ವಿಜಯಪುರ: ವಿಜಯಪುರದ (Vijayapur) ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ (Siddeshwar Swamiji) ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಶ್ರಮಕ್ಕೆ ಜಿಲ್ಲಾಧಿಕಾರಿ ಡಾ. ಮಹಾಂತೇಶ ದಾನಮ್ಮನವರ, ಎಸ್ಪಿ ಹೆಚ್ ಡಿ ಆನಂದಕುಮಾರ, ವೈದ್ಯ ಡಾ. ಮಲ್ಲಣ್ಣ ಮೂಲಿಮನಿ ಮತ್ತು ಸುತ್ತೂರಿನ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಭೇಟಿ ನೀಡಿದರು. ಭೇಟಿ ಬಳಿಕ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ ಮಲ್ಲಣ್ಣ ಮೂಲಿಮನಿ ಮಾತನಾಡಿ ಶ್ರೀಗಳ ಆರೋಗ್ಯ ಸ್ಥಿರವಾಗಿದೆ. ಬೆಳಿಗ್ಗೆಯಿಂದ ನಾರ್ಮಲ್ ಇದ್ದಾರೆ. ಪಲ್ಸ್, ಬಿಪಿ, ಉಸಿರಾಟ ಸಹಜವಾಗಿದೆ. ಸ್ವಾಮೀಜಿ ಗಂಜಿ ಕುಡಿದಿದ್ದಾರೆ. ನಿನ್ನೆ ಆಕ್ಸಿಜನ್ ಕಡಿಮೆಯಾಗಿತ್ತು. ಈಗ ನಾರ್ಮಲ್ ಇದೆ. ಕಳೆದ ಕೆಲ ದಿನಗಳಿಂದ ಊಟ ಮಾಡಿಲ್ಲ ಕಾರಣ ಅವರು ಹೊರಗೆ ಬರಲಾಗುತ್ತಿಲ್ಲ ಎಂದರು.
ಜಿಲ್ಲಾಧಿಕಾರಿ ಡಾ ಮಹಾಂತೇಶ ದಾನಮ್ಮನವರ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರ್ದೇಶನದ ಮೇರೆಗೆ ಬಂದಿದ್ದೇವೆ. ನಿನ್ನೆ ಸಿಎಂ ಬೊಮ್ಮಾಯಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ದರ್ಶನ ಪಡೆದಿದ್ದಾರೆ. ಶ್ರೀಗಳಆರೋಗ್ಯದ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಬೇಕೆಂದು ಸೂಚನೆ ಇದೆ. ಅವರ ಸೂಚನೆ ಮೇರೆಗೆ ನಾವು ನಿತ್ಯ ಭೇಟಿ ಮಾಡುತ್ತಿದ್ದೇವೆ. ಕೆಲ ಮಾದ್ಯಮದಲ್ಲಿ ತಪ್ಪು ಸಂದೇಶ ಬಂದಿದೆ. ತಪ್ಪು ಸಂದೇಶ ಬೇಡ. ವೈದ್ಯರು ಹೆಲ್ತ್ ಬುಲೆಟಿನ್ ನೀಡುತ್ತಾರೆ. ಶ್ರೀಗಳು ಊಟ ಮಾಡದ ಕಾರಣ ಅಶಕ್ತಿ ಇದೆ. ಭಕ್ತರು ಸಹಕಾರ ನೀಡಬೇಕು ಎಂದು ಹೇಳಿದರು.
ತಪ್ಪು ಸಂದೇಶ ಜನರಲ್ಲಿ ಹೋಗಿದ್ದು ಸುಳ್ಳು. ಭಕ್ತರ ನಿಯಂತ್ರಣಕ್ಕೆ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ. ತಪ್ಪು ಸಂದೇಶದ ಕಾರಣ ಜನರು ಹೆಚ್ಚು ಬರುತ್ತಿದ್ದಾರೆ. ಈ ಕಾರಣ ನಾವು ಇಲ್ಲಿ ಬಂದಿದ್ದೇವೆ. ಅದನ್ನು ಬಿಟ್ಟು ಬೇರೆ ವಿಚಾರ ಇಲ್ಲ. ಶ್ರೀಗಳು ಆರೋಗ್ಯವಾಗಿದ್ದಾರೆ. ಏನೇ ಇದ್ದರೂ ಎಲ್ಲರ ಗಮನಕ್ಕೆ ತರುತ್ತೇವೆ. ಭಕ್ತರು ಗಾಬರಿಯಾಗಬೇಕಿಲ್ಲ. ಟ್ರಾಫಿಕ್, ಜನ ಸಂದನಿ, ಗದ್ದಲ ನಿವಾರಣೆಗೆ ಪೊಲೀಸ್ ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂದು ಎಸ್ಪಿ ಹೆಚ್ ಡಿ ಆನಂದಕುಮಾರ ಹೇಳಿದರು.
ಸಿದ್ದೇಶ್ವರ ಸ್ವಾಮೀಜಿ ಆರೋಗ್ಯ ಸ್ಥಿರವಾಗಿದೆ.ಸಿದ್ದೇಶ್ವರ ಸ್ವಾಮೀಜಿರವರ ಪಲ್ಸ್ ರೇಟ್, ಬಿಪಿ ನಾರ್ಮಲ್ ಇದೆ. ಹೆಚ್ಚಿನ ಚಿಕಿತ್ಸೆಗೆ ಶ್ರೀಗಳು ಒಪ್ಪುತ್ತಿಲ್ಲ, ಆಹಾರವನ್ನೂ ಸ್ವೀಕರಿಸುತ್ತಿಲ್ಲ. ಸಿದ್ದೇಶ್ವರ ಶ್ರೀಗಳು ಆಹಾರ ಸೇವಿಸದ ಕಾರಣ ಅಶಕ್ತರಾಗಿದ್ದಾರೆ. ಸಿಎಂ ಬೊಮ್ಮಾಯಿ ಸೂಚನೆ ಮೇರೆಗೆ ಅಧಿಕಾರಿಗಳು ಓಡಾಡುತ್ತಿದ್ದಾರೆ. ಸಿಎಂ ಹಾಗೂ ಕೇಂದ್ರ ಸಚಿವರು ನಿನ್ನೆ ಶ್ರೀಗಳ ದರ್ಶನ ಪಡೆದಿದ್ದಾರೆ. ಪ್ರಧಾನಿ ಮೋದಿ ಕೂಡ ಸಿದ್ದೇಶ್ವರ ಶ್ರೀಗಳ ಜೊತೆ ಮಾತನಾಡಿದ್ದಾರೆ ಎಂದು ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.