ವಿಜಯಪುರ: ಕೊರೊನಾ ಮಹಾಮಾರಿಯಿಂದ ಇಡೀ ವಿಶ್ವವೇ ನಲಗುತ್ತಿದೆ. ಇದರ ಮಧ್ಯೆ ಕೊರೊನಾದಿಂದ ದೂರ ಇರಲು ಮಾಸ್ಕ್ ಹಾಕಿಕೊಳ್ಳಿ, ಸ್ಯಾನಿಟೈಸ್ ಮಾಡಿಕೊಳ್ಳಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದೆಲ್ಲ ಸರ್ಕಾರ ಆದೇಶ ಹೊರಡಿಸುತ್ತಿದೆ. ಎಷ್ಟೇ ಜಾಗರೂಕತೆ ವಹಿಸಿದರೂ ಕೊರೊನಾ ತಗಲುವ ಸಂಭವ ಹೆಚ್ಚಾಗಿದೆ. ಮಹಾಮಾರಿಯಿಂದ ರಕ್ಷಿಸಿಕೊಳ್ಳಲು ಜನ ಶತಾಯಗತಾಯವಾಗಿ ಪ್ರಯತ್ನ ಪಡುತ್ತಿದ್ದಾರೆ.
ಇನ್ನು ಬಹುತೇಕ ಕಚೇರಿ, ಅಂಗಡಿ ಮುಂಗಟ್ಟುಗಳ ಮುಂದೆ ಸ್ಯಾನಿಟೈಸರ್ ಮಷಿನ್ಗಳನ್ನು ಇಡಲಾಗಿದೆ. ಇಂಥ ಸೆನಿಟೈಜ್ ಮಷಿನ್ಗಳು ಸಹ ಅಷ್ಟೇನೂ ಸುರಕ್ಷತೆಯಿಂದ ಕೂಡಿಲ್ಲ. ಕಾರಣ ಇದನ್ನು ಬಳಸಲು ಕೈ ಮೂಲಕ ಒತ್ತುವಾಗಲೂ ಸಹ ಸೋಂಕು ಹರಡುವ ಸಾಧ್ಯತೆಯಿದೆ.
ಆಟೋ ಸೆನ್ಸರ್ ಮೂಲಕ ಸ್ಪ್ರೇ :
ಆದರೆ ಇವೆಲ್ಲ ಸಮಸ್ಯೆಗಳಿಗೆ ಪರ್ಯಾಯವಾಗಿ ವಿಜಯಪುರ ಜಿಲ್ಲೆಯ ಇಂಜಿನಿಯರಿಂಗ್ ವಿದ್ಯಾರ್ಥಿ ವಿಭಿನ್ನ ಸ್ಯಾನಿಟೈಸ್ ಮಷಿನ್ ಕಂಡು ಹಿಡಿದಿದ್ದಾನೆ. ಆಟೋ ಸೆನ್ಸರ್ ಮೂಲಕ ಸ್ಯಾನಿಟೈಸ್ ಸ್ಪ್ರೇ ಮಾಡುವ ಯಂತ್ರ ತಯಾರು ಮಾಡಿದ್ದಾನೆ. ವಿಜಯಪುರ ನಗರದ ಅಭಿಷೇಕ ಹಿಪ್ಪರಗಿ ಎಂಬ ವಿದ್ಯಾರ್ಥಿಯೇ ಈ ಯಂತ್ರದ ರುವಾರಿ. ನೆರೆಯ ಬಾಲಕೋಟೆ ಪಟ್ಟಣದ ಕಾಲೇಜಿನಲ್ಲಿ ಮೊದಲ ವರ್ಷದ ಬಿ.ಇ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಓದುತ್ತಿದ್ದಾನೆ.
ಏನಾದರೂ ಸಾಧಿಸಬೇಕೆಂಬ ಛಲ ಹೊಂದಿರುವ ಅಭೀಷೇಕ, ಕೊರೊನಾದಿಂದ ರಕ್ಷಣೆ ಪಡೆಯಲು ಸೆನ್ಸಾರ್ ತಂತ್ರಜ್ಞಾನದಿಂದ ಸ್ಯಾನಿಟೈಸ್ ಸ್ಪ್ರೇಯರ್ ಯಂತ್ರ ಕಂಡು ಹಿಡಿದು ಮೆಚ್ಚುಗೆಗೆ ಪಾತ್ರವಾಗಿದ್ದಾನೆ.
