ಬರ ನಡುವೆಯೂ ವಿಜಯಪುರ ಜಿಲ್ಲೆಯ ದ್ರಾಕ್ಷಿ ಬೆಳೆಗಾರರಿಗೆ ಬೆಳೆ ವಿಮೆ ಆಸರೆ: ಖಾತೆಗೆ ಜಮೆಯಾಯ್ತು 354 ಕೋಟಿ ಪರಿಹಾರ!
ಭೀಕರ ಬರದ ನಡುವೆಯೂ ವಿಜಯಪುರ ಜಿಲ್ಲೆಯ 20,599 ದ್ರಾಕ್ಷಿ ಬೆಳೆಗಾರರ ಬ್ಯಾಂಕ್ ಖಾತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ 354.78 ಕೋಟಿ ರೂ. ಪರಿಹಾರ ಜಮೆಯಾಗಿದೆ. ಚಾಟನಿ ಸಮಯದಲ್ಲಿ ಲಭಿಸಿದ ಈ ಆರ್ಥಿಕ ನೆರವಿನಿಂದ ಕೃಷಿ ಖರ್ಚುಗಳಿಗೆ ದೊಡ್ಡ ಉಪಶಮನ ಸಿಕ್ಕಿದ್ದು, ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

ಮುಖ್ಯಾಂಶಗಳು
- ವಿಜಯಪುರದ 20,599 ದ್ರಾಕ್ಷಿ ಬೆಳೆಗಾರರಿಗೆ 354.78 ಕೋಟಿ ವಿಮೆ ಹಣ ಜಮೆ.
- ಚಾಟನಿ ಸಮಯದಲ್ಲಿ ಸಿಕ್ಕ ಪರಿಹಾರದಿಂದ ರೈತರಿಗೆ ದೊಡ್ಡ ಆರ್ಥಿಕ ರಿಲೀಫ್.
- ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದ ಯೋಜನೆಯಿಂದ ರೈತರಿಗೆ ನೆರವು.
ವಿಜಯಪುರ, ಅಕ್ಟೋಬರ್ 20: ಭೀಕರ ಬರಗಾಲದ ಸಂಕಷ್ಟದಿಂದ ತತ್ತರಿಸಿರುವ ವಿಜಯಪುರ ಜಿಲ್ಲೆಯ ದ್ರಾಕ್ಷಿ ಬೆಳೆಗಾರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ‘ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ’ಯು ದೊಡ್ಡ ವರದಾನವಾಗಿ ಪರಿಣಮಿಸಿದೆ. ಜಿಲ್ಲೆಯ ಒಟ್ಟು 20,599 ರೈತರಿಗೆ ಬೆಳೆ ವಿಮೆ ಪರಿಹಾರವಾಗಿ ಬರೋಬ್ಬರಿ 354.78 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದ್ದು, ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಿದೆ.
ಈ ಭಾಗದ ರೈತರಿಗೆ ಹೆಚ್ಚು ಲಾಭ!
ವಿಶೇಷವಾಗಿ ತಿಕೋಟಾ ಹಾಗೂ ಬಬಲೇಶ್ವರ ಭಾಗದ ದ್ರಾಕ್ಷಿ ಬೆಳೆಗಾರರಿಗೆ ಈ ಯೋಜನೆಯಿಂದ ಹೆಚ್ಚಿನ ಲಾಭವಾಗಿದ್ದು, ಎಕರೆಗೆ ಕೇವಲ 5 ಸಾವಿರ ರೂ. ವಿಮೆ ಪಾವತಿಸಿದ್ದ ರೈತರಿಗೆ ಪ್ರತಿಯಾಗಿ ಸುಮಾರು 55 ಸಾವಿರ ರೂ.ಗಳ ವರೆಗೆ ಪರಿಹಾರ ಸಿಕ್ಕಿದೆ. ಪ್ರಸ್ತುತ ದ್ರಾಕ್ಷಿ ಚಾಟನಿ ಮಾಡುವ ಪ್ರಮುಖ ಸಮಯದಲ್ಲೇ ವಿಮೆ ಹಣ ಕೈ ಸೇರಿರುವುದರಿಂದ ರೈತರಿಗೆ ದೊಡ್ಡ ಮಟ್ಟದ ಆರ್ಥಿಕ ರಿಲೀಫ್ ಸಿಕ್ಕಿದೆ. ಈ ಹಣವು ಕೂಲಿ ಕಾರ್ಮಿಕರ ವೆಚ್ಚ, ಕೀಟನಾಶಕ, ಔಷಧಿ ಹಾಗೂ ಗೊಬ್ಬರ ಖರೀದಿಗೆ ಅತ್ಯಂತ ಸಹಕಾರಿಯಾಗಿದೆ.
ದ್ರಾಕ್ಷಿ ಬೆಳೆಗಾರಿಗೆ ಮರುಜೀವತಂದ ಪರಿಹಾರ ಧನ
ಬರಗಾಲದ ಹಿನ್ನೆಲೆಯಲ್ಲಿ ಸಾಲ ಮಾಡಿ ಬೆಳೆಯನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದ ರೈತರಿಗೆ ಸರ್ಕಾರದ ಈ ಪರಿಹಾರ ಧನ ಮರುಜೀವ ನೀಡಿದೆ. ಈ ವಿಮಾ ಮೊತ್ತದಲ್ಲಿ ರೈತರ ಪಾಲು ಶೇ 5 ರಷ್ಟಿದ್ದರೆ, ರಾಜ್ಯ ಸರ್ಕಾರದ ಶೇ 20.5 ಹಾಗೂ ಕೇಂದ್ರ ಸರ್ಕಾರದ ಶೇ. 12.5ರಷ್ಟು ಪಾಲು ಒಳಗೊಂಡಿದೆ. ಬೆಳೆ ವಿಮೆಯಿಂದ ದ್ರಾಕ್ಷಿ ಬೆಳೆಗಾರರಿಗೆ ಆಗಿರುವ ಅನುಕೂಲಗಳ ಕುರಿತು ವಿಜಯಪುರ ಸಂಸದರಾದ ರಮೇಶ ಜಿಗಜಿಣಗಿ ಅವರು ಫಲಾನುಭವಿ ರೈತರೊಂದಿಗೆ ಮಾತುಕತೆ ನಡೆಸಿದ್ದಾರೆ. ಸಂಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಂತು ಆರ್ಥಿಕ ನೆರವು ಕಲ್ಪಿಸಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ದ್ರಾಕ್ಷಿ ಬೆಳೆಗಾರರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




