ವಿಜಯಪುರ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಸಿಂದಗಿ ಕ್ಷೇತ್ರವೂ ಒಂದು. ಭೀಮಾತೀರದ ಗ್ರಾಮಗಳನ್ನು ಹೊಂದಿರುವ ಸಿಂದಗಿ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಬೈ ಎಲೆಕ್ಷನ್ ಎದುರಾಗಿದೆ. ಸಿಂದಗಿ ಕ್ಷೇತ್ರದ ಶಾಸಕರಾಗಿದ್ದ 85 ವರ್ಷಗಳ ಪ್ರಾಯದ ಎಂ.ಸಿ.ಮನಗೂಳಿ ಅವರು ನಿಧನರಾದ ಕಾರಣ ಉಪ ಚುನಾವಣೆ ಇಲ್ಲಿ ನಡೆಯಲಿದೆ. ಇಂದು ಕೇಂದ್ರ ಚುನಾವಣಾ ಆಯೋಗ ಸಿಂದಗಿ ಮಿನಿ ದಂಗಲ್ಗೆ ದಿನಾಂಕ ನಿಗದಿಪಡಿಸಿದೆ. ಅಲ್ಲದೇ ಕೊರೊನಾ ಮುಂಜಾಗೃತಾ ಕ್ರಮಗಳನ್ನು ಎಲ್ಲರೂ ಅವಶ್ಯಕವಾಗಿ ಪಾಲನೆ ಮಾಡಬೇಕೆಂದು ಕಟ್ಟು ನಿಟ್ಟಿನ ಸೂಚನೆ ನೀಡಿದೆ.
ಎಂ.ಸಿ.ಮನಗೂಳಿ: ಒಂದು ಕಿರು ಪರಿಚಯ
ಪುರಸಭೆ ಸದಸ್ಯರಾಗಿ ರಾಜಕೀಯಕ್ಕೆ ಎಂಟ್ರಿ ಕೊಡುವ ಮೂಲಕ ಇವರ ರಾಜಕೀಯ ಜೀವನ ಆರಂಭ. ಬಳಿಕ 1994 ರಲ್ಲಿ ಮೊದಲ ಬಾರಿಗೆ ಎಂ.ಸಿ.ಮನಗೂಳಿ ಶಾಸಕರಾಗಿ ಆಯ್ಕೆಯಾಗಿದ್ದರು. ಅದಕ್ಕೂ ಮುನ್ನ 1989 ರಲ್ಲಿ ಜಯಪ್ರಕಾಶ ನಾರಾಯಣ ಪಕ್ಷದಿಂದ ಸ್ಪರ್ಧಿಸಿ 21,169 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಆರ್.ಬಿ.ಚೌಧರಿ ವಿರುದ್ದ ಸೋತಿದ್ದರು. ಬಳಿಕ 1994 ನೇ ವರ್ಷ ಎಂ.ಸಿ.ಮನಗೂಳಿ ಪಾಲಿಗೆ ಅದೃಷ್ಟದ ವರ್ಷವೆಂದೇ ಹೇಳಬಹುದು. 1994 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನತಾದಳದಿಂದ ಸ್ಪರ್ಧಿಸಿ 45,356 ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರು. ಪ್ರತಿಸ್ಪರ್ಧಿ ಡಾ.ಆರ್.ಬಿ.ಚೌಧರಿಯವರನ್ನು 28,219 ಮತಗಳ ಬಾರೀ ಅಂತರದಿಂದ ಸೋಲಿಸಿ, 1989 ರ ಸೋಲಿನ ಸೇಡನ್ನು ತೀರಿಸಿಕೊಂಡಿದ್ದರು. ಆಗ ದೇವೇಗೌಡರ ನೇತೃತ್ವದಲ್ಲಿ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದ್ದರು. ನಂತರ 1999, 2003, 2008 ಹಾಗೂ 2013 ರಲ್ಲಿ ಸಾಲು ಸಾಲು ಸ್ಪರ್ಧೆ ಮಾಡಿದ್ದರೂ ಸಹ ಗೆಲುವು ಮಾತ್ರ ಮರೀಚಿಕೆಯಾಗಿತ್ತು. 2018 ರಲ್ಲಿ ಮತ್ತೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಎಂ.ಸಿ.ಮನಗೂಳಿ 70,865 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಬಿಜೆಪಿಯ ರಮೇಶ ಭೂಸನೂರನ್ನು 9305 ಮತಗಳ ಅಂತರದಲ್ಲಿ ಸೋಲಿಸಿ 2013 ರ ಸೋಲಿಗೆ ತಿರುಗೇಟು ನೀಡಿದ್ದರು. ಬಳಿಕ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ತೋಟಗಾರಿಕಾ ಸಚಿವರಾದರು. ಹೀಗೆ ಶಾಸಕರಾದಾಗಲೊಮ್ಮೆ ಮಂತ್ರಿಯಾಗಿದ್ದು ಎಂ.ಸಿ.ಮನಗೂಳಿ ಸಾಧನೆಯಾಗಿದೆ.
