Video: ಯುದ್ಧಾತಂಕ ಎದುರಾದ ಉಕ್ರೇನ್ನಿಂದ 242 ಭಾರತೀಯರನ್ನು ಕರೆತಂದ ಏರ್ ಇಂಡಿಯಾ ವಿಮಾನ
ಏರ್ ಇಂಡಿಯಾ ಈ ಹಿಂದೆ ಉಕ್ರೇನ್ಗೆ ಯಾವುದೇ ವಾಣಿಜ್ಯ ವಿಮಾನ ಕಾರ್ಯಾಚರಣೆ ನಡೆಸಿರಲಿಲ್ಲ. ಇದೀಗ ಏರ್ ಇಂಡಿಯಾ ವಿಮಾನ ಸಂಚಾರ ಪ್ರಾರಂಭ ಮಾಡಿದ ಬೆನ್ನಲ್ಲೇ, ಭಾರತದ ಇತರ ವಿಮಾನ ಆಪರೇಟರ್ಗಳೂ ಕೂಡ ಆಸಕ್ತಿ ತೋರಿಸುತ್ತಿದ್ದಾರೆ.
ಮುಂಬೈ: ಉಕ್ರೇನ್-ರಷ್ಯಾ ಗಡಿಯಲ್ಲಿ (Russia-Ukraine Border) ಉದ್ವಿಗ್ನತೆ ಮುಂದುವರಿದ ಬೆನ್ನಲ್ಲೇ ಭಾರತ ಉಕ್ರೇನ್ನಿಂದ ಭಾರತೀಯರನ್ನು ಕರೆತರಲು ನಿನ್ನೆಯಿಂದ ಏರ್ ಇಂಡಿಯಾ ವಿಮಾನ ಸಂಚಾರ ಶುರು ಮಾಡಿದೆ. ನಿನ್ನೆ (ಫೆ.22) ಈ ವಿಮಾನದಲ್ಲಿ ಉಕ್ರೇನ್ನಿಂದ 242 ಭಾರತೀಯರು ವಾಪಸ್ ದೇಶಕ್ಕೆ ಬಂದಿದ್ದಾರೆ. ಉಕ್ರೇನ್ನಿಂದ ಬಂದ ಏರ್ ಇಂಡಿಯಾ ವಿಮಾನ ನಿನ್ನೆ ರಾತ್ರಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Indira Gandhi International Airport) ಲ್ಯಾಂಡ್ ಆಗಿದೆ. ಈ ಬಗ್ಗೆ ಏರ್ ಇಂಡಿಯಾ ಪ್ರಕಟಣೆ ಹೊರಡಿಸಿದ್ದು, ಉಕ್ರೇನ್ನಲ್ಲಿರುವ ಭಾರತೀಯರನ್ನು ವಾಪಸ್ ಕರೆತರಲು ಮಂಗಳವಾರ ಮುಂಜಾನೆ 7.30ಕ್ಕೆ, ದೆಹಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ ವಿಮಾನ ಹೊರಟಿತ್ತು. ಸುಮಾರು 242 ಪ್ರಯಾಣಿಕರನ್ನು ಒಳಗೊಂಡ ಈ ವಿಮಾನ ಕೈವ್ನಿಂದ ಸಂಜೆ 5.40ಕ್ಕೆ ಟೇಕ್ ಆಫ್ ಆಯಿತು. ರಾತ್ರಿ 10.15ರ ಹೊತ್ತಿಗೆ ದೆಹಲಿ ತಲುಪಿದೆ ಎಂದು ಮಾಹಿತಿ ನೀಡಿದೆ.
ಸದ್ಯ ಉಕ್ರೇನ್ನಲ್ಲಿರುವುದು ಭಾರತೀಯರಿಗೆ ಸುರಕ್ಷಿತವಲ್ಲ. ಹೀಗಾಗಿ ಇಲ್ಲಿರುವ ವಿದ್ಯಾರ್ಥಿಗಳೂ ಸೇರಿ ಎಲ್ಲರೂ ಶೀಘ್ರದಲ್ಲೇ ಭಾರತಕ್ಕೆ ಮರಳಿ ಎಂದು ಕೈವ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹೇಳಿತ್ತು. ಅದರಂತೆ ಏರ್ ಇಂಡಿಯಾ ವಿಮಾನ ವ್ಯವಸ್ಥೆಯನ್ನೂ ಮಾಡಲಾಗಿದೆ. ಸದ್ಯ ಒಂದು ವಿಮಾನ ಭಾರತೀಯರನ್ನು ಕರೆತಂದಿದ್ದು, ಇನ್ನೊಂದು ಫ್ಲೈಟ್ ಗುರುವಾರ ಹಾಗೂ ಮತ್ತೊಂದು ವಿಮಾನ ಶನಿವಾರ ಉಕ್ರೇನ್ನಿಂದ ಭಾರತೀಯರನ್ನು ಕರೆ ತರಲಿದೆ.
#WATCH | Air India special flight carrying around 242 passengers from Ukraine reaches Delhi pic.twitter.com/ctuW0sA7UY
— ANI (@ANI) February 22, 2022
ಏರ್ ಇಂಡಿಯಾ ಈ ಹಿಂದೆ ಉಕ್ರೇನ್ಗೆ ಯಾವುದೇ ವಾಣಿಜ್ಯ ವಿಮಾನ ಕಾರ್ಯಾಚರಣೆ ನಡೆಸಿರಲಿಲ್ಲ. ಇದೀಗ ಏರ್ ಇಂಡಿಯಾ ವಿಮಾನ ಸಂಚಾರ ಪ್ರಾರಂಭ ಮಾಡಿದ ಬೆನ್ನಲ್ಲೇ, ಭಾರತದ ಇತರ ವಿಮಾನ ಆಪರೇಟರ್ಗಳೂ ಕೂಡ ಆಸಕ್ತಿ ತೋರಿಸುತ್ತಿದ್ದಾರೆ. ಉಕ್ರೇನ್ನಲ್ಲಿರುವ ಭಾರತೀಯರ ಬೇಡಿಕೆಯನ್ನು ನೋಡಿಕೊಂಡು ಮುಂದುವರಿಯಲಾಗುವುದು ಎಂದು ಸಿವಿಲ್ ಏವಿಯೇಶನ್ ಸಚಿವಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸದ್ಯ ಅಲ್ಲಿ ಯುದ್ಧ ಭೀತಿ ಇರುವ ಕಾರಣ, ಭಾರತೀಯರನ್ನು ರಕ್ಷಿಸುವ ಅಗತ್ಯವಿದೆ. ಹೀಗಾಗಿ ಹೆಚ್ಚೆಚ್ಚು ವಿಮಾನಗಳ ಕಾರ್ಯಾಚರಣೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಖಾಸಗಿ ಏರ್ಲೈನ್ಸ್ಗಳ ನಡುವೆ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ವಿನಾಯಕನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಮುಸ್ಲಿಂ ಕುಟುಂಬ; ಇದು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕ
Published On - 8:53 am, Wed, 23 February 22