ಕೂಲಿ ಕೆಲಸದವನ ಪ್ರಾಣ ಪಡೆದ ಅಕ್ರಮ ಸಂಬಂಧ: 6 ತಿಂಗಳ ಬಳಿಕ ಪ್ರಕರಣ ಭೇದಿಸಿದ ಖಾಕಿ

ವಿಜಯಪುರ ಜಿಲ್ಲಾ ಪೊಲೀಸರು 6 ತಿಂಗಳ ಹಿಂದೆ ಸಿಂದಗಿಯಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ. ಕೂಲಿ ಕೆಲಸಕ್ಕೆ ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಯಾವುದೇ ಸಾಕ್ಷ್ಯ ದೊರೆಯದಿದ್ದರೂ, ಪೊಲೀಸರು ನಡೆಸಿದ ತೀವ್ರ ತನಿಖೆ ಹಾಗೂ ಬ್ರೇನ್ ಮ್ಯಾಪಿಂಗ್ ಅಕ್ರಮ ಸಂಬಂಧವೇ ಕೊಲೆಗೆ ಕಾರಣ ಎಂಬುದನ್ನು ಬಯಲಿಗೆಳೆದಿದೆ. ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಕೂಲಿ ಕೆಲಸದವನ ಪ್ರಾಣ ಪಡೆದ ಅಕ್ರಮ ಸಂಬಂಧ: 6 ತಿಂಗಳ ಬಳಿಕ ಪ್ರಕರಣ ಭೇದಿಸಿದ ಖಾಕಿ
ಬಂಧಿತ ಆರೋಪಿಗಳು
Edited By:

Updated on: Nov 21, 2025 | 5:37 PM

ವಿಜಯಪುರ, ನವೆಂಬರ್​ 21: ಯಾವುದೇ ಅಪರಾಧ ಕೃತ್ಯ ಮಾಡುವ ಆರೋಪಿ ಎಷ್ಟೇ ಚಾಲಾಕಿ ಆದರೂ ಪೊಲೀಸ್ ತನಿಖೆಯಲ್ಲಿ ಪಾರಾಗೋಕೆ ಸಾಧ್ಯವೇ ಇಲ್ಲ. ಇದಕ್ಕೊಂದು ನಿದರ್ಶನ ಎಂಬಂತೆ ಜಟಿಲವಾಗಿದ್ದ ಕೊಲೆ ಪ್ರಕರಣವೊಂದನ್ನು ವಿಜಯಪುರ ಜಿಲ್ಲಾ ಪೊಲೀಸರು ಭೇದಿಸಿದ್ದಾರೆ. ಕಾಣೆಯಾಗಿದ್ದ ವ್ಯಕ್ತಿ ಹೆಣವಾಗಿ ಪತ್ತೆಯಾಗಿದ್ದ ಪ್ರಕರಣವನ್ನು ಬೆನ್ನುಬಿದ್ದ ಖಾಕಿ ಇದೊಂದು ಕೊಲೆ ಎಂದರಿತು ಹಂತಕರ ಹೆಡೆಮುರಿ ಕಟ್ಟುವಲ್ಲಿ ಸಕ್ಸಸ್​​ ಆಗಿದೆ. ಘಟನೆ ನಡೆದು ಸರಿಸುಮಾರು 6 ತಿಂಗಳ ಬಳಿಕ ಕೊಲೆಗಾರರನ್ನು ಜೈಲಿಗಟ್ಟಿದೆ.

ಸಿಂದಗಿ ತಾಲೂಕಿನ ಬನ್ನಿಹಟ್ಟಿ ಪಿಎ ಗ್ರಾಮದ ನಿವಾಸಿ ಮಹಾದೇವಪ್ಪ ಹರಿಜನ (55) ಇದೇ ವರ್ಷದ ಮೇ 31ರಂದು ಕೂಲಿ ಕೆಲಸಕ್ಕೆ ಹೋದವ ನಾಪತ್ತೆಯಾಗಿದ್ದರು. ಅದೇ ಗ್ರಾಮದ ಸಿದ್ದನಗೌಡ ಗಂಗರೆಡ್ಡಿ ಎಂಬವರ ಜಮೀನಿಗೆ ಕೆಲಸಕ್ಕೆ ಹೋದಾತ ವಾಪಸ್​​ ಬರದ ಕಾರಣ ಮನೆಯವರು ಅವರಿಗಾಗಿ ಹುಡುಕಾಡಿದ್ದರು. ಬಳಿಕ ಅದೇ ಗಂಗರೆಡ್ಡಿ ಅವರ ಜಮೀನಿನ ಅನತಿ ದೂರದಲ್ಲಿ ಮಾದೇವಪ್ಪ ಹರಿಜನನ ಅವರ ಶವ ಕೊಳೆತ ಸ್ಥಿತಿಯಲ್ಲಿ ಜೂನ್​​ 3ರಂದು ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಮಾದೇವಪ್ಪ ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಹಾಗೂ ರಿಬ್ಸ್​ಗೆ ಏಟಾದ ಪರಿಣಾಮ ಅವರು ಮೃತಪಟ್ಟಿದ್ದಾರೆ ಎಂಬುದು ಗೊತ್ತಾಗಿತ್ತು. ಶವ ದೊರೆತ ಸ್ಥಳದಲ್ಲಿ ಹುಡುಕಾಟ ನಡೆಸಿದರೂ ಪೊಲೀಸರಿಗೆ ಘಟನೆ ಬಗ್ಗೆ ಯಾವುದೇ ಸಾಕ್ಷಿ ಸಿಕ್ಕಿರಲಿಲ್ಲ.