ಸತತ ಎರಡು ಬಾರಿ ಗೆಲ್ಲುವುದು ಸಿಂದಗಿ ಕ್ಷೇತ್ರದಲ್ಲಿ ಕಷ್ಟ
ಸಿಂದಗಿ ಕ್ಷೇತ್ರದಲ್ಲಿ ಸ್ವಾತಂತ್ರ್ಯಾನಂತರ ನಡೆದ ಎಲ್ಲಾ ವಿಧಾನಸಭಾ ಚುನಾವಣೆಗಳನ್ನು ನಾವು ಗಮನಿಸಿದಾಗ ಸತತವಾಗಿ ಇಲ್ಲಿ ಗೆಲ್ಲುವುದು ಅತೀ ವಿರಳ. ಅಂತ ಸಾಧನೆ ಮಾಡಿದ ಏಕೈಕ ವ್ಯಕ್ತಿಯೇ ರಮೇಶ ಭೂಸನೂರು. ಬಿಜೆಪಿ ಪಕ್ಷದಿಂದ ಸತತ ಎರಡು ಬಾರಿ ಶಾಸಕರಾಗಿ ಆಯ್ಕೆಯಾದ ಕೀರ್ತಿ ರಮೇಶ ಭೂಸನೂರಿಗೆ ಇದೆ. ಜಿಲ್ಲಾ ಪಂಚಾಯತ್ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ್ದ ರಮೇಶ ಭೂಸನೂರು ಹಲವಾರು ಏರಿಳಿತ ಕಂಡು ಸತತ ಎರಡು ಬಾರಿ ಅಂದರೆ 2008 ಹಾಗೂ 2013 ರಲ್ಲಿ ಶಾಸಕರಾಗಿ ಆಯ್ಕೆ ಆಗಿದ್ದು. ಇವರನ್ನು ಹೊರತು ಪಡಿಸಿದರೆ ಸತತವಾಗಿ ಎರಡು ಬಾರಿ ಇಂದಿಗೂ ಬೇರೆಯವರು ಶಾಸಕರಾಗಿ ಆಯ್ಕೆಯಾಗಿಲ್ಲ. ಅದೇ ರಮೇಶ ಭೂಸನೂರು 2018 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಹ್ಯಾಟ್ರಿಕ್ ಗೆಲುವು ಪಡೆಯಬೇಕೆಂದು ಕನಸು ಕಂಡಿದ್ದರು. ಆದರೆ ಎದುರಾಳಿ ಜೆಡಿಎಸ್ ನ ಎಂ.ಸಿ.ಮನಗೂಳಿ 9305 ಮತಗಳ ಅಂತರದಿಂದ ಸೋಲುಣಿಸಿದ್ದರು.
