ವಿಜಯಪುರ: ಶೀಘ್ರವೇ ಹಡಪದ ಅಪ್ಪಣ್ಣ ಸಮುದಾಯಕ್ಕೆ (Hadapada Appanna community) ನಿಗಮ ಸ್ಥಾಪಿಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದಲ್ಲಿ ನಡೆದ ಹಡಪದ ಅಪ್ಪಣ್ಣ ಸಮಾಜದ ರಾಜ್ಯ ಮಟ್ಟದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿ, ವೃತ್ತಿ ಆಧರಿತ ಕುಲ ಕಸಬುಗಳನ್ನು ನಿಗಮದ ಮೂಲಕ ಸೇರಿಸುತ್ತೇವೆ. ನಾನು ಸಿಎಂ ಆದ ಬಳಿಕ ಕ್ಷೇತ್ರಕ್ಕೆ 3 ಕೋಟಿ ಅನುದಾನ ನೀಡಿದ್ದೇನೆ. ಈ ಅನುದಾನದಲ್ಲಿ ಕಟ್ಟಡ ನಿರ್ಮಿಸಿ, ಮುಂದೆ ನಾನು ಸಹಕರಿಸ್ತೇನೆ. ಕಾಯಕ ಆಧರಿತ ಕರಕುಶಲ ಯೋಜನೆ ಮಾಡಿದ್ದು ನಮ್ಮ ಸರ್ಕಾರ. ಮೊದಲು ನೀವೆಲ್ಲಾ ನೈದರು ಎಂಬ ಸಮುದಾಯದ ಹೆಸರಿನಲ್ಲಿ ಒಟ್ಟಾಗಿದ್ರಿ. 2013ರಲ್ಲಿ ಇದನ್ನು ತೆಗೆದು ನಿಮ್ಮನ್ನು ಇತರ ಸಮಾಜದಲ್ಲಿ ವಿಂಗಡಿಸಿದ್ರು. ಸಣ್ಣ ಸಮುದಾಯಗಳು ಒಗ್ಗಟ್ಟಾಗಿದ್ದರೆ ಅನುಕೂಲವಾಗುವುದಿಲ್ಲ. ಪಟ್ಟಭದ್ರ ಹಿತಾಸಕ್ತಿಗಳಿಗೆ ಅನುಕೂಲವಾಗಲ್ಲ, ಹೀಗಾಗಿ ಹೀಗೆ ಮಾಡಿದ್ದಾರೆ. ಆದ್ರೆ ಈಗ ನಿವೆಲ್ಲಾ ಒಟ್ಟಾಗಿದ್ದೀರಿ, ಇನ್ಮುಂದೆ ನಿಮಗೆ ಅನುಕೂಲವಾಗುತ್ತೆ. ನನಗೆ ಅಧುನಿಕ ಬಸವಣ್ಣ, ಎರಡನೇ ಬಸವಣ್ಣ ಎಂದು ಕರೆಯಬೇಡಿ. ನಾನು ಬಸವಣ್ಣನವರ ಕಾಲಿನ ಧೂಳಿಗೂ ಸಮನಲ್ಲ ಎಂದು ಹೇಳಿದರು.
ಇನ್ನು ಕೇಂದ್ರ ಬಜೆಟ್‌ಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ ಕೇಂದ್ರ ಬಜೆಟ್‌ನಲ್ಲಿ ಕೃಷಿ, ರೈತರಿಗೆ ಒತ್ತು ಕೊಟ್ಟಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ದೊಡ್ಡ ಕೊಡುಗೆಯನ್ನೇ ಕೊಟ್ಟಿದ್ದಾರೆ. ಯುವಕರಿಗೆ ಉದ್ಯೋಗ, ಕೈಗಾರಿಕೆ, ರೈಲ್ವೆ ಇಲಾಖೆಗೆ ಅನುದಾನ ನೀಡಿದ್ದಾರೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್‌ಗೆ ಹೆಚ್ಚು ಒತ್ತು ನೀಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಸಿಕ್ಕಿರುವ ಕೊಡುಗೆ ಬಗ್ಗೆ ವಿವರಿಸಲಿರುವ ಸಿಎಂ
ಇನ್ನು ಸಮಾವೇಶದಲ್ಲಿ ಹಡಪದ ಅಪ್ಪಣ್ಣ ಪೀಠದ ಅನ್ನದಾನಿ ಭಾರತಿ ಸ್ವಾಮೀಜಿ ಮಾತನಾಡಿ, 2ಎ ಕೆಟಗರಿಯಲ್ಲಿರುವ ಹಡಪದ ಸಮುದಾಯವನ್ನ ಎಸ್ಸಿ ಕೆಟಗರಿಗೆ ಸೇರಿಸಬೇಕೆಂದು ಸಿಎಂ ಬೊಮ್ಮಾಯಿಗೆ ಒತ್ತಾಯಿಸಿದರು. ಹಡಪದ ಸಮುದಾಯ ಲಿಂಗಾಯತ ಸಮುದಾಯದಲ್ಲಿದ್ದರೂ ನಮ್ಮನ್ನ ಕೀಳಾಗಿ ಕಾಣಲಾಗುತ್ತಿದೆ. ನಮ್ಮ ಸಮುದಾಯಕ್ಕೆ ನ್ಯಾಯ ಸಿಗಬೇಕು. ನಮ್ಮ ಸಮುದಾಯವನ್ನ ಎಸ್ಸಿಗೆ ಸೇರಿಸಿ ಎಂದು ಹಡಪದ ಅಪ್ಪಣ್ಣ ಪೀಠದ ಸ್ವಾಮೀಜಿಗಳು ಹೇಳಿದರು.
ಬಸವರಾಜ ಬೊಮ್ಮಾಯಿ ಅವರು ಇಂದು(ಫೆಬ್ರವರಿ 01) ಜಿಲ್ಲಾ ಪ್ರವಾಸದಲ್ಲಿರುವ ಕಾರಣ ನಾಳೆ ಬೆಳಗ್ಗೆ ಸುದ್ದಿಗೊಷ್ಠಿ ನಡೆಸಿ ಕೇಂದ್ರದ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಲಿದ್ದಾರೆ. ಕೇಂದ್ರದ ಬಜೆಟ್ ನಲ್ಲಿ ರಾಜ್ಯಕ್ಕೆ ಏನೆಲ್ಲ ಕೊಡುಗೆ ಸಿಕ್ಕಿದೆ ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಕರುನಾಡು ಎಲೆಕ್ಷನ್ ರಣೋತ್ಸಾಹದಲ್ಲಿ ಇರೋವಾಗಲೇ ಪ್ರಧಾನಿ ಮೋದಿ ಸರ್ಕಾರ ಬಂಪರ್ ಗಿಫ್ಟ್ ನೀಡಿದೆ. ರಾಜ್ಯದ ಜನರ ದಾಹ ನೀಗಿಸಲು.. ಅನ್ನದಾತರ ಬದುಕು ಹಸನು ಮಾಡಲು ಕೇಂದ್ರ ಸರ್ಕಾರ ಮಹತ್ವದ ಘೊಷಣೆ ಮಾಡಿದೆ. ನೀರಾವರಿ ಉದ್ದೇಶಕ್ಕಾಗಿ ಜಾರಿಗೊಳಿಸಿರೋ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಮೀಸಲಿಡೋದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಘೋಷಣೆ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:17 pm, Wed, 1 February 23