ಸಿಜೆಐ ಮೇಲೆ ಶೂ ಎಸೆತ ಕೇಸ್​​​: ಅ 16ರಂದು ವಿಜಯಪುರ ನಗರ ಬಂದ್​ಗೆ ಕರೆ

ಸುಪ್ರೀಂಕೋರ್ಟ್ ಸಿಜೆ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ಪ್ರಕರಣ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ಮೋದಿ ಸೇರಿದಂತೆ ಸಿಎಂ ಸಿದ್ದರಾಮಯ್ಯ ಘಟನೆಯನ್ನು ಖಂಡಿಸಿದ್ದಾರೆ. ಇದೀಗ ಪ್ರಗತಿಪರ ಮತ್ತು ದಲಿತ ಸಂಘಟನೆಗಳು ಅಕ್ಟೋಬರ್ 16 ರಂದು ವಿಜಯಪುರ ಬಂದ್‌ಗೆ ಕರೆ ನೀಡಿವೆ. ವಕೀಲ ರಾಕೇಶ್ ಕಿಶೋರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿವೆ.

ಸಿಜೆಐ ಮೇಲೆ ಶೂ ಎಸೆತ ಕೇಸ್​​​: ಅ 16ರಂದು ವಿಜಯಪುರ ನಗರ ಬಂದ್​ಗೆ ಕರೆ
ವಿಜಯಪುರ ನಗರ ಬಂದ್​ಗೆ ನಿರ್ಧಾರ
Updated By: ಗಂಗಾಧರ​ ಬ. ಸಾಬೋಜಿ

Updated on: Oct 08, 2025 | 3:11 PM

ವಿಜಯಪುರ, ಅಕ್ಟೋಬರ್​ 08: ಸುಪ್ರೀಂಕೋರ್ಟ್ (Supreme Court) ಸಿಜೆ ಬಿ.ಆರ್. ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆತ ಪ್ರಕರಣ ದೇಶಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ನ್ಯಾಯವಾದಿಯ ವರ್ತನೆಗೆ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸದ್ಯ ಘಟನೆಯನ್ನು ಖಂಡಿಸಿ ಅಕ್ಟೋಬರ್ 16 ರಂದು ವಿಜಯಪುರ (Vijayapura) ನಗರ ಬಂದ್​ಗೆ ಪ್ರಗತಿ ಪರ ಸಂಘಟನೆಗಳು ಮತ್ತು ದಲಿತ ಪರ ಸಂಘಟನೆಗಳಿಂದ ಕರೆ ನೀಡಲಾಗಿದೆ.

ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ರಾಜೂ ಆಲಗೂರು ಹಾಗೂ ವಿವಿಧ ದಲಿತ ಪರ ಪ್ರಗತಿ ಪರ ಸಂಘಟನೆಗಳ ಮುಖಂಡರು ನಗರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ, ಅಕ್ಟೋಬರ್ 16 ರಂದು ವಿಜಯಪುರ ಬಂದ್​​ ನಿರ್ಧಾರವನ್ನು ತಿಳಿಸಿದರು.

ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಕಪ್ಪು ಚುಕ್ಕೆ

ಸಿಜೆಐ ಅವರ ಮೇಲೆ ಶೂ ಎಸೆಯುವ ಪ್ರಯತ್ನ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಕಪ್ಪು ಚುಕ್ಕೆಯಾಗಿದೆ. ಮನುವಾದಿ ಸಂಸ್ಕೃತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಮಾಜದವಾದ ಸಿದ್ದಾಂತ ಹೇಳುವ ಆರ್​ಎಸ್​ಎಸ್​ ಹಾಗೂ ಇತರೆ ನಾಯಕರು ಸಿಐಜೆ ಅವರ ಮೇಲೆ ನಡೆದ ಘಟನೆ ಕುರಿತು ನಾಳೆಯ ಸಭೆಯಲ್ಲಿ ಖಂಡಿಸಿಲಿ ಎಂದು ಮುಖಂಡರು ಸವಾಲು ಹಾಕಿದರು.

