ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಸ್ಥಾಪಿಸಲು ಮುಂದಾದ ಕೆಎಸ್​ ಈಶ್ವರಪ್ಪ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 22, 2024 | 7:36 PM

ಮಾಜಿ ಡಿಸಿಎಂ ಈ ಹಿಂದೆ ರಾಯಣ್ಣ ಬ್ರಿಗೇಡ್ ಎಂಬ ಸಂಘಟನೆ ಸ್ಥಾಪನೆ ಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಬಳಿಕ ರಾಯಣ್ಣ ಬ್ರಿಗೇಡ್ ಸಂಘಟನೆ ಸಕ್ರೀಯವಾಗಿರಲಿಲ್ಲ. ಇದೀಗ ಮತ್ತೇ ಅದೇ ರಾಯಣ್ಣ ಬ್ರಿಗೇಡ್ ಮಾದರಿಯಲ್ಲೇ ಮತ್ತೊಂದು ಸಂಘಟನೆ ಬಲಗೊಳ್ಳುವತ್ತ ಚಿತ್ತ ಹರಿಸಿದೆ. ಮಾಜಿ ಡಿಸಿಎಂ ಈಶ್ವರಪ್ಪ ನೇತೃತ್ವದಲ್ಲಿ ಇದೇ ವಿಚಾರದಲ್ಲಿಂದು ಸಭೆ ನಡೆಯಿತು. ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಅಡಿಪಾಯ ಆರಂಭಕ್ಕೆ ವಿಜಯಪುರ ಜಿಲ್ಲೆಯಲ್ಲಿ ಮುನ್ನುಡಿ ಬರೆಯಲಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ.

ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಸ್ಥಾಪಿಸಲು ಮುಂದಾದ ಕೆಎಸ್​ ಈಶ್ವರಪ್ಪ
ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಸ್ಥಾಪಿಸಲು ಮುಂದಾದ ಕೆಎಸ್​ ಈಶ್ವರಪ್ಪ
Follow us on

ವಿಜಯಪುರ, ಸೆ.22: ಬಿಎಸ್ ಯಡಿಯೂರಪ್ಪ ಕುಟುಂಬ ರಾಜಕಾರಣ ವಿರುದ್ಧ ತೊಡೆ ತಟ್ಟಿರುವ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಇದೀಗ ಮತ್ತೊಂದು ಸಂಘಟನೆಗೆ ಮುಂದಾಗಿದ್ದಾರೆ. ವಿಜಯಪುರದಲ್ಲಿ ಬೆಂಬಲಿಗರೊಂದಿಗೆ ಸಭೆ ಸೇರಿ ಚರ್ಚಿಸಿ ಅಂತಿಮವಾಗಿ ಹಿಂದುತ್ವದ ಹೆಸರಿನಲ್ಲಿ ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಸಂಘಟನೆ ಮಾಡುವುದಾಗಿ ಘೋಷಿದ್ದಾರೆ. ಇಂದು ವಿಜಯಪುರ ತಾಲೂಕಿನ ಮಹಲ್ ಐನಾಪುರ ಗ್ರಾಮದಲ್ಲಿರುವ ಹುಲಜಂತಿ ಮಠದ ಆವರಣದಲ್ಲಿ ಮಠಾಧೀಶರು, ಬೆಂಬಲಿಗರೊಂದಿಗೆ ಸಭೆ ನಡೆಸಿದರು.

ಈ ಮೂಲಕ ಬಿಜೆಪಿಯಿಂದ ಆಚೆಯಿರುವ ಈಶ್ವರಪ್ಪ, ರಾಜಕೀಯ ಭವಿಷ್ಯದ ದೃಷ್ಟಿಯಿಂದ ಹಾಗೂ ಯಡಿಯೂರಪ್ಪ ಕುಟುಂಬ ರಾಜಕಾರಣ ವಿರೋಧಿಸುವವರನ್ನು ಒಂದೆಡೆ ಸೇರಿಸುವ ಉದ್ದೇಶ ಇದಾಗಿದೆ ಎನ್ನಬಹುದು. ಇನ್ನು ಸಭೆಯಲ್ಲಿ ಮಾತನಾಡಿದ ಈಶ್ವರಪ್ಪ, ‘ರಾಯಣ್ಣ ಬ್ರಿಗೇಡ್ ಮಾದರಿಯಲ್ಲಿ ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಸ್ಥಾಪನೆ ಮಾಡಲು ಮುಂದಾಗಿದ್ದೇ. ಎಲ್ಲಾ ಸ್ವಾಮೀಜಿಗಳ ಜಗದ್ಗುರುಗಳ ಬೆಂಬಲ ಸಿಕ್ಕಿದೆ. ಇದೇ ಮುಂದಿನ ತಿಂಗಳ ಅಕ್ಟೋಬರ್ 20 ರಂದು ಬಾಗಲಕೋಟೆಯಲ್ಲಿ ಸಭೆ ನಡೆಸುವುದಾಗಿ ತಿಳಿಸಿದರು.

