ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಲೆರಡೂ ಸೈಕ್ಲಿಂಗ್ ಕ್ರೀಡೆಯಲ್ಲಿ (cycling sport) ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಕ್ರೀಡಾಪಟುಗಳನ್ನು ನೀಡಿದ ಜಿಲ್ಲೆಗಳಾಗಿವೆ. ಸೈಕ್ಲಿಂಗ್ ಅಂದರೆ ಸಾಕು ಅಲ್ಲಿ ವಿಜಯಪುರ-ಬಾಗಲಕೋಟೆ ಜಿಲ್ಲೆಯ (Vijayapura -Bagalkote) ಸೈಕ್ಲಿಸ್ಟ್ ಗಳು ಸದಾ ಮುಂಚೂಣಿಯಲ್ಲಿರುತ್ತಾರೆ. ಅಂತಾರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಹೆಚ್ಚಿನ ಪಾರುಪತ್ಯ ಮೆರೆಯುತ್ತಾರೆ. ಇಷ್ಟರ ಮಧ್ಯೆಯೂ ಅವಳಿ ಜಿಲ್ಲೆಗಳ ಸೈಕ್ಲಿಸ್ಟ್ ಗಳಿಗೆ ವೆಲೋಡ್ರಮ್ ಮೈದಾನದ ಬೇಡಿಕೆ ಕಳೆದ 25 ವರ್ಷಗಳಿಂದಲೂ ಇತ್ತು. 2009 ರಲ್ಲಿ ವೆಲೋಡ್ರಮ್ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲಾಗಿದೆಯಾದರೂ ನಿರ್ಮಾಣ ಕಾಮಗಾರಿ ಮಾತ್ರ ಇನ್ನೂ ಮುಗಿದಿಲ್ಲಾ. ಈ ಕುರಿತ ವರದಿ ಇಲ್ಲಿದೆ ನೋಡಿ. ವಿಜಯಪುರ ಜಿಲ್ಲೆಯಲ್ಲಿ ವೆಲೋಡ್ರಮ್ ನಿರ್ಮಾಣದ ಬೇಡಿಕೆಗೆ ರಜತ ಮಹೋತ್ಸವ… 2009 ರಲ್ಲೇ ಭೂಮಿ ಪೂಜೆ ನೆರವೇರಿದ್ದರೂ ಇನ್ನೂ ಮುಗಿಯದ ಕಾಮಗಾರಿ…..ಕುಂಟುತ್ತಾ ತೆವಳುತ್ತಾ ಕಾಮಗಾರಿ ನಡೆದಿದ್ದು ಇದೀಗಾ ಕೆಲಸ ಕಾಮಗಾರಿ ಬಂದ್ ಆಗಿದೆ… ಕರ್ನಾಟಕ ಸರ್ಕಾರ (Karnataka government) ಹಣ ನೀಡದ ಕಾರಣ ಕೆಲಸ ಬಂದ್ ಮಾಡಿರೋ ಗುತ್ತಿಗೆದಾರರು…
ವಿಜಯಪುರ ಜಿಲ್ಲೆ ಸೈಕ್ಲಿಸ್ಟ್ ಗಳ ತವರು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಉತ್ತಮ ಹೆಸರು ಸಾಧನೆಗಳನ್ನು ಜಿಲ್ಲೆಯ ಸೈಕ್ಲಿಸ್ಟ್ ಗಳು ಮಾಡಿದ್ದಾರೆ. ಆದರೆ ಈವರೆಗೂ ಜಿಲ್ಲೆಯಲ್ಲಿ ಸೈಕ್ಲಿಸ್ಟ್ ಗಳಿಗೆ ಅವಶ್ಯಕವಾದ ವೆಲೋಡ್ರಮ್ ಇಲ್ಲದೇ ಇರೋದು. ಕಳೆದ 25 ವರ್ಷಗಳಿಂದ ಜಿಲ್ಲೆಯಲ್ಲಿ ವೆಲೋಡ್ರಮ್ ಬೇಡಿಕೆಯಿತ್ತು. 2009 ರಲ್ಲಿ ಅಂದಿನ ಬಿಜೆಪಿ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರ ನೇತೃತ್ವದಲ್ಲಿ ಕ್ರೀಡಾ ಸಚಿವರಾಗಿದ್ದ ಗೂಳಿಹಟ್ಟಿ ಶೇಖರ್ ನಗರದ ಹೊರ ಭಾಗದಲ್ಲಿರೋ ಭೂತನಾಳ ತಾಂಡಾ ಬಳಿ 8 ಎಕರೆ ಪ್ರದೇಶದಲ್ಲಿ ವೆಲೋಡ್ರಮ್ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದರು.