ಅಭೀಷೇಕ ಆವಿಷ್ಕಾರ ಮಾಡಿದ ಯಂತ್ರದಲ್ಲಿ ಸ್ಯಾನಿಟೈಸ್ ಹಾಕಲಾಗಿರುತ್ತದೆ. ಯಾರಾದರೂ ಬಂದು ಯಂತ್ರದ ಮುಂದೆ ನಿಂತು ಕೈ ತೋರಿಸಿದರೆ ಸಾಕು ಸೆನ್ಸಾರ್ ಸಹಾಯದಿಂದ ಸ್ಯಾನಿಟೈಸ್ ತಾನಾಗಿಯೇ ಸ್ಪ್ರೇಯಾಗುತ್ತದೆ. ಕೈ ಹಿಂದೆ ತೆಗೆದುಕೊಂಡರೆ ಸಾಕು ಸ್ಪ್ರೇ ನಿಲ್ಲುತ್ತದೆ. ಈ ವಿನೂತನ ಯಂತ್ರಕ್ಕಾಗಿ ಅಭಿಷೇಕ ಅತೀ ಕಡಿಮೆ ಹಣವನ್ನು ವ್ಯಯ ಮಾಡಿದ್ದಾನೆ.
1 ಸಾವಿರ ರೂಪಾಯಿ ವೆಚ್ಚದಲ್ಲಿ ತಯಾರು:
ಎಲೆಕ್ಟ್ರಾನಿಕ್ ಅಂಗಡಿಯಲ್ಲಿ ಸಿಗುವ ಚಿಕ್ಕ ಪುಟ್ಟ ವಸ್ತುಗಳನ್ನು ಬಳಸಿ ಇದನ್ನು ಸಿದ್ಧಪಡಿಸಿದ್ದಾನೆ. ಕೇವಲ ಒಂದು ಸಾವಿರ ರೂಪಾಯಿ ಖರ್ಚಿನಲ್ಲಿಯೇ ಸೆನ್ಸಾರ್ ಸ್ಪ್ರೇ ಯಂತ್ರ ತಯಾರಿಸಿದ್ದು ಸಹ ಸಾಧನೆಯೇ ಆಗಿದೆ.
ಅತೀ ಕಡಿಮೆ ಹಣದಲ್ಲಿ ಹಾಗೂ ಸುರಕ್ಷತೆಯನ್ನು ಹೊಂದಿದ ಈ ಸೆನ್ಸಾರ್ ಸ್ಪ್ರೇ ಬಹಳ ಕಡೆಗಳಲ್ಲಿ ಬಳಕೆ ಮಾಡಬಹುದಾಗಿದೆ. ಯಾರೂ ಮುಟ್ಟದೇ ತನ್ನಷ್ಟಕ್ಕೆ ತಾನೇ ಕೈಯೊಡ್ಡಿದರೆ ಸಾಕು ಸ್ಪ್ರೇ ಮಾಡುವ ಈ ಯಂತ್ರವನ್ನು ಜನನಿಬಿಡ ಸ್ಥಳಗಳಲ್ಲಿ, ಹೋಟೆಲ್, ಮಾಲ್, ಚಿತ್ರಮಂದಿರಗಳಲ್ಲಿ ಉಪಯೋಗಿಸಬಹುದಾಗಿದೆ. ಸದ್ಯ 1 ಸಾವಿರ ರೂಪಾಯಿ ವೆಚ್ಚದಲ್ಲಿಯೇ ಇದನ್ನು ಆವಿಷ್ಕರಿಸಿದ್ದು ಸಾಧನೆಯಾಗಿದೆ. ಇಂಥ ಯುವಕರಿಗೆ ಪ್ರೋತ್ಸಾಹ ಸಿಕ್ಕರೆ ಇನ್ನೂ ದೊಡ್ಡ ದೊಡ್ಡ ಆವಿಷ್ಕಾರ ಮಾಡೋದ್ರಲ್ಲಿ ಯಾವುದೇ ಸಂಶಯವಿಲ್ಲ.
Published On - 2:52 pm, Mon, 25 May 20