶಿವಗಿರಿಯ ಬೃಹತ್ ಶಿವನ ಮೂರ್ತಿ, ಆಲಮಟ್ಟಿ ಡ್ಯಾಂ ಹಾಗೂ ವಿವಿಧ ಉದ್ಯಾನವನಗಳು ಪ್ರಮುಖ ಪ್ರವಾಸಿ ತಾಣಗಳಾಗಿವೆ. ಸಿದ್ದೇಶ್ವರ ದೇವಸ್ಥಾನ, ನೃಸಿಂಹ ದೇವಸ್ಥಾನ, ಜ್ಞಾನಯೋಗಾಶ್ರಮ, ಜೋಡ ಗುಮ್ಮಟ, ಹಾಸೀಂಪೀರ್ ದರ್ಗಾ, ಜುಮ್ಮಾ ಮಸೀದಿ, ಮಹಿಳೆಯರ ಮಸೀದಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ.

ಯುವಕರಿಗೆ ನಿರುದ್ಯೋಗ ಸಮಸ್ಯೆ
ಕೈಗಾರಿಕೆಗಳ ಅಭಿವೃದ್ಧಿಯೂ ಆಗಬೇಕಿದೆ. ಕೈಗಾರಿಕೆಗಳು ಇಲ್ಲದ ಕಾರಣ ಯುವಕರಿಗೆ ನಿರುದ್ಯೋಗ ಸಮಸ್ಯೆ ಉಂಟಾಗಿದೆ. ಸದ್ಯ ಕೈಗಾರಿಕಾ ಪ್ರದೇಶನಗಳ ಅಭಿವೃದ್ಧಿಯಾಗುತ್ತಿದ್ದರೂ ಸಹ ಕೈಗಾರಿಕೆಗಳು ಕೆಲಸ ನೀಡುವ ತಾಣವಾಗಬೇಕಿದೆ. ಆ ಮೂಲಕ ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ.

ವರದಿ: ಅಶೋಕ ಯಡಳ್ಳಿ

ಇದನ್ನೂ ಓದಿ

ವಿನಾಯಕನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಮುಸ್ಲಿಂ ಕುಟುಂಬ; ಇದು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕ

ಯುದ್ಧಾತಂಕ ಎದುರಾದ ಉಕ್ರೇನ್​​ನಿಂದ 242 ಭಾರತೀಯರನ್ನು ಕರೆತಂದ ಏರ್​ ಇಂಡಿಯಾ ವಿಮಾನ

Published On - 10:39 am, Wed, 23 February 22