ವಿಜಯಪುರ: ಕ್ರೆಡಿಟ್ ಸೌಹಾರ್ದ ಸಹಕಾರಿ ವಿಜಯಪುರ ಜಿಲ್ಲೆ ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಶಾಖೆಗಳನ್ನು ಹೊಂದಿತ್ತು. ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಸಾವಿರಾರು ಜನರು ತಮ್ಮ ಹಣವನ್ನು ಇಟ್ಟಿದ್ದರು. ಹೆಚ್ಚಿನ ಬಡ್ಡಿಯ ಆಸೆಯಿಂದ ಕೈಲಿದ್ದ ಹಣವೆಲ್ಲ ಸೌಹಾರ್ದ ಸಹಕಾರಿ ಖಾತೆಗೆ ಹಾಕಿದ್ದರು. ಆದರೆ ಮುಂದೆ ನಡೆದಿದ್ದೇ ದುರಂತ. ಠೇವಣಿಯಿಟ್ಟ ಹಣದ ಮೆಚ್ಯೂರಿಟಿಯಾದರೂ ಹಣವಿಟ್ಟವರ ಕೈಗೆ ಠೇವಣಿ ಹಣ ಬಾರದಂತಾಗಿತ್ತು. ಸೌಹಾರ್ದ ಸಹಕಾರಿ ದಿವಾಳಿಯಾಗಿ ಕೊನೆಗೆ ಸಿಐಡಿ ತನಿಖೆಯೂ ನಡೆಯಿತು. ಇದರಲ್ಲಿ ವಂಚನೆ ಮಾಡಿದವರು ಜೈಲು ಸೇರಿದ್ದಾರೆ. ಆದರೆ ಇಲ್ಲಿಯವರೆಗೂ ಠೇವಣಿದಾರರ ಹಣ ಮಾತ್ರ ಸಿಕ್ಕಿಲ್ಲ. ಹೀಗಾಗಿ ಠೇವಣಿಯಿಟ್ಟವರು ನಮ್ಮ ಹಣ ನಮಗೆ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ.
ವಿಜಯಪುರ ಜಿಲ್ಲೆ ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಎಸ್ಎಂಎನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ 2009 ರಿಂದ ಕಾರ್ಯ ನಿರ್ವಹಿಸುತ್ತಿತ್ತು. ಒಟ್ಟು 21 ಶಾಖೆಗಳನ್ನು ಹೊಂದಿತ್ತು. ಆರಂಭದಲ್ಲಿ ಎಲ್ಲಾ ವ್ಯವಹಾರಗಳನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿದ್ದ ಇದು ನಂತರದ ವರ್ಷಗಳಲ್ಲಿ ಮಾಡಿದ್ದೇ ಬೇರೆ. ಒಟ್ಟು 16,000 ಗ್ರಾಹಕರಿದ್ದು, ಇಲ್ಲಿ ಹೆಚ್ಚಿನ ಬಡ್ಡಿ ಬರುತ್ತದೆ ಎಂದು ಹಣವನ್ನು ಠೇವಣಿಯಾಗಿಟ್ಟವರು ಠೇವಣಿ ಅವಧಿ ಮುಗಿದರೂ ತಮ್ಮ ಹಣ ವಾಪಸ್ ಪಡೆಯಲು ಅಸಾಧ್ಯವೇ ಆಗಿತ್ತು.