ಇದನ್ನೂ ಓದಿ: ಲಿವಿನ್ ರಿಲೇಷನ್​ಶಿಪ್​ನಲ್ಲಿದ್ದ ಮಹಿಳೆಯಿಂದಲೇ ಪ್ರಿಯಕರನ‌ ಹತ್ಯೆ: ಕಾರಣವೇನು?

ಸಾಕ್ಷ್ಯಾಧಾರಗಳ ಕೊರತೆಯಿಂದ ಇನ್ನೇನು ಕೇಸ್​ ಕ್ಲೋಸ್​​ ಆಗಿಯೇ ಹೋಯ್ತು ಎನ್ನುವ ವೇಳೆಗೆ ಪೊಲೀಸರಿಗೆ ಸಿಕ್ಕ ಕೆಲ ಮಾಹಿತ ಪ್ರಕರಣದ ದಿಕ್ಕನ್ನೇ ಬದಲಾಯಿಸಿದೆ. ಜಮೀನು ಮಾಲಕ ಸಿದ್ದನಗೌಡ ಗಂಗರೆಡ್ಡಿ ಪತ್ನಿ ಮಲ್ಲಮ್ಮ ಜೊತೆಗೆ ಮಾದೇವಪ್ಪ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎಂಬ ಸುಳಿವು ಸಿಕ್ಕಿತ್ತು. ಆ ನಿಟ್ಟಿನಲ್ಲಿ ಗಂಗಾರೆಡ್ಡಿ ಮತ್ತು ಆತನ ಪುತ್ರ ಅಪ್ಪಾಸಾಹೇಬಗೌಡ ಹಾಗೂ ಮಲ್ಲಮ್ಮರ ಮೊಬೈಲ್ ಲೊಕೇಶನ್​ ಪರೀಕ್ಷಿಸಿದರೂ ಯಾವುದೇ ಸಾಕ್ಷಿ ಸಿಕ್ಕಿರಲಿಲ್ಲ. ಜಮೀನು ಮಾಲಕನೇ ಯಾಕೆ ಮಾದೇವಪ್ಪ ಕೊಲೆ ಮಾಡಿರಬಾರದು ಎಂಬ ಸಂಶಯ ಪೊಲೀಸರಿಗೆ ಬಂದರೂ ಅವರ ವಿರುದ್ಧ ಸಾಕ್ಷಿಗಳು ಇಲ್ಲದಿರುವ ಕಾರಣ ಬಂಧಿಸಲು ಸಾಧ್ಯವಾಗಿರಲಿಲ್ಲ.

ಪ್ರಕರಣ ಸಂಬಂಧ ಸದ್ಯ ನ್ಯಾಯಾಲಯದ ಅನುಮತಿ ಪಡೆದು ಪೊಲೀಸರು ಸಿದ್ದನಗೌಡ ಗಂಗರೆಡ್ಡಿ ಮತ್ತು ಆತನ ಪುತ್ರ ಅಪ್ಪಾಸಾಹೇಬಗೌಡ ಹಾಗೂ ಮಲ್ಲಮ್ಮರ ಬ್ರೇನ್ ಮ್ಯಾಪಿಂಗ್ ಮಾಡಿದ್ದಾರೆ. ಈ ವೇಳೆ ಮಾದೇವಪ್ಪ ಕೊಲೆ ರಹಸ್ಯ ಬಟಾಬಯಲಾಗಿದೆ. ಕೊಲೆ ಮಾಡಿರೋದು ಸಿದ್ದನಗೌಡ ಗಂಗರೆಡ್ಡಿ ಮತ್ತು ಆತನ ಪುತ್ರ ಅಪ್ಪಾಸಾಹೇಬಗೌಡ ಎಂಬುದು ಗೊತ್ತಾಗಿದೆ. ಮೇ 31ರಂದು ಬೆಂಗಳೂರಿನಿಂದ ಸಿಂದಗಿಗೆ ಬಂದಿದ್ದ ಅಪ್ಪಾಸಾಹೇಬಗೌಡ ಮೊಬೈಲ್​​ನ ಬಿಟ್ಟು ತನ್ನ ಜಮೀನಿಗೆ ಬಂದಿದ್ದ. ಆಗ ಜಮೀನಿನ ಶೆಡ್​​ನಲ್ಲಿ ತನ್ನ ತಾಯಿ ಮಲ್ಲಮ್ಮ ಹಾಗೂ ಕೂಲಿಯಾಳು ಮಾದೇವಪ್ಪ ಏಕಾಂತದಲ್ಲಿರೋದು ಕಣ್ಣಿಗೆ ಬಿದ್ದಿದೆ. ಈ ವೇಳೆ ಸಿಟ್ಟಿಗೆದ್ದ ಆತ ಶೆಡ್​​ನ ಮೇಲ್ಭಾಗ ಹಾಕಲಾಗಿದ್ದ ಕಟ್ಟಿಗೆ ತೆಗೆದು ಮಾದೇವಪ್ಪ ತಲೆಗೆ ಹೊಡೆದಿದ್ದಾನೆ. ಇದೇ ವೇಳೆ ಜಮೀನಿನ ಆಚೆಯಿದ್ದ ಸಿದ್ದನಗೌಡ ಸಹ ಸ್ಥಳಕ್ಕೆ ಬಂದಿದ್ದು, ಆತನೂ ಹಲ್ಲೆ ನಡೆಸಿದ್ದಾನೆ. ಈ ವೇಳೆ ಮಾದೇವಪ್ಪ ಪ್ರಾಣ ಬಿಟ್ಟಿದ್ದು, ಶವವನ್ನು ಆರೋಪಿಗಳು ಪಕ್ಕದ ಜಮೀನಿನತ್ತ ಎಸೆದು ಹೋಗಿದ್ದರು ಎಂಬುದು ತನಿಖೆ ವೇಳೆ ಬಯಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.