ಲಿವಿನ್ ರಿಲೇಷನ್ಶಿಪ್ನಲ್ಲಿದ್ದ ಮಹಿಳೆಯಿಂದಲೇ ಪ್ರಿಯಕರನ ಹತ್ಯೆ: ಕಾರಣವೇನು?
ಕಳೆದ ತಿಂಗಳು ಡಬಲ್ ಮರ್ಡರ್ ಹಾಗೂ ಮತ್ತೊಂದು ಕೊಲೆಗೆ ಸಾಕ್ಷಿಯಾಗಿದ್ದ ವಿಜಯಪುರ ಜಿಲ್ಲೆಯಲ್ಲಿ ಇದೀಗ ಮತ್ತೊಂದು ಹೆಣ ಬಿದ್ದಿದೆ. ಸಹೋದರನ ಸಹಾಯದೊಂದಿಗೆ ಮಹಿಳೆ ಲಿವಿನ್ ರಿಲೇಷನ್ಶಿಪ್ನಲ್ಲಿದ್ದ ತನ್ನ ಪ್ರಿಯಕರನನ್ನು ಕೊಲೆ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಸದ್ಯ ಪೊಲೀಸರು ಮಹಿಳೆ ಹಾಗೂ ಆಕೆಯ ಸಹೋದರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವಿಜಯಪುರ, ನವೆಂಬರ್ 17: ಲಿವಿನ್ ರಿಲೇಷನ್ಶಿಪ್ನಲ್ಲಿದ್ದ ಮಹಿಳೆಯಿಂದಲೇ ಪ್ರಿಯಕರನ (Partner) ಕೊಲೆ (Murder) ಮಾಡಿರುವಂತಹ ಘಟನೆ ನಗರದ ಅಮನ್ ಕಾಲೋನಿಯ ಮನೆಯೊಂದರಲ್ಲಿ ನಡೆದಿದೆ. ಸಮೀರ್ ಅಲಿಯಾಸ್ ಪಿಕೆ ಇನಾಂದಾರ್(26) ಹತ್ಯೆಗೊಳಗಾದ ಪ್ರಿಯಕರ. ಸಹೋದರ ಅಸ್ಲಮ್ ಭಾಗವಾನ್ ಸಹಾಯ ಪಡೆದು ತಯ್ಯಾಬಾ ಎಂಬ ಮಹಿಳೆ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಮಹಿಳೆ ಮತ್ತು ಸಹೋದರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ನಡೆದದ್ದೇನು?
ಇಂದು ಬೆಳಿಗ್ಗೆ ನಗರದ ಗೋಲಗುಂಬಜ್ ಪೊಲೀಸ್ ಠಾಣೆಗೆ ಓರ್ವ ಮಹಿಳೆ ಆಗಮಿಸಿ ನಾನು ನನ್ನ ಪ್ರಿಯಕರನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದೇನೆಂದು ಹೇಳಿದ್ದು, ಠಾಣೆಯಲ್ಲಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಂದು ಕ್ಷಣ ಗಾಬರಿಯಾಗಿದ್ದರು.
ಇದನ್ನೂ ಓದಿ: KBJNL ಎಡ ದಂಡೆ ಕಾಲುವೆಯಲ್ಲಿ ಘೋರ ದುರಂತ: ಒಂದೇ ಕುಟುಂಬದ ಮೂವರು ನಾಪತ್ತೆ
ಕೊಲೆ ಮಾಡುವುದಕ್ಕೆ ನನ್ನ ಸಹೋದರ ಅಸ್ಲಮ್ ಸಹ ಸಾಥ್ ನೀಡಿದ್ದಾನೆಂದು ಮಹಿಳೆ ಹೇಳಿದ್ದಾರೆ. ಕತ್ತು ಹಿಸುಕಿ ಉಸಿರು ಗಟ್ಟಿಸಿ ಕೊಲೆ ಮಾಡಿರುವ ಗುರುತು ಖಾಕಿ ಪಡೆಗೆ ಗೋಚರಿಸಿತ್ತು. ಸ್ಥಳಕ್ಕೆ ಸುಕೋ ಟೀಂ ಆಗಮಿಸಿ ಪರೀಕ್ಷೆಗಳನ್ನು ನಡೆಸಿತು. ಮನೆಯ ಮಾಲೀಕ ಅಬ್ದುಲ್ ಜಮಾದಾರ್ ನೀಡಿದ ಮಾಹಿತಿ ಪ್ರಕಾರ 5-6 ತಿಂಗಳ ಹಿಂದೆ ತಯ್ಯಾಬಾ ಸಹೋದರಿಗೆ ಬಾಡಿಗೆಗೆ ಮನೆ ನೀಡಿದ್ದರಂತೆ. ಇವರ ಮನೆಗೆ ಸಮೀರ್ ಬಂದು ಹೋಗುತ್ತಿದ್ದನಂತೆ. ಯಾವುದೇ ಗದ್ದಲ ಗಲಾಟೆ ಮಾಡುತ್ತಿರಲಿಲ್ಲ. ಯಾರಿಗೂ ಗೊತ್ತಾಗದಂತೆ ಸಮೀರ್ ಇಲ್ಲಿ ಬಂದು ಹೋಗುತ್ತಿದ್ದನಂತೆ. ಬೆಳಿಗ್ಗೆ ಪೊಲೀಸರು ಮನೆಗೆ ಬಂದಾಗಲೇ ಕೊಲೆ ವಿಚಾರ ಗೊತ್ತಾಗಿದ್ದು ಎಂದು ಅವರು ಹೇಳಿದ್ದಾರೆ.