ಇದನ್ನೂ ಓದಿ:ಆರ್‌ಎಸ್‌ಎಸ್‌ ಮೂಲಕ ಮತ್ತೆ ಬಿಜೆಪಿ ಸೇರುವ ಅವಶ್ಯಕತೆ ನನಗಿಲ್ಲ: ಕೆಎಸ್​ ಈಶ್ವರಪ್ಪ

ಹಿಂದೆ ರಾಯಣ್ಣ ಬ್ರಿಗೇಡ್ ಮಾಡಿದಾಗ ಏನೆಲ್ಲಾ ಆಯಿತು ಎಂದು ಎಲ್ಲರಿಗೂ ಗೊತ್ತಿರೋ ವಿಚಾರವಾಗಿದೆ. ಈಗ ಮುಂದೆ ಇಡುವ ಈ ಹೆಜ್ಜೆ ಹಿಂದೆ ಇಡಲ್ಲ. ಬಾಗಲಕೋಟೆಯಲ್ಲಿ ನಡೆಯೋ ಸಭೆಗೆ ಧೈರ್ಯವಿದ್ದವರು, ಗಟ್ಟಿಯಿದ್ದವರು ಮಾತ್ರ ಬನ್ನಿ. ಇದಕ್ಕೆ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಪಕ್ಷ ಸಂಬಂಧವಿಲ್ಲ. ಎಲ್ಲಾ ಸಮಾಜದವರೂ ಸಭೆಗೆ ಬರಬೇಕೆಂದು ಮನವಿ ಮಾಡಿಕೊಂಡರು. ಇತರೆ ಸಮಾಜದ ಸ್ವಾಮೀಜಿಗಳ ಜೊತೆಗೆ ನಮ್ಮ ಸಮಾಜದ ಸ್ವಾಮೀಜಿಗಳು ಸಭೆ ನಡೆಯಲಿ. ಬಾಗಲಕೋಟೆಯಲ್ಲಿ ನಡೆಯುವ ಸಭೆಯಲ್ಲಿ ರಾಜ್ಯ ಎಲ್ಲಾ ಜಿಲ್ಲೆಗಳ ಪ್ರಮುಖರು ಸೇರಲಿ. ಸುದೀರ್ಘವಾಗಿ ಸಭೆಯಲ್ಲಿ ಚರ್ಚೆ ಮಾಡಿ ಬಳಿಕ ರಾಜ್ಯ ಮಟ್ಟದ ಸಭೆ ನಡೆಸಲು ಮುಂದಿನ ತೀರ್ಮಾನ ತೆಗೆದುಕೊಳ್ಳೋಣ. ಈಶ್ವರಪ್ಪಗೆ ಅನ್ಯಾಯವಾಗಿದೆ. ಅವರಿಗೆ ಸಿಎಂ ಮಾಡಲಿಲ್ಲ ಎಂದು ಯಾರೂ ಹೇಳಬೇಡಿ. ಇಲ್ಲಿ ಬಹಳ ಜನರಿಗೆ ಅನ್ಯಾಯವಾಗಿದೆ. ಹೊಸ ಸಂಘಟನೆಯಿಂದ ಹಿಂದೂತ್ವಕ್ಕೆ ಯಶಸ್ಸು ಸಿಗುತ್ತದೆ ಎಂದರು.

