ವಿಜಯಪುರ, ಡಿಸೆಂಬರ್ 10: ಈ ಬಾರಿ ಸರ್ಕಾರದಲ್ಲಿ ಎಂಬಿ ಪಾಟೀಲ್ (MB Patil) ಅವರಿಗೆ ಜಲಸಂಪನ್ಮೂಲ ಖಾತೆ ಸಿಗುತ್ತೆ ಅಂತ ಬಹಳ ಆಸೆ ಇಟ್ಟುಕೊಂಡಿದ್ದೇವು. ಆದರೆ ಅದು ಬೇರೆಯವರ ಪಾಲಾಯಿತು. ಸಿಎಂ ಸಿದ್ದರಾಮಯ್ಯ ಅವರು ಅವಕಾಶ ಕೊಡಲಿಲ್ಲ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಳವಾಟ ಗ್ರಾಮದಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರದಲ್ಲಿ ಬೃಹತ್ ಕೈಗಾರಿಕಾ ಸಚಿವರಾಗಿ ಎರಡನೇ ಸ್ಥಾನದಲ್ಲಿ ಎಂಬಿ ಪಾಟೀಲ್ ಮುನ್ನಡೆಯುತ್ತಿದ್ದಾರೆ ಎಂದು ಹೊಗಳಿದ್ದಾರೆ.
ಕೈಗಾರಿಕೆಯಿಂದ ರಾಜ್ಯ, ಜಿಲ್ಲೆಯಲ್ಲಿ ಏನೇನು ಮಾಡಬೇಕು ಅದನ್ನು ಮಾಡಲು ಭದ್ರವಾದ ಬುನಾದಿ ಹಾಕುತ್ತಿದ್ದಾರೆ. ವಿದೇಶದಿಂದ ಹೆಚ್ಚಿನ ನೆರವು ತರುತ್ತಿದ್ದಾರೆ. ಹಿಂದೆ ಜಲಸಂಪನ್ಮೂಲ ಸಚಿವರಿದ್ದಾಗ ಬಹಳ ದೊಡ್ಡ ಕೆಲಸ ಮಾಡಿದ್ದಾರೆ. ಜಿಲ್ಲೆಯ ಎಲ್ಲಾ ಭಾಗದಲ್ಲಿ ಕೆರೆ ತುಂಬುವ ಕೆಲಸ ಮಾಡಿದ್ದು ದೊಡ್ಡ ಕೆಲಸ. ಇವತ್ತು ಬಹಳ ಮಳೆ ಆಗದೇ ಇದ್ದರೂ ಇಲ್ಲಿ ಹಸಿರು ನೋಡಿದರೆ, ಎಲ್ಲಾ ಕೆರೆ ತುಂಬಿದ ಪರಿಣಾಮದಿಂದಲೇ ಅಂತರ್ಜಲ ಹೆಚ್ಚಾಗಿ ಬೋರ್ವೆಲ್ನಲ್ಲಿ ನೀರಿದೆ. ಫಸಲು ಬೆಳೆಯಲು ಸಾಧ್ಯವಾಗಿದೆ ಎಂದಿದ್ದಾರೆ.
ರೇಣುಕಾಚಾರ್ಯ ಶಿಲಾ ಮಂಟಪಕ್ಕೆ ರಾಜ್ಯ ಸರ್ಕಾರದಿಂದ ಅನುದಾನ ಕೊಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ರಂಭಾಪುರಿ ಶ್ರೀ, ಬಾಳೆ ಹೊನ್ನೂರು ಧರ್ಮ ಪೀಠದಲ್ಲಿ 51 ಅಡಿ ಎತ್ತರದ ಜಗದ್ಗುರು ರೇಣುಕಾಚಾರ್ಯರ ಶಿಲಾ ಮಂಟಪ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಮೂರು ಬೃಹತ್ ಶಿಲೆಗಳು ಬಂದಿವೆ. ಶಿಲ್ಪಿಗಳು ಕೆಲಸ ಮಾಡುತ್ತಿದ್ದಾರೆ. 36 ಅಡಿ ಎತ್ತರ 22 ಅಗಲದ ಕಲ್ಲು ಆಂಧ್ರದಿಂದ ವರ್ಷದ ಕೊನೆ ಹಂತದಲ್ಲಿ ಬರಲಿದೆ. 12 ಕೋಟಿ ರೂ. ಯೋಜನೆ ಅದು. ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಐದು ಕೋಟಿ ರೂ. ಬಿಡುಗಡೆ ಮಾಡಿದ್ದರು.
ಆಮೇಲೆ ಬಂದಂತಹ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಆಗಲಿ, ಸದ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಸ್ಥರಾಗಲಿ, ಯಾವುದೇ ರೀತಿ ಸ್ಪಂದಿಸದೇ ತಟಸ್ಥವಾಗಿ ಮುಂದುವರಿದ್ದಾರೆ. ಇಂತಹ ಸಂದರ್ಭದಲ್ಲಿ ನಿಗದಿಪಡಿಸಿದ ಕಾರ್ಯ ಮುಗಿಸಬೇಕು ಎನ್ನುವ ಸಂಕಲ್ಪ. ಭಕ್ತರ ಸಹಾಯ ಪಡೆದುಕೊಂಡು, ಪೀಠವೂ ಸ್ವಲ್ಪ ಹೊರೆ ಹೊತ್ತು, ಆ ಕಾರ್ಯ ಪೂರ್ಣಗೊಳಿಸಲು ಇಚ್ಛೆಪಟ್ಟಿದ್ದೇವೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:31 pm, Sun, 10 December 23