ಆರೋಪ ಸಾಬೀತು ಮಾಡದಿದ್ದಲ್ಲಿ ಪಾಕ್​ಗೆ ಪಲಾಯನ ಮಾಡ್ಬೇಕು: ಧರ್ಮಗುರು ಸವಾಲು ಸ್ವೀಕರಿಸ್ತಾರಾ ಯತ್ನಾಳ್?

| Updated By: ರಮೇಶ್ ಬಿ. ಜವಳಗೇರಾ

Updated on: Dec 07, 2023 | 10:13 AM

ಮುಸ್ಲಿಂ ಧರ್ಮ ಗುರು ಸಯ್ಯದ್ ಮೊಹಮ್ಮದ್ ತನ್ವೀರ್ ಪೀರಾ ಹಾಸ್ಮಿಗೆ ಐಸಿಸ್ ನಂಟಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿರುವ ಗಂಭೀರ ಆರೋಪ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಯತ್ನಾಳ್ ಆರೋಪಕ್ಕೆ ಸ್ವತಃ ಸಯ್ಯದ್ ಮೊಹಮ್ಮದ್ ತನ್ವೀರ್ ಪೀರಾ ಹಾಸ್ಮಿ ಪ್ರತಿಕ್ರಿಯಿಸಿದ್ದು, ತಮ್ಮ ಮೇಲಿನ ಆರೋಪ ಸಾಬೀತು ಮಾಡಿದರೆ ದೇಶ ಬಿಟ್ಟು ಹೋಗುತ್ತೇನೆ. ಸಾಬೀತು ಮಾಡದಿದ್ದಲ್ಲಿ ನೀವು ದೇಶ ಬಿಟ್ಟು ಪಲಾಯನ ಮಾಡಬೇಕೆಂದು ಸವಾಲ್ ಹಾಕಿದ್ದಾರೆ.

ಆರೋಪ ಸಾಬೀತು ಮಾಡದಿದ್ದಲ್ಲಿ ಪಾಕ್​ಗೆ ಪಲಾಯನ ಮಾಡ್ಬೇಕು: ಧರ್ಮಗುರು ಸವಾಲು ಸ್ವೀಕರಿಸ್ತಾರಾ ಯತ್ನಾಳ್?
Follow us on

ವಿಜಯಪುರ, (ಡಿಸೆಂಬರ್ 07): ಹುಬ್ಬಳ್ಳಿಯಲ್ಲಿ ಮೊನ್ನೆ ನಡೆದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಮೌಲ್ವಿ ಸಯ್ಯದ್ ಮೊಹಮ್ಮದ್ ತನ್ವೀರ್ ಪೀರಾ ಗೆ ಐಸಿಸ್ ಲಿಂಕ್ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕೇವಲ ಆರೋಪ ಮಾಡಿ ಸುಮ್ಮನಾಗದ ಬಸನಗೌಡ ಪಾಟೀಲ್ ಯತ್ನಾಳ್(basanagouda patil yatnal), ಮೌಲ್ವಿ ಅವರ ಒಂದಿಷ್ಟು ಫೋಟೋಗಳನ್ನ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಯತ್ನಾಳ್​ ಆರೋಪಕ್ಕೆ ಪ್ರತದ ಮೂಲಕ ಮುಸ್ಲಿಂ ಧರ್ಮಗುರು ಸಯ್ಯದ್ ಮೊಹಮ್ಮದ್ ತನ್ವೀರ್ ಪೀರಾ ಹಾಸ್ಮಿ ಉತ್ತರ ನೀಡಿದ್ದು, ಒಂದು ವೇಳೆ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ ಸಾಬೀತಾದರೆ ನಾನು ಈ ದೇಶವನ್ನು ತ್ಯಾಗ ಮಾಡಿ ಪಲಾಯನ ಮಾಡುತ್ತೇನೆ. ಸಾಬೀತು ಮಾಡದಿದ್ದರೆ ಯತ್ನಾಳ್​ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಾಕಿಸ್ತಾನಕ್ಕೆ ಪಲಾಯನ ಮಾಡಬೇಕೆಂದು ಸವಾಲು ಹಾಕಿದ್ದಾರೆ.