ಬಳಿಕ ಈಶ್ವರಪ್ಪ ಪುತ್ರ ಕಾಂತೇಶ ಸೇರಿದಂತೆ ಇತರೆ ಮಠಾಧೀಶರು, ಮುಖಂಡರು ಭಾಗಿಯಾಗಿದ್ದರು. ಇದೇ ವೇಳೆ ಮಾತನಾಡಿದ ಕಾಂತೇಶ, ‘ಹೊಸ ಸಂಘಟನೆ ಹಿಂದೂತ್ವದ ಸಂಘಟನೆ ಮಾಡಬೇಕೆಂದು ಅನೇಕರ ಒತ್ತಡವಿದೆ. ಎಲ್ಲರ ಅಭಿಲಾಷೆ ಸ್ವಾಮೀಜಿಗಳ ಆಶೀರ್ವಾದದಂತೆ ಹೊಸ ಸಂಘಟನೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅಧಿಕಾರ ಸಿಗಬೇಕು. ದಲಿತ ಹಿಂದುಳಿದ ಸಮಾಜದ ಪ್ರತಿ ನಾಯಕರೂ ಬೆಳೆಯಬೇಕು. ನೀವೆಲ್ಲರೂ ನೀಡುವ ಮಾರ್ಗದರ್ಶನದ ಮೂಲಕ ಕೆಲಸವಾಗಬೇಕು. ಕೇವಲ ಹಿಂದುಳಿದ ದಲಿತ ವರ್ಗ ಅಲ್ಲ, ಇಡೀ ಹಿಂದೂ ಸಮಾಜ ಜೊತೆಗೂಡಿಸಿಕೊಂಡು ಹೋದರೆ ಯಶಸ್ಸು ಸಿಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ:ರಾಜ್ಯಪಾಲರನ್ನು ಅವಮಾನಿಸಿರುವ ಸಿಎಂ, ಡಿಸಿಎಂ ಮತ್ತು ಗೃಹಮಂತ್ರಿ ಕ್ಷಮೆ ಕೇಳಬೇಕು: ಕೆಎಸ್ ಈಶ್ವರಪ್ಪ

ಇದೇ ವೇಳೆ ಸಭೆಯಲ್ಲಿ ಭಾಗಿಯಾಗಿದ್ದ ಹುಲಜಂತಿ ಮಾಳಿಂಗರಾಯ ಮಹಾರಾಜರು ಮಾತನಾಡಿ ‘ ಕಳೆದ ಎರಡು ದಿನಗಳ ಹಿಂದೆ ಜಮಖಂಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯತ್ನಾಳ್​ ಹಾಗೂ ಈಶ್ವರಪ್ಪ ಅವರಿಗೆ ಖಡ್ಗ ಕೊಟ್ಟಿದ್ದೇವೆ. ಈಗಾ ಈಶ್ವರಪ್ಪರಿಗೆ ಭ್ರಷಾಚಾರ ಮಾಡುವವರಿಗೆ, ನೀಚ ರಾಜಕಾರಣ ಮಾಡುವವರಿಗೆ ಹೊಡೆದೋಡಿಸಬೇಕೆಂದು ಖಡ್ಗವನ್ನು ಸಾದು ಸಂತರು ನೀಡಿದ್ದಾರೆ. ಎಲ್ಲರೂ ಈಶ್ವರಪ್ಪರಿಗೆ ಬಿಜೆಪಿ ಮೋಸ ಮಾಡಿತು ಎನ್ನುವುದು ತಪ್ಪು. ಆದರೆ, ಬಿಜೆಪಿ ಮೋಸ ಹೋಯಿತು ಎನ್ನಬಹುದು. ಕರ್ನಾಟಕದ ಹಾಲು ಮತ ಸಮಾಜ ಈಶ್ವರಪ್ಪರನ್ನು ನಂಬಿ ಬಿಜೆಪಿಗೆ ಬೆಂಬಲ ನೀಡಿಕೊಂಡು ಬಂದಿತ್ತು. ಆದರೆ, ಈಶ್ವರಪ್ಪರನ್ನು ಕೈಬಿಟ್ಟ ಪರಿಣಾಮ ಅನುಭವಿಸುತ್ತಿದ್ದೀರಿ. ಬಿಜೆಪಿ ಈಶ್ವರಪ್ಪರನ್ನು ಕೈಬಿಟ್ಟಾಗ ರಾಜೀನಾಮೆ ನೀಡಿ ಹೊರ ಬಂದಾಗ ಅವರಿಗೆ ಸಮಾಜ ಸಾಥ್ ಕೊಟ್ಟಿದೆ.

