
ವಿಜಯಪುರ, ಆಗಸ್ಟ್ 29: ವಿಜಯಪುರ ಜಿಲ್ಲೆ (Vijayapura) ಬಸನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್ (Canara Bank) ಮುಂದೆ ನೂರಾರು ಗ್ರಾಹಕರು ಜಮಾಯಿಸಿ ಬ್ಯಾಂಕ್ ಬಾಗಿಲು ಹಾಕಿ ಬಂದ್ ಮಾಡಿ ಆಕ್ರೋಶ ಹೊರ ಹಾಕಿದರು. ಪುರುಷರು, ಮಹಿಳೆಯರು ಸೇರಿದಂತೆ 1360 ಕ್ಕೂ ಅಧಿಕ ಗ್ರಾಹಕರು ಕೆನರಾ ಬ್ಯಾಂಕ್ನಲ್ಲಿ ಅಡವಿಟ್ಟಿದ್ದ ಚಿನ್ನದ ಪರಿಹಾರ ಸರಿಯಾಗಿ ನೀಡುತ್ತಿಲ್ಲವೆಂದು ಆರೋಪಿಸಿ ಪ್ರತಿಭಟನೆ ನಡೆಸಿದರು.
ಕಳೆದ ಮೇ 25 ರಂದು ಇದೇ ಮನಗೂಳಿಯ ಕೆನರಾ ಬ್ಯಾಂಕ್ ಕಳ್ಳತನವಾಗಿತ್ತು. 58 ಕೆಜಿ ಚಿನ್ನಾಭರಣ ಹಾಗೂ 5 ಲಕ್ಷ ರೂ. ನಗದು ಕಳ್ಳತನವಾಗಿತ್ತು. ಗ್ರಾಹಕರು ಅಡವಿಟ್ಟದ್ದ ಚಿನ್ನವನ್ನು ಖದೀಮರು ಕದ್ದು ಪರಾರಿಯಾಗಿದ್ದರು. ಈ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆ ಬಳಿಕ ಗ್ರಾಹಕರಿಗೆ ಪ್ರಸಕ್ತ ದಿನದ ಚಿನ್ನದ ಬೆಲೆಯನ್ನು ಪರಿಹಾರವಾಗಿ ನೀಡುತ್ತೇವೆಂದು ಬ್ಯಾಂಕ್ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಆದರೆ, ಪೊಲೀಸರು ತನಿಖೆ ನಡೆಸಿ 15 ಆರೋಪಿಗಳನ್ನು ಬಂಧಿಸಿ 38.5 ಕೆಜಿ ಚಿನ್ನಾಭರಣ, 1.16 ಕೋಟಿ ನಗದು ಹಣ, ಕೃತ್ಯಕ್ಕೆ ಬಳಕೆ ಮಾಡಿದ ವಾಹನಗಳು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಈಗ ಬ್ಯಾಂಕ್ ಅಧಿಕಾರಿಗಳು ಚಿನ್ನವನ್ನು ಅಡವಿಟ್ಟಿರುವ ಗ್ರಾಹಕರಿಗೆ 10 ಗ್ರಾಂಗೆ 92 ಸಾವಿರ ರೂಪಾಯಿ ಪರಿಹಾರ ನೀಡುತ್ತಿದ್ದಾರೆ. ಪ್ರಸಕ್ತ ಮಾರುಕಟ್ಟೆ ದರ 1.02 ಲಕ್ಷ ರೂಪಾಯಿ ಇದೆ. ಬ್ಯಾಂಕ್ನವರು ನೀಡುತ್ತಿರುವ ಪರಿಹಾರ ಸರಿಯಿಲ್ಲ. ನಮಗೆ ಪರಿಹಾರವೇ ಬೇಡ, ನಮ್ಮ ಚಿನ್ನಾಭರಣಗಳನ್ನು ವಾಪಸ್ ನೀಡಿದರೆ ಸಾಕು ಎಂದು ಗ್ರಾಹಕರು ಒತ್ತಾಯ ಮಾಡಿದ್ಧಾರೆ. ಬ್ಯಾಂಕ್ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.