ಎಸ್ಎಂಎನ್ ಕ್ರೆಡಿಟ್ ಸೌಹಾರ್ದದ ಅಧ್ಯಕ್ಷ ಅನೀಲ ದೇಶಪಾಂಡೆ, ಉಪಾಧ್ಯಕ್ಷ ಶಂಕರ ವಿ. ನಾಯ್ಕರ ಹಾಗೂ ಆಡಳಿತ ಮಂಡಳಿ ಆಧಿಕಾರ ದುರಪಯೋಗ, ಸಾಲ ಮರು ವಸೂಲಾತಿ ಮಾಡದೇ ನಿರ್ಲಕ್ಷ್ಯ ವಹಿಸಿದ್ದು, ನೇರವಾಗಿ ಠೇವಣಿದಾರರ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಿತ್ತು. ಮಕ್ಕಳ ಶಿಕ್ಷಣ, ವಿವಾಹ, ಚಿಕಿತ್ಸೆ, ಮನೆ ನಿರ್ಮಾಣ ಸೇರಿದಂತೆ ಇತ್ಯಾದಿ ಆವಶ್ಯಕ ಅಗತ್ಯೆಗಳಿಗೆ ಹಣ ಬರುತ್ತದೆ ಎಂದು ಠೇವಣಿ ಇಟ್ಟವರು ಹಣ ಸಿಗದೇ ಕಂಗಾಲಾಗಿದ್ದಾರೆ. 29.29 ಕೋಟಿ ಹಣ ಠೇವಣದಾರರಿಗೆ ವಾಪಸ್ ಬರಬೇಕಿತ್ತು. ಆದರೆ ಠೇವಣಿದಾರರ ಸಮಸ್ಯೆಗೆ ಯಾರೋಬ್ಬರೂ ಸ್ಪಂದನೆಯನ್ನೇ ನೀಡಲಿಲ್ಲ.
ಪರಿಣಾಮ ಮೋಸ ಹೋದ ಗ್ರಾಹಕರು ಸೇರಿ ವಿಜಯಪುರ ಜಿಲ್ಲಾ ಸಹಕಾರಿ ಇಲಾಖೆಯ ಕಚೇರಿ ಎದುರಿಗೆ ಕಳೆದ 2020ರ ನವೆಂಬರ್ನಲ್ಲಿ ಧರಣಿ, ಸತ್ಯಾಗ್ರಹ ಆರಂಭಿಸಿದ್ದರು. ಇದು ಗಂಭೀರತೆ ಪಡೆದು ಇಡೀ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಸಿಐಡಿ ಡಿವೈಎಸ್ಪಿ ಪ್ರಕಾಶ ರಾಠೋಡ ನೇತೃತ್ವದ ತಂಡ ತನಿಖೆ ನಡೆಸಿ ಆಡಳಿತ ಮಂಡಳಿ ಹಾಗೂ ಕೆಲ ಸಿಬ್ಬಂದಿಗಳ ತಪ್ಪುಗಳನ್ನು ಕಂಡು ಹಿಡಿದಿತ್ತು. ಎಸ್ಎಂಎನ್ ಕ್ರೆಡಿಟ್ ಸೌಹಾರ್ದದ ಅಧ್ಯಕ್ಷ ಅನೀಲ ದೇಶಪಾಂಡೆ, ಉಪಾಧ್ಯಕ್ಷ ಶಂಕರ ವಿ. ನಾಯ್ಕರ, ಗುಮಾಸ್ತ ಮೊಹ್ಮದ ಯುಸೂಫ್ ಭಾಗವಾನ, ಸಿಸ್ಟಮ್ ಎಡ್ಮಿನ್ ರಾಮು ಬಂಡಿವಾಡ, ಕಂಪ್ಯೂಟರ್ ಹಾರ್ಡವೇರ್ ಉಸ್ತುವಾರಿ ಶ್ರೀಧರ ಕಾತರಕಿ ಎಂಬುವವರನ್ನು ಬಂಧಿಸಿತ್ತು. ಇದರ ಬೆನ್ನಲ್ಲೇ ಜಿಲ್ಲಾಡಳಿತ ಠೇವಣಿದಾರರ ಹಣ ವಾಪಸ್ಸಾತಿಗೆ ಕ್ರಮ ತೆಗೆದುಕೊಂಡಿತ್ತು.
