AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ತಿಂಗಳಲ್ಲಿ 3 ಬಾರಿ ಲಘು ಭೂಕಂಪ: ಬೆಚ್ಚಿಬಿದ್ದ ವಿಜಯಪುರ ಜನ; ವೈಜ್ಞಾನಿಕ ಅಧ್ಯಯನಕ್ಕೆ ಆಗ್ರಹ

ವಿಜಯಪುರ ಜಿಲ್ಲೆಯಲ್ಲಿ ಪದೇ ಪದೇ ಸಂಭವಿಸುತ್ತಿರುವ ಭೂಕಂಪನ ಜನರಲ್ಲಿ ಆತಂಕ ಮೂಡಿಸಿದೆ. ಒಂದೇ ತಿಂಗಳಲ್ಲಿ ಮೂರು ಬಾರಿ ಭೂಮಿ ಕಂಪಿಸಿರುವುದು ರಿಕ್ಟರ್ ಮಾಪಕದಲ್ಲಿ ದಾಖಲಾಗಿದ್ದು, ಸ್ಥಳೀಯರಲ್ಲಿ ತೀವ್ರ ಭೀತಿ ಹುಟ್ಟಿಸಿದೆ. ಹಾಗಾದರೆ ಭೂಕಂಪನಕ್ಕೆ ಕಾರಣವೇನು, ಈ ಕುರಿತಾಗಿ ತಜ್ಞರು ಹೇಳುವುದು ಏನು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಒಂದೇ ತಿಂಗಳಲ್ಲಿ 3 ಬಾರಿ ಲಘು ಭೂಕಂಪ: ಬೆಚ್ಚಿಬಿದ್ದ ವಿಜಯಪುರ ಜನ; ವೈಜ್ಞಾನಿಕ ಅಧ್ಯಯನಕ್ಕೆ ಆಗ್ರಹ
ವಿಜಯಪುರ ಜಿಲ್ಲೆಯ ಒಂದು ಹಳ್ಳಿ Image Credit source: tv9 kannada
ಅಶೋಕ ಯಡಳ್ಳಿ, ವಿಜಯಪುರ
| Edited By: |

Updated on: Oct 02, 2026 | 5:06 PM

Share

ಮುಖ್ಯಾಂಶಗಳು

  • ವಿಜಯಪುರದಲ್ಲಿ ಪದೇ ಪದೇ ಭೂಕಂಪನ
  • ಒಂದೇ ತಿಂಗಳಲ್ಲೇ ಮೂರು ಬಾರಿ ಭೂಕಂಪನ 
  • ಭೂಕಂಪನದಿಂದ ಗಾಬರಿಗೊಂಡ ಜನರು

ವಿಜಯಪುರ, ಅಕ್ಟೋಬರ್​ 02: ಜಿಲ್ಲೆಯಲ್ಲಿ ಮತ್ತೆ ಭೂಕಂಪನದ ವಾತಾವರಣ ಮನೆ ಮಾಡಿದೆ. ಕಳೆದ ಹಲವು ವರ್ಷಗಳಿಂದ ವಿಜಯಪುರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಉಂಟಾಗುತ್ತಿದ್ದ ಭೂಕಂಪನದ ಅನುಭವ ಇದೀಗ ಮತ್ತೆ ಶುರುವಾಗಿದೆ. ಒಂದೇ ತಿಂಗಳಲ್ಲಿ ಮೂರು ಬಾರಿ ಭೂಮಿ ಕಂಪಿಸಿರುವುದು ರಿಕ್ಟರ್ ಮಾಪನದಲ್ಲಿ ದಾಖಲಾಗಿದ್ದು, ಜನರು ಭಯಗೊಳ್ಳುವಂತೆ ಮಾಡಿದೆ.

ಒಂದೇ ತಿಂಗಳಲ್ಲೇ ಮೂರು ಬಾರಿ ಭೂಕಂಪನ 

ಕಳೆದ ಕೆಲ ವರ್ಷಗಳಿಂದ ವಿಜಯಪುರ ಜಿಲ್ಲೆಯ ತಿಕೋಟಾ‌, ಕೊಲ್ಹಾರ, ನಿಡಗುಂದಿ, ಬಸವನಬಾಗೇವಾಡಿ ತಾಲೂಕಿನ ಭಾಗಗಳಲ್ಲಿ ಭೂಕಂಪನವಾಗಿರುವ ವರದಿಯಾಗಿದೆ. ಇದೀಗ ಬಸವನಬಾಗೇವಾಡಿ ತಾಲೂಕಿನಲ್ಲಿ ಸೆಪ್ಟೆಂಬರ್​ನಲ್ಲಿ ಮೂರು ಬಾರಿ ಭೂಕಂಪನವಾಗಿರುವ ವರದಿಯಾಗಿದೆ. ಸೆಪ್ಟೆಂಬರ್ 30ರ ನಸುಕಿನ ಜಾವ ಎರಡು ಗಂಟೆ ಸುಮಾರಿಗೆ ಬಸವನಬಾಗೇವಾಡಿ ಪಟ್ಟಣದ ಈಶಾನ್ಯ ದಿಕ್ಕಿನಲ್ಲಿ ಸುಮಾರು 3.9 ಕಿ.ಮೀ ದೂರದ ಕೇಂದ್ರಬಿಂದುವಿನಲ್ಲಿ ಭೂಕಂಪನ ಸಂಭವಿಸಿದೆ. ಸೆಪ್ಟೆಂಬರ್​ ಒಂದೇ ತಿಂಗಳಲ್ಲೇ ಮೂರು ಬಾರಿ ಲಘು ಭೂಕಂಪನ ಸಂಭವಿಸಿದೆ. ಹೀಗೆ ಪದೇ ಪದೇ ಭೂಮಿ ಕಂಪಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಇದನ್ನೂ ಓದಿ: Earthquake in Karnataka: ಕಲಬುರಗಿ ಮತ್ತು ವಿಜಯಪುರದಲ್ಲಿ ಕಂಪಿಸಿದ ಭೂಮಿ

ಭೂಮಿಯಿಂದ 10 ಕಿ.ಮೀ ಆಳದಲ್ಲಿ ಸಂಭವಿಸಿರುವ ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.5 ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ತಿಳಿಸಿದೆ. ಇದಕ್ಕೂ ಮೊದಲು ಸೆಪ್ಟೆಂಬರ್ 28ರ ಮಧ್ಯರಾತ್ರಿ 12.26ರ ಸುಮಾರಿಗೆ ತಾಲೂಕಿನ ದಿಂಡಿವಾರ ಗ್ರಾಮ ಪಂಚಾಯಿತಿ ಕಚೇರಿಯಿಂದ ಸುಮಾರು 1.1 ಕಿ.ಮೀ ನೈಋತ್ಯ ದಿಕ್ಕಿನಲ್ಲಿ 10 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿತ್ತು.  ಇದರ ತೀವ್ರತೆಯೂ 3.5ರಷ್ಟಿತ್ತು. ಅಷ್ಟೇ ಅಲ್ಲದೆ ಸೆಪ್ಟೆಂಬರ್ 17ರಂದು ನಸುಕಿನ ಜಾವ 5.30ರ ಸುಮಾರಿಗೆ ಇಂಗಳೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿ ಸಮೀಪದಲ್ಲಿ 3.7 ತೀವ್ರತೆಯ ಲಘು ಭೂಕಂಪನ ಸಂಭವಿಸಿತ್ತು. ಹೀಗೆ ಒಂದೇ ತಿಂಗಳಲ್ಲಿ ತಾಲೂಕಿನಲ್ಲಿ ಮೂರು ಬಾರಿ ಭೂಮಿ ಕಂಪಿಸಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ವೈಜ್ಞಾನಿಕ ಅಧ್ಯಯನಕ್ಕೆ ಆಗ್ರಹ 

‘ಇನ್ನು ಪದೇ ಪದೇ ಭೂಕಂಪನ ಸಂಭವಿಸುತ್ತಿರುವ ಹಿನ್ನೆಲೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಭೂಕಂಪನ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ವೈಜ್ಞಾನಿಕ ಅಧ್ಯಯನ ನಡೆಸಬೇಕು. ಭೂಕಂಪನಕ್ಕೆ ಕಾರಣವೇನು ಎಂಬುದರ ಕುರಿತು ಸ್ಪಷ್ಟ ಮಾಹಿತಿ ನೀಡಿ, ಸಾರ್ವಜನಿಕರಲ್ಲಿರುವ ಆತಂಕವನ್ನು ದೂರ ಮಾಡಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

LIVE TV

ಲಘು ಭೂಕಂಪನ ಹಿನ್ನೆಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಜಿಲ್ಲಾ ಭೂವಿಜ್ಞಾನಿಗಳ ತಂಡ ತಾಲೂಕಿನ ವಿವಿಧ ಭಾಗಗಳಿಗೆ ಭೇಟಿ ನೀಡಿ, ಭೂಕಂಪನದ ಸ್ವರೂಪ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದೆ.‌ ತಹಶೀಲ್ದಾರ್ ವೈ ಎಸ್ ಸೋಮನಕಟ್ಟಿ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು, ಪಟ್ಟಣದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಭೆ ಮಾಡಿದ್ದಾರೆ. ಈ ವೇಳೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಚಂದ್ರಶೇಖರ ಕೆ. ಹಾಗೂ ಹಿರಿಯ ಭೂವಿಜ್ಞಾನಿ ಮಹೇಶ ಬಿರಾಜನವರ ಭೂಕಂಪನದ ಕುರಿತು ಮಾಹಿತಿ ನೀಡಿದರು.

ಭೂಮಿ‌ ಚಲನೆ ವೇಳೆ ನಡೆಯುವ ಸಹಜ ಪ್ರಕ್ರಿಯೆ: ಜನರು ಭಯಗೊಳ್ಳಬಾರದು; ಭೂವಿಜ್ಞಾನಿ ಚಂದ್ರಶೇಖರ

‘ಭೂಕಂಪನ ಆಗುತ್ತಿರುವ ಕಾರಣ ಮಣ್ಣಿನ ಗುಣ, ಭೂ ಚಲನೆ’ ಕುರಿತು ಭೂವಿಜ್ಞಾನಿ ಚಂದ್ರಶೇಖರ ಅವರು ಮಾಹಿತಿ‌ ನೀಡಿದರು.‌ ‘ಭೂಮಿಯಾಳದಲ್ಲಿ‌ ಸುಣ್ಣದ ಕಲ್ಲುಗಳ ಮಾದರಿ ಮಣ್ಣಿನ ಗುಣವಿದೆ. ಕಲ್ಲು ಪದರುಗಳಿದ್ದು, ಭೂಮಿ‌ ಚಲನೆ ವೇಳೆ ನಡೆಯುವ ಸಹಜ ಪ್ರಕ್ರಿಯೆ ಇದಾಗಿದೆ. ಸದ್ಯ 3.7 ಗರಿಷ್ಟ ತೀವ್ರತೆಯ ಕಂಪನವಾಗಿದೆ. ಇದರಿಂದ ಯಾವುದೇ ತೊಂದರೆಯಿಲ್ಲ‌, ಜನರು ಭಯಗೊಳ್ಳಬಾರದು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ವಿಜಯಪುರದಲ್ಲಿ ಮತ್ತೆ ಗುಂಡಿನ ಮೊರೆತ: ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮೇಲೆ ಫೈರಿಂಗ್​​; ಆರೋಪಿ ಅರೆಸ್ಟ್​​

ವಿಜಯಪುರ ಜಿಲ್ಲೆಯಲ್ಲಿ ಉಂಟಾಗಿರುವ ಭೂಕಂಪನ ಎಲ್ಲರ ಭಯಕ್ಕೆ ಕಾರಣವಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಪ್ರಕಾರ, ಈಗ ಸಂಭವಿಸುತ್ತಿರುವ ಮತ್ತು ದಾಖಲಾಗಿರುವ ಭೂಕಂಪನ ಯಾವುದೇ ರೀತಿಯ ಮಾರಕವಲ್ಲ ಎಂದಿದ್ದಾರೆ. ಆದರೂ ಜನರು ಭಯಗೊಂಡಿದ್ದಾರೆ. ಹೆಚ್ಚಿನ ತೀವ್ರತೆಯ ಕಂಪನವಾದರೆ ಅಪಾಯ ಎಂದು ಜನರು ಚರ್ಚೆ ಮಾಡುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಅಶೋಕ ಯಡಳ್ಳಿ, ವಿಜಯಪುರ
ಅಶೋಕ ಯಡಳ್ಳಿ, ವಿಜಯಪುರ

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More