2021 ರ ಜನವರಿ 28 ರಂದು ಹಾಲಿ ಶಾಸಕ ಎಂ ಸಿ ಮನಗೂಳಿ ವಯೋಸಹಜ ಖಾಯಿಲೆಗಳಿಂದ ನಿಧನರಾದ ಕಾರಣ ಉಪ ಚುನಾವಣೆ ನಡೆಯಲಿದೆ. ಸಾಮಾನ್ಯವಾಗಿ ಚುನಾವಣಾ ನಿಯಮಗಳ ಪ್ರಕಾರ ಯಾವುದೇ ಕ್ಷೇತ್ರದ ಜನಪ್ರತಿನಿಧಿ ಮೃತಪಟ್ಟರೆ, ಮುಂದಿನ ಆರು ತಿಂಗಳಲ್ಲಿ ಉಪ ಚುನಾವಣೆ ನಡೆಸಬೇಕೆಂಬ ನಿಯಮವಿದೆ. ಈ ನಿಯಮದ ಪ್ರಕಾರ ಜುಲೈ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಉಪ ಚುನಾವಣೆ ನಡೆಯಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಅನಿವಾರ್ಯವಾಗಿ ಮುಂದಕ್ಕೆ ಹೋಗಿದ್ದು ಇದೀಗ ಕೇಂದ್ರ ಚುನಾವಣಾ ಆಯೋಗ ಸಿಂದಗಿ ಉಪ ಚುನಾವಣೆಗೆ ಮಹೂರ್ತಿ ಫಿಕ್ಸ್ ಮಾಡಿದೆ. ಇದೇ ಅಕ್ಟೋಬರ್ 1 ರಂದು ಚುನಾವಣಾ ನೊಟೀಸು ಹೊರಡಿಸಲಾಗುತ್ತಿದೆ. ಅಕ್ಟೋಬರ್ 8 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಅಕ್ಟೋಬರ್ 11 ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದೆ. ನಂತರ 13 ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಅಕ್ಟೋಬರ್ 30 ರಂದು ಮತದಾನ ಪ್ರಕ್ರಿಯೆಗೆ ಮಹೂರ್ತ ನಿಗದಿ ಮಾಡಲಾಗಿದೆ. ನವೆಂಬರ್ 2 ರಂದು ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟವಾಗಲಿದೆ. ಮತ ಎಣಿಕಾ ಕಾರ್ಯ ಜಿಲ್ಲಾ ಸ್ಥಾನದಲ್ಲಿ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪಿ ಸುನೀಲಕುಮಾರ ಮಾಹಿತಿ ನೀಡಿದ್ದಾರೆ.
ಮತದಾರರ ಮಾಹಿತಿ
ಇಂಡಿ ಉಪ ವಿಭಾಗಾಧಿಕಾರಿ ರಾಹುಲ್ ಶಿಂಧೆ ಚುನಾವಣಾಧಿಕಾರಿಗಳಾಗಿ ಹಾಗೂ ಸಿಂದಗಿ ತಹಶೀಲ್ದಾರ್ ಸಂಜೀವಕುಮಾರ ದಾಸರ ಸಹಾಯಕ ಚುನಾವಣಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಸಿಂದಗಿ ಕ್ಷೇತ್ರದಲ್ಲಿ ಒಟ್ಟು 2,34,309 ಮತದಾರರಿದ್ದಾರೆ. ಈ ಪೈಕಿ 1,20,949 ಪುರುಷರು, 1,13,327 ಮಹಿಳಾ ಮತದಾರರು ಹಾಗೂ 33 ಇತರೆ ಮತದಾರರು ಮತ ಚಲಾವಣೆಯ ಹಕ್ಕು ಪಡೆದಿದ್ದಾರೆ. ಇನ್ನು ವಿದ್ಯುನ್ಮಾನ ಮತ ಯಂತ್ರಗಳಲ್ಲಿ ಮತದಾರರು ಮತಗಳನ್ನು ಚಲಾವಣೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಬಿಇಎಲ್ ಮೂಲಕ ವಿದ್ಯುನ್ಮಾನ ಯಂತ್ರಗಳನ್ನು ವಿವಿ ಪ್ಯಾಟ್ ಗಳನ್ನು ತರಿಸಿಕೊಳ್ಳಲಾಗಿದೆ. 696 ಬ್ಯಾಲೆಟ್ ಯೂನಿಟ್, 687 ಕಂಟ್ರೋಲ್ ಯುನಿಟ್, 686 ವಿವಿ ಪ್ಯಾಟ್ ಗಳನ್ನು ಬಿಇಎಲ್ ಇಂಜಿನೀಯರ್ಗಳಿಂದ ಪ್ರಾಥಮಿಕ ಹಂತದ ಪರಿಶೀಲನೆ ನಡೆಸಿ ಇಡಲಾಗಿದೆ. ಕ್ಷೇತ್ರದಲ್ಲಿ 271 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಇದಕ್ಕಾಗಿ 2200 ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ. ಜೊತೆಗೆ 15 ಸೆಕ್ಟರ್ ಆಧಿಕಾರಿಗಳು, 60 ಪ್ಲಾಯಿಂಗ್ ಸ್ಕ್ವಾಟ್, 75 ಸ್ಟ್ಯಾಟಿಕ್ ಸರ್ವಲನ್ಸ್ ತಂಡ, 1 ಲೆಕ್ಕ ಪರಿಶೀಲನಾ ತಂಡ, 12 ಮಾಸ್ಟರ್ ಟ್ರೇನರ್ಗಳನ್ನು ನಿಯೋಜಿಸಲಾಗುತ್ತದೆ.
