ವಿಜಯಪುರ: ನಿನ್ನೆ(ಜನವರಿ 02) ವೈಕುಂಟ ಏಕಾದಶಿಯಂದು ಸಾಯಂಕಾಲ 6 ಗಂಟೆಗೆ ಶಿವೈಕ್ಯರಾಗಿದ್ದ ವಿಜಯಪುರದ ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಅಂತ್ಯಕ್ರಿಯೆಯನ್ನು ಇಂದು(ಜನವರಿ 03) ಆಶ್ರಮದ ಆವರಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ, ಅವರ ಇಚ್ಛೆಯಂತೆಯೇ ನೆರವೇರಿಸಲಾಯಿತು. ಬಸವಲಿಂಗ ಶ್ರೀ ಸೇರಿದಂತೆ ವಿವಿಧ ಮಠಾಧೀಶರಿಂದ ಅಗ್ನಿಸ್ಪರ್ಶ ಮಾಡಿದರು. ಕೊಬ್ಬರಿಯೊಳಗೆ ದೇಶಿ ಹಸುವಿನ ತುಪ್ಪ ಹಾಕಿ ಅಗ್ನಿಸ್ಪರ್ಶ ಮಾಡಲಾಯ್ತು. ಇನ್ನು ಚಿತೆಗೆ ಶ್ರೀಗಂಧದ ಕಟ್ಟಿಗೆ, ಬೆರಣಿ, ದೇಶಿ ಹಸುವಿನ ತುಪ್ಪ ಬಳಸಲಾಗಿದೆ.
ದೇಹವನ್ನು ಭೂಮಿಯಲ್ಲಿಡುವ ಬದಲು ಅಗ್ನಿಯಿಂದ ಸ್ಪರ್ಶ ಮಾಡುವುದು. ಶ್ರಾದ್ಧಿಕ ವಿಧಿ-ವಿಧಾನಕರ್ಮಗಳು ಅನಗತ್ಯ. ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸುವುದು. ಯಾವುದೇ ಬಗೆಯ ಸ್ಮಾರಕ ನಿರ್ಮಿಸಬಾರದು ಎಂದು ಸ್ವಾಮೀಜಿ ಅಭಿವಂದನ ಪತ್ರದಲ್ಲಿ ಬರೆದಿಟ್ಟಿದ್ದರು. ಅದರಂತೆ ಅಗ್ನಿಸ್ಪರ್ಶ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಯ್ತು.
ಅಂತ್ಯಕ್ರಿಯೆಗೂ ಮುನ್ನ ಶ್ರೀಗಳಿಗೆ ಸಾಯಂಕಾಲ 5 ಗಂಟೆ 15 ನಿಮಿಷಕ್ಕೆ ಪೊಲೀಸರಿಂದ ಮೂರು ಸುತ್ತಿನ ಗುಂಡು ಹಾರಿಸುವ ಮೂಲಕ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಶ್ರೀಗಳ ಅಂತಿಮ ದರ್ಶನ ಪಡೆಯಲು ನಗರದ ವಿಜಯಪುರದ ಸೈನಿಕ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಲಕ್ಷಾಂತರ ಭಕ್ತರು ದರ್ಶನ ಪಡೆದರು. ಬಳಿಕ ಶ್ರೀಗಳ ಪಾರ್ಥಿವ ಶರೀರವನ್ನು ಸೈನಿಕ ಶಾಲೆಯಿಂದ ಜ್ಞಾನಯೋಗಾಶ್ರಮದ ವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆತರಲಾಯ್ತು.
ಇನ್ನು ಶ್ರೀಗಳ ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಮುರುಗೇಶ್ ನಿರಾಣಿ, ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ್, ಶಶಿಕಲಾ ಜೊಲ್ಲೆ ಉಪಸ್ಥಿತರಿದ್ದರು. ಇನ್ನೂ ಮಾಜಿ ಸಚಿವರಾದ ಹೆಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಶಾಸಕರಾದ ಸಿದ್ದು ಸವದಿ, ದೊಡ್ಡನಗೌಡ ಪಾಟೀಲ್, ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ಪ್ರಭಾಕರ ಕೋರೆ ಭಾಗಿಯಾಗಿದ್ದರು
ಬೊಮ್ಮಾಯಿ ಸಂಪುಟದ ಕೆಲವು ಸಚಿವರು, ಬಿಜೆಪಿಯ ಕೆಲ ಶಾಸಕರು, ಕಾಂಗ್ರೆಸ್ ಮತ್ತು ಜೆಡಿಎಸ್ನ ಕೆಲವು ಶಾಸಕರು ಭಾಗಿಯಾಗಿದ್ದರು. ಇನ್ನೂ ಶ್ರೀಗಳ ಅಂತ್ಯಕ್ರಿಯೆಯಲ್ಲಿ ಕನ್ಹೇರಿಮಠದ ಅದೃಶ್ಯನಂದ ಕಾಡಸಿದ್ದೇಶ್ವರ ಸ್ವಾಮೀಜಿ, ಕೂಡಲಸಂಗಮದ ಪಂಚಮಸಾಲಿ ಗುರುಪೀಠಾಧ್ಯಕ್ಷ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಸೇರಿದಂತೆ ಇನ್ನೂ ವಿವಿಧ ಮಠಗಳ ಮಠಾದೀಶರು ಭಾಗಿಯಾಗಿದ್ದರು.
Published On - 8:59 pm, Tue, 3 January 23