ವಿಜಯಪುರ, ಜು.21: ಮಹಾರಾಷ್ಟ್ರ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣ ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ(Lal Bahadur Shastri Sagar Dam) ಕ್ಕೆ ಒಂದೇ ದಿನದಲ್ಲಿ ಒಳಹರಿವು ದ್ವಿಗುಣಗೊಂಡಿದೆ. ಪರಿಣಾಮ ಜಲಾಶಯದಿಂದ ಕೃಷ್ಣಾ ನದಿಗೆ ಬಿಡುತ್ತಿರುವ ನೀರಿನ ಪ್ರಮಾಣ ಸಂಜೆ ವೇಳೆಗೆ ಒಂದೂವರೆ ಲಕ್ಷ ಕ್ಯೂಸೆಕ್ ಮೀರಿದೆ. ಇಂದು (ಭಾನುವಾರ) ಬೆಳಿಗ್ಗೆ ಜಲಾಶಯಕ್ಕೆ 87,127 ಕ್ಯೂಸೆಕ್ ಇದ್ದ ಒಳಹರಿವು, ಮಧ್ಯಾಹ್ನದ ವೇಳೆಗೆ 1.25 ಲಕ್ಷಕ್ಕೆ ಏರಿಕೆಯಾಗಿತ್ತು. ಪರಿಣಾಮ ಬೆಳಿಗ್ಗೆ 8 ಕ್ಕೆ 99,584 ಕ್ಯೂಸೆಕ್ ಇದ್ದ ಜಲಾಶಯದ ಹೊರ ಹರಿವಿನ ಪ್ರಮಾಣ ಮಧ್ಯಾಹ್ನದ ವೇಳೆಗೆ 1.25 ಲಕ್ಷ ಕ್ಯೂಸೆಕ್ ಗೆ ಏರಿತ್ತು.
ನಂತರ ಸಾಯಂಕಾಲದ ವೇಳೆಗೆ ಶಾಸ್ತ್ರೀ ಸಾಗರಕ್ಕೆ ಹರಿದು ಬರುತ್ತಿದ್ದ ನೀರಿನ ಪ್ರಮಾಣ 1.25 ಲಕ್ಷ ಕ್ಯೂಸೆಕ್ ಗೆ ಏರಿಕೆಯಾದರೆ ಹೊರ ಹರಿವಿನ ಪ್ರಮಾಣ 1.50 ಲಕ್ಷ ಕ್ಯೂಸೆಕ್ ಗೆ ಏರಿಕೆಯಾಗಿದೆ. ಶನಿವಾರ ರಾತ್ರಿಯಿಂದಲೇ ಜಲಾಶಯಕ್ಕೆ ಒಳಹರಿವಿನ ಪ್ರಮಾಣದ ಭಾರಿ ಏರಿಕೆ ಕಂಡು ಬರುತ್ತಲೇ ಇತ್ತು.
ಇದನ್ನೂ ಓದಿ: ಆಲಮಟ್ಟಿಗೆ 3 ದಿನಗಳಲ್ಲಿ 6 ಟಿಎಂಸಿ ಒಳಹರಿವು, ಜು.05ರ ರಾಜ್ಯದ ಡ್ಯಾಂಗಳ ನೀರಿನ ಮಟ್ಟ ವಿವರ ಹೀಗಿದೆ
ಇದನ್ನರಿತ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಭಾನುವಾರ ಬೆಳಗಿನಿಂದಲೇ ಕೃಷ್ಣಾ ನದಿ ಮೂಲಕ ಬಸವ ಸಾಗರ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿ ಬಿಡಲು ಆರಂಭಿಸಿದ್ದರು. ಕಾರಣ, ಶಾಸ್ತ್ರಿ ಸಾಗರದಿಂದ ಕಾಲ ಕಾಲಕ್ಕೆ ನದಿಗೆ ಬಿಡುತ್ತಿರುವ ನೀರಿನ ಕುರಿತು ನದಿ ತೀರದ ಜನರಿಗೆ ಮಾಹಿತಿ ನೀಡುತ್ತ, ಪ್ರವಾಹದ ಮುನ್ನೆಚ್ಚರಿಕೆ ನೀಡಿದ್ದಾರೆ. ಸೂಕ್ತ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