ಆರ್‌ಎಸ್‌ಎಸ್ ಮೂಲಕ ಮತ್ತೆ ಬಿಜೆಪಿ ಸೇರುವ ಅವಶ್ಯಕತೆ ನನಗಿಲ್ಲ: ಕೆಎಸ್ ಈಶ್ವರಪ್ಪ
ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಬಿಜೆಪಿ, ಯಡಿಯೂರಪ್ಪ ನಡೆ ಬಗ್ಗೆ ನೋವು ತೋಡಿಕೊಂಡಿದ್ದಾರೆ. ಆರ್‌ಎಸ್‌ಎಸ್ ಮೂಲಕ ಮತ್ತೆ ಬಿಜೆಪಿ ಸೇರುವ ಅವಶ್ಯಕತೆ ನನಗಿಲ್ಲ. ನಾನೂ ಆರ್‌ಎಸ್‌ಎಸ್‌ನವನೇ ಎಂದು ಹೇಳಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಎಲ್ಲಿಯವರೆಗೆ ಇರಬೇಕು ಎಂದಿದ್ದಾರೆ.
ವಿಜಯಪುರ, ಸೆಪ್ಟೆಂಬರ್ 08: ಆರ್‌ಎಸ್‌ಎಸ್ ಮೂಲಕ ಮತ್ತೆ ಬಿಜೆಪಿ ಸೇರುವ ಅವಶ್ಯಕತೆ ನನಗಿಲ್ಲ. ನಾನೂ ಆರ್‌ಎಸ್‌ಎಸ್‌ನವನೇ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (KS Eshwarappa) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ, ಯಡಿಯೂರಪ್ಪ ನಡೆ ಬಗ್ಗೆ ನೋವು ತೋಡಿಕೊಂಡಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಎಲ್ಲಿಯವರೆಗೆ ಇರಬೇಕು
ರಾಯಣ್ಣ ಬ್ರಿಗೇಡ್ ನಿಲ್ಲಿಸುವಂತೆ ಬಿಎಸ್ ಯಡಿಯೂರಪ್ಪ ಅಮಿತ್ ಶಾಗೆ ಹೇಳಿದ್ದರು. ಅಮಿತ್ ಶಾ ಹೇಳಿದ್ದಕ್ಕೆ ನಿಷ್ಠಾವಂತ ಕಾರ್ಯಕರ್ತನಾಗಿ ಬ್ರಿಗೇಡ್ ನಿಲ್ಲಿಸಿದ್ದೆ. ಇಂಧನ ಸಚಿವನಾಗಿದ್ದಾಗ ರಾಜಿನಾಮೆ ಕೊಟ್ಟು ರಾಜ್ಯಾಧ್ಯಕ್ಷನಾಗು ಅಂದರು. ಇಂಧನ ಖಾತೆಯ ಸಚಿವ ಸ್ಥಾನ ಬಿಟ್ಟು ಬಿಜೆಪಿ ರಾಜ್ಯಾಧ್ಯಕ್ಷನಾದೆ. ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲೂ ನನಗೆ ಮೋಸ ಮಾಡಿದರು. ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಎಲ್ಲಿಯವರೆಗೆ ಇರಬೇಕು. ಅಪ್ಪ, ಮಕ್ಕಳ ಕೈಯಲ್ಲಿ ಇರಬೇಕಾ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕಕ್ಕೆ ಅಕ್ಕಿ ಕೊಡುತ್ತೇವೆ ಅಂದ್ರೂ ಖರೀದಿಸ್ತಿಲ್ಲ ಎಂದ ಜೋಶಿ: ಜಿದ್ದಿಗೆ ಬಿತ್ತಾ ಸಿದ್ದರಾಮಯ್ಯ ಸರ್ಕಾರ?