ಬಳಿಕ ವೆಲೋಡ್ರಮ್ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು 28-05-2015 ರಂದು ಅಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದ ಅಭಯಚಂದ್ರ ಜೈನ್. 7.5 ಕೋಟಿ ರೂಪಾಯಿ ವೆಚ್ಚದಲ್ಲಿ ವೆಲೋಡ್ರಮ್ ನಿರ್ಮಾಣಕ್ಕೆ ದಾವಣಗೆರೆ ಮೂಲದ ಮಾರುತಿ ಕನ್ಸಸ್ಟ್ರ್ರಕ್ಷನ್ ಗೆ ನಿರ್ಮಾಣದ ಗುತ್ತಿಗೆ ಕಾಮಗಾರಿ ನೀಡಲಾಗಿತ್ತು. ಮಾರುತಿ ಕನ್ಸಸ್ಟ್ರ್ರಕ್ಷನ್ ಉದಯ್ ಶಿವಕುಮಾರ ಕೆಲಸವನ್ನೇನೋ ಆರಂಭಿಸಿದರು. ಆದರೆ ಅದು ಇನ್ನೂ ಮುಗಿಯದ ಕಥೆಯಾಗಿದೆ. ಸದ್ಯ ಸರ್ಕಾರ ಹಣ ಪಾವತಿ ಮಾಡಿಲ್ಲವೆಂದು ಇನ್ನುಳಿದ ಕಾಮಗಾರಿ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಬಂದ್ ಮಾಡಿದ್ದಾರೆ. ಜಿಲ್ಲಾ ಸೈಕ್ಲಿಸ್ಟ್ ಗಳು ಯಾವಾಗ ವೆಲೋಡ್ರಮ್ ಕಾಮಗಾರಿ ಮುಕ್ತಾಯವಾಗುವುದೋ ಎಂದು ಕಾದುಕುಳಿತಿದ್ದಾರೆ.
ಇದನ್ನೂ ಓದಿ: ಅಪ್ಪನದು ವಾಹನಗಳಿಗೆ ಗ್ರೀಸಿಂಗ್ ಮಾಡುವ ಕೆಲಸ, ಮಗಳದೋ ಅಂತಾರಾಷ್ಟ್ರೀಯ ಮಟ್ಟದ ಸಾಧನೆ -ಇದಕ್ಕೆ ಸಾಥ್ ನೀಡಿದ್ದು ಟಿವಿ9
ವೆಲೋಡ್ರಮ್ ನಿರ್ಮಾಣ ಕಾಮಗಾರಿ ಕಳೆದ ವರ್ಷವೇ ಮುಕ್ತಾಯವಾಗಬೇಕಿತ್ತು. ಆದರೆ ಇನ್ನೂ ವೆಲ್ಲೋಡ್ರಾಮ್ ಕಾಮಗಾರಿ ಇದುವರೆಗೂ ಮುಕ್ತಾಯವಾಗಿಲ್ಲ. ಹೀಗಾಗಿ ವೆಲ್ಲೋಡ್ರಾಮ್ ಇಲ್ಲದೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೈಕ್ಲಿಂಗ್ ಮಾಡಬೇಕಾದ ಅನಿವಾರ್ಯತೆ ಸೈಕ್ಲಿಸ್ಟ್ ಗಳಿಗೆ ಬಂದೊದಗಿದೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯವರೆಗೆ ನಿಧಾನವಾಗಿ ಕುಂಟುತ್ತಾ ತೆವಳುತ್ತಾ ಸಾಗಿದ್ದ ವೆಲೋಡ್ರಮ್ ನಿರ್ಮಾಣ ಕಾಮಗಾರಿ ಹೊಸ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಅಂದಾಜು 1 ಕೋಟಿ ವರೆಗೆ ಬಾಕಿ ಇರುವ ಹಣ ಬಿಡುಗಡೆಯಾಗದ ಕಾರಣ ಕಾಮಗಾರಿ ಬಂದ್ ಆಗಿದೆ.
