ವಿಜಯಪುರ: ರೈತರ ಪಾಲಿಗೆ ಕಹಿಯಾದ ದ್ರಾಕ್ಷಿ; ಬೆಳೆ ಉಳಿಸಲು ಟ್ಯಾಂಕರ್ ಮೊರೆ ಹೋದ ರೈತರು
ರಾಜ್ಯದಲ್ಲಿ ಬರದಿಂದ ರೈತರು ನಲುಗಿ ಹೋಗಿದ್ದಾರೆ. ಸರ್ಕಾರದಿಂದ ಅನುದಾನವು ಇಲ್ಲದೆ ಕಂಗಾಲಾಗಿದ್ದಾರೆ. ಈ ಮಧ್ಯೆ ವಿಜಯಪುರ ಜಿಲ್ಲೆಯಲ್ಲಿ ಕಷ್ಟಪಟ್ಟು ಬೆಳೆದಿದ್ದ ದ್ರಾಕ್ಷಿ ಬೆಳೆ ಕೂಡ ಒಣಗಿ ಹೋಗುತ್ತಿದೆ. ಹೇಗಾದರೂ ಮಾಡಿ ಬಂದ ಬೆಳೆಯನ್ನಾದರೂ ಉಳಿಸಿಕೊಳ್ಳುವ ದೃಷ್ಟಿಯಿಂದ ರೈತರು ಟ್ಯಾಂಕರ್ಗಳ ಮೊರೆ ಹೋಗಿದ್ದಾರೆ.
ವಿಜಯಪುರ, ಫೆ.07: ರೈತರು ಒಂದಿಲ್ಲೊಂದು ಸಮಸ್ಯೆಯನ್ನು ಎದುರಿಸುತ್ತಲೇ ಇರುತ್ತಾರೆ. ಆತನಿಗೆ ಸರಿಯಾಗಿ ಬೆಳೆ ಬಂದರೆ, ಬೆಲೆ ಇರುವುದಿಲ್ಲ. ಬೆಲೆ ಇದ್ದರೆ, ಬೆಳೆ ಕೈ ಕೊಟ್ಟಿರುತ್ತದೆ. ಅದರಂತೆ ವಿಜಯಪುರ(Vijayapura) ಜಿಲ್ಲೆಯಲ್ಲಿ ಕಷ್ಟಪಟ್ಟು ಬೆಳೆದ ದ್ರಾಕ್ಷಿ ಬೆಳೆಗಾರರು ಬರದ ಹೊಡೆತಕ್ಕೆ ನಲುಗಿದ್ದಾರೆ. ಒಂದು ಎಕರೆ ದ್ರಾಕ್ಷಿ ಬೆಳೆಯಲು ಬರೊಬ್ಬರಿ ಎರಡರಿಂದ ಮೂರು ಲಕ್ಷ ರೂಪಾಯಿಯನ್ನ ರೈತರು ಈಗಾಗಲೇ ಖರ್ಚು ಮಾಡಿದ್ದಾರೆ. ಆದರೀಗ ಬರದ ಪರಿಣಾಮ ಫಸಲು ಬಿಟ್ಟಿರುವ ದ್ರಾಕ್ಷಿ ಕೂಡ ಒಣಗುತ್ತಿದೆ.
ದ್ರಾಕ್ಷಿ ಬೆಳೆ ಉಳಿಸಲು ಟ್ಯಾಂಕರ್ ಮೊರೆ ಹೋದ ರೈತರು
ಹೇಗಾದರೂ ಮಾಡಿ ಚೆನ್ನಾಗಿ ಬಂದಿರುವ ಫಸಲು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಬಾವಿ ಹಾಗೂ ಕೊಳವೆ ಬಾವಿಗಳ ನೀರು ಸಂಪೂರ್ಣ ಬತ್ತಿರುವ ಕಾರಣ ಟ್ಯಾಂಕರ್ ಮೊರೆ ಹೋಗಿದ್ದಾರೆ. ಆದರೆ, ಒಂದು ಟ್ಯಾಂಕರ್ ನೀರಿಗೆ ಬರೊಬ್ಬರಿ 1500 ರಿಂದ 5000 ಹಣ ಖರ್ಚು ಮಾಡಲಾಗುತ್ತಿದೆ. ಇಷ್ಟಾದರೂ ಹಾಕಿದ ಹಣ ಮತ್ತೆ ಹಿಂದಿರುಗಿ ಬರುತ್ತದಯೋ ಇಲ್ಲವೋ ಎಂದು ರೈತರಿಗೆ ತಿಳಿಯದಾಗಿದೆ.
ಇದನ್ನೂ ಓದಿ:ಒಣದ್ರಾಕ್ಷಿಗೆ ಬೆಂಬಲ ಬೆಲೆ ಘೋಷಿಸುವಂತೆ ಸರ್ಕಾರಕ್ಕೆ ಆಗ್ರಹ: ರೈತರ ಹೋರಾಟಕ್ಕೆ ಮಠಾಧೀಶರ ಸಾಥ್
ಇಂಡಿ ತಾಲೂಕಿನ ಭಾಗದಲ್ಲಿ ಟ್ಯಾಂಕರ್ಗಳಿಗೆ ಬಾರೀ ಬೇಡಿಕೆ
ಇನ್ನು ದ್ರಾಕ್ಷಿ ಬೆಳೆಗಾರರು ಎರಡು ಎಕರೆ ದ್ರಾಕ್ಷಿಗೆ ಒಂದು ಬಾರಿ ನೀರುಣಿಸಲು 10 ಸಾವಿರಕ್ಕೂ ಅಧಿಕ ಹಣ ಖರ್ಚು ಮಾಡುತ್ತಿದ್ದಾರೆ. ಈ ಹಿನ್ನಲೆ ಇಂಡಿ ತಾಲೂಕಿನ ಭಾಗದಲ್ಲಿ ಟ್ಯಾಂಕರ್ಗಳಿಗೆ ಬಾರೀ ಬೇಡಿಕೆ ಹೆಚ್ಚಿದೆ. ಬರದ ಕಾರಣ ಹಾಗೂ ನೀರಿಲ್ಲದ ಕಾರಣ ಸರ್ಕಾರ ಸಹಾಯ ಮಾಡಬೇಕು. ಜೊತೆಗೆ ಈ ಭಾಗದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಅನುಷ್ಠಾನ ಮತ್ತು ದ್ರಾಕ್ಷಿ ಬೆಳೆಗಾರರು ಮಾಡಿರುವ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕೆಂದು ದ್ರಾಕ್ಷಿ ಬೆಳೆಗಾರರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ದನದ ಕೊಟ್ಟಿಗೆಗೆ ಅನುದಾನ ಬಿಡುಗಡೆ ಮಾಡಲು ಮೀನಾಮೇಷ; ಪಂಚಾಯ್ತಿ ಮುಂದೆ ರೈತರ ಆಕ್ರೋಶ
ಬೆಂಗಳೂರು ಗ್ರಾಮಾಂತರ : ದನದ ಕೊಟ್ಟಿಗೆಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದ ರೈತರು, ಪಂಚಾಯ್ತಿ ಮುಂದೆ ದನಗಳನ್ನ ಕಟ್ಟಿಹಾಕಿ ಪ್ರತಿಭಟನೆ ನಡೆಸಿದ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಭಕ್ತರಹಳ್ಳಿ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ. ಕಳೆದ ಮೂರು ವರ್ಷಗಳಿಂದ ರೈತರು ದನದ ಕೊಟ್ಟಿಗೆಗೆ ಸಹಾಯ ಧನಕ್ಕೆ ಅರ್ಜಿ ಹಾಕಿದ್ದರು. ಆದರೆ, ಸುಮಾರು 30 ರೈತರ ದನದ ಕೊಟ್ಟಿಗೆಗಳಿಗೆ ಅನುದಾನ ಬಿಡುಗಡೆ ಮಾಡದ ಆರೋಪ ಕೇಳಿಬಂದಿದೆ. 57 ಸಾವಿರ ಕೇಂದ್ರ ಹಾಗೂ ರಾಜ್ಯ ಸರ್ಕಾರ, ದನಗಳ ಕೊಟ್ಟಿಗೆಗೆ ಅನುದಾನ ನೀಡುವ ಯೋಜನೆ ಇದಾಗಿದ್ದು, ಲಂಚ ಕೊಟ್ಟರು ಹಣ ಬಿಡುಗಡೆ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ಎಂದು ಗರಂ ಆಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