ಈಶ್ವರಪ್ಪ ಅವರು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅನುಕೂಲವಾಗಬೇಕೆಂದು ರಾಜಕೀಯದಲ್ಲಿ ಮುಂದುರೆದಿದ್ದಾರೆ. ಈ ಹೋರಾಟ ಹಾಲು ಮತದ ಸಮಾಜದ ಮಠದಿಂದ ಆಗಲಿ ಎಂದು ಇಲ್ಲಿ ಸಭೆ ಮಾಡಿದ್ದಾರೆ. ಈಶ್ವರಪ್ಪರನ್ನು ಮೇಲು ಮಟ್ಟದ ಕುರ್ಚಿಯಲ್ಲಿ ಕೂರಿಸಬೇಕೆಂದು ಸಭೆ ಮಾಡುತ್ತಿದ್ದೇವೆ. ಎಲ್ಲಾ ಹಿಂದುಳಿದ ಜಾತಿಗಳು ಅಭಿವೃದ್ದಿಗಾಗಿ ಈಶ್ವರಪ್ಪ ಸಂಘಟನೆಗೆ ಇಳಿದಿದ್ದಾರೆ.  ಈಶ್ವರಪ್ಪ ಅವರು ಧಾರ್ಮಿಕವಾಗಿ ನಂಬಿಗಸ್ಥರು, ಸಾಧು ಸಂತರ ಮೇಲೆ ವಿಶ್ವಾಸವಿಟ್ಟರು. ಮಠ ಮಾನ್ಯಗಳಿಗೆ ಸಹಾಯ ಸಹಕಾರ ನೀಡಿಕೊಂಡು ಬಂದವರು. ಈಶ್ವರಪ್ಪರ ಶಕ್ತಿ ಬಲವರ್ಧನೆ ಆಗಲಿ. ಈಶ್ವರಪ್ಪ ಹಾಗೂ ಅವರ ಪುತ್ರ ಕಾಂತೇಶ ಅವರಿಗೆ ಎಲ್ಲ ಸಮಾಜದವರ ಬೆಂಬಲ ಇರಲಿ ಎಂದರು. ಈಗಾ ಇಡೋ ಹೆಜ್ಜೆ ಎಂದಿಗೂ ಹಿಂದೆ ಇಡಬಾರದೆಂದು ಮಾಳಿಂಗರಾಯ ಮಹಾರಾಜರು ಹೇಳಿದರು.

ಇಂದು ನಡೆದ ಸಭೆಯಲ್ಲಿ ಬಾಗಲಕೋಟೆ, ವಿಜಯಪುರ, ಕಲಬುರ್ಗಿ, ದಾವಣಗೆರೆಯಿಂದ ಬೆಂಬಲಿಗರು ಆಗಮಿಸಿದ್ದರು, ಹಿಂದುತ್ವದ ನೆಲೆಗಟ್ಟಿನಲ್ಲಿ ಎಲ್ಲಾ ಸಮಾಜದಲ್ಲಿನ ಶೋಷಿತರ ಬಡವರಿಗಾಗಿ ಹೋರಾಟ ಮಾಡುವುದಾಗಿ ಸಭೆಯಲ್ಲಿ ಈಶ್ವರಪ್ಪ ಘೋಷಿಸಿದ್ದಾರೆ. ರಾಯಣ್ಣ ಬ್ರಿಗೇಡ್ ಬಳಿಕ ಇದೀಗ ರಾಜಕೀಯ ಸಂಧ್ಯಾಕಾಲದಲ್ಲಿ ಈಶ್ವರಪ್ಪ ಮತ್ತೊಂದು ಸಂಘಟನೆಗೆ ಮುಂದಾಗಿದ್ದಾರೆ. ಸಭೆಯಲ್ಲಿ ಹುಲಜಂತಿ ಮಹಾರಾಜರು, ಮಖಣಾಪುರ ಸ್ವಾಮೀಜಿ, ಕೆ ಕಾಂತೇಶ್ ರಾಜು ಬಿರಾದಾರ ಸೇರಿದಂತೆ ಹಲವು ಸಮಾಜದ ಮುಖಂಡರು ಭಾಗಿಯಾಗಿದ್ದರು. ರಾಯಣ್ಣ ಚೆನ್ನಮ್ಮ ಬ್ರಿಗೇಡ್ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಹುಟ್ಟಿಸುತ್ತಾ, ಹೊಸ ಬದಲಾವಣೆಗೆ ಕಾರಣವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