ವಿಜಯಪುರ, ಫೆ.22: ಇದು ಬರಗಾಲದಲ್ಲಿ ಉತ್ತಮ ಫಸಲು ಬೆಳೆದ ರೈತರಿಬ್ಬರ ಕಥೆ. ಎಲ್ಲೆಡೆಯಂತೆ ವಿಜಯಪುರ (Vijayapura) ಜಿಲ್ಲೆಯಲ್ಲೂ ಭೀಕರ ಬರಗಾಲವಿದೆ. ಮಳೆಯಾಗದ ಕಾರಣ ರೈತರು(Farmers) ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಆದರೆ, ವಿಜಯಪುರ ನಗರದ ಗಣೇಶ ನಗರ ವಾಸಿಗಳಾದ ಮಲ್ಲಿಕಾರ್ಜುನ ಗಡಗಿ ಹಾಗೂ ಮಹೇಶ ಗುಲಗಂಜಿ ಎಂಬ ಕೃಷಿಕ ಮಿತ್ರರು, ಲೀಸ್ ಆಧಾರದ ಮೇಲೆ 15 ಎಕರೆ ಜಮೀನು ಪಡೆದು, ಮುಂಗಾರು ಹಂಗಾಮಿನಲ್ಲಿ ನರ್ಸರಿಯಲ್ಲಿ ಮೆಣಸಿನ ಸಸಿಗಳನ್ನು ಸುಮಾರು 4 ಲಕ್ಷ ರೂಪಾಯಿ ವೆಚ್ಚದಲ್ಲಿ ಜಮೀನಿನಲ್ಲಿ ಸಸಿಗಳನ್ನು ನಾಟಿ ಮಾಡಿ ಮಳೆಯ ದಾರಿ ಕಾಯುತ್ತಿದ್ದರು. ಆದರೆ, ಮಳೆ ಮಾಯವಾಗಿ, ಬರದ ಛಾಯೇ ಮೂಡಿತ್ತು. ಇಷ್ಟೆಲ್ಲ ಖರ್ಚು ಮಾಡಿದ್ದ ಹಣ ನಷ್ಟ ಆಗುತ್ತದೆ ಎಂದು ಯೋಚಿಸಿದ ಇವರು, ಯುಜಿಡಿ ನೀರನ್ನು ಬಳಸಿಕೊಳ್ಳಲು ನಿರ್ಧರಿಸಿದರು.
ರೈತರಾದ ಮಲ್ಲಿಕಾರ್ಜುನ ಹಾಗೂ ಮಹೇಶ್ ಅವರು ನಗರದ ಹೊರ ಭಾಗದಲ್ಲಿ ಹರಿದು ಹೋಗುತ್ತಿದ್ದ ಅಂಡರ್ ಗ್ರೌಂಡ್ ಡ್ರೈನೇಜ್ ವಾಟರ್, ಹಳ್ಳದ ಪಾಲಾಗುತ್ತಿದ್ದ ಈ ಯುಜಿಡಿ ನೀರನ್ನೇ ತಮ್ಮ ಜಮೀನಿಗೆ ಹಾಯಿಸಲು ತೀರ್ಮಾನಿಸಿದರು. ನೀರೆತ್ತಲು ಪಂಪ್ ಸೆಟ್ ಹಾಕಲು ಅಲ್ಲಿ ಕರೆಂಟ್ ಸಮಸ್ಯೆಯಿತ್ತು. ಅದಕ್ಕಾಗಿ ಅವರು ಟ್ರ್ಯಾಕ್ಟರ್ಗೆ ಪೂಲಿ ಹಾಕಿಸಿ ಅಲ್ಲಿಂದ ನೀರನ್ನು ತಮ್ಮ ಜಮೀನಿಗೆ ಪಂಪ್ ಮಾಡಿದರು. ಯುಜಿಡಿ ನೀರು ಹರಿಯುತ್ತಿದ್ದ ಸ್ಥಳದಿಂದ 2.5 ಕಿಲೋ ಮೀಟರ್ ಇರುವ ಜಮೀನಿಗೆ ನಾಲ್ಕು ಇಂಚಿನ ಪೈಪ್ಗಳನ್ನು ನೆಲದಲ್ಲಿ ಹಾಕಿದರು. ಈ ರೀತಿ ಒಣಗಿ ಹೋಗುತ್ತಿದ್ದ ಮೆಣಸಿನ ಸಸಿಗಳಿಗೆ ಯುಜಿಡಿ ನೀರು ಪೂರೈಕೆ ಮಾಡಿದ ಕಾರಣ ನೋಡ ನೋಡುತ್ತಿದ್ದಂತೆ ಕೆಲವೇ ದಿನಗಳಲ್ಲಿ ಮೆಣಸಿನ ಸಸಿಗಳು ಬೆಳೆದು ನಿಂತವು. ಉತ್ತಮ ಹೂವುಗಳನ್ನು ಬಿಟ್ಟು ಗುಣಮಟ್ಟದ ಕಾಯಿಗಳು ಆದವು.
ಇದನ್ನೂ ಓದಿ:ವಿಜಯಪುರ: ರೈತರ ಪಾಲಿಗೆ ಕಹಿಯಾದ ದ್ರಾಕ್ಷಿ; ಬೆಳೆ ಉಳಿಸಲು ಟ್ಯಾಂಕರ್ ಮೊರೆ ಹೋದ ರೈತರು
ಜಮೀನಿನಲ್ಲಿ ನಾಟಿ ಮಾಡಿದ್ದ ಮೆಣಸಿನ ಬೆಳೆಗೆ ಯುಜಿಡಿ ನೀರನ್ನು ಯಾವುದೇ ರೀತಿಯಲ್ಲಿ ಸಂಸ್ಕರಣೆ ಮಾಡದೇ ಜಮೀನಿಗೆ ಬಿಡುವ ಮೂಲಕ ಮೆಣಸಿನಕಾಯಿ ಬೆಳೆಗೆ ನೀರು ಹರಿಸಿದರು. ಆರಂಭದಲ್ಲಿ ಇವರ ಶ್ರಮವನ್ನು ಕಂಡು ನೆರೆಯ ರೈತರು ಇದೊಂದು ಹುಚ್ಚು ಸಾಹಸ, ಯುಜಿಡಿ ನೀರಲ್ಲಿ ಬೆಳೆ ಸರಿಯಾಗಿ ಬರಲ್ಲ ಖರ್ಚು ಸಹ ಬಹಳವಾಗುತ್ತದೆ ಎಂದಿದ್ದರು. ಇದ್ಯಾವುದಕ್ಕೂ ಮಹೇಶ್ ಹಾಗೂ ಮಲ್ಲಿಕಾರ್ಜುನ ತಲೆ ಕೆಡಿಸಿಕೊಳ್ಳದೇ ಸದಾ ಪ್ರಯತ್ನ ಮಾಡಿದರು. ಕಳೆದ ಮೂರು ತಿಂಗಳಿಂದ ಫಸಲು ಬರುತ್ತಿದೆ. ವಿವಿಧ ಐದು ತಳಿಯ ಮೆಣಸಿನಕಾಯಿಗಳ ಫಸಲನ್ನು ಕಟಾವು ಮಾಡಿ ನೆಲಸಲ್ಲಿ ಒಣಗಿಸಿ ಹಾವೇರಿ ಜಿಲ್ಲೆಯ ಬ್ಯಾಡಗಿ ಮಾರುಕಟ್ಟೆಗೆ ಪೂರೈಕೆ ಮಾಡಿದ್ದಾರೆ.
ಒಂದು ಕ್ವಿಂಟಾಲ್ ಕೆಂಪು ಒಣ ಮೆಣಸಿನಕಾಯಿಗೆ 55 ರಿಂದ 60 ಸಾವಿರ ರೂಪಾಯಿ ಮಾರಾಟವಾಗಿದೆ. 25 ರಿಂದ 30 ಲಕ್ಷ ರೂಪಾಯಿಯಷ್ಟು ಒಣ ಕೆಂಪು ಮೆಣಸಿಕಾಯಿಯನ್ನು ಮಾರಾಟ ಮಾಡಿದ್ದಾರೆ. ಸದ್ಯ ಕೆಂಪು ಒಣ ಮೆಣಸಿನಕಾಯಿ ದರ ಕಡಿಮೆಯಾದ ಕಾರಣ ಇನ್ನುಳಿದ ಒಣಕಾಯಿಯನ್ನು ಸ್ಟೋರೇಜ್ನಲ್ಲಿಟ್ಟಿದ್ದಾರೆ. ಇತ್ತ ಜಮೀನಿನಲ್ಲಿಯೂ ಇನ್ನೂ ಎರಡರಿಂದ ಮೂರು ಬಾರಿ ಕಟಾವು ಮಾಡುವಷ್ಟು ಹಸಿ ಮೆಣಸಿನಕಾಯಿ ಫಸಲು ಇದೆ. ಇದಕ್ಕಾಗಿ ಇಲ್ಲಿಯವರೆಗೂ 10 ಲಕ್ಷ ಪಾಯಿ ಖರ್ಚು ಮಾಡಿದ್ಧಾರೆ. ಹಿಂದೆ ಮಾರಾಟವಾದ ಮೆಣಸಿನಕಾಯಿ, ಸ್ಟೋರೇಜ್ನಲ್ಲಿರುವ ಮೆಣಸಿನಕಾಯಿ ಹಾಗೂ ಜಮೀನಿನಲ್ಲಿರೋ ಫಸಲನ್ನು ಸೇರಿಸಿದರೆ 40 ಲಕ್ಷಕ್ಕೂ ಆಧಿಕ ಆದಾಯ ಬರಲಿದೆ. 10 ಲಕ್ಷ ರೂಪಾಯಿ ಖರ್ಚು ಮಾಡಿದ್ದು, 30 ಲಕ್ಷ ರೂಪಾಯಿ ನಿವ್ವಳ ಲಾಭವಾಗಿದೆ ಎಂದಿದ್ದಾರೆ ಇವರು.
ಇದನ್ನೂ ಓದಿ:ಈರುಳ್ಳಿ ದರ ಕುಸಿತಕ್ಕೆ ರೈತರು ಕಿಡಿ: ಬೆಂಬಲ ಬೆಲೆ ಘೋಷಿಸುವಂತೆ ಸರ್ಕಾರಕ್ಕೆ ಆಗ್ರಹ
ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ನೀರು ಪಂಪ್ ಮಾಡಲು ಟ್ರ್ಯಾಕ್ಟರ್ ಪೂಲಿ ಬಳಕೆ ಮಾಡುತ್ತಾರೆ. ನಿತ್ಯ ಟ್ರ್ಯಾಕ್ಟರ್ ಡಿಸೇಲ್ ಗೆ 2 ಸಾವಿರ ರೂಪಾಯಿ ಖರ್ಚು ಇದೆ. ಇನ್ನು 5 ರಿಂದ 6 ಕೂಲಿ ಕಾರ್ಮಿಕ ಮಹಿಳೆಯರು ಇಲ್ಲಿ ಕೆಲಸ ಮಾಡುತ್ತಾರೆ. ಒಬ್ಬರಿಗೆ ನಿತ್ಯ 300 ರೂಪಾಯಿ ಕೂಲಿ ನೀಡುತ್ತಿದ್ಧಾರೆ. ಹೆಚ್ಚು ಕೆಲಸವಿದ್ದಾಗ ಮತ್ತಷ್ಟು ಕೂಲಿಯಾಳುಗಳನ್ನು ಕರೆಯಿಸುತ್ತಾರೆ. ತೀವ್ರ ಬರಗಾಲದಲ್ಲಿಯೂ ಲಕ್ಷಾಂತರ ರೂಪಾಯಿ ಮೌಲ್ಯದ ಮೆಣಸಿನಕಾಯಿ ಬೆಳೆದಿದ್ದಾರೆ. ಈ ಮುಂಚೆ ಇವರನ್ನು ನೋಡಿ ಕೊಂಕ ಮಾಡಿದವರೇ ಇವರ ಜಮೀನಿಗೆ ಆಗಮಿಸಿ ಭೇಷ್ ಎನ್ನುತ್ತಿದ್ದಾರೆ. ನಾವೂ ಸಹ ಇವರಂತೆ ಯುಜಿಡಿ ನೀರನ್ನು ಬಳಕೆ ಮಾಡಿಕೊಂಡು ಬೆಳೆಗಳನ್ನು ಬೆಳೆಯಲು ಮುಂದಾಗೋದಾಗಿ ಹೇಳಿದ್ದಾರೆ.
ಮೊದಲೇ ಕೃಷಿಗೆ ಬೆನ್ನು ಮಾಡುತ್ತಿರುವ ಇಂದಿನ ಯುವಕರು, ಕೆಲಸ ಅರಸಿ ನಗರ ಪಟ್ಟಣಗಳತ್ತ ಹೋಗುತ್ತಿದ್ದಾರೆ. ಇವರಿಗೆ ಇಂಬು ಕೊಡುವಂತೆ ಬರಗಾಲವೂ ಬಂದಪ್ಪಳಿಸಿದೆ. ಆದರೂ ಕಂಗೆಡದ ನಗರದ ಈ ಇಬ್ಬರು ರೈತರು ಇತರರಿಗೆ ಮಾದರಿಯಾಗಿದ್ದಾರೆ. ಭೂಮಿಯನ್ನು ನಂಬಿ ಕಷ್ಟಪಟ್ಟು ದುಡಿದರೆ ಯಾವ ಸರ್ಕಾರಿ ನೌಕರಿಗೂ ಸಿಗದಷ್ಟು ಸಂಬಳವನ್ನು ಗಳಿಸಬಹುದು ಎಂದು ಇವರು ನಿರೂಪಿಸಿದ್ಧಾರೆ. ಇಬ್ಬರು ರೈತರು ಇಂದಿನ ಯುವ ರೈತರಿಗೆ ಕೃಷಿಯಿಂದ ವಿಮುಖವಾಗುತ್ತಿರುವವರಿಗೆ ಮಾದರಿಯಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