ಜಾತಿವಾರು ಲೆಕ್ಕಾಚಾರ
ಕ್ಷೇತ್ರದಲ್ಲಿ ಒಟ್ಟು 2,34,309 ಮತದಾರರಿದ್ದು ಇಲ್ಲಿ ಜಾತಿ ಲೆಕ್ಕಾಚಾರ ಸೋಲು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಅಂದಾಜಿನ ಪ್ರಕಾರ ಸಿಂದಗಿ ಕ್ಷೇತ್ರದಲ್ಲಿ ಜಾತಿವಾರು ಮತದಾರರ ಅಂಕಿ ಅಂಶಗಳನ್ನು ನಾವು ಲೆಕ್ಕ ಹಾಕಿದಾಗ ಪಂಚಮಸಾಲಿ 22000, ಬಣಜಿಗ 115000, ಆಧಿ ಬಣಜಿಗ 4000, ಹಾಲು ಮತ ಕುರುಬ ಸಮಾಜ 37000, ಗಾಣಿಗ 31000- ಮುಸ್ಲಿಂ 38000, ರೆಡ್ಡಿ 3500, ಕೋಳಿ ಕಬ್ಬಲಿಗಾ 21000, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ 55000, ಜಂಗಮ 6500- ಕುಡ ಒಕ್ಕಲಿಗ 3500 ಮತದಾರಿದ್ದಾರೆ. ಇದೇ ಜಾತಿ ಆಧಾರದ ಮೇಲೆ ಟಿಕೆಟ್ ಹಂಚಿಕೆ ಆಗುತ್ತದೆ ಎಂಬುದು ಎಲ್ಲರಗೂ ಗೊತ್ತಿರುವ ವಿಚಾರ.
ಚುನಾವಣೆ ದಿನಾಂಕ ಮುನ್ನವೇ ಘೋಷಣೆಯಾಗಿರುವ ಕಾಂಗ್ರೆಸ್ ಅಭ್ಯರ್ಥಿ
ಇಂದು ಕೇಂದ್ರ ಚುನಾವಣಾ ಆಯೋಗ ಸಿಂದಗಿ ಉಪ ಸಮರ ಘೋಷಣೆ ಮಾಡಿದ್ದೇ ತಡಾ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಮುಂಚಿನ ಸಂಚಲನ ಉಂಟಾಗಿದೆ. ಜೆಡಿಎಸ್ ಶಾಸಕ ಎಂ.ಸಿ.ಮನಗೂಳಿ ನಿಧರಾದ ಬಳಿಕ ಮನಗೂಳಿ ಅವರ ಪುತ್ರ ಜೆಡಿಎಸ್ ಸಖ್ಯ ತೊರೆದು ಕಾಂಗ್ರೆಸ್ ತೆಕ್ಕೆ ಸೇರಿಕೊಂಡರು. ಕಳೆದ ಮಾರ್ಚ್ 9 ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂ.ಸಿ.ಮನಗೂಳಿ ಪುತ್ರ ಅಶೋಕ ಮನಗೂಳಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡು ಪಕ್ಷ ಸೇರ್ಪಡೆಯಾದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಪಕ್ಷದ ಮುಖಂಡರಾದ ಸಿದ್ದರಾಮಯ್ಯ, ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಎಸ್.ಆರ್.ಪಾಟೀಲ್, ಈಶ್ವರ ಖಂಡ್ರೆ ಸೇರಿದಂತೆ ಇತರೆ ನಾಯಕರ ಸಮ್ಮತಿಯೊಂದಿಗೆ ಸಿಂದಗಿ ಉಪ ಚುನಾವಣೆಗೆ ಅಶೋಕ ಮನಗೂಳಿ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರು. ಆಗಿನಿಂದಲೇ ಅಶೋಕ ಮನಗೂಳಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕ್ಷೇತ್ರದಲ್ಲಿ ಒಂದು ಹಂತದ ಪ್ರಚಾರ ನಡೆಸಿ ಬಿಟ್ಟಿದ್ದಾರೆ. ಕೊರೊನಾ ಲಾಕ್ ಡೌನ್ನಲ್ಲಿ ಪ್ರಚಾರ ಸ್ಥಗಿತವಾಗಿದೆ. ಕೆಲ ಅನಿವಾರ್ಯ ಕಾರಣಗಳಿಂದ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದೇನೆ. ಉಪ ಚುನಾವಣೆಯಲ್ಲಿ ಇಡೀ ಆಡಳಿತ ವ್ಯವಸ್ಥೆಯೇ ಜಮಾಯಿಸುತ್ತದೆ. ಹಾಗಾಗಿ ನನಗೆ ರಾಷ್ಟ್ರೀಯ ಪಕ್ಷದ ಆಸರೆ ಬೇಕಿತ್ತು. ನಮ್ಮ ತಂದೆ ಮಾಡಿರೋ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ನಾನು ಮತಯಾಚನೆ ಮಾಡೋದಾಗಿ ಹೇಳಿದ್ದಾರೆ. ಅಶೋಕ ಮನಗೂಳಿಗೆ ಟಿಕೆಟ್ ತಪ್ಪಿಸಲು ಮೂಲ ಕೈ ಬಣ ಮಾಜಿ ಶಾಸಕ ಶರಣಪ್ಪ ಸುಣಗಾರ ನೇತೃತ್ವದಲ್ಲಿ ಕಾಂಗ್ರೆಸ್ ವರಿಷ್ಟರ ಭೇಟಿ ಮಾಡಿ ಟಿಕೆಟ್ ತಪ್ಪಿಸಲು ಹಾಗೂ ಮೂಲ ಕಾಂಗ್ರೆಸ್ಸಿಗರಿಗೆ ಟಿಕೆಟ್ ನೀಡಬೇಕೆಂದು ಅಹವಾಲು ಸಲ್ಲಿಸಿದೆ. ಆದರೆ ಅಶೋಕ ಮನಗೂಳಿಗೆ ಟಿಕೆಟ್ ತಪ್ಪಿಸೋದು ಕಷ್ಟದ ಕೆಲಸವೆಂದೇ ಹೇಳಬಹುದಾಗಿದೆ.
ಟಿಕೆಟ್ಗಾಗಿ ಬಿಜೆಪಿ ಜೆಡಿಎಸ್ನಲ್ಲಿ ಲಾಬಿ
ಇನ್ನು ಬಿಜೆಪಿಯಲ್ಲಿ ಟಿಕೆಟ್ಗಾಗಿ ಬಾರೀ ಲಾಬಿ ನಡೆದಿದೆ. ಎರಡು ಬಾರಿ ಶಾಸಕರಾಗಿದ್ದ ರಮೇಶ ಭೂಸನೂರು 2018 ರಲ್ಲಿ ಸೋಲುಂಡಿದ್ದರು. ಈ ಬಾರಿಯೂ ನನಗೆ ಟಿಕೆಟ್ ನೀಡಬೇಕೆಂದು ಉನ್ನತ ಮಟ್ಟದಲ್ಲಿ ಲಾಭಿ ನಡೆಸಿದ್ದಾರೆ. ಇದರಾಚೆ ಲಿಂಬು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ ಹಾಗೂ ಇತರೆ ಕೆಲ ಮುಖಂಡರು ಸೋತವರಿಗೆ ಯಾಕೆ ಮಣೆ ಹಾಕೋದು? ಎನ್ನುತ್ತ ಹೊಸಬರಿಗೆ ಗೆಲ್ಲುವವರಿಗೆ ಟಿಕೆಟ್ ನೀಡಬೇಕೆಂದು ಬಿಜೆಪಿ ವರಿಷ್ಟರ ಭೇಟಿ ಮಾಡಿ ಮನವಿ ಸಲ್ಲಿಸಿದೆ. ಇಷ್ಟರ ಮಧ್ಯೆ ಪರಿಷತ್ ಸದಸ್ಯ ಅರುಣ ಶಹಾಪುರಗೆ ಟಿಕೆಟ್ ನೀಡಬೇಕೆಂದು ತೆರೆಮರೆಯಲ್ಲಿಯೇ ಪ್ರಯತ್ನ ಸಾಗಿದೆ. ಇದರ ಹೊರತಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ.ವೈ. ವಿಜಯೇಂದ್ರ ಹಾಗೂ ಮಾಜಿ ಸಚಿವ ಲಕ್ಷ್ಮಣ ಸವದಿ ಉಪ ಸಮರದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ ಈ ಕುರಿತು ಯಾವುದೇ ಆಧಿಕೃತ ಮಾಹಿತಿ ಇಲ್ಲ.