ರಾಜ್ಯದ ಎಲ್ಲಾ ಹಿರಿಯ ಕಾರ್ಯಕರ್ತರಿಗೆ ಇಂಥ ವಿಚಾರದಲ್ಲಿ ನೋವಿದೆ. ಅವರಿಗ್ಯಾರಿಗೂ ತೃಪ್ತಿಯಿಲ್ಲ, ಬಹಿರಂಗವಾಗಿ ಹೇಳಲಿಕ್ಕೆ ತಯಾರಿಲ್ಲ. ಯತ್ನಾಳ್‌ರಂತಹ ಕೆಲವರು ಮಾತ್ರ ಈ ಬಗ್ಗೆ ಹೇಳುತ್ತಿದ್ದಾರೆ. ಮೊನ್ನೆ ಹತ್ತು-ಹನ್ನೆರಡು ಜನ ಈ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಒಂದು ಕುಟುಂಬದ ಕೈಯಲ್ಲಿ ಪಕ್ಷ ಇರಬಾರದೆಂಬ ನೋವಿದೆ. ಕಾಂಗ್ರೆಸ್ ಪಕ್ಷವನ್ನು ನರೇಂದ್ರ ಮೋದಿಯವರು ಟೀಕೆ ಮಾಡುತ್ತಾರೆ. ರಾಜ್ಯದಲ್ಲಿ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ಕೊಟ್ಟಿಲ್ವಾ? ರಾಜ್ಯದಲ್ಲಿ ಪಕ್ಷವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಮುಡಾದಲ್ಲಿ ಸಿಎಂ ಕುಟುಂಬ ಅಕ್ರಮವಾಗಿ ಸೈಟ್ ಪಡೆದ ಆರೋಪ ಕೇಸ್ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು. ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ರಾಜೀನಾಮೆಗೆ ಆಗ್ರಹಿಸಿದ್ದಿರಿ. ನಾನು ಸಹ ರಾಜೀನಾಮೆ ನೀಡಿದ್ದೆ, ಈಗ ನೀವ್ಯಾಕೆ ರಾಜೀನಾಮೆ ನೀಡ್ತಿಲ್ಲ. ನಿಮ್ಮ ವಿರುದ್ಧ ಭ್ರಷ್ಟಾಚಾರ ಆಪಾದನೆ ಬಂದಾಗ ಒಂದು ರೀತಿ, ಬೇರೆಯವರ ಮೇಲೆ ಆಪಾದನೆ ಬಂದಾಗ ಮತ್ತೊಂದು ರೀತಿ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ವಿಶೇಷ ಆಹ್ವಾನದ ಮೇರೆಗೆ ಅಮೆರಿಕಾಕ್ಕೆ ಹೊರಟ ಡಿಕೆ ಶಿವಕುಮಾರ್: ಏನು ವಿಶೇಷ?
ಬಿಜೆಪಿ ಮಾಜಿ ಸಚಿವರ ವಿರುದ್ಧ ಯಾವುದೇ ಬಾಕಿ ಇಲ್ಲವೆಂದು ರಾಜ್ಯಪಾಲರ ಕಚೇರಿ ಸ್ಪಷ್ಟನೆ ನೀಡಿದೆ. ಕಾಂಗ್ರೆಸ್ ನಾಯಕರು ರಾಜ್ಯದ ಜನರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಎಂದರೆ ಸುಳ್ಳು, ಸುಳ್ಳಿಗೂ ಒಂದು ಮಿತಿ ಇರಬೇಕು. ಸಿಎಂ, ಡಿಸಿಎಂ ಆಗಲು ಶಕ್ತಿ ಯೋಗ್ಯತೆ ಇಲ್ಲವೋ ಎಂಬುದು ನಿರ್ಧಾರವಾಗಿದೆ. ನನ್ನ ಮೇಲಿನ ಆರೋಪದಲ್ಲಿ ನ್ಯಾಯಾಲಯ ನನಗೆ ದೋಷ ಮುಕ್ತ ಮಾಡಿತು. ಕ್ಲೀನ್‌ಚಿಟ್ ಸಿಕ್ಕ ಬಳಿಕ ನಮ್ಮ ನಾಯಕರು ನನಗೆ ಮೋಸ ಮಾಡಿದರು. ನಿಮಗೂ ಕ್ಲೀನ್ ಚಿಟ್ ಸಿಕ್ಕರೆ ನೀವು ಸಿಎಂ ಆಗಿ ಮುಂದುವರಿಯಿರಿ. ಇಲ್ಲವಾದರೆ ಸಿಎಂ ಆಗಿ ಮುಂದುವರಿಯೋಕೆ ಬರಲ್ಲ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.