ಕಿರುಕುಳಕ್ಕೆ ಬೇಸತ್ತು ಕೊಲೆ
ಮೂಲಗಳ ಪ್ರಕಾರ ಕೊಲೆಯಾಗಿರುವ ಸಮೀರ್ ಅಲಿಯಾಸ್ ಪಿಕೆ ಇನಾಂದಾರ್ ರೌಡಿ ಶೀಟರ್ ಆಗಿದ್ದ. ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಹಾಗೂ ಕೊಲೆ ಯತ್ನ ಪ್ರಕರಣಗಳಲ್ಲಿ ಆರೋಪಿಯಾಗಿದ್ದನಂತೆ. ಕಳೆದ ನಾಲ್ಕರು ವರ್ಷಗಳಿಂದ ಸಮೀರ್, ತಯ್ಯಾಬಾ ಜೊತೆಗೆ ಸಂಬಂಧ ಹೊಂದಿದ್ದ. ಆದರೆ ಕಳೆದ ಒಂದು ವರ್ಷದ ಹಿಂದೆ ಸಮೀರ್ ಮನಸ್ತಾಪ ಮಾಡಿಕೊಂಡಿದ್ದನಂತೆ. ಈ ವಿಚಾರವಾಗಿ ಆತನ ಮೇಲೆ ಹಲ್ಲೆಯೂ ಆಗಿತ್ತಂತೆ. ಕೆಲ ಕಾಲ ದೂರವಿದ್ದ ಇಬ್ಬರು ನಂತರ ಮತ್ತೆ ಒಂದಾಗಿದ್ದರು. ಬಳಿಕ ಸಮೀರ್ ತಯ್ಯಾಬಾಗೆ ಕಿರುಕುಳ ನೀಡುತ್ತಿದ್ದನಂತೆ. ಆತನ ಕಿರುಕುಳದಿಂದ ಬೇಸತ್ತು ಸಮೀರ್ನನ್ನು ಕೊಲೆ ಮಾಡುವ ನಿರ್ಧಾರ ಮಾಡಿದ್ದಾಳೆ.
ಆಕೆಗೆ ಸಹೋದರ ಅಸ್ಲಮ್ ಸಹಾಯ ಮಾಡಿದ್ದಾನೆ. ನಿನ್ನೆ ರಾತ್ರಿ 8-30 ರ ಸುಮಾರಿಗೆ ಸಮೀರ್ ತಯ್ಯಾಬಾ ಬಳಿ ಬಂದಿದ್ದ. ರಾತ್ರಿ 11 ರಿಂದ 12 ಗಂಟೆ ವೇಳೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ನಂತರ ಸಮೀರ್ ಶವದೊಂದಿಗೆ ಬೆಳಕಾಗೋವರೆಗೂ ಕಾಯ್ದಿದ್ದಾರೆ. ಬೆಳಿಗ್ಗೆ 8 ಗಂಟೆ ನಂತರ ತಯ್ಯಾಬಾ ಗೋಲಗುಂಬಜ್ ಪೊಲೀಸ್ ಠಾಣೆಗೆ ತೆರಳಿ ಸಮೀರ್ ಕೊಲೆ ಮಾಡಿರುವ ವಿಚಾರ ತಿಳಿಸಿದ್ದಾಳೆ. ಆಗಲೇ ಹೊರ ಜಗತ್ತಿಗೆ ಸಮೀರ್ ಇನಾಂದದಾರ್ ಕೊಲೆಯಾಗಿರುವ ಮಾಹಿತಿ ಬಹಿರಂಗವಾಗಿದೆ.
ಸ್ಥಳಕ್ಕೆ ಗೋಲಗುಂಬಜ್ ಪೊಲೀಸರು, ಸುಕೋ ಟೀಂ ಆಗಮಿಸಿ ಪ್ರಾಥಮಿಕ ತನಿಖೆ ಮಾಡಿದ್ದಾರೆ. ಕೊಲೆಯಾಗಿರುವ ಸಮೀರ್ ತಂದೆ ನನ್ನ ಮಗನನ್ನು ನಾಲ್ಕು ಜನರು ಸೇರಿ ಕೊಲೆ ಮಾಡಿದ್ದಾರೆ. ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು ಎಂದಿದ್ದಾರೆ.
ಇದನ್ನೂ ಓದಿ: ವಿಜಯಪುರ: ಕೃಷಿ ಹೊಂಡಕ್ಕೆ ಬಿದ್ದು 3 ಮಕ್ಕಳು ಸಾವು; ಮುಗಿಲು ಮುಟ್ಟಿದ ಆಕ್ರಂದನ
ಲಿವಿನ್ ರಿಲೇಷನ್ಶಿಪ್ನಲ್ಲಿದ್ದ ಸಮೀರ್ ತನ್ನ ಪ್ರೇಯಸಿ ಹಾಗೂ ಆಕೆಯ ಸಹೋದರ ಕೈಯಿಂದ ಕೊಲೆಯಾಗುವುದಕ್ಕೆ ಕಿರುಕುಳ ಮಾತ್ರ ಕಾರಣವಾ ಅಥವಾ ಬೇರೆ ಕಾರಣವಿದೆಯಾ? ಎಂದು ತನಿಖೆ ಮಾಡಲಾಗುತ್ತಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಸಮೀರ್ ಮೃತದೇಹ ನೀಡಲಾಗುವುದು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:24 pm, Mon, 17 November 25