ಇನ್ನೇನು ಕೆಲವೇ ದಿನಗಳಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಲಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಮೋಹನ ಟೆಂಗಿನಕಾಯಿ ಹೇಳಿದ್ದಾರೆ. ಜಿಲ್ಲಾ ಕಾರ್ಯಕಾರಿಣಿ ಸಭೆ ನಡೆಸಿದ ಬಳಿಕ ಮಾತನಾಡಿದ ಟೆಂಗಿನಕಾಯಿ ಇಂದು ಕಾಕತಾಳೀಯ ಎಂಬಂತೆ ಕಾರ್ಯಕಾರಣಿ ಸಭೆ ನಡೆಯುವಾಗಲೇ ಸಿಂದಗಿ ಉಪ ಚುನಾವಣೆಗೆ ದಿನಾಂಕ ಘೋಷಣೆಯಾಯ್ತು. ಸಿಂದಗಿ ಉಪ ಸಮರಕ್ಕೆ ನಾವು ಎಲ್ಲಾ ತಯಾರಿ ಮಾಡಿಕೊಂಡಿದ್ದೇವೆ. ಇಂದು ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡಲಾಗುತ್ತದೆ. ಪಕ್ಷದಲ್ಲಿ ಅಳೆದು ತೂಗಿ ಅಭ್ಯರ್ಥಿ ಘೋಷಣೆ ಮಾಡಲಾಗುತ್ತದೆ. ಯಾರೇ ಅಭ್ಯರ್ಥಿಯಾದರೂ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಸಿಂದಗಿ ಹಾಗೂ ಹಾನಗಲ್ ಉಪ ಚುನಾವಣೆಯಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ. ಇನ್ನು ತನ್ನ ಪಕ್ಷದ ಎಂ.ಸಿ.ಮನಗೂಳಿ ನಿಧನರಾದ ಬಳಿಕ ಮನಗೂಳಿ ಪುತ್ರ ಅಶೋಕ ಮನಗೂಳಿ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದ್ದು ಜೆಡಿಎಸ್ಗೆ ಹೊಡೆತ ಬಿದ್ದಿದ್ದು ಮಾತ್ರ ಸುಳ್ಳಲ್ಲ, ಹಲವಾರು ಜನರು ಟಿಕೆಟ್ ಆಕಾಂಕ್ಷಿಗಳಿದ್ದರೂ ಸೂಕ್ತ ಅಭ್ಯರ್ಥಿಗಾಗಿ ಎದುರು ನೋಡುತ್ತಿದೆ. ಜೊತೆಗೆ ಇಂಡಿ ಕ್ಷೇತ್ರದಿಂದ ಮೂರು ಬಾರಿ ಪಕ್ಷೇತರವಾಗಿ ಸ್ಪರ್ಧೆ ಮಾಡಿ ಶಾಸಕರಾಗಿದ್ದ ರವಿಕಾಂತಗೌಡ ಪಾಟೀಲ್ ಜೆಡಿಎಸ್ ಅಭ್ಯರ್ಥಿಯಾಗುವುದು ಒಂದು ಹಂತದಲ್ಲಿ ಪಕ್ಕಾ ಎನ್ನಬಹುದಾಗಿದೆ. ಆದರೆ ಕೊನೆ ಕ್ಷಣದಲ್ಲಿ ಜೆಡಿಎಸ್ ನಿರ್ಧಾರ ಬದಲಾಗದರೂ ಅಚ್ಚರಿ ಪಡಬೇಕಿಲ್ಲ.