ನನ್ನ ಮೇಲೆ ಯತ್ನಾಳ್​ ಮಾಡಿರೋ ಆರೋಪಗಳಲ್ಲಿ ಸತ್ಯಾಂಶಗಳಿಲ್ಲ. 04-12-2023ರಂದು ಹುಬ್ಬಳ್ಳಿಯಲ್ಲಿ ನಡೆದ ಅವಲಾದ ಗೌಸ ಎ ಆಜಮ್ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದೆ ಇದೇ ವೇದಿಕೆಯಲ್ಲಿ ವಿವಿಧ ದರ್ಗಾದ ಪೀಠಾಧೀಶರು ರಾಜಕೀಯ ಧುರೀಣರು, ಸಿಎಂ ಸಿದ್ದರಾಮಯ್ಯ, ಕಾನೂನು ಸಚಿವ ಎಚ್ ಕೆ ಪಾಟೀಲ್ ಹಾಗೂ ಇತರೆ ಮಂತ್ರಿಗಳು ಶಾಸಕರು ಉಪಸ್ಥಿತರಿದ್ದರು. ಸಿಎಂ ಯಾವುದೇ ಕೋಮಿನವರಿಗೆ ಅಥವಾ ಸಮಾಜದವರಿಗೆ ಸೀಮಿತವಾಗಿಲ್ಲ. ರಾಜಕಾರಣದಲ್ಲಿ ಎಲ್ಲಾ ಧರ್ಮ ಮತ್ತು ಜಾತಿಗಳ ಸೇವೆ ಮಾಡುವುದು ಮುಖ್ಯಮಂತ್ರಿಗಳ ಕಾರ್ಯ. ಸಿಎಂ ಅವರ ಜನಪ್ರಿಯತೆಯನ್ನು ನೋಡಲಾರದೆ ಹತಾಶರಾಗಿ ಯತ್ನಾಳ್​ ನನ್ನ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಸಿಎಂ ಜತೆ ವೇದಿಕೆ ಹಂಚಿಕೊಂಡಿದ್ದ ತನ್ವೀರ್​ ಪೀರಾ ವಿರುದ್ಧ ತನಿಖೆ ನಡೆಸುವಂತೆ ಅಮಿತ್​ ಶಾಗೆ ಪತ್ರ ಬರೆದ ಯತ್ನಾಳ್​

ಮುಸ್ಲಿಂ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಕೊಟ್ಟಿದ್ದಾರೆ . ಇದರ ಉದ್ದೇಶ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸುವುದಕ್ಕೆ ಮಾತ್ರ . ನಾನು ಐಸಿಸ್ ಉಗ್ರರ ಜೊತೆ ನಂಟಿದೆ ಎಂಬುದನ್ನು ಸಾಬೀತು ಮಾಡಲಿ. ಕೇಂದ್ರ ಮತ್ತು ರಾಜ್ಯದ ಎಲ್ಲಾ ತನಿಖಾ ಸಂಸ್ಥೆಗಳಿಗೆ ಯತ್ನಾಳ್​ ದಾಖಲೆ ಕೊಡಲಿ. ಶಾಸಕರು ಒಂದು ವಾರದೊಳಗೆ ಐಸಿಸ್ ಸಾಬೀತು ಮಾಡಲಿ. ಉಗ್ರರ ಜೊತೆಗೆ ನನ್ನ ನಂಟಿದೆ ಎಂಬುದನ್ನು ದಾಖಲೆ ಸಮೇತ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಶಾಸಕರ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಪಾಕಿಸ್ತಾನಕ್ಕೆ ಪಲಾಯನ ಮಾಡಬೇಕೆಂದು ಅಗ್ರಹಿಸಿದ್ದಾರೆ.

ಇನ್ನು ಉಗ್ರರ ಜೊತೆ ನಂಟಿದೆಯೆಂದು ಸಾಬೀತು ಪಡಿಸಿದರೆ ನಾನು ದೇಶವನ್ನು ತ್ಯಾಗ ಮಾಡುತ್ತೇನೆ. ನಾನಷ್ಟೇ ಅಲ್ಲಾ ನನ್ನ ಭಕ್ತರು, ಶಿಷ್ಯರು ದೇಶವನ್ನು ತ್ಯಾಗ ಮಾಡುತ್ತೇವೆ ಎಂದು ಸವಾಲು ಹಾಕಿದ್ದು, ಧರ್ಮಗುರು ಸಯ್ಯದ್ ಮೊಹಮ್ಮದ್ ತನ್ವೀರ್ ಪೀರಾ ಹಾಸ್ಮಿ ಅವರು ದೇಶಭಕ್ತಿ ಗೀತೆಯ ಮೂಲಕ ಯತ್ನಾಳ್‌ಗೆ ಟಾಂಗ್ ಕೊಟ್ಟಿದ್ದಾರೆ. ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ತಾವೇ ಹಾಡಿದ ದೇಶಭಕ್ತಿ ಗೀತೆ ಸಾರೇ ಜಹಾಸೇ ಅಚ್ಚಾ ಹಿಂದೂ ಸಿತಾ ಹಮಾರಾ ಹಾಡನ್ನು ಫೇಸ್ಬುಕ್ ಅಕೌಂಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ಶಾಸಕ ಯತ್ನಾಳ್ ಐಸಿಸ್ ನಂಟಿನ ಆರೋಪಕ್ಕೆ ಟಾಂಗ್ ಕೊಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