ವಿಜಯಪುರ, ಅಕ್ಟೋಬರ್ 24: ವಿಜಯಪುರ ಮಹಾನಗರ ಪಾಲಿಕೆ (Vijayapura Municipal Corporation) ಮೇಯರ್ ಹಾಗೂ ಉಪಮೇಯರ್ ಚುನಾವಣೆ ಕಾವು ಏರಿದೆ. ಅಕ್ಟೋಬರ್ 30 ರಂದು ಪಾಲಿಕೆ ಮೇಯರ್ ಉಪ ಮೇಯರ್ ಚುನಾವಣೆ ನಡೆಸಲು ಮಹೂರ್ತ ಫಿಕ್ಸ್ ಆಗಿದೆ. ಮಹಾನಗರ ಪಾಲಿಕೆಯ ಅದಿಕಾರದ ಗದ್ದುಗೆ ಹಿಡಿಯಲು ಬಿಜೆಪಿ (BJP) ಕಾಂಗ್ರೆಸ್ (Congress) ತೀವ್ರ ಸೆಣಸಾಟ ನಡೆಸಿವೆ. ಸದಸ್ಯರ ಭದ್ರತೆಗಾಗಿ ಬಿಜೆಪಿ ಕಾಂಗ್ರೆಸ್ ಹಾಗೂ ಇತರೆ ಸದಸ್ಯರು ಇತರಡೆ ಪ್ರವಾಸಕ್ಕೆ ಹೋಗಿದ್ದಾರೆ. ಬಿಜೆಪಿ ಸದಸ್ಯರು ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದರೆ ಕಾಂಗ್ರೆಸ್ ಹಾಗೂ ಇತರರು ಚಿಕ್ಕಮಗಳೂರಿನ ಪ್ರದೇಶದಲ್ಲಿದ್ದಾರೆ.
ಈ ಮದ್ಯೆ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಬಿಜೆಪಿಯವರು ಅಪಹರಣ ಮಾಡಿ ಅಡಗುತಾಣದಲ್ಲಿಟ್ಟಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ ಆರೋಪ ಮಾಡಿದ್ದಾರೆ. ವಿಜಯಪುರ ನಗರದ ಕಾಂಗ್ರೆಸ್ ಕಚೇರಿಯ ಕೊದಲ ಮಹಡಿಯಲ್ಲಿ ಮಹಿಳಾ ಕಾಂಗ್ರೆಸ್ ಕಚೇರಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ತಮ್ಮ ತಮ್ಮ ಪಕ್ಷದ ಸದಸ್ಯರ ಸುರಕ್ಷತೆಗಾಗಿ ಸದಸ್ಯರು ಪ್ರವಾಸದಲ್ಲಿದ್ದಾರೆ. ಈಗ ನಮ್ಮ ಒಬ್ಬ ಬೆಂಬಲಿತ ಸದಸ್ಯರನ್ನು ಬಿಜೆಪಿಯವರು ವಿಶೇಷವಾಗಿ ನಗರದ ಶಾಸಕರು ಒಯ್ದು ತಮ್ಮ ಅಡಗುತಾಣದಲ್ಲಿ ಇಟ್ಟಿದ್ದಾರೆಂದು ನಮಗೆ ತಿಳಿದುಬಂದಿದೆ. ಅದೇನು ಮಾಡಿದರೂ ಪ್ರಯೋಜನವಾಗುವುದಿಲ್ಲ. ಮತ್ತು ಇದೇನೂ ದೊಡ್ಡ ಕೆಲಸವಲ್ಲ. ನಮಗೂ ಆ ಕೆಲಸ ಮಾಡಲು ಬರುತ್ತದೆ. ಆದರೆ ಅಂತಹ ಕೆಲಸಕ್ಕೆ ನಾವು ಕೈ ಹಾಕುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಂಥವರು ನಾವು. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜಯ ಸಿಗುತ್ತದೆ ಎಂದು ವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ. ಮತ್ತು ಎಲ್ಲದಕ್ಕೂ ಚುನಾವಣಾ ದಿನಾಂಕ ಅಕ್ಟೋಬರ್ 30 ರಂದು ತಿಳಿಯುತ್ತದೆ, ಕಾದುನೋಡಿ ಎಂದು ಪ್ರತಿಕ್ರಿಯೆಯನ್ನ ನೀಡಿದ್ದಾರೆ.
ಪಕ್ಷೇತರ ಸದ್ಯಸ್ಯೆ ವಾರ್ಡ್ ನಂಬರ್ 19 ರ ನಿಶಾತ್ ಹೈದರ್ ಅಲಿ ನದಾಫ್ ಹಾಗೂ ವಾರ್ಡ್ ನಂಬರ್ 25 ರ ಎಐಎಂಐಎಂ ಸದಸ್ಯೆ ಸುಪ್ರೀಯಾ ವಾಟೆ ಎಂಬುವವರನ್ನು ಬಿಜೆಪಿಯವರು ಅಪಹರಣ ಮಾಡಿದ್ದಾರೆಂಬ ವದಂತಿ ಕೇಳಿ ಬಂದಿದೆ.
ಇನ್ನು 35 ಸದಸ್ಯ ಬಲದ ವಿಜಯಪುರ ಮಹಾನಗರ ಪಾಲಿಕೆಯಲ್ಲಿ 17 ಸ್ಥಾನಗಳಲ್ಲಿ ಬಿಜೆಪಿ, 10 ಸ್ಥಾನಗಳಲ್ಲಿ ಕಾಂಗ್ರೆಸ್, 5 ಸ್ಥಾನಗಳಲ್ಲಿ ಪಕ್ಷೇತರರು, 2 ಸ್ಥಾನಗಳಲ್ಲಿ ಎಐಎಂಐಎಂ ಹಾಗೂ 1 ಸ್ಥಾನದಲ್ಲಿ ಜೆಡಿಎಸ್ ಸದಸ್ಯರಿದ್ದು ಪಕ್ಷೇತರರು ಎಐಎಂಐಎಂ ಹಾಗೂ ಜೆಡಿಎಸ್ ಸದಸ್ಯರ ಕಾಂಗ್ರೆಸ್ ಗೆ ಬೆಂಬಲ ನೀಡುತ್ತಿದ್ದಾರೆಂದು ಕೈ ನಾಯಕರು ಮಾಹಿತಿ ನೀಡಿದ್ದಾರೆ. ಜೊತೆಗೆ ಇಬ್ಬರು ಶಾಸಕರು ಹಾಗೂ ಓರ್ವ ಪರಿಷತ್ ಸದಸ್ಯನ ಮತಗಳ ಬಲವನ್ನೂ ಕಾಂಗ್ರೆಸ್ ಹೊಂದಿದೆ. ಈ ರೀತಿ ಚುನಾವಣಾ ಕಾವು ಏರಿದ್ದು ಅಕ್ಟೋಬರ್ 30 ರಂದು ಪಾಲಿಕೆ ಆಧಿಕಾರ ಯಾರಿಗೆ ಸಿಗಲಿದೆ ಎಂಬುದು ತಿಳಿದು ಬರಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