ಗುತ್ತಿಗೆದಾರರ ಹಣ ಬಿಡುಗಡೆಯಾಗದ ಕಾರಣ ಕಾಮಗಾರಿ ಕೆಲಸಕ್ಕೆ ಬ್ರೇಕ್ ಹಾಕಿದ್ಧಾರೆ. ಇನ್ನು ಹಣ ಬಿಡುಗಡೆಯಾಗದ ಕಾರಣ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸಹ ವಾಪಸ್ ತೆರಳಿದ್ದಾರೆ. ಸದ್ಯ ಜಿಲ್ಲೆಯಲ್ಲಿ 80 ಕ್ಕೂ ಆಧಿಕ ಸೈಕ್ಲಿಸ್ಟ್ ಕ್ರೀಡಾಪಟುಗಳು ಇದ್ದು ಅವರೆಲ್ಲರಿಗೆ ವೆಲೋಡ್ರಮ್ ಅವಶ್ಯಕವಾಗಿದೆ.ಅವರಿಗೆ ಪ್ರ್ಯಾಕ್ಟೀಸ್ ಮಾಡಲು ವೆಲ್ಲೋಡ್ರಾಮ್ ಇಲ್ಲದ ಕಾರಣ ಹೆದ್ದಾರಿಗಳನ್ನ ಆಶ್ರಯಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾದ ಕಾರಣ ಹಲವರು ಪ್ರ್ಯಾಕ್ಟೀಸ್ ಮಾಡೋದನ್ನೆ ಬಿಟ್ಟಿದ್ದಾರೆ.
ಈ ವಿಚಾರವಾಗಿ ಮಾಜಿ ಸಚಿವ ಗೋವಿಂದ ಕಾರಜೋಳ ಸಹ ಕ್ರೀಡಾ ಚಟುವಟಿಕೆಗಳಿಗೆ ಅನುದಾನ ಕಟ್ ಮಾಡುವುದು ಸರಿಯಲ್ಲಾ ಎಂದು ಕಿಡಿ ಕಾರಿದ್ದಾರೆ. ನಮ್ಮ ಪಕ್ಷ ಆಧಿಕಾರದಲ್ಲಿದ್ದಾಗ ವೆಲೋಡ್ರಮ್ ಗೆ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಆದೇಶ ನೀಡಿದ್ದೇವು. ಅದು ಕುಂಟುತ್ತಾ ಸಾಗಿದ್ದು ಸರಿಯಲ್ಲಾ. ಸರ್ಕಾರದಲ್ಲಿ ಹಣ ಇಲ್ಲಾ ಎಂದು ನಿಲ್ಲಿಸಿದ್ದು ಸರಿಯಲ್ಲಾ. ಹೊಸ ಯೋಜನೆ ಮಾಡದಿದ್ದರೂ ಚಿಂತೆಯಿಲ್ಲಾ, ಕಾಮಗಾರಿ ಮುಕ್ತಾಯದ ಹಂತದಲ್ಲಿರೋ ವೆಲೋಡ್ರಮ್ ನ ಕೆಲಸ ಕಾಮಗಾರಿ ಮುಗಿಸಲು ಹಣ ನೀಡಲಿ ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.
ಸದ್ಯ ಮುಕ್ತಾಯದ ಹಂತದಲ್ಲಿರೋ ವೆಲೋಡ್ರಮ್ ನಿರ್ಮಾಣ ಕಾಮಗಾರಿ ಹಣಕಾಸಿನ ಸಮಸ್ಯೆಯಿಂದ ಬಂದ್ ಆಗಿದೆ. ಗುತ್ತಿಗೆದಾರರಿಗೆ ಸರ್ಕಾರ ಹಣ ಪಾವತಿ ಮಾಡಿದರೆ ವೆಲೋಡ್ರಮ್ ಕಾಮಗಾರಿ ಮುಗಿದು ಸೈಕ್ಲಿಸ್ಟ್ ಗಳಿಗೆ ಮುಕ್ತವಾಗಲಿದೆ. ಅನುದಾನ ಕೊರತೆಯ ಕಾರಣ ಕಾಮಗಾರಿ ಸ್ಥಗಿತವಾಗಿದ್ದು ಸೈಕ್ಲಿಸ್ಟ್ ಗಳಿಗಾದ ಮೋಸವಾದಂತಾಗಿದೆ. ಕಾರಣ ಸರ್ಕಾರ ಇನ್ನುಳಿದ ಹಣವನ್ನು ನೀಡಿದರೆ ಜಿಲ್ಲೆಯ ಸೈಕ್ಲಿಸ್ಟ್ ಗಳಿಗೆ ಅನಕೂಲವಾಗಲಿದೆ. ಈ ನಿಟ್ಟಿನಲ್ಲಿ ಕ್ರೀಡಾ ಇಲಾಖೆ ಸಚಿವರು ಗಮನ ಹರಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