ಎಸ್ಎಂಎನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಸಾಲ ಪಡೆದವರು ಸಾಲ ಮರು ಪಾವತಿ ಮಾಡಲು ವಿಶೇಷ ಅಕೌಂಟ್ ಓಪನ್ ಮಾಡಿದೆ. ಜಲನಗರ ಕೆನೆರಾ ಬ್ಯಾಂಕ್ನಲ್ಲಿ ಕಂಪೆಂಟೆಂಟ್ ಅಥಾರಿಟಿ ಎಸ್ಎಂಎನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ, ವಿಜಯಪುರ ಆ್ಯಂಡ್ ಅಸಿಷ್ಟಂಟ್ ಕಮೀಷನರ್ ಸಬ್ ಡಿವಿಜನ್ ವಿಜಯಪುರ ಹೆಸರಿನ ಉಳಿತಾಯ ಖಾತೆ ತೆರೆಯಲಾಗಿದೆ. ಖಾತೆ ನಂಬರ್ 110024473463 ಆಗಿದ್ದು, ಈ ಖಾತೆಗೆ ಎಸ್ಎಂಎನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಸಾಲ ಪಡೆದವರು ಸಾಲ ಮರು ಪಾವತಿ ಮಾಡಬೇಕೆಂದು ಜಿಲ್ಲಾಡಳಿತ ಸೂಚಿಸಿದೆ.
ಈ ಕುರಿತು ಹೆಚ್ಚಿನ ಆಧಿಕಾರವನ್ನು ವಿಜಯಪುರ ಉಪ ವಿಭಾಗಾಧಿಕಾರಿಗಳಿಗೆ ನೀಡಲಾಗಿದೆ. ಸದ್ಯ ಕೆಲ ಸಾಲಗಾರರು ಸಾಲ ಮರುಪಾವತಿ ಮಾಡೋದಾಗಿ ಹೇಳಿದ್ದಾರೆ. ಆದರೆ ಇಲ್ಲಿಯವರೆಗೂ ಮಾಡಿಲ್ಲ. ಠೇವಣಿದಾರರ ಹಣ ವಾಪಸ್ ಮಾಡುವ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಹೇಳಿದ್ದಾರೆ.
ಸಿಐಡಿ ತನಿಖೆಯ ಬಳಿಕ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಠೇವಣಿ ಹಣವಿಟ್ಟವರಿಗೆ ಇನ್ನಾದರೂ ನಮ್ಮ ಹಣ ವಾಪಸ್ ಬರುತ್ತದೆ ಎಂದು ಭರವಸೆ ಜನರಲ್ಲಿ ಹುಟ್ಟಿತ್ತು. ಆದರೆ ಠೇವಣಿ ಹಣ ವಾಪಸ್ಸಾತಿಗೆ ಧರಣಿ ಸತ್ಯತಾಗ್ರಹ ನಡೆಸಿ ಒಂದು ವರ್ಷವಾಗುತ್ತಾ ಬಂದರೂ ಸಹ ಠೇವಣಿ ಹಣ ಸಿಕ್ಕಿಲ್ಲ. ಹಲವಾರು ವರ್ಷಗಳಿಂದ ಠೇವಣಿ ಇಟ್ಟ ಹಣ ವಾಪಸ್ ಬಾರದ ಕಾರಣ ಕಂಗಾಲಾಗಿದ್ದವರಿಗೆ ಭರವಸೆ ಮೂಡಿಸಿದ್ದ ಸಿಐಡಿ ತನಿಖೆಯ ಬಳಿಕವೂ ಹಣ ಸಿಗದೇ ಇರುವುದು ಬೇಸರ ತರಿಸಿದೆ.
ವರದಿ: ಅಶೋಕ ಯಡಳ್ಳಿ
ಇದನ್ನೂ ಓದಿ:
Nagshekar: 50 ಲಕ್ಷ ರೂ ವಂಚನೆಯಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಖ್ಯಾತ ನಿರ್ದೇಶಕ ನಾಗಶೇಖರ್
Published On - 9:30 am, Sat, 25 December 21