ವಿಜಯಪುರ: ಭೀಮಾತೀರದ ಹಂತಕರಿಂದ ವಿಜಯಪುರ ಜಿಲ್ಲೆ ಕುಖ್ಯಾತಿಯನ್ನು ಪಡೆದ ಜಿಲ್ಲೆ. ಒಂದು ಕಾಲದಲ್ಲಿ ಇಲ್ಲಿ ಕೊಲೆ, ಸುಲಿಗೆ, ಅತ್ಯಾಚಾರ, ಅಪಹರಣ ಸೇರಿದಂತೆ ಇತರೆ ಅಪರಾಧ ಕೃತ್ಯಗಳಿಗೆ ಯಾವುದೇ ಬ್ರೇಕ್ ಬಿದ್ದಿರಲಿಲ್ಲ. ಹಂತಕರ ನಾಡೆಂದು ಇತರೆ ಜಿಲ್ಲೆಯ ಜನರು ವಿಜಯಪುರ ಜಿಲ್ಲೆಯನ್ನು ಭಯ ಹಾಗೂ ಅಪಹಾಸ್ಯದ ಶೈಲಿಯಲ್ಲಿ ಕರೆಯುತ್ತಿದ್ದರು. ಈಗ ಮತ್ತೊಂದು ಮಗ್ಗುಲಲ್ಲಿ ವಿಜಯಪುರ ಜಿಲ್ಲೆ ಮತ್ತೆ ಮುನ್ನಲೆಗೆ ಬರುತ್ತಿದೆ. ಅದುವೇ ಮರಳು ಮಾಫಿಯಾ.
ಅಕ್ರಮ ಮರಳುಗಾರಿಕೆಗೆ ಡಿಸಿ ಬ್ರೇಕ್:
ಜಿಲ್ಲೆಯಲ್ಲಿ ಕೃಷ್ಣಾ ಹಾಗೂ ಭೀಮಾನದಿಯಲ್ಲಿ ಅಕ್ರಮ ಮರಳುಗಾರಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹಸಿರು ನ್ಯಾಯಾಧಿಕರಣ ಜಿಲ್ಲೆಯಲ್ಲಿ ಮರಳುಗಾರಿಕೆ ನಡೆಸಬಾರದೆಂದು ತಡೆ ಹಾಕಿದ್ದರೂ ಇಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಅಲ್ಲಲ್ಲಿ ಪ್ರಭಾವಿಗಳು, ರಾಜಕಾರಣಿಗಳ ಬೆಂಬಲಿಗರು ನದಿಯಲ್ಲಿ ಮರಳನ್ನು ಕದಿಯುತ್ತಲೇ ಇದ್ದಾರೆ. ಇಂಥ ಘಟನೆಗಳಿಗೆ ಪೂರ್ಣ ವಿರಾಮ ಹಾಕಲು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮುಂದಾಗಿದ್ದಾರೆ.
ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಆಧಿಕಾರಿಗಳು ಸೇರಿದಂತೆ ಇತರೆ ಇಲಾಖೆ ಆಧಿಕಾರಿಗಳ ಸಭೆ ನಡೆಸಿದ್ದಾರೆ. ಜಿಲ್ಲೆಯ ಭೀಮಾ ಮತ್ತು ಕೃಷ್ಣಾ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಿಸುವ ಜೊತೆಗೆ ಅಕ್ರಮವಾಗಿ ಸಾಗಾಣಿಕೆ ಬಗ್ಗೆಯೂ ತೀವ್ರ ನಿಗಾ ಇಡುವಂತೆ ಸಭೆಯಲ್ಲಿ ಡಿಸಿ ವೈ.ಎಸ್.ಪಾಟೀಲ್ ಖಡಕ್ ಸೂಚನೆ ನೀಡಿದ್ದಾರೆ.
ತಾಲೂಕು ಟಾಸ್ಕ್ ಫೋರ್ಸ್ ಸಮಿತಿ:
ಅದರಂತೆ ಇಂಡಿ, ಮೊರಟಗಿ ಚೆಕ್ ಪೋಸ್ಟ್ ವ್ಯಾಪ್ತಿಯಲ್ಲಿ ತೀವ್ರ ನಿಗಾ ಇಡಬೇಕು. ಪ್ರಾದೇಶಿಕ ಸಾರಿಗೆ ಅಧಿಕಾರಿಯೊಬ್ಬರನ್ನು ತಾಲೂಕಾ ಟಾಸ್ಕ್ ಫೋರ್ಸ್ ಸಮಿತಿ ಅಡಿಯಲ್ಲಿ ನೇಮಿಸಬೇಕು. ದೂರುಗಳು ಬಂದ ತಕ್ಷಣ ವಿಳಂಬವಿಲ್ಲದೆ ತಕ್ಷಣ ಕ್ರಮ ಕೈಗೊಳ್ಳಬೇಕು. ತಾಳಿಕೋಟೆಯಲ್ಲಿ ತಹಶೀಲ್ದಾರರು ಪೊಲೀಸ್ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಿ ಕ್ರಮ ಕೈಗೊಳ್ಳಬೇಕು. ಯಾವುದೇ ರೀತಿಯ ನಿರ್ಲಕ್ಷ ಮತ್ತು ಸಮನ್ವಯತೆ ಕೊರತೆಯಿಂದ ಲೋಪವಾದಲ್ಲಿ ಆಯಾ ಆಧಿಕಾರಿಗಳ ಮೇಲೆಯೇ ಸೂಕ್ತ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
Published On - 1:40 pm, Sun, 31 May 20