ಇದನ್ನೂ ಓದಿ: ಸುಪ್ರೀಂ ಕೋರ್ಟ್​ನಲ್ಲಿ ಮುಖ್ಯ ನ್ಯಾಯಮೂರ್ತಿ ಗವಾಯಿ ಮೇಲೆ ಶೂ ಬಿಸಾಡಲೆತ್ನಿಸಿದ ವಕೀಲ

ದೇಶದ ಪ್ರಧಾನಿ ಮೋದಿ ಅವರು ಘಟನೆ ನಡೆದು 10 ಗಂಟೆಗಳ ಬಳಿಕ ಅನಿವಾರ್ಯವಾಗಿ ಪ್ರತಿಕ್ರಿಯೆ ನೀಡಿದರು. ಅದು ಬಿಹಾರದ ಚುನಾವಣೆ ಕಾರಣ ಮಾತ್ರ ಮಾತನಾಡಿದರು ಎಂದು ಮಾಜಿ ಶಾಸಕ ರಾಜೂ ಆಲಗೂರು ಆರೋಪಿಸಿದರು. ಇದೇ ರೀತಿ ಘಟನೆ ನಡೆದರೆ ಇದಕ್ಕೆ ಉತ್ತರ ಕೊಡುವ ಪರಸ್ಥಿತಿ ನಿರ್ಮಾಣ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇನ್ನು ಅವಕಾಶ ಕೊಟ್ಟರೆ ಸಿಐಜೆ ಗವಾಯಿ ಅವರ ಎದೆ ಸೀಳುತ್ತೇನೆಂದು ಹೇಳಿದ ಕಥಾವಾಚಕರೊಬ್ಬರು ಹೇಳಿದ್ದು ದುರ್ದೈವ ಎಂದು ಮಾಜಿ ಶಾಸಕ ರಾಜೂ ಆಲಗೂರ ಕಿಡಿಕಾರಿದರು. ಓರ್ವ ಯೂಟ್ಯೂಬರ್ ಸಹ ಸಿಐಜೆ ಗವಾಯಿ ಅವರ ವಿರುದ್ಧ ಮೊದಲಿನಿಂದಲೂ ಅವಮಾನಕಾರಿ ವಿಡಿಯೋ ಹಾಕಿದ್ಧಾನೆಂದು ಆರೋಪ ಮಾಡಿದರು.

ಇದನ್ನೂ ಓದಿ: ಶೂ ಎಸೆತ: CJI ಬಿಆರ್ ಗವಾಯಿ ಜೊತೆ ಮಾತನಾಡಿದ ಬಳಿಕ ಪ್ರಧಾನಿ ಮೋದಿ ಹೇಳಿದ್ದೇನು?

ಸಿಜೆಐ ಗವಾಯಿ ಅವರ ಮೇಲೆ ಶೂ ಎಸೆಯುವ ಪ್ರಯತ್ನ ಮಾಡಿರುವ ನ್ಯಾಯವಾದಿ ಹಿಂದೆ ದೊಡ್ಡ ಶಕ್ತಿಯಿದೆ. ಆ ಶಕ್ತಿಯ ಧೈರ್ಯದಿಂದ ಶೂ ಎಸೆದಿದ್ದಾರೆ. ಇದೇ ವೇಳೆ ದಲಿತ ಪರ ಮುಖಂಡರು ಆರ್​​ಎಸ್​ಎಸ್​ ವಿರುದ್ದ ಗುಡುಗಿದರು. ಈ ಘಟನೆಯನ್ನು ಖಂಡಿಸಿ ವಿಜಯಪುರ ಜಿಲ್ಲೆಯ ದಲಿತ ಪರ ಸಂಘಟನೆಗಳು, ಪ್ರಗತಿ ಪರ ಸಂಘಟನೆಗಳು ಅಕ್ಟೋಬರ್ 16 ರಂದು ವಿಜಯಪುರ ಜಿಲ್ಲೆ ಬಂದ್ ಮಾಡಲಾಗುತ್ತದೆ. ಅಂದು ಶಾಲಾ ಕಾಲೇಜು, ಅಂಗಡಿ ಮುಂಗಟ್ಟು ಬಂದ್ ಆಗಲಿದೆ. ಜನರು, ವ್ಯಾಪಾರಿಗಳು, ಸಂಘಸಂಸ್ಥೆಗಳು ಸಹಕರಿಸುವಂತೆ ಮುಖಂಡರು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:09 pm, Wed, 8 October 25