ಗೆಲುವಿಗೆ ಜಾತಿ ಲೆಕ್ಕಾಚಾರ
ಸಿಂದಗಿ ಕ್ಷೇತ್ರದಲ್ಲಿ ಒಟ್ಟು 2,34,309 ಮತದಾರರಿದ್ದು ಈ ಪೈಕಿ ಹೆಚ್ಚು ಮತದಾರರು ಇರೋ ಸಮುದಾಯದ ಅಭ್ಯರ್ಥಿಗೆ ಗೆಲುವು ಸುಲಭ ಎನ್ನಬಹುದು. ಆದರೆ ಇದು ಮೇಲ್ಮೋಟಕ್ಕೆ ಮಾತ್ರ ಕಂಡು ಬರೋ ಸತ್ಯ. ಒಳ ಹಂತದಲ್ಲಿ ನಡೆಯುವ ರಾಜಕಾರಣವೇ ಬೇರೆಯಾಗಿದೆ. ಹೆಚ್ಚು ಮತದಾರರನ್ನು ಹೊಂದಿರುವ ಜಾತಿಯ ಅಭ್ಯರ್ಥಿಗೆ ಇತರೆ ಸಮುದಾಯದ ಮತಗಳೂ ಹರಿದು ಬಂದರೆ ಮಾತ್ರ ಗೆಲುವು ಸಾಧ್ಯ. ತಮ್ಮ ಸಮಾಜದ ಮತಗಳ ಮೇಲೆ ಮಾತ್ರ ಅವಲಂಬನೆ ಆದರೆ ಗೆಲುವು ಮರೀಚಿಕೆಯಾಗಲಿದೆ. ಹೆಚ್ಚು ಮತದಾರರನ್ನು ಹೊಂದಿರುವ ಗಾಣಿಗ, ಪಂಚಮಸಾಲಿ, ಎಸ್ಸಿಎಸ್ಟಿ, ಮುಸ್ಲಿಂ, ಕೋಳಿ ಕಬ್ಬಲಿಗ ಹಾಗೂ ಕುರುಬ ಸಮಾಜಗಳ ಮತದಾರರು ನಿರ್ಣಾಯಕರಾಗುತ್ತಾರೆ. ಈ ಪೈಕಿ ಯಾವುದೇ ಜಾತಿಯ ಅಭ್ಯರ್ಥಿ ಕಣಕ್ಕಿಳಿದರೂ ಇತರೆ ಜಾತಿಯ ಮತದಾರರ ಒಲವನ್ನು ಪಡೆಯಬೇಕಿದೆ. ಬಿಜೆಪಿ ಹಿಂದುತ್ವವನ್ನು ಪ್ರತಿಪಾದಿಸಿ ಮತಬೇಟೆ ನಡೆಸಿದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಜಾತ್ಯಾತೀತ ಸಿದ್ಧಾಂತ ಪ್ರತಿಪಾದಿಸುವ ಮೂಲಕ ಮತಯಾಚನೆ ಮಾಡಲಿದೆ. ಬಿಜೆಪಿಗೆ ಗಾಣಿಗ ಸಮುದಾಯದ ಮತಗಳೆಲ್ಲಾ ಒನ್ ಸೈಡ್ ಬರುತ್ತದೆ ಎಂಬ ವಿಶ್ವಾಸವಿದೆ. ಇದರಾಚೆ ಇತರೆ ಸಮುದಾಯದ ಶೇಕಡಾ 50 ರಷ್ಟು ಮತಗಳನ್ನು ಸೆಳೆದರೂ ಗೆಲುವು ಸರಳ ಎಂಬ ಲೆಕ್ಕಾಚಾರ ಇದೆ.
