ಸಿಎಂ ಜತೆ ವೇದಿಕೆ ಹಂಚಿಕೊಂಡಿದ್ದ ತನ್ವೀರ್ ಪೀರಾ ವಿರುದ್ಧ ತನಿಖೆ ನಡೆಸುವಂತೆ ಅಮಿತ್ ಶಾಗೆ ಪತ್ರ ಬರೆದ ಯತ್ನಾಳ್
ಮುಸ್ಲಿಂ ಧರ್ಮಗುರು ಸಯ್ಯದ್ ಮೊಹಮ್ಮದ್ ತನ್ವೀರಾ ಪೀರಾ ಹಾಸ್ಮೀಂ ಐಸಿಸ್ ಜೊತೆ ನಂಟು ಹೊಂದಿದ್ದಾನೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡಿದ್ದರು. ಇದೀಗ ತನ್ವೀರ್ ಪೀರಾ ವಿರುದ್ಧ ರಾಷ್ಟ್ರೀಯ ತನಿಖಾ ತಂಡಗಳ ಮುಖಾಂತರ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ವಿಜಯಪುರ, ಡಿಸೆಂಬರ್ 06: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮುಸ್ಲಿಂ ಧರ್ಮಗುರು ಸಯ್ಯದ್ ಮೊಹಮ್ಮದ್ ತನ್ವೀರ್ ಪೀರಾ ಹಾಸ್ಮೀ ಅವರ ಜೊತೆ ವೇದಿಕೆ ಹಂಚಿಕೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ತನ್ವೀರ್ ಪೀರ್ ಅವರನ್ನು ವಿಚಾರಣೆಗೆ ಒಳಪಡಿಸುವಂತೆ ವಿಜಯಪುರ (Vijayapura) ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರಿಗೆ ಪತ್ರ ಬರೆದಿದ್ದಾರೆ. ಈ ಪ್ರಕರಣವನ್ನು ಕೇಂದ್ರ ತಂಡಗಳ ಮುಖಾಂತರ ತನಿಖೆ ನಡೆಸಬೇಕೆಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಯತ್ನಾಳ್ ಅಮಿತ್ ಶಾಗೆ ಬರೆದ ಪತ್ರದಲ್ಲಿ ಏನಿದೆ
ಭಯೋತ್ಪಾದಕ ಸಂಘಟನೆ ಐಸಿಸ್ ಮೇಲೆ ಸಹಾನುಭೂತಿ ಹೊಂದಿರುವ ತನ್ವೀರ್ ಪೀರಾ ಅವರೊಂದಿಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇದಿಕೆ ಹಂಚಿಕೊಂಡ ಘಟನೆಯನ್ನು ನಿಮ್ಮ ಗಮನಕ್ಕೆ ತರಲು ನಾನು ಬಯಸುತ್ತೇನೆ. ಪೀರಾ ಅವರು ಈ ಹಿಂದೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿರುವ ರ್ಯಾಡಿಕಲ್ ಇಸ್ಲಾಮಿಕ್ ಔಟ್‌ಫಿಟ್ ನಾಯಕರನ್ನು ಭೇಟಿಯಾಗಿದ್ದರು ಎಂಬುದು ನನ್ನ ಅರಿವಿಗೆ ಬಂದಿದೆ. ಇನ್ನೂ ಆತಂಕಕಾರಿ ಸಂಗತಿಯೆಂದರೇ ಪೀರಾ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗುತ್ತಿರುವುದು ಇದೇ ಮೊದಲಲ್ಲ. ಅವರು ಹಿಂದೆ ಅನೇಕ ಬಾರಿ ಭೇಟಿಯಾಗಿದ್ದರು.
ಇದನ್ನೂ ಓದಿ: ಮುಸ್ಲಿಂ ಧರ್ಮಗುರು, ಯತ್ನಾಳ್ ಮಧ್ಯೆ ಇತ್ತೇ ಪೂರ್ವದ್ವೇಷ? ಪ್ರಶ್ನೆ ಉದ್ಭವಕ್ಕೆ ಕಾರಣವಾಯ್ತು ಈ ಎರಡು ಪ್ರಸಂಗ
ಪೀರಾ ಅವರು ನಮ್ಮ ರಾಷ್ಟ್ರದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಮುಸ್ಲಿಂ ರಾಷ್ಟ್ರಗಳಿಂದ ಹಣವನ್ನು ತರುತ್ತಿದ್ದಾರೆ ಎಂಬ ನಂಬಲರ್ಹ ಮಾಹಿತಿ ನನಗೆ ದೊರೆತಿದೆ. ಮುಖ್ಯಮಂತ್ರಿಗಳು ತಮ್ಮ ವೈಯಕ್ತಿಕ ಭದ್ರತೆ ಮತ್ತು ಗುಪ್ತಚರ ಸಲಹೆಯನ್ನು ಕಡೆಗಣಿಸಿರುವುದು ಮತ್ತು ರಾಜಕೀಯ ಅಜೆಂಡದಿಂದ ಉದ್ದೇಶಪೂರ್ವಕವಾಗಿ ಪೀರಾ ಅವರನ್ನು ಭೇಟಿ ಮಾಡಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿ.
ಭಯೋತ್ಪಾದನೆಯ ಬಗ್ಗೆ ಸಹಾನುಭೂತಿ ಹೊಂದಿರುವ ವ್ಯಕ್ತಿಗಳನ್ನು, ಉನ್ನತ ಶ್ರೇಣಿಯ ರಾಜಕೀಯ ನಾಯಕರು ಮಾಧ್ಯಮಗಳು ಮತ್ತು ನಾಗರಿಕರ ಸಮ್ಮುಖದಲ್ಲಿ ಭೇಟಿಯಾಗಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಪೀರಾ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದನ್ನು ತಪ್ಪಿಸಲು ಸ್ಥಳೀಯ ಪೊಲೀಸರು ರಾಜ್ಯ ಸರ್ಕಾರದೊಂದಿಗೆ ಶಾಮೀಲಾಗಿದ್ದಾರೆ ಎಂದು ನಾನು ಶಂಕಿಸಿರುವ ಕಾರಣ, ಪೀರಾ ಅವರನ್ನು ರಾಷ್ಟ್ರೀಯ ಸಂಸ್ಥೆಗಳಿಂದ ಕೂಲಂಕಷವಾಗಿ ತನಿಖೆ ಮಾಡುವುದು ನಮ್ಮ ದೇಶದ ಹಿತದೃಷ್ಟಿಯಿಂದ ಉತ್ತಮವಾಗಿದೆ ಎಂದು ನಾನು ದೃಢವಾಗಿ ನಂಬುತ್ತೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:14 pm, Wed, 6 December 23