Vijayapura Rathotsav: ವಿಜಯಪುರದಲ್ಲಿ ರಥದ ಚಕ್ರಕ್ಕೆ ಸಿಲುಕಿದ ಯುವಕ ಸಾವು; ಕಲಶ ಕಟ್ಟುತ್ತಿದ್ದಾಗ ರಥದಿಂದ ಜಾರಿ ಬಿದ್ದು ವ್ಯಕ್ತಿ ಸಾವು
ವಿಜಯಪುರ ಜಿಲ್ಲೆಯಲ್ಲಿ ಇಂದು ನಡೆದ ಎರಡು ಪ್ರತ್ಯೇಕ ರಥೋತ್ಸವದಲ್ಲಿ ಎರಡು ದುರ್ಘಟನೆಗಳು ನಡೆದಿವೆ. ಗೊಲ್ಲಾಳೇಶ್ವರ ರಥೋತ್ಸವದಲ್ಲಿ ರಥದ ಕಲಶ ಕಟ್ಟುತ್ತಿದ್ದಾಗ ಜಾರಿ ಬಿದ್ದು ವ್ಯಕ್ತಿ ಸಾವನ್ನಪ್ಪಿದರೆ, ಬಸರಕೋಡ ಗ್ರಾಮದಲ್ಲಿ ರಥದ ಚಕ್ರಕ್ಕೆ ಯುವಕನೋರ್ವ ಸಿಲುಕಿ ಸಾವನ್ನಪ್ಪಿದ ಘಟನೆ ನಡೆದಿದೆ.
ವಿಜಯಪುರ: ಜಿಲ್ಲೆಯಲ್ಲಿ ಇಂದು ನಡೆದ ಎರಡು ಪ್ರತ್ಯೇಕ ರಥೋತ್ಸವದಲ್ಲಿ (Rathotsav) ಎರಡು ದುರ್ಘಟನೆಗಳು ನಡೆದಿವೆ. ಗೊಲ್ಲಾಳೇಶ್ವರ ರಥೋತ್ಸವದಲ್ಲಿ (Gollaleshwara Rathotsava) ರಥದ ಕಲಶ ಕಟ್ಟುತ್ತಿದ್ದಾಗ ಜಾರಿ ಬಿದ್ದು ವ್ಯಕ್ತಿ ಸಾವನ್ನಪ್ಪಿದರೆ, ಬಸರಕೋಡ ಗ್ರಾಮದಲ್ಲಿ ರಥದ ಚಕ್ರಕ್ಕೆ ಯುವಕನೋರ್ವ ಸಿಲುಕಿ ಸಾವನ್ನಪ್ಪಿದ ಘಟನೆ ನಡೆದಿದೆ. ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಗೊಲ್ಲಾಳೇಶ್ವರ ರಥೋತ್ಸವದ ಹಿನ್ನೆಲೆ ಸಾಹೇಬಪಟೇಲ್ ಖಾಜಾಪಟೇಲ್ ಕಾಚಾಪುರ (55) ಎಂಬವರು ರಥದ ತುತ್ತ ತುದಿಯಲ್ಲಿ ಕಲಶ ಕಟ್ಟುತ್ತಿದ್ದರು. ಈ ವೇಳೆ ಖಾಜಾಪಟೇಲ್ ಅವರು ಕಾಲು ಜಾರಿ ರಥದಿಂದ ಬಿದ್ದಿದ್ದಾರೆ.
ಕಲಶ ಕಟ್ಟುವಾಗ ಕೈಯಲ್ಲಿದ್ದ ಹಗ್ಗ ಜಾರಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಕೂಡಲೇ ಗ್ರಾಮಸ್ಥರು ಗಾಯಾಳು ಖಾಜಾಪಟೇಲ್ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರೂ ಅವರು ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಈ ಘಟನೆಯ ದೃಶ್ಯಾವಳಿ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಖಾಜಾಪಾಟೇಲ್ ಅವರು 18ನೇ ವಯಸ್ಸಿನಿಂದಲೂ ರಥದ ಕಲಶ ಕಟ್ಟುವ ಕಾರ್ಯ ಮಾಡುತ್ತಿದ್ದರು. ಆದರೆ ಇಂದು ರಥದಿಂದಲೇ ಬಿದ್ದು ಸಾವನ್ನಪ್ಪಿದ್ದಾರೆ. ದುರ್ಘಟನೆ ಹಿನ್ನೆಲೆ ಗ್ರಾಮಸ್ಥರು ರಥೋತ್ಸವವನ್ನು ರದ್ದುಗೊಳಿಸಿದ್ದಾರೆ.
ಬಸರಕೋಡ ಗ್ರಾಮದಲ್ಲಿ ರಥದ ಚಕ್ರಕ್ಕೆ ಸಿಲುಕಿದ ಯುವಕ ಸಾವು
ಮತ್ತೊಂದು ರಥೋತ್ಸವ ದುರ್ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಸಂಭವಿಸಿದೆ. ತಾಲೂಕಿನ ಬಸರಕೋಡ ಗ್ರಾಮದಲ್ಲಿ ಪವಾಡ ಬಸವೇಶ್ವರ ಜಾತ್ರೆಯ ಪ್ರಯುಕ್ತ ರಥೋತ್ಸವ ನಡೆಸಲಾಗುತ್ತಿತ್ತು. ರಥ ಎಳೆಯುತ್ತಿದ್ದ ಸಂದರ್ಭದಲ್ಲಿ ನಾಗರಾಜ್ ಯಲ್ಲಪ್ಪ ವಣಕ್ಯಾಳ ಎಂಬ ಯುವಕ ರಥದ ಚಕ್ರದಡಿ ಬಿದ್ದಿದ್ದಾನೆ. ಈ ವೇಳೆ ಆತನ ಎರಡು ಕಾಲುಗಳ ಮೇಲೆ ಕಲ್ಲಿನ ಚಕ್ರ ಹರಿದು ಹೋಗಿದೆ. ಕೂಡಲೇ ಗಾಯಾಳು ನಾಗರಾಜ್ ಯಲ್ಲಪ್ಪನನ್ನು ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:26 pm, Thu, 6 April 23