ಇತ್ತ ಕಾಂಗ್ರೆಸ್ ಪಂಚಮಸಾಲಿ ಸಮುದಾಯದ ಅಶೋಕ ಮನಗೂಳಿಯನ್ನು ಅಭ್ಯರ್ಥಿಯನ್ನಾಗಿ ಘೋಷನೆ ಮಾಡಿರುವ ಕಾರಣ ಪಂಚಮಸಾಲಿ ಸಮಾಜದ ಮತಗಳು ನಿರಾಯಾಸವಾಗಿ ಕೈ ಪಾಲಾಗುತ್ತದೆ. ಜೊತೆಗೆ ಸಾಂಪ್ರದಾಯಿಕ ಮುಸ್ಲಿಂ ಮತಗಳು ಕಾಂಗ್ರೆಸ್ ಬಿಟ್ಟುಹೋಗದು ಎಂಬ ವಿಶ್ವಾಸವಿದೆ. ಇದರ ಜೊತೆಗೆ ಸಿದ್ದರಾಮಯ್ಯ ಕಾರಣದಿಂದ ಹಾಲುಮತ ಅಂದರೆ ಕುರುಬ ಸಮಾಜದ ಮತಗಳು ಕಾಂಗ್ರೆಸ್ ಪಾಲಾಗುತ್ತವೆ ಎನ್ನುತ್ತಿದ್ದಾರೆ. ರೆಡ್ಡಿ ಹಾಗೂ ಕೋಳಿ ಕಬ್ಬಲಿಗಾ ಸಮುದಾಯ ಹಾಗು ಇತರೆ ಸಮುದಾಯದ ಮತಗಳನ್ನು ಸೆಳೆದರೆ ಗೆದ್ದಂತೆ ಎಂಬ ಲೆಕ್ಕಾಚಾರ ಕೈ ಪಡೆಯಲ್ಲಿದೆ. ಇಷ್ಟರಮಧ್ಯೆ ಜೆಡಿಎಸ್ ಸಹ ಪಂಚಮಸಾಲಿ ಸಮಾಜದ ರವಿಕಾಂತಗೌಡ ಪಾಟೀಲರನ್ನು ಕಣಕ್ಕಿಳಿಸಿದರೆ ಬಿಜೆಪಿಯೇತರ ಮತಗಳಲ್ಲಿ ವಿಭಜನೆ ಆಗಿ ಅದು ಬಿಜೆಪಿಗೆ ಲಾಭವಾಗುವ ಸಾದ್ಯತೆಯಿದೆ. ಈ ಮೂರು ಪಕ್ಷಗಳ ಜೊತೆಗೆ ಇತರೆ ಪಕ್ಷಗಳು ತಮ್ಮ ಹಿರಿಯಾಳುಗಳನ್ನು ಅಖಾಡಕ್ಕೆ ಇಳಿಸಿದರೆ ಇವರೆಲ್ಲರ ಲೆಕ್ಕಾಚಾರವೂ ತಪ್ಪಾಗುವ ಸಾಧ್ಯತೆಯಿದೆ.
ಒಟ್ಟಾರೆ ಸಿಂದಗಿ ಉಪ ಚುನಾವಣೆಯ ಕಾವು ಇನ್ನೇನು ಕ್ರಮೇಣ ಏರಲಿದೆ. ರಾಜಕೀಯ ಪಕ್ಷಗಳಲ್ಲಿ ಚುನಾವಣೆಯ ಕೆಲಸ ಕಾರ್ಯಗಳು ಭರದಿಂದ ಸಾಗಲಿವೆ. ಇನ್ನೊಂದು ತಿಂಗಳ ಕಾಲ ಜಿಲ್ಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಚಿವರು ಶಾಸಕರ ಓಡಾಟ ಹೆಚ್ಚಾಗಲಿದೆ. ಆಡಳಿತರೂಢ ಬಿಜೆಪಿ ಸರ್ಕಾರ ಕೆಲ ದಿನಗಳ ಕಾಲ ಸಿಂದಗಿಯಲ್ಲಿಯೇ ಬೀಡು ಬಿಡಲಿದೆ. ಸಿಎಂ ಬೊಮ್ಮಾಯಿ ಸಹಿತ ಕೇಂದ್ರದ ನಾಯಕರು ಚುನಾವಣಾ ಪ್ರಚಾರಕ್ಕೆ ಸಾಕ್ಷಿಯಾಗಲಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ವರಿಷ್ಟರು, ಮುಖಂಡರು ಸಿಂದಗಿಯತ್ತ ಮುಖ ಮಾಡಲಿದ್ದಾರೆ.
ವಿಶೇಷ ವರದಿ: ಅಶೋಕ ಯಡಳ್ಳಿ
ಟಿವಿ9 ವಿಜಯಪುರ
ಇದನ್ನೂ ಓದಿ:
Hangal Bypoll 2021: ಹಾನಗಲ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ಯಾರು? ಬಿಜೆಪಿ- ಕಾಂಗ್ರೆಸ್ ಪೈಪೋಟಿ ಹೇಗಿದೆ?
Karnataka Bypoll Dates: ರಾಜ್ಯದ ಹಾನಗಲ್, ಸಿಂದಗಿ ಕ್ಷೇತ್ರಗಳಿಗೆ ಉಪಚುನಾವಣೆಯ ದಿನಾಂಕ ಘೋಷಣೆ
Published On - 8:24 pm, Tue, 28 September 21