ಕೆನರಾ ಬ್ಯಾಂಕ್ ಕಳ್ಳತನ ಮಾಡಿದ್ದ, ಇದೇ ಬ್ಯಾಂಕ್ನಲ್ಲಿ ಮ್ಯಾನೇಜರ್ ಆಗಿದ್ದ ವಿಜಯಕುಮಾರ ಮಿರಯಾಲ, ಚಂದ್ರಶೇಖರ್ ನರೆಲ್ಲಾ ಹಾಗೂ ಸುನೀಲ ಮೋಕಾ ಎಂಬ ಮೂವರು ಖದೀಮರನ್ನು ಪೊಲೀಸರು ಜೂನ್ 26 ರಂದು ಬಂಧಿಸಿದ್ದರು. ನಂತರ ತನಿಖೆ ಮುಂದುವರೆಸಿ ಹುಬ್ಬಳಿ ಮೂಲದ ಬಂಧಿತರಾದ ಬಾಲರಾಜ್ ಮಣಿಕಮ್ ಯರಿಕುಲಾ, ಗುಂಡು ಜೋಶೇಪ್, ಇಜಾಜ್ ಧಾರವಾಡ, ಚಂದನ ರಾಜ್ ಪಿಳೈ, ಪೀಟರ್ ಜಯಚಂದ್ರಪಾಲ್, ಸುಸೈರಾಜ್ ಡ್ಯಾನಿಯಲ್, ಬಾಬುರಾವ ಮಿರಿಯಾಲ, ಮೊಹಮ್ಮದ್ ಆಸೀಫ್ ಕಲ್ಲೂರ್,ಅನೀಲ್ ಮಿರಿಯಾಲ್, ಅಬು ಯಶ್ ಮಾಲಾ, ಸುಲೇಮನವೆಸ್ಲಿ ಪಲುಕುರಿ, ಮರಿಯಾದಾಸ ಗೋನಾರಿಂದ ಕೃತ್ಯಕ್ಕೆ ಬಳಕೆ ಮಾಡಿ ವಾಹನಗಳು, ಸಾಮಗ್ರಿಗಳು ಸೇರಿದಂತೆ 38.5 ಕೆಜಿ ಚಿನ್ನಾಭರಣ ಗಟ್ಟಿ ಹಾಗೂ 1.16 ಕೋಟಿ ನಗದು ವಶಕ್ಕೆ ಪಡೆದಿದ್ದರು. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಇದಾದ ಬಳಿಕ ಗ್ರಾಹಕರು ಅಡವಿಟ್ಟಿರುವ ಚಿನ್ನದ ಬದಲಾಗಿ ಬ್ಯಾಂಕ್ನವರು ನೀಡುತ್ತಿರುವ ಪರಿಹಾರ ವಿಚಾರ ಸಮಸ್ಯೆಗೆ ಕಾರಣವಾಗಿದೆ.
ಸದ್ಯ ಸ್ಥಳಕ್ಕೆ ಬ್ಯಾಂಕ್ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸ್ ಆಧಿಕಾರಿಗಳುನ ಆಗಮಿಸಿ ಗ್ರಾಹಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸರ ನಿಯೋಜನೆ ಹಾಗೂ ಒಂದು ಡಿಎಆರ್ ತುಕಡಿಯನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: ಬಾಗಪ್ಪ ಹರಿಜನ ಹೊಸ ಶಿಷ್ಯನಿಂದ ಹಳೆ ಶಿಷ್ಯನ ಹತ್ಯೆ: ಜೈಲಲ್ಲಿ ಇದ್ದುಕೊಂಡೇ ಸಂಚು, ತನಿಖೆಯಲ್ಲಿ ಅಸಲಿ ಸತ್ಯ ಬಯಲಿಗೆ
ಏತನ್ಮರ್ಧಯೆ ಗ್ರಾಹಕರು ಅಡವಿಟ್ಟ ಚಿನ್ನಾಭರಣಗಳಿಗೆ ಪರಿಹಾರವಾಗಿ ಸೂಕ್ತ ದರ ನಿಗದಿ ಮಾಡಲು ಬ್ಯಾಂಕ್ ಅಧಿಕಾರಿಗಳು 15 ದಿನಗಳ ಕಾಲಾವಕಾಶ ಕೇಳಿದ್ಧಾರೆ. ಗ್ರಾಹಕರು 15 ದಿನಗಳ ಬದಲಾಗಿ 1 ತಿಂಗಳ ಸಮಯ ನೀಡಿದ್ದಾರೆ. ಆದರೆ, ಚಿನ್ನಕ್ಕೆ ಪ್ರಸಕ್ತ ಮಾರುಕಟ್ಟೆ ದರ ನೀಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.