ವಿಜಯಪುರ: ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು ಕವಿತೆಯ ಬರಹ ಬದಲಾವಣೆ! ಚರ್ಚೆಗೆ ಗ್ರಾಸವಾಯ್ತು ಸರ್ಕಾರದ ನಡೆ

| Updated By: ಗಣಪತಿ ಶರ್ಮ

Updated on: Feb 19, 2024 | 10:43 AM

ಸರ್ಕಾರಿ ವಸತಿ ಶಾಲೆ, ಕಾಲೇಜುಗಳಲ್ಲಿ ಧಾರ್ಮಿಕ ಹಬ್ಬಗಳ ಆಚರಣೆ ವಿಚಾರವಾಗಿ ಒಂದು ಸುತ್ತೋಲೆ ಹೊರಡಿಸಿ ಅದಿನ್ನೇನು ವಿವಾದ ಆಗುತ್ತಿದ್ದಂತೆಯೇ ವಾಪಸ್ ಪಡೆದಿದ್ದ ಸರ್ಕಾರ ಇದೀಗ ಮತ್ತೊಂದು ಯಡವಟ್ಟು ಮಾಡಿಕೊಳ್ಳಲು ಮುಂದಾಗಿದೆಯಾ ಎಂಬ ಅನುಮಾನ ಸೃಷ್ಟಿಯಾಗಿದೆ. ಇದಕ್ಕೆ ಕಾರಣ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಪ್ರಕಟಿಸಲಾಗಿದ್ದ ಕುವೆಂಪು ಅವರ ಕವಿತೆಯ ಸಾಲುಗಳನ್ನು ಬದಲಾಯಿಸಿರುವುದು.

ವಿಜಯಪುರ: ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು ಕವಿತೆಯ ಬರಹ ಬದಲಾವಣೆ! ಚರ್ಚೆಗೆ ಗ್ರಾಸವಾಯ್ತು ಸರ್ಕಾರದ ನಡೆ
ವಿಜಯಪುರ: ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು ಕವಿತೆಯ ಬರಹ ಬದಲಾವಣೆ
Follow us on

ವಿಜಯಪುರ, ಫೆಬ್ರವರಿ 19: ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ (Department of Social Welfare, Karnataka) ವ್ಯಾಪ್ತಿಯಲ್ಲಿ ಬರುವ ವಸತಿ ಶಾಲೆಗಳ (Residential Schools) ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ಕವಿತೆಯ ಸಾಲುಗಳನ್ನು ಬದಲಾಯಿಸಿ ಬೇರೆಯೇ ಧ್ಯೇಯವಾಕ್ಯ ಅಳವಡಿಸಲಾಗಿದೆ. ವಿಜಯಪುರ (Vijayapura) ಜಿಲ್ಲೆಯ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು (Kuvempu)ಅವರ ಕವಿತೆಯ ‘ಜ್ಞಾನ ದೇಗುಲವಿದು, ಕೈ ಮುಗಿದು ಒಳಗೆ ಬಾ’ ಎಂಬ ಬರಹಕ್ಕೆ ಬದಲಾಗಿ, ‘ಜ್ಞಾನ ದೇಗುಲವಿದು, ದೈರ್ಯವಾಗಿ ಪ್ರಶ್ನಿಸಿ’ ಎಂದು ಬರೆಯಿಸಲಾಗಿದೆ. ವಿಜಯಪುರ ‌ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಹೊಸ ಬರಹ ಕಾಣಿಸುತ್ತಿದೆ.

ಮೊರಾರ್ಜಿ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪೋಷಕರು ಧೈರ್ಯವಾಗಿ‌ ಪ್ರಶ್ನೆ ಮಾಡಲಿ ಎಂದ ಉದ್ದೇಶದಿಂದ ಬರಹ ಬದಲಾವಣೆ ಮಾಡಲಾಗಿದೆ ಎಂದು ವಿಜಯಪುರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪುಂಡಲೀಕ ಮಾನವರ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಸುತ್ತೋಲೆ ಪ್ರಕಾರ ‘ಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ’ ಎಂದು ಬರಹ ಬದಲಾವಣೆ ಮಾಡಲಾಗಿದೆ. ಮೊರಾರ್ಜಿ ವಸತಿ ಶಾಲಾ ವಿದ್ಯಾರ್ಥಿಗಳ ಪೋಷಕರು ಧೈರ್ಯವಾಗಿ ಪ್ರಶ್ನೆ ಮಾಡಲಿ. ಮಕ್ಕಳ ಶಿಕ್ಷಣ, ವಸತಿ, ಊಟ ಸೇರಿದಂತೆ ವಸತಿ ಶಾಲೆಯ ಎಲ್ಲಾ ವಿಚಾರಗಳ ಕುರಿತು ಪ್ರಶ್ನೆ ಮಾಡಲಿ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗಲಿ. ಪೋಷಕರು ಧೈರ್ಯವಾಗಿ ಮಾತನಾಡಲಿ ಎಂಬ ಉದ್ದೇಶ ಮಾತ್ರ ಬರಹ ಬದಲಾಯಿಸಿದ್ದರ ಹಿಂದಿರುವುದು ಎಂದು ಉದ್ದೇಶವಾಗಿದೆ ಎಂದು ಹೇಳಿಕೆ ಪುಂಡಲೀಕ ಮಾನವರ ‘ಟಿವಿ9’ಗೆ ಮಾಹಿತಿ ನೀಡಿದ್ದಾರೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಘಾಳಪೂಜಿ ಗ್ರಾಮದಲ್ಲಿ ಹಾಗೂ ಇತರ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲಾ ಪ್ರವೇಶ ದ್ವಾರದಲ್ಲಿ ಬರಹ ಬದಲಾಯಿಸಲಾಗಿದೆ. ಇದೀಗ ಈ ನಡೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಸರ್ಕಾರಿ ವಸತಿ ಶಾಲೆಯಲ್ಲಿ ಧಾರ್ಮಿಕ ಹಬ್ಬಗಳ ಆಚರಣೆ ನಿರ್ಬಂಧ ಆದೇಶ ವಾಪಸ್

ಸರ್ಕಾರಿ ವಸತಿ ಶಾಲೆ ಮತ್ತು ಕಾಲೇಜುಗಳಲ್ಲಿ ಧಾರ್ಮಿಕ ಹಬ್ಬಗಳನ್ನು ಆಚರಿಸಬಾರದು ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇತ್ತೀಚೆಗೆ ಸುತ್ತೋಲೆ ಹೊರಡಿಸಿತ್ತು. ನಿಗದಿತ ರಾಷ್ಟ್ರೀಯ ಹಬ್ಬ, ನಾಡಹಬ್ಬ ಮತ್ತು ಜಯಂತಿಗಳನ್ನು ಹೊರತುಪಡಸಿ ಧಾರ್ಮಿಕ ಹಬ್ಬಗಳನ್ನು ಆಚರಿಸಬಾರದು ಎಂದು ವಸತಿ ಶಾಲೆ ಮತ್ತು ಕಾಲೇಜುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಈ ವಿಚಾರ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿತ್ತು. ಹಿಂದೂ ಪರ ಹೋರಾಟಗಾರರಿಂದಲೂ ತೀವ್ರ ವಿರೋಧ ವ್ಯಕ್ತವಾಗಿತ್ತು. ತಕ್ಷಣವೇ ಎಚ್ಚೆತ್ತುಕೊಂಡಿದ್ದ ಸರ್ಕಾರ, ಸುತ್ತೋಲೆಯನ್ನು ಹಿಂಪಡೆದಿತ್ತು.

ಇದು ವಿಕೃತಕಾರಿ, ಸದನದಲ್ಲಿ ಪ್ರಶ್ನಿಸುತ್ತೇವೆ: ಕೋಟ

‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ’ ಬರಹ ಬದಲಾವಣೆ ವಿಚಾರವಾಗಿ ವಿಧಾನಪರಿಷತ್ ಪ್ರಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯಿಸಿದ್ದು, ಇದು ವಿಕೃತಕಾರಿ ಮನಸು,‌ ಇದನ್ನು ಖಂಡಿಸುವೆ ಎಂದಿದ್ದಾರೆ. ಅಲ್ಲದೆ, ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸುತ್ತೇವೆ ಎಂದೂ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:13 am, Mon, 19 February 24