ರಾಜಕಾರಣಿಗಳು ನಿಜವಾದ ಗೂಂಡಾಗಳು; ಚುನಾವಣೆ ಬಂದಾಗ ಹಿಂದೂಗಳ ಬಳಸಿಕೊಳ್ತಾರೆ, ಆ ಮೇಲೆ ರೌಡಿಶೀಟರ್ ಹಾಕ್ತಾರೆ: ಮುತಾಲಿಕ್ ವಾಗ್ದಾಳಿ

| Updated By: ಆಯೇಷಾ ಬಾನು

Updated on: Nov 25, 2021 | 1:58 PM

ಚುನಾವಣೆ ಬಂದಾಗ ರಾಜಕೀಯಕ್ಕೆ ಹಿಂದೂಗಳನ್ನು ಬಳಸಿಕೊಳ್ತಾರೆ. ಹಿಂದುತ್ವಕ್ಕೆ ಹೋರಾಡಿದವರ ಮೇಲೆ ರೌಡಿಶೀಟರ್ ಕೇಸ್ ಹಾಕಲಾಗುತ್ತೆ. ಅದನ್ನು ತಡೆಗಟ್ಟುವುದನ್ನು ಬಿಟ್ಟು, ತಮ್ಮ ಸ್ವಾರ್ಥಕ್ಕಾಗಿ ಹಿಂದುಗಳನ್ನು ಬಳಸಿಕೊಳ್ಳುತ್ತಾರೆ -ಪ್ರಮೋದ್ ಮುತಾಲಿಕ್ ವಾಗ್ದಾಳಿ

ರಾಜಕಾರಣಿಗಳು ನಿಜವಾದ ಗೂಂಡಾಗಳು; ಚುನಾವಣೆ ಬಂದಾಗ ಹಿಂದೂಗಳ ಬಳಸಿಕೊಳ್ತಾರೆ, ಆ ಮೇಲೆ ರೌಡಿಶೀಟರ್ ಹಾಕ್ತಾರೆ: ಮುತಾಲಿಕ್ ವಾಗ್ದಾಳಿ
ಪ್ರಮೋದ್ ಮುತಾಲಿಕ್
Follow us on

ವಿಜಯಪುರ: ರಾಜಕೀಯದವರು ಗೂಂಡಾಗಳು ಎಂದು ವಿಜಯಪುರದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ. ಶ್ರೀರಾಮಸೇನೆಯ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಲು ಆಗಮಿಸಿದ್ದ ವೇಳೆ ಪ್ರಮೋದ್ ಮುತಾಲಿಕ್ ಈ ರೀತಿ ವಾಗ್ದಾಳಿ ನಡೆಸಿದ್ದಾರೆ.

ಚುನಾವಣೆ ಬಂದಾಗ ರಾಜಕೀಯಕ್ಕೆ ಹಿಂದೂಗಳನ್ನು ಬಳಸಿಕೊಳ್ತಾರೆ. ಹಿಂದುತ್ವಕ್ಕೆ ಹೋರಾಡಿದವರ ಮೇಲೆ ರೌಡಿಶೀಟರ್ ಕೇಸ್ ಹಾಕಲಾಗುತ್ತೆ. ಅದನ್ನು ತಡೆಗಟ್ಟುವುದನ್ನು ಬಿಟ್ಟು, ತಮ್ಮ ಸ್ವಾರ್ಥಕ್ಕಾಗಿ ಹಿಂದುಗಳನ್ನು ಬಳಸಿಕೊಳ್ಳುತ್ತಾರೆ. ಹೀಗಾಗಿ ರಾಜಕಾರಣಿಗಳು ನಿಜವಾದ ಗೂಂಡಾಗಳು ಭ್ರಷ್ಟಾಚಾರಿಗಳೆಂದು ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.

ಸಾಲಾಗಿ ನಿಲ್ಲಿಸಿ ಗುಂಡು ಹಾರಿಸಬೇಕು
ಇನ್ನು ಪ್ರಮೋದ್ ಮುತಾಲಿಕ್ ರಾಜ್ಯದಲ್ಲಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಭ್ರಷ್ಟ ಅಧಿಕಾರಿಗಳನ್ನು ಗಲ್ಲಿಗೆ ಏರಿಸಬೇಕು. ಸಾಲಾಗಿ ನಿಲ್ಲಿಸಿ ಗುಂಡು ಹಾರಿಸಬೇಕೆಂದು ಪ್ರಮೋದ್ ಮುತಾಲಿಕ್ ಆಕ್ರೋಶ ಹೊರ ಹಾಕಿದ್ದಾರೆ. ಇಂತಹ ಅಧಿಕಾರಿಗಳ ಹಿಂದೆ ರಾಜಕಾರಣಿಗಳಿದ್ದಾರೆ. ಅವರನ್ನೂ ಹೊರಗೆ ಹಾಕಬೇಕು. ಹೊರಗೆ ಇದ್ದೋರು ಬಂದೂಕು, ಚಾಕು ಚೂರಿ ಹಿಡಿದುಕೊಂಡು ಲೂಟಿ ಮಾಡುತ್ತಾರೆ. ರಾಜಕೀಯದಲ್ಲಿ ಇದ್ದವರು ಅಧಿಕಾರಿಗಳನ್ನು ಬಳಸಿಕೊಂಡು ಲೂಟಿ ಮಾಡುತ್ತಾರೆ. ಎಲ್ಲ ಪಕ್ಷದ ಬಹುತೇಕ ರಾಜಕಾರಣಿಗಳು ಭ್ರಷ್ಟರು, ಗೂಂಡಾಗಳಾಗಿದ್ದಾರೆ ಎಂದು ರಾಜಕೀಯದಲ್ಲಿ ಅವಕಾಶ ಸಿಗದೇ ಆಸಕ್ತಿ ಕಳೆದುಕೊಂಡಿದ್ದಾಗಿ ನಗರದ ಶ್ರೀ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಮುತಾಲಿಕ್ ಅಸಮಾಧಾನ ಹೊರ ಹಾಕಿದ್ರು.

ಮತಾಂತರ ಮಾಡುವುದು ದೇಶದ್ರೋಹದ ಕೆಲಸ
ಇದೇ ವೇಳೆ ಮಾತನಾಡಿದ ಮುತಾಲಿಕ್, ಈವರೆಗೆ ಬಡವರು, ಅನಕ್ಷರಸ್ಥರ ಮತಾಂತರ ಮಾಡ್ತಿದ್ರು. ಈಗ ಎಲ್ಲ ಸಮುದಾಯ, ವರ್ಗಗಳ ಮತಾಂತರಕ್ಕೆ ಯತ್ನ ನಡೆಯುತ್ತಿದೆ. ದಾವಣಗೆರೆ, ಚಿತ್ರದುರ್ಗ ಭಾಗದಲ್ಲಿ 1 ಲಕ್ಷಕ್ಕೂ ಹೆಚ್ಚು ಲಿಂಗಾಯತರ ಮತಾಂತರವಾಗಿದೆ. ಮತಾಂತರ ಮಾಡುವುದು ದೇಶದ್ರೋಹದ ಕೆಲಸ. ಮತಾಂತರ ಮುಂದುವರಿಸಿದರೆ ಸಿಕ್ಕಸಿಕ್ಕಲ್ಲಿ ಒದೆಯಬೇಕಾಗುತ್ತೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವಂತೆ ಶ್ರೀರಾಮಸೇನೆ ಸಂಘಟನೆಯಿಂದ ಆಗ್ರಹಿಸಿದ್ದಾರೆ.

ಶಾಮನೂರು ಶಿವಶಂಕರಪ್ಪ ಅವರು ಮತಾಂತರ ಆದವರನ್ನು ವಾಪಸ್ ತರುವಂತೆ ಸಮಾಜಕ್ಕೆ ಪತ್ರ ಬರೆದಿದ್ದಾರೆ. ನಾನು ಅದನ್ನು ಸ್ವಾಗತಿಸುತ್ತೇನೆ. ಬೀದರ, ಕಲಬುರಗಿ ಭಾಗದಲ್ಲಿ ಶೇಕಡಾ 60% ರಷ್ಟು ಮಾದಿಗ ಸಮಾಜದವರನ್ನು ಮತಾಂತರ ಮಾಡಿದ್ದಾರೆ. ಮಠಾಧೀಶರೂ ಸಹ ಮಠವನ್ನು ಬಿಟ್ಟು ಹೊರಗೆ ಬಂದು ಕೇರಿಗಳಿಗೆ ಭೇಟಿ ನೀಡಬೇಕು. ಮತಾಂತರ ಆದವರನ್ನು ವಾಪಸ್ ತರುವ ಕೆಲಸ ಮಾಡಬೇಕು. ರಾತ್ರಿ ಹತ್ತು ಗಂಟೆಯಿಂದ ಬೆಳಗ್ಗೆ ಆರು ಗಂಟೆಯ ವರೆಗೆ ಯಾವುದೇ ಮೈಕ್ ಬಳಸುವಂತಿಲ್ಲ ಎಂದು ಸ್ರುಪ್ರೀಂ ಕೋರ್ಟ್ ಆರ್ಡರ್ ಮಾಡಿದೆ. ಆದರೆ ಬೆಳಗ್ಗೆ ಐದು ಗಂಟೆಗೆ ನಮಾಜ್ ಶುರು ಆಗುತ್ತೆ, ಇದು ನ್ಯಾಯಾಲಯ ಆದೇಶ ಉಲ್ಲಂಘನೆ ಆಗಿದೆ. ಆದರೆ ಪೊಲೀಸರು, ಕಾನೂನು ಬಾಯಿ ಮುಚ್ಚಿಕೊಂಡು ಕುಂತಿವೆ. ಸುಪ್ರೀಂ ಕೋರ್ಟ್ ಆರ್ಡರ್ ಇದೆ ಎಂದು ನಂಜನಗೂಡ ದೇವಸ್ಥಾನ ಒಡೆಯುತ್ತಾರೆ. ಅದೇ ಸುಪ್ರೀಂ ಕೋರ್ಟ್ ಆರ್ಡರ್ ಇದ್ದರೂ ಯಾಕೆ ಮಸೀದಿಯಲ್ಲಿನ ಮೈಕ್ ಬಂದ್ ಮಾಡುತ್ತಿಲ್ಲ. ಈ ರೀತಿ ಕಾನೂನು ಉಲ್ಲಂಘನೆ ಆಗಿದ್ದನ್ನು ತಡೆಯಬೇಕು ಎಂದು ಈಗಾಗಲೇ ರಾಜ್ಯದ ಎಲ್ಲ ತಹಶೀಲ್ದಾರ್​ಗಳಿಗೆ ಮನವಿ ಕೊಟ್ಟಿದ್ದೇವೆ. ಇನ್ಮುಂದೆ ಎಲ್ಲ ಡಿಸಿ ಕಚೇರಿಗಳ ಎದುರು ಹೋರಾಟ ನಡೆಸಲಾಗುವುದು ಎಂದರು.

ಇನ್ನು ಉಡುಪಿ ಪೇಜಾವರ‌ ಶ್ರೀಗಳ ಕುರಿತು ಹಂಸಲೇಖ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಪ್ರಮೋದ್ ಮುತಾಲಿಕ್, ಹಂಸಲೇಖ ಅವರು ದೊಡ್ಡ ವ್ಯಕ್ತಿ. ಅಂತಹ ಶಬ್ದ ಮಾತನಾಡಬಾರದಿತ್ತು. ಆದರೂ ಮಾತನಾಡಿದ್ದಾರೆ, ಅದನ್ನು ಖಂಡಿಸಿದ್ದೇನೆ. ಅವರು ಕ್ಷಮೆ ಕೇಳಿದ್ದಾರೆ. ಆದರೆ ಕ್ಷಮೆ ಕೇಳುವದಕ್ಕೂ ಅರ್ಹತೆ ಇಲ್ಲದಂತೆ ಮಾತನಾಡಿದ್ದಾರೆ ಎಂದರು. ನಟ ಚೇತನ್ ಹಂಸಲೇಖ ಪರ ನಿಲ್ಲುವ ಹಾಗೂ ಮಾತನಾಡಿದ  ವಿಚಾರಕ್ಕೆ ಸ್ಪಂದಿಸಿದ ಮುತಾಲಿಕ್, ಇಷ್ಟೆಲ್ಲಾ ಮಾಡುವ ಚೇತನ್ ಎಷ್ಟು ದಲಿತ ಕೇರಿಗಳಿಗೆ ಭೇಟಿ ನೀಡಿದ್ದಾರೆ. ದಲಿತರ ಪರ ನಿಮ್ಮ ಕೊಡುಗೆ ಏನು? ಕೆಲವರು ಇಂತಹದ್ದೆ ಅವಕಾಶಕ್ಕೆ ಕಾಯುತ್ತಿರುತ್ತಾರೆ ಎಂದು ಹೇಳಿದ್ರು.

ಇದನ್ನೂ ಓದಿ: ಜಿಲ್ಲಾಡಳಿತ ಆದೇಶ ಮೀರಿ ಕೋಲಾರಕ್ಕೆ ಆಗಮಿಸುತ್ತಿದ್ದ ಪ್ರಮೋದ್ ಮುತಾಲಿಕ್ ಪೊಲೀಸರ ವಶಕ್ಕೆ!

Published On - 1:43 pm, Thu, 25 November 21