ವಿಜಯಪುರ, ಅ.2023: ರಾಜ್ಯದಲ್ಲಿ ಭೀಕರ ಬರದ (Drought) ಮಧ್ಯೆ ವಿದ್ಯುತ್ ಕಣ್ಣಾಮುಚ್ಚಾಲೆ (Electricity Issue) ಆಡುತ್ತಿದ್ದು ರೈತರಿಗೆ ಸಂಕಷ್ಟ ಎದುರಾಗಿದೆ. ಇತ್ತೀಚೆಗೆ ಸರ್ಕಾರ ಅನಿಯಮಿತವಾಗಿ ಲೋಡ್ ಶೆಡ್ಡಿಂಗ್ (Load Shedding) ಮಾಡುತ್ತಿದ್ದು ಅದು ಅನ್ನದಾತರ ಕಣ್ಣೀರಿಗೆ ಕಾರಣವಾಗಿದೆ. ಮಳೆಯಿಲ್ಲದ ಕಾರಣ ಕೊಳವೆ ಬಾವಿ ಇದ್ದವರು ಜೀವನೋಪಾಯಕ್ಕೆ ತೋಟಗಾರಿಕೆ ಹಾಘೂ ಇತರೆ ಬೆಳೆಗಳನ್ನು ಬೆಳೆಸಿದ್ದಾರೆ. ಸದ್ಯ ವಿದ್ಯುತ್ ಸರಿಯಾಗಿ ಸಿಗದ ಕಾರಣ ಸಮರ್ಪಕ ನೀರು ಬಿಡಲಾಗದೇ ಬೆಳೆಗಳು ಒಣಗುತ್ತಿವೆ. ಕಳೆದ ಮೂರು ತಿಂಗಳಿನಿಂದ ಇದೇ ಸಮಸ್ಯೆಯಾಗಿದೆ. ಹಗಲು ಹೊತ್ತಿನಲ್ಲಿ 3 ಗಂಟೆ ರಾತ್ರಿ ವೇಳೆ 4 ಗಂಟೆಗಳ ಕಾಲ ತ್ರೀಪೇಸ್ ವಿದ್ಯುತ್ ನೀಡೋದಾಗಿ ಹೆಸ್ಕಾಂನವರು ಹೇಳಿದ್ದರು. ಆದರೆ ಹಗಲಿನಲ್ಲಿ ಒಂದು ಗಂಟೆ, ರಾತ್ರಿ 2 ಗಂಟೆಯೂ ನಿರಂತರ ವಿದ್ಯುತ್ ಸಹ ಸಿಗುತ್ತಿಲ್ಲ.
ಇನ್ನು ವಿಜಯಪುರ ಜಿಲ್ಲೆಯಲ್ಲಿ ಲೋಡ್ ಶೆಡ್ಡಿಂಗ್ ಬಗ್ಗೆ ಹೆಸ್ಕಾಂ ಆಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು ಸಮಸ್ಯೆಗೆ ಕಾರಣವನ್ನು ವಿವರಿಸಿದ್ದಾರೆ. ವಿಜಯಪುರ ಹೆಸ್ಕಾಂ ಇಇ ಮಹಾಂತೇಶ ಚೆನಗೊಂಡ ಅವರು ಟಿವಿ9 ಜೊತೆ ಎಲ್ಲಾ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ರಾಜ್ಯದಲ್ಲಿ ಬೇಡಿಕೆಗಿಂತ ವಿದ್ಯುತ್ ಪೂರೈಕೆ ಕಡಿಮೆಯಾಗಿದೆ. ಈ ಬಾರಿ 40 ಪ್ರತಿಶತ ಹೆಚ್ಚು ಪ್ರಮಾಣದ ವಿದ್ಯುತ್ ಬೇಡಿಕೆ ಉಂಟಾಗಿದೆ.
ಮಳೆಯಾಗದೇ ಇರುವುದೇ ಇದಕ್ಕೆ ಪ್ರಮುಖ ಕಾರಣ. ಪ್ರತಿ ವರ್ಷ ಈ ದಿನಗಳಲ್ಲಿ ಮಳೆಯಾಗುತ್ತಿತ್ತು. ಸರಿಯಾದ ಸಮಯಕ್ಕೆ ಮಳೆಯಾಗುತ್ತಿದ್ದ ಕಾರಣ ಹೆಚ್ಚಿನ ರೈತರು ಕೊಳವೆ ಬಾವಿಯ ನೀರನ್ನು ಅವಲಂಬಿಸುತ್ತಿರಲಿಲ್ಲಾ. ಆದರೆ ಈ ಬಾರಿ ಮಳೆ ಆಗದ ಕಾರಣ ರೈತರು ಬಾವಿ ನೀರಿಗೆ ಅವಲಂಬಿಸಿದ್ದಾರೆ. ಹೀಗಾಗಿ ಹೆಚ್ಚಿನ ವಿದ್ಯುತ್ ಬೇಡಿಕೆ ಉಂಟಾಗಿದೆ ಎಂದು ಹೆಸ್ಕಾಂ ಇಇ ತಿಳಿಸಿದರು.
ಸದ್ಯ ಮಳೆಯಾದರೆ ವಿದ್ಯುತ್ ಬೇಡಿಕೆ ಪ್ರಮಾಣ ಕಡಿಮೆಯಾಗಲಿದೆ. ಮುಂದಿನ ಮಳೆಗಾಲದವರೆಗೂ ಈ ಸಮಸ್ಯೆ ಮುಂದುವರೆಯಲಿದೆ. ಹೆಚ್ಚಿನ ದರ ನೀಡಿ ವಿದ್ಯುತ್ ಖರೀದಿ ಮಾಡಲು ಮುಂದಾದರೂ ವಿದ್ಯುತ್ ಸಿಗುತ್ತಿಲ್ಲ. ಪ್ರತಿ ಯುನಿಟ್ಗೆ ಸದ್ಯ 7 ರಿಂದ 8 ರೂಪಾಯಿ ನೀಡಿ ಖರೀದಿ ಮಾಡುತ್ತಿದ್ದೇವೆ. ಹೆಚ್ಚಿನ ದರ ನೀಡುತ್ತೇವೆಂದರೂ ವಿದ್ಯುತ್ ಸಿಗುತ್ತಿಲ್ಲ.
ಇದನ್ನೂ ಓದಿ: ರೈತರಿಗೆ ಲೋಡ್ಶೆಡ್ಡಿಂಗ್ ಶಾಕ್: ಪಂಪ್ಸೆಟ್ಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಅನ್ನದಾತ ಕೆಂಡಾಮಂಡಲ
ಇಂಧನ ಇಲಾಖೆ ಸಚಿವರು ಹಾಗೂ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಲಿದೆ. ವಿದ್ಯುತ್ ಖರೀದಿ ಮಾಡಿ ನೀಡುವ ಚಿಂತನೆ ಸರ್ಕಾರದ ಮಟ್ಟದಲ್ಲಿದೆ.
ವಿಜಯಪುರ ಜಿಲ್ಲಾ ಹಸ್ಕಾಂ ವ್ಯಾಪ್ತಿಯಲ್ಲಿ 2 ಲಕ್ಷಕ್ಕೂ ಆಧಿಕ ಪಂಪ್ ಸೆಟ್ಗಳಿವೆ. ಇಂದಿನಿಂದ ನಿತ್ಯ ಹಗಲು ವೇಳೆ 3 ಗಂಟೆಗಳ ಕಾಲ ತ್ರೀಫೇಸ್ ವಿದ್ಯುತ್ ನೀಡಲು ಕ್ರಮ ಕೈಗೊಳ್ಳಲಾಗುತ್ತೆ. ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದ ವಿದ್ಯುತ್ ನೀಡಲು ನಾವು ಶ್ರಮಿಸುತ್ತೇವೆ ಎಂದು ಹೆಸ್ಕಾಂ ಆಧಿಕಾರಿಗಳು